ಡಾಕ್ಟ್ರೆ, ಹೆಂಡ್ತಿಗೆ ಕಿವಿ ಕೇಳ್ತಿಲ್ಲ, ಔಷ್ದಿ ಕೊಡಿ!
ಒಂದು ದಿನ ಸುಬ್ಬರಾವ್ ಎಂದಿನಂತೆ ಕಚೇರಿ ಕೆಲಸಕ್ಕೆ ಕೂಡ ಹೋಗದೆ ಡಾಕ್ಟರ್ ಸೀನನ ಬಳಿ ಹೋಗುತ್ತಾನೆ. ಡಾಕ್ಟರ್ ಸೀನ ಆಲ್ ಇಂಡಿಯಾ ವರ್ಲ್ಡ್ ಫೇಮಸ್ ಇಎನ್‌ಟಿ ಸರ್ಜನ್.
ಡಾ. ಸೀನ : "ಏನೋ ಸುಬ್ಬು, ಸುಮಾರು ದಿನವಾದ ಮೇಲೆ ಬಂದಿದ್ದೀಯಾ. ಏನ್ ಸಮಾಚಾರ? ಏನು ತೊಂದರೆ?"
ಸುಬ್ಬರಾವ್ : "ತೊಂದರೆ ನನಗಲ್ಲ ಡಾಕ್ಟ್ರೆ, ನನ್ನ ಹೆಂಡತಿಗೆ. ಇತ್ತೀಚಿಗೆ ಅವಳಿಗೆ ಸರಿಯಾಗಿ ಕಿವಿ ಕೇಳಿಸುತ್ತಲೇ ಇಲ್ಲ. ಏನಾದ್ರೂ ಔಷಧಿ ಕೊಡಿ."
ಡಾ. ಸೀನ : "ಅಲ್ಲಯ್ಯಾ ಭೂಪ, ಆಕೆಯನ್ನು ಕರೆದುಕೊಂಡು ಬರುವುದು ಬಿಟ್ಟು, ನೀನು ಬಂದಿದ್ದೀಯಲ್ಲ?"
ಸುಬ್ಬರಾವ್ : "ಆಕೆಗೆ ಹ್ಯಾಗಿದ್ರೂ ಕಿವಿ ಕೇಳಲ್ಲ ಅಂತ ನಾನೇ ಬಂದೆ."
ಡಾ. ಸೀನ : "ಸರಿ, ಸ್ವಲ್ಪವಾದರೂ ಕೇಳತ್ತಾ ಅಥವಾ ಕೇಳುವುದೇ ಇಲ್ಲವೋ."
ಸುಬ್ಬರಾವ್ : "ನಾವಿಲ್ಲಿ ಕುಳಿತಿದ್ದೀವಲ್ಲ ಅಷ್ಟು ಹತ್ತಿರದಿಂದ ಹೇಳಿದ್ರೆ ಕೇಳತ್ತೆ."
ಡಾ. ಸೀನ : "ಹಾಗಿದ್ರೆ ಒಂದು ಕೆಲಸ ಮಾಡು. 15 ಅಡಿಯಿಂದ ಇನ್ನೊಮ್ಮೆ ಕೂಗಿ ನೋಡು, ಕೇಳದಿದ್ದರೆ ಕರೆದುಕೊಂಡು ಬಾ."
"ಓಕೆ" ಎಂದು ಹೋದ ಸುಬ್ಬ, ಬೇಕಂತಲೆ 15 ಅಡಿಗಳ ದೂರದಿಂದ "ಲೇ, ಸುಬ್ಬಿ ಏನು ಅಡುಗೆ ಇವತ್ತು?" ಅಂತ ನಾಲ್ಕಾರು ಸತಿ ಕೂಗಿದರೂ ಅಡುಗೆಮನೆಯಲ್ಲಿದ್ದ ಸುಬ್ಬಿಯಿಂದ ಯಾವುದೇ ಉತ್ತರವಿಲ್ಲ.
ನಂತರ, ಅಡುಗೆಮನೆಗೆ ನುಗ್ಗಿದ ಸುಬ್ಬ, "ಆಗ್ಳೆಯಿಂದ ಬೊಂಬ್ಡಾ ಹೊಡೀತಾನೆ ಇದ್ದೀನಿ, ಅಡುಗೆ ಏನಂತ, ಕೇಳ್ತಿಲ್ವಾ?"
ಸುಬ್ಬಿ : "ನಾಲ್ಕಾರು ಸತಿ ಅನ್ನ ತಿಳಿ ಸಾರು ಅಂತ ನಾನೂ ಬೊಂಬ್ಡಾ ಹೊಡ್ಕೋತಾ ಇದ್ದೆ" ಅಂತ ಮುಖಕ್ಕೆ ಹೊಡೆದವಳಂತೆ ಉತ್ತರಿಸಿದಳು ಸುಬ್ಬಿ.












Click it and Unblock the Notifications