ಆಫೀಸಲ್ಲಿ ಎಷ್ಟೇ ಟೆನ್ಶನ್ ಇರಲಿ, ಕೆಲಸ ಬಿಟ್ಟು ಮನೇಲಿ ಕೂತ್ರೆ ತಲೆ ಕೆಡುತ್ತೆ: ಜಾಬ್ ಬಿಟ್ಟವನ ಮಾತು
Quitting Job: ಕೆಲಸ ಸಿಗುವವರೆಗೆ ಒಂದು ಚಿಂತೆಯಾದರೆ ಕೆಲಸ ಸಿಕ್ಕ ಮೇಲೆ ಮತ್ತೊಂದು ಚಿಂತೆ. ಕೆಲಸ ಎಂದ ಕೂಡಲೇ ತಿಂಗಳ ಕೊನೆಗೆ ಬರುವ ಸಂಬಳ ಮಾತ್ರ ಅಲ್ಲ. ಅದರ ಜೊತೆಗೆ ಬೇರೆ ಬೇರೆ ಟೆನ್ಶನ್ ಕೂಡಾ ಇರುತ್ತದೆ. ಈಗಂತೂ ಟೆನ್ಶನ್ ಇಲ್ಲದ ಕೆಲಸ ಇಲ್ಲವೇ ಇಲ್ಲ. ಹಾಗಾಗಿ ಎಷ್ಟೋ ಜನ ಮಾನಸಿಕ ಒತ್ತಡ ತಡೆದುಕೊಳ್ಳುವುದಕ್ಕೆ ಆಗದೆ ಕೆಲಸ ಬಿಟ್ಟು ಮನೆಯಲ್ಲಿ ಕೂರುತ್ತಾರೆ. ಹಾಗೆ ಮನೆಯಲ್ಲಿ ಕೂತರೆ ಕೆಲಸ ಮಾಡೋದಕ್ಕಿಂತ ಹೆಚ್ಚು ಸ್ಟ್ರೆಸ್ ಅನ್ನೋದು ಕೆಲವರ ಅಭಿಪ್ರಾಯ. ಕೆಲಸವಿದ್ದು ತಲೆ ಕೆಡಿಸಿಕೊಂಡ್ರೆ ಪರ್ವಾಗಿಲ್ಲ, ಆದರೆ ಕೆಲಸವಿಲ್ಲದೇ ಹುಚ್ಚರಾಗಬೇಡಿ ಅಂತ ಹೇಳಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಕಂಟೆಂಟ್ ಕ್ರಿಯೇಟರ್ ಏನು ಹೇಳಿದ್ದಾರೆ ನೋಡಿ.

ಕೆಲಸ ಇಲ್ಲದೆ ಇರುವ ಕಷ್ಟ :
ಆದರೆ ಇಲ್ಲೊಬ್ಬ ವ್ಯಕ್ತಿ ಕೆಲಸ ಬಿಡುವವರಿಗೆ ಒಂದು ಮೆಸೇಜ್ ಕೊಟ್ಟಿದ್ದಾರೆ. ಇವರು ಸುಮಾರು ಎಂಟು ತಿಂಗಳಿನಿಂದ ಕೆಲಸಕ್ಕೆ ಹೋಗುತ್ತಿಲ್ಲ. ಆಕ್ಸಿಡೆಂಟ್ ಕಾರಣದಿಂದ ಇವರಿಗೆ ಕೆಲಸಕ್ಕೆ ಹೋಗಲು ಆಗ್ತಾ ಇಲ್ಲ. ಎಂಟು ತಿಂಗಳಿನಿಂದ ಮನೆಯಲ್ಲೇ ಕುಳಿತ ಇವರಿಗೆ ಕೆಲಸಕ್ಕೆ ಹೋಗುವಾಸೆ. ಕೆಲಸಕ್ಕೆ ಹೋಗ್ತಾ ಇದ್ದಾಗ ಟೆನ್ಶನ್ , ಪ್ರೆಶರ್ ಎಂದು ಕೆಲಸ ಬಿಡುವ ಬಗ್ಗೆ ಯೋಚನೆ ಮಾಡ್ತಾ ಇದ್ದರಂತೆ. ಆದರೆ ಈಗ ಮನೆಯಲ್ಲಿ ಕೆಲಸ ಇಲ್ಲದೆ ಕುಳಿತುಕೊಳ್ಳುವುದು ಅದಕ್ಕಿಂತ ಜಾಸ್ತಿ ಒತ್ತಡ ಎನ್ನುವುದು ಇವರ ಅಭಿಪ್ರಾಯ. ಕೆಲಸ ಇಲ್ಲದೆ ಮನೆಯಲ್ಲಿ ಇರುವುದು ಬಹಳ ಕಷ್ಟವಂತೆ.
