Job Cut: 350 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ ಕಂಪನಿ!
ನವದೆಹಲಿ, ನವೆಂಬರ್ 08: ಸಾಫ್ಟ್‌ಬ್ಯಾಂಕ್-ಬೆಂಬಲಿತ ಎಡ್ಟೆಕ್ ಯುನಿಕಾರ್ನ್ ಅನಾಕಾಡೆಮಿಯು ತನ್ನ ಶೇ.10ರಷ್ಟು ಉದ್ಯೋಗಿಗಳನ್ನು ಅಂದರೆ 350 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಕಳೆದೊಂದು ವರ್ಷದಲ್ಲಿ ಕಂಪನಿಯು ಮಾಡುತ್ತಿರುವ ಮೂರನೇ ಉದ್ಯೋಗ ಕಡಿತವಾಗಿದೆ.
ಉದ್ಯೋಗಿಗಳಿಗೆ ಕಳುಹಿಸಲಾದ ಆಂತರಿಕ ಇಮೇಲ್‌ನಲ್ಲಿ, ಅನಾಕಾಡೆಮಿಯ ಸಹಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗೌರವ್ ಮುಂಜಾಲ್, ಕಠಿಣ ಆರ್ಥಿಕ ಪರಿಸ್ಥಿತಿಗಳ ನಡುವೆ ವೆಚ್ಚವನ್ನು ಕಡಿತಗೊಳಿಸುವ ಉದ್ದೇಶದಿಂದ ವಜಾಗೊಳಿಸುವಿ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಇದರ ಜೊತೆಗೆ ಕಡಿಮೆ ಅವಧಿಯಲ್ಲಿ ಕಂಪನಿಯನ್ನು ಉತ್ತಮಗೊಳಿಸುವ ಮತ್ತು ಸಮರ್ಥ ವ್ಯವಸ್ಥೆಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಅನಾಕಾಡೆಮಿಯ ಸಹಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಗೌರಬ್ ಮುಂಜಾಲ್ ಇಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮಾತು ಕೊಟ್ಟು ಉದ್ಯೋಗಿಗಳನ್ನೇ ಮರೆತ ಕಂಪನಿ
ಕಳೆದ ಜುಲೈ ತಿಂಗಳಿನಲ್ಲಿ ಉದ್ಯೋಗಿಗಳಿಗೆ ಆಂತರಿಕ ಪತ್ರವನ್ನು ರವಾನಿಸಿದ್ದ ಗೌರಬ್ ಮುಂಜಾಲ್, ಕಂಪನಿಯು ಇನ್ನು ಮುಂದೆ ಯಾವುದೇ ಉದ್ಯೋಗಿಗಳನ್ನು ವಜಾ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು. ಮುಖ್ಯ ಸಿಇಒ ನೀಡಿರುವ ಇತ್ತೀಚಿನ ಹೇಳಿಕೆಯಿಂದ ಯು-ಟರ್ನ್ ಹೊಡೆದಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ. "ನಾನು ಸಂಸ್ಥೆಯಲ್ಲಿ ಯಾವುದೇ ವಜಾಗೊಳಿಸುವಿಕೆಯ ಬದ್ಧತೆಯನ್ನು ಮಾಡಿಲ್ಲ, ಆದ್ದರಿಂದ ನಾನು ಎಲ್ಲರಿಗೂ ಪ್ರಾಮಾಣಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ಆದರೆ ಮಾರುಕಟ್ಟೆಯ ಸವಾಲುಗಳು ನಮ್ಮ ನಿರ್ಧಾರಗಳನ್ನು ಮರುಮೌಲ್ಯಮಾಪನ ಮಾಡಲು ಒತ್ತಾಯಿಸಿದೆ. ನಮ್ಮ ಪ್ರಮುಖ ವ್ಯವಹಾರದ ಹೆಚ್ಚಿನ ಭಾಗವು ಆಫ್‌ಲೈನ್‌ನಲ್ಲಿ ನಡೆಯುತ್ತಿದ್ದು, ನಿಧಿಯ ಹರಿವು ನಿಧಾನವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಸ್ಪಷ್ಟನೆ
"ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಎದುರಿಸುತ್ತಿರುವ ಕಠಿಣ ಆರ್ಥಿಕ ಪರಿಸ್ಥಿತಿಗಳಿಗೆ ನಾವು ಸಹ ಹೊರತಾಗಿಲ್ಲ. ಪ್ರಸ್ತುತ ಪರಿಸ್ಥಿತಿಯು ತಂತ್ರಜ್ಞಾನ ವ್ಯವಸ್ಥೆಗೆ ತುಂಬಾ ಕಷ್ಟಕರ ಸಮಯವಾಗಿದ್ದು, ದಿನದಿಂದ ದಿನಕ್ಕೆ ಅವುಗಳು ಮತ್ತಷ್ಟು ಹದಗೆಡುತ್ತಿವೆ," ಎಂದು ಮುಂಜಾಲ್ ಇಮೇಲ್‌ನಲ್ಲಿ ತಿಳಿಸಿದ್ದಾರೆ.
"ನಮ್ಮ ಕಾರ್ಯಾಚರಣೆಗಳಲ್ಲಿನ ಪುನರುಕ್ತಿಗಳನ್ನು ಕಡಿಮೆ ಮಾಡಲು ನಮ್ಮ ಕೆಲವು ಪ್ರತಿಭಾವಂತ ಉದ್ಯೋಗಿಗಳಿಗೆ ವಿದಾಯ ಹೇಳಬೇಕಾಗಿದೆ. ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ದುಃಖವಾಗಿದೆ. ಇವುಗಳು ಅನಾಕಾಡೆಮಿ ಗುಂಪಿನಲ್ಲಿದ್ದು, ಅಲ್ಲಿ ನಾವು ಸ್ಕೇಲ್ ಡೌನ್ ಅಥವಾ ಮುಚ್ಚಲು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ," ಎಂದು ಮುಂಜಾಲ್ ಉಲ್ಲೇಖಿಸಿದರು.

