ಪ್ರಾಥಮಿಕ, ಪ್ರೌಢ ಶಾಲೆಗಳು ಸೇರಿ 10 ಸಾವಿರ ಅತಿಥಿ ಶಿಕ್ಷಕರ ನೇಮಕ
ಬೆಂಗಳೂರು, ಆಗಸ್ಟ್ 21: ಕರ್ನಾಟಕ ಸರ್ಕಾರ 2023-2024ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ವಿ. ಶ್ರೀನಿವಾಸಮೂರ್ತಿ ಸರ್ಕಾರ ಅಧೀನ ಕಾರ್ಯದರ್ಶಿ (ಪ್ರೌಢ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 8000, ಸರ್ಕಾರಿ ಪ್ರೌಢಶಾಲೆಗಳಲ್ಲಿ 2000 ಸೇರಿ ಒಟ್ಟು 10,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತು ಉತ್ತಮ ಗುಣಮಟ್ಟದ ಶೈಕ್ಷಣಿಕ ಬಲವರ್ಧನೆಯ ಸಲುವಾಗಿ 2022-23ನೇ ಶೈಕ್ಷಣಿಕ ಸಾಲಿಗೆ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 26,000 ಹಾಗೂ ಪ್ರೌಢಶಾಲೆಗಳಲ್ಲಿ 6,078 ಒಟ್ಟು 32,078 ಅತಿಥಿ ಶಿಕ್ಷಕರುಗಳನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರದ ಮಂಜೂರಾತಿ ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಪತ್ರದಲ್ಲಿ 2023-24ನೇ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ಈಗಾಗಲೇ ಆರ್ಥಿಕ ಇಲಾಖೆ ಅನುಮತಿ ನೀಡಿರುವ 27000 ಹುದ್ದೆಗಳಿಗೆ ಈಗಾಗಲೇ ನೇಮಕ ಮಾಡಲು ಅನುಮತಿ ನೀಡಲಾಗಿದೆ. ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿಯಿರುವ 15,000 ಪದವೀಧರ ಪ್ರಾಥಮಿಕ ಶಿಕ್ಷಕರನ್ನು (6 ರಿಂದ 8ನೇ ತರಗತಿ) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿಗಾಗಿ ದಿನಾಂಕ 21/03/2022 ರಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಒಟ್ಟು 13,352 ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ. ಸದರಿ ಶಿಕ್ಷಕರ ನೇಮಕಾತಿಗಳಿಗೆ ಕುರಿತಂತೆ ಮಾನ್ಯ ಉಚ್ಛನ್ಯಾಯಾಲಯದಲ್ಲಿ ದಾಖಲಾಗಿದ್ದ ಅರ್ಜಿಯ ಕುರಿತು ನೀಡಿದ ತೀರ್ಪಿನಂತೆ ದಿನಾಂಕ 18/11/2022 ರಂದು ಪುಕಟಿಸಲಾಗಿದ್ದ 1:1 ತಾತ್ಕಾಲಿಕ ಆಯ್ಕೆಪಟ್ಟಿಯನ್ನು ರದ್ದುಗೊಳಿಸಿತ್ತು. ಮಾನ್ಯ ನ್ಯಾಯಾಲಯದ ತೀರ್ಪಿನಂತೆ ಹಾಗೂ ಸರ್ಕಾರದ ನಡವಳಿಯ ದಿನಾಂಕ 07/02/2023 ರಂತೆ ಕ್ರಮವಹಿಸಿ, ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ ದಿನಾಂಕ 8/3/2023 ರಂದು ಪ್ರಕಟಿಸಲಾಯಿತು.
ಪ್ರಸ್ತುತ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2023-24ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿಯಿರುವ ಬೋಧಕ ಹುದ್ದೆಗಳಿಗೆ ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆದುರಾಗಿ ಈ ಕೆಳಕಂಡಂತೆ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಅಥವಾ 2024ನೇ ಶೈಕ್ಷಣಿಕ ಸಾಲಿಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಿ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.
ಆದೇಶವೇನು?; ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ 2023-24 ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರುಗಳ ಹುದ್ದೆಗಳಿಗೆದುರಾಗಿ ಈ ಕೆಳಕಂಡಂತೆ ಒಟ್ಟು 10,000 ಅತಿಥಿ ಶಿಕ್ಷಕರುಗಳನ್ನು ಹೆಚ್ಚುವರಿಯಾಗಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಿದೆ.
ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರುಗಳು ಕೌನ್ಸಿಲಿಂಗ್ ಮೂಲಕ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಕೌನ್ಸಿಲಿಂಗ್ ಮುಖಾಂತರ ಖಾಲಿಯಾಗಿರುವ ಹುದ್ದೆಗಳನ್ನು ಹಾಗೂ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದ್ಯತೆ ಮೇರೆಗೆ ಪೂರ್ಣ ಪುಮಾಣದಲ್ಲಿ ಅತಿಥಿ ಶಿಕ್ಷಕರಿಂದ ಭರ್ತಿ ಮಾಡಲು ಕ್ರಮವಹಿಸುವುದು ಎಂದು ಆದೇಶ ಹೇಳಿದೆ.
2023-24 ನೇ ಶೈಕ್ಷಣಿಕ ಸಾಲಿಗೆ ನೇಮಕಾತಿ ಮಾಡಿಕೊಳ್ಳಲಾಗುವ ಒಟ್ಟು 10000 ಅತಿಥಿ ಶಿಕ್ಷಕರ ಗೌರವಧನ ಪಾವತಿಗಾಗಿ ಅವಶ್ಯವಿರುವ ಅನುದಾನದ ವಿವರ ಹಾಗೂ ಅತಿಥಿ ಶಿಕ್ಷಕರ ಜಿಲ್ಲಾ/ ತಾಲ್ಲೂಕುವಾರು ವಿವರಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ದಿನಾಂಕ 16/8/2023ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ ಎಂದು ತಿಳಿಸಿದೆ.












Click it and Unblock the Notifications