14 ಜಿಲ್ಲೆಗಳಲ್ಲಿ ಗ್ರಾಮ ಲೆಕ್ಕಿಗರ ನೇಮಕಾತಿ; ಆರ್. ಅಶೋಕ

ಬೆಂಗಳೂರು, ಫೆಬ್ರವರಿ 17; "14 ಜಿಲ್ಲೆಗಳಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ" ಎಂದು ಕಂದಾಯ ಸಚಿವ ಆರ್. ಅಶೋಕ ವಿಧಾನ ಪರಿಷತ್‌ನಲ್ಲಿ ಹೇಳಿದರು.

ಬಿಜೆಪಿಯ ಎಸ್. ವಿ. ಸುಂಕನೂರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, "ಕಂದಾಯ ಇಲಾಖೆಯಲ್ಲಿನ ಗ್ರೂಪ್-ಸಿ ಗ್ರಾಮ ಲೆಕ್ಕಿಗರ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. 14 ಜಿಲ್ಲೆಯಲ್ಲಿ ನೇಮಕಾತಿಗೆ ಅನುಮತಿ ಕೊಡಲಾಗಿದೆ" ಎಂದರು.

"ಉಳಿದ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಸಹ ಆರ್ಥಿಕ ಇಲಾಖೆ ಒಪ್ಪಿಗೆಯನ್ನು ಕೋರಲಾಗಿದೆ. ಅನುಮತಿ ಸಿಕ್ಕ ತಕ್ಷಣ ಹುದ್ದೆ ಭರ್ತಿ ಮಾಡಲಾಗುತ್ತದೆ" ಎಂದು ಸಚಿವರು ಉತ್ತರಿಸಿದರು.

Village Accountant Recruitment In 14 Districts Says R Ashok

"ಆಯಾ ಜಿಲ್ಲೆಗಳಲ್ಲಿ ಮಂಜೂರಾದ ಗ್ರಾಮ ಲೆಕ್ಕಿಗರ ಹುದ್ದೆಗಳಲ್ಲಿ ಶೇ 30ಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿ ಇದ್ದರೆ ನೇರ ನೇಮಕಾತಿ ಮೂಲಕ ಭರ್ತಿ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಸಚಿವರು ವಿವರಿಸಿದರು.

"ಖಾಲಿ ಇರುವ ಬೆರಳಚ್ಚುಗಾರರು ಮತ್ತು ವಾಹನ ಚಾಲಕರು ಮತ್ತು ಇತರ ಗ್ರೂಪ್- ಡಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಸಚಿವರು ಪರಿಷತ್‌ನಲ್ಲಿ ಉತ್ತರ ನೀಡಿದರು.

ಗ್ರಾಮ ಲೆಕ್ಕಿಗ ಹುದ್ದೆಯ ಮೂಲಕ ಕಂದಾಯ ಇಲಾಖೆ ಕೆಲಸ ಕಾರ್ಯಗಳನ್ನು ತಳಮಟ್ಟದಲ್ಲಿ ಕಾರ್ಯಗತಗೊಳಿಸಬೇಕಾಗುತ್ತದೆ. ಈ ಹುದ್ದೆಯು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಸಮಾನಾಂತರ ಹುದ್ದೆಯಾಗಿದೆ ಎಂದು ಇಲಾಖೆ ಹೇಳಿದೆ.

ಜನವರಿಯಲ್ಲಿ ಕಂದಾಯ ಇಲಾಖೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರವೊಂದನ್ನು ಬರೆದಿತ್ತು. ಪತ್ರದಲ್ಲಿ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಯನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿತ್ತು.

ಕಂದಾಯ ಇಲಾಖೆಯಡಿ ರಾಜ್ಯದಲ್ಲಿ ಒಟ್ಟು ಮಂಜೂರಾದ ಗ್ರಾಮ ಲೆಕ್ಕಿಗರ ಹುದ್ದೆಗಳು 9,839. ಪ್ರಸ್ತುತ 1,789 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ ಇವೆ ಎಂದು ಅಂದಾಜಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿ ನಡೆಸುತ್ತದೆ.