ಎರಡು ತಿಂಗಳು ಹೆಚ್ಚುವರಿ ವೇತನ ನೀಡಲು ನಿರ್ಧಾರ
ಕೆಲಸದಿಂದ ವಜಾಗೊಂಡ ಉದ್ಯೋಗಿಗಳಿಗೆ ಮುಂದಿನ 48 ಗಂಟೆಗಳಲ್ಲಿ ಈ ಕುರಿತು ಮಾಹಿತಿ ತಲುಪಿಸಲಾಗುತ್ತದೆ. ನೋಟಿಸ್ ಅವಧಿಯಲ್ಲಿ ಈ ಉದ್ಯೋಗಿಗಳಿಗೆ ಸಮಾನ ವೇತನವನ್ನು ನೀಡಲಾಗುವುದು, ಇದರ ಜೊತೆಗೆ ಎರಡು ತಿಂಗಳ ಹೆಚ್ಚುವರಿ ವೇತನವನ್ನು ನೀಡಲಾಗುವುದು," ಎಂದು ಮುಂಜಾಲ್ ಹೇಳಿದ್ದಾರೆ. ಅಲ್ಲದೇ ಅನಾಕಾಡೆಮಿಯು ಒಂದು ವರ್ಷದ ಅವಧಿಗೆ ಹೆಚ್ಚುವರಿಯಾಗಿ ವೈದ್ಯಕೀಯ ವಿಮಾ ರಕ್ಷಣೆ ನೀಡುತ್ತದೆ. "ಮುಂದಿನ ಕೆಲವು ದಿನಗಳು ಅನಾಕಾಡಮಿ ತೊರೆಯುತ್ತಿರುವ ಸದಸ್ಯರಿಗೆ ಸಹಾಯ ಮಾಡುವುದಾಗಿದೆ ಮತ್ತು ಈ ಪರಿವರ್ತನೆಯನ್ನು ಬೆಂಬಲಿಸಲು ನಾನು ಎಲ್ಲಾ ತಂಡಗಳಿಗೆ ವಿನಂತಿಸಲು ಬಯಸುತ್ತೇನೆ," ಎಂದು ಮುಂಜಾಲ್ ಹೇಳಿದರು.

150 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ್ದ ಕಂಪನಿ
ಕಳೆದ ಜೂನ್‌ನಲ್ಲಿ ಕಾರ್ಯಕ್ಷಮತೆ ಸುಧಾರಣೆ ಯೋಜನೆಯ ಅಡಿಯಲ್ಲಿ 150 ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು. ಇದಲ್ಲದೆ, ಏಪ್ರಿಲ್‌ನಲ್ಲಿ ಕಂಪನಿಯು ತನ್ನ ಮಾರಾಟ ಮತ್ತು ಮಾರುಕಟ್ಟೆ ತಂಡದಿಂದ ಸುಮಾರು 600 ರಿಂದ 800 ಉದ್ಯೋಗಿಗಳನ್ನು ಹಾಗೂ ಕೆಲವು ಗುತ್ತಿಗೆ ಸಿಬ್ಬಂದಿ ಮತ್ತು ಶಿಕ್ಷಕರು ಅಥವಾ ಬೋಧಕರಿಗೆ ಗೇಟ್ ಪಾಸ್ ನೀಡಿತ್ತು.
ಮಾರ್ಚ್‌ನಲ್ಲಿ ಅನಾಕಾಡೆಮಿಯು ಸಂಸ್ಥೆಯ "ಪುನರ್ರಚನೆ"ಯ ಮಧ್ಯೆ 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ತನ್ನ PrepLadder ತಂಡದಿಂದ ವಜಾಗೊಳಿಸಿತು. ಕಳೆದ ಕೆಲವು ತಿಂಗಳುಗಳಲ್ಲಿ, ತಂತ್ರಜ್ಞಾನ ಮತ್ತು ಶಿಕ್ಷಣದ ಜಂಕ್ಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸ್ಟಾರ್ಟ್‌ಅಪ್‌ಗಳು ಅಂತಿಮವಾಗಿ ಸಾಧ್ಯವಾದಷ್ಟು ಬೇಗ ಲಾಭದಾಯಕತೆಯನ್ನು ಸಾಧಿಸಲು ವೆಚ್ಚವನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ.












Click it and Unblock the Notifications