ಅಭಿಷೇಕ್ ಎನ್ನುವವರು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ @figuringlife.in ನಲ್ಲಿ ವೀಡಿಯೊ ಶೇರ್ ಮಾಡಿದ್ದಾರೆ. ತಿಂಗಳುಗಟ್ಟಲೆ ಕೆಲಸ ಇಲ್ಲದೆ ಮನೆಯಲ್ಲೇ ಕುಳಿತ ಕಾರಣ ಕೆಲಸದ ಬಗ್ಗೆ ನನ್ನ ದೃಷ್ಟಿಕೋನವೇ ಬದಲಾಗಿದೆ ಎಂದು ಹೇಳಿದ್ದಾರೆ.
Quitting Job ಹೆಚ್ಚಿಸುತ್ತೆ ಮಾನಸಿಕ ಒತ್ತಡ :
ನಿಮಗೊಂದು ಜಾಬ್ ಇದ್ದು, ಕೆಲಸಕ್ಕೆ ಹೋಗಲು ಮನಸ್ಸಿಲ್ಲ ಎಂದಾದರೆ ನನ್ನ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಿ. ನಾನು ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆದರೆ ಎಂಟು ತಿಂಗಳಿನಿಂದ, ಕೆಲಸಕ್ಕೆ ಹೋಗ್ತಾ ಇಲ್ಲ. ಮನೆಯಲ್ಲಿಯೇ ಇದ್ದೇನೆ. ಎಂಟು ತಿಂಗಳ ಹಿಂದೆ ಆದ ಸಣ್ಣ ಆಕ್ಸಿಡೆಂಟ್‌ನಿಂದ ಬೆಡ್ ರೆಸ್ಟ್ ತೆಗೆದುಕೊಳ್ಳಬೇಕಾಗಿ ಬಂತು. ಹಾಗಾಗಿ ಎಂಟು ತಿಂಗಳಿನಿಂದ ಮನೆಯಲ್ಲಿಯೇ ಇದ್ದೇನೆ ಎಂದು ಅಭಿಷೇಕ್ ಹೇಳಿದ್ದಾರೆ. ಕೆಲಸಕ್ಕೆ ಹೋಗುವಾಗ ಎಷ್ಟೇ ಒತ್ತಡ ಅನ್ನಿಸದರೂ, ಕೆಲಸ ಇಲ್ಲದೆ ಮನೆಯಲ್ಲಿ ಕೂರುವುದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಕೆಲಸದ (work) ಒತ್ತಡವನ್ನು ಸಹಿಸಿಕೊಳ್ಳಬಹುದು, ಆದರೆ ಮನೆಯಲ್ಲಿರುವಾಗ ಮನಸ್ಸಿನಲ್ಲಿ ಬರುವ ಯೋಚನೆ, ಇದರಿಂದ ಉಂಟಾಗುವ ಒತ್ತಡ ಸಹಿಸಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ. ಹಾಗಾಗಿ ನೀವು ಯಾವ ಕೆಲಸವೇ ಮಾಡ್ತಾ ಇರಿ, ಅದನ್ನು ಮನಸ್ಸಿನಿಂದ ಮಾಡಿ, ಕೆಲಸ ಬಿಡುವ ಯೋಚನೆ ಮಾಡಬೇಡಿ ಎಂದು ಸಲಹೆ ಕೊಟ್ಟಿದ್ದಾರೆ.