ಜಿಲ್ಲಾಧಿಕಾರಿಗಳು ಗ್ರಾಮ ಲೆಕ್ಕಿಗರ ನೇಮಕಾತಿ ಸಕ್ಷಮ ಪ್ರಾಧಿಕಾರ ಆಗಿರುತ್ತಾರೆ. ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯಾ ಜಿಲ್ಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಅನುಗುಣವಾಗಿ ನೇರ ನೇಮಕಾತಿ ಮೂಲಕ ನಿಯಮಾನುಸಾರ ಭರ್ತಿ ಮಾಡಲಾಗುತ್ತದೆ.

ಗ್ರಾಮ ಲೆಕ್ಕಿಗರ ಹುದ್ದೆಗಳು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಸಮನಾಂತರ ಹುದ್ದೆಯಾಗಿದೆ. ಆದರೆ ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಈ ಹುದ್ದೆಗಳನ್ನು ಸರ್ಕಾರ ಈಗ ಭರ್ತಿ ಮಾಡುವುದಿಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯೇ ಆಯ್ಕೆ ಪ್ರಕ್ರಿಯೆ ನಡೆಸಲಿದೆ.

ಹೇಗೆ ನೇಮಕಾತಿ; ಜಿಲ್ಲಾಧಿಕಾರಿಗಳ ಕಚೇರಿಯೇ ನೇಮಕಾತಿ ಅಧಿಸೂಚನೆ ಹೊರಡಿಸುತ್ತದೆ. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14)ಕ್ಕೆ ಕರ್ನಾಟಕ ಸಾಮಾನ್ಯ ಸೇವೆಗಳು (ರೆವಿನ್ಯು ಸಬಾರ್ಡಿನೇಟ್ ಬ್ರಾಂಚ್) (ವೃಂದ ಮತ್ತು ನೇಮಕಾತಿ) (ತಿದ್ದುಪಡಿ) ನಿಯಮಗಳು 2008ರ ಅನ್ವಯ ದ್ವಿತೀಯ ಪಿಯುಸಿಯಲ್ಲಿ ಪಡೆದ ಗರಿಷ್ಠ ಅಂಕಗಳನ್ನು ಪರಿಗಣಿಸಿ ನೇಮಕಾತಿ ನಡೆಯುತ್ತದೆ.

ಕೋವಿಡ್ ಪರಿಸ್ಥಿತಿಯಲ್ಲಿ ವಿವಿಧ ಇಲಾಖೆಗಳ ನೇಮಕಾತಿಯನ್ನು ಸರ್ಕಾರ ತಡೆ ಹಿಡಿದಿತ್ತು. ಆಗ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರ ನೇಮಕಾತಿಯನ್ನು ಸಹ ಸ್ಥಗಿತಗೊಳಿಸಲಾಗಿತ್ತು. ಬಳಿಕ 2021ರ ಅಕ್ಟೋಬರ್‌ನಲ್ಲಿ ವಿವಿಧ ಜಿಲ್ಲೆಗಳಲ್ಲಿ ಹುದ್ದೆ ಭರ್ತಿ ಮಾಡಲು ಒಪ್ಪಿಗೆ ಕೊಡಲಾಗಿತ್ತು.

ಈಗ 14 ಜಿಲ್ಲೆಗಳಲ್ಲಿ ಗ್ರಾಮ ಲೆಕ್ಕಿಗರ ನೇಮಕಾತಿಗೆ ಒಪ್ಪಿಗೆ ಕೊಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಯಾವ-ಯಾವ ಜಿಲ್ಲೆಗಳಲ್ಲಿ ನೇಮಕಾತಿ ನಡೆಯಲಿದೆ ಎಂದು ಕಾದು ನೋಡಬೇಕಿದೆ. ಜಿಲ್ಲಾಧಿಕಾರಿಗಳು ಹೊರಡಿಸುವ ಆದೇಶಕ್ಕಾಗಿ ಕಾಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+