ಭವಿಷ್ಯದ ಬಗ್ಗೆ ಕಾಡುವ ಚಿಂತೆ :
ಉದ್ಯೋಗ ಎಂದರೆ ಟಾರ್ಗೆಟ್, ಡೆಡ್‌ಲೈನ್, ಕೆಲಸದ ಒತ್ತಡ, ಮ್ಯಾನೇಜರ್ ಅನ್ನು ನಿಭಾಯಿಸುವುದು ಎಂದರ್ಥ. ಹಾಗಾಗಿ ದಿನಾ ಒಂದಲ್ಲ ಒಂದು ರೀತಿಯ ಟೆನ್ಶನ್ ಇದ್ದೇ ಇರುತ್ತದೆ. ಆದರೆ ಕೆಲಸ ಇಲ್ಲ ಎಂದಾದರೆ ಇದಕ್ಕಿಂತ ನೂರು ಪಟ್ಟು ಹೆಚ್ಚು ಕಿರಿ ಕಿರಿ. ನಿತ್ಯ ಸಮಯ ಕಳೆಯುವುದು ಒಂದು ಸಮಸ್ಯೆಯಾದರೆ, ಭವಿಷ್ಯದ ಬಗ್ಗೆ ಕಾಡುವ ಅನಿಶ್ಚಿತತೆ ಮತ್ತು ಹಣಕಾಸಿನ ಒತ್ತಡ ಕ್ಷಣ ಕ್ಷಣಕ್ಕೂ ಕಾಡುತ್ತದೆ.
ಆದರೂ, ಕೆಲವೊಂದು ಆಫೀಸ್‌ನಲ್ಲಿ ಟಾಕ್ಸಿಕ್ ವಾತಾವರಣ ಇರುತ್ತದೆ. ಇಂಥ ಜಾಗದಲ್ಲಿ ಕೆಲಸ ಮುಂದುವರೆಸಿ ಎಂದು ಖಂಡಿತವಾಗಿಯೂ ಹೇಳುವುದಿಲ್ಲ ಎಂದಿದ್ದಾರೆ. ನಿಮ್ಮ ಕೆಲಸದ ಕಾರಣ ಮಾನಸಿಕವಾಗಿ ಹಿಂಸೆ ಅನುಭವಿಸ್ತಾ ಇದ್ರೆ ಕೆಲಸನ್ನು ಬದಲಾಯಿಸುವುದು ಒಳ್ಳೆಯದು. ಇದರ ಬದಲು ಕೆಲಸ ಬಿಟ್ಟು ಮನೆಯಲ್ಲಿ ಕೂರುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಅಂದುಕೊಂಡರೆ ಅದು ಸುಳ್ಳು ಎಂದಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ಪ್ರತಿಕ್ರಿಯೆ :
ಅಭಿಷೇಕ್ ಅವರ ಈ ಪೋಸ್ಟ್‌ಗೆ ಜನ ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲಸ ಮತ್ತು ನಿರುದ್ಯೋಗದ ( unemployment) ಬಗ್ಗೆ ಜನ ತಮ್ಮ ತಮ್ಮ ಆಲೋಚನೆಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಿರುದ್ಯೋಗಿಯಾಗಿರುವುದು ಬೇರೆಯೇ ರೀತಿಯ ಒತ್ತಡ ನೀಡುತ್ತದೆ ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬರು ಕೆಲಸ ಅಂದರೆ ಬರೀ ಸಂಬಳ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications
