ಸಹಾಯಕ ಪ್ರಾಧ್ಯಾಪಕರ ನೇಮಾತಿ, ವಯೋಮಿತಿ; ಹೊಸ ಆದೇಶ
ಬೆಂಗಳೂರು, ಮೇ 06; ಕಾಲೇಜು ಶಿಕ್ಷಣ ಇಲಾಖೆ ಇಲಾಖಾ ವ್ಯಾಪ್ತಿಯ ಖಾಸಗಿ ಅನುದಾನಿತ ಪಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿ ಹುದ್ದೆಗೆ ವಯೋಮಿತಿ ವಿನಾಯಿತಿಗೆ ಸಲ್ಲಿಸುವ ಅರ್ಜಿಗಳಿಗೆ ದೃಢೀಕರಣ ನೀಡುವ ಬಗ್ಗೆ ಆದೇಶವೊಂದನ್ನು ಹೊರಡಿಸಿದೆ.
ಕಾಲೇಜು ಶಿಕ್ಷಣ ಆಯುಕ್ತರ ಕಚೇರಿ, ಉನ್ನತ ಶಿಕ್ಷಣ ಸೌಧ, ಶೇಷಾದ್ರಿ ರಸ್ತೆ, ಬೆಂಗಳೂರು ಈ ಕುರಿತು ಆದೇಶವನ್ನು ಹೊರಡಿಸಿದೆ. ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ವ-ಇಚ್ಛೆ/ ವಯೋನಿವೃತ್ತಿ, ರಾಜೀನಾಮೆ, ನಿಧನ ಮತ್ತು ಇನ್ನಿತರ ಕಾರಣಗಳಿಂದ ಖಾಲಿಯಾಗುವ ಬೋಧಕ ವರ್ಗದ ಸಹಾಯಕ ಪ್ರಾಧ್ಯಾಪಕರ ಹುದ್ದೆಯನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಿಕೊಳ್ಳುವ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ಆಡಳಿತ ಮಂಡಳಿಯವರಿಗೆ ಅಧಿಸೂಚನೆ ಹೊರಡಿಸಲು ಅನುಮತಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಪತ್ರದಲ್ಲಿ ಇಲಾಖಾ ಮುಖ್ಯಸ್ಥರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ ಎಂದು ತಿಳಿಸಲಾಗಿದೆ. ಖಾಲಿ ಇರುವ ಬೋಧಕ ವರ್ಗದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ಈ ಕಛೇರಿಯ ವಿವಿಧ ದಿನಾಂಕಗಳ ಪತ್ರಗಳಲ್ಲಿ ಎಲ್ಲಾ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಅನುಮತಿ ನೀಡಲಾಗಿರುತ್ತದೆ ಎಂದು ಹೇಳಿದೆ.
ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬೋಧಕ ವರ್ಗದ ಸಹಾಯಕ ಪ್ರಾಧ್ಯಾಪಕರ ಖಾಲಿ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ಈಗಾಗಲೆ ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪೂರ್ಣಕಾಲಿಕ ಬೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕರು ಖಾಯಂ ಸಹಾಯಕ ಪ್ರಾಧ್ಯಾಪಕರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಯೋಮಿತಿಯಲ್ಲಿ ವಿನಾಯಿತಿ ನೀಡುವ ಸಂಬಂಧ ಸರ್ಕಾರದ ಸೇರ್ಪಡೆ ಆದೇಶದಲ್ಲಿ ಅವರು ಬೋಧನಾನುಭವ ಹೊಂದಿರುವ ಸೇವಾ ಅವಧಿ ಅಥವಾ 5 ವರ್ಷಗಳು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಅವಧಿಗೆ ಗರಿಷ್ಠ ವಯೋಮಿತಿಯಲ್ಲಿ ವಿನಾಯಿತಿ ನೀಡಲು ಹಾಗೂ ವಿನಾಯಿತಿ ನೀಡುವ ಪೂರ್ವದಲ್ಲಿ ಸಂಬಂಧಿಸಿದ ಅರ್ಜಿಗಳನ್ನು ಪ್ರಾದೇಶಿಕ ಜಂಟಿ ನಿರ್ದೇಶಕರು ಹಾಗೂ ಇಲಾಖಾ ಮುಖ್ಯಸ್ಥರಿಂದ ದೃಢೀಕರಣಗೊಳಿಸಲು ತಿಳಿಸಲಾಗಿರುತ್ತದೆ.

ವಯೋಮಿತಿ ವಿನಾಯಿತಿ; ಸರ್ಕಾರದ ಸೇರ್ಪಡೆ ಆದೇಶದನ್ವಯ ವಿವಿಧ ವಲಯ ಪ್ರಾದೇಶಿಕ ಜಂಟಿ ನಿರ್ದೇಶಕರಿಂದ ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಯಂ ಬೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕರು ಅರ್ಜಿ ಸಲ್ಲಿಸಲು ವಯೋಮಿತಿ ವಿನಾಯಿತಿ ಕೋರಿ ಸಲ್ಲಿಸುವ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸದೆ ಕಾಲೇಜುಗಳಿಂದ ಸಲ್ಲಿಸಲಾಗುವ ಪುಸ್ತಾವನೆಗಳನ್ನು ಯಥಾವತ್ ಈ ಕಛೇರಿಗೆ ಸಲ್ಲಿಸುತ್ತಿರುವುದು ಕಂಡುಬಂದಿರುತ್ತದೆ ಎಂದು ತಿಳಿಸಿದೆ.
ಕರ್ನಾಟಕ ಶಿಕ್ಷಣ ಸಂಸ್ಥೆ (ಕಾಲೇಜು ಶಿಕ್ಷಣ)ನಿಯಮಗಳು 2003ರ ನಿಯಮ 3(4)ರನ್ವಯ ಪ್ರಾದೇಶಿಕ ಜಂಟಿ ನಿರ್ದೇಶಕರು ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಿಂದ ಸಲ್ಲಿಸಲಾಗುವ ಪುಸ್ತಾನೆಗಳು ನಿಯಮಗಳನ್ನು ಪೂರೈಸಿರುವ ಬಗ್ಗೆ ಪರಾಮರ್ಶಿಸಿ, ಕ್ರಮಬದ್ಧವಾಗಿದ್ದಲ್ಲಷ್ಟೇ ಈ ಕಛೇರಿಗೆ ಸ್ಪಷ್ಟ ಅಭಿಪ್ರಾಯ ಸಹಿತ ಶಿಫಾರಸ್ಸು ಮಾಡಬೇಕಾಗಿದ್ದು, ಆದರೆ ಸದರಿ ನಿಯಮವನ್ನು ಪಾಲಿಸದಿರುವುದು ಕಂಡುಬಂದಿರುತ್ತದೆ ಎಂದು ಹೇಳಿದೆ.
ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನೇರ ನೇಮಕಾತಿ ಮುಖಾಂತರ ಬೋಧಕ ವರ್ಗದ ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿಯು ಮುಖ್ಯ ವಿಷಯವಾಗಿದ್ದು, ಸ್ವೀಕರಿಸುವ ಪುಸ್ತಾವನೆಗಳನ್ನು ಪರಮಾರ್ಶಿಸಿ ಅರ್ಹರಿದ್ದಲ್ಲಿ ಮಾತ್ರ ಈ ಕಛೇರಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಸಲ್ಲಿಸುವುದು ತಮ್ಮ ಆದ ಕರ್ತವ್ಯವಾಗಿದೆ ಎಂಬುದನ್ನು ಪುನರುಚ್ಚರಿಸುತ್ತಾ, ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಪೂರ್ಣಕಾಲಿಕ ಬೋಧನಾನುಭವ ಹೊಂದಿರುವ ಅಭ್ಯರ್ಥಿಗಳಿಗೆ ವಯೋಮಿತಿ ವಿನಾಯಿತಿ ನೀಡುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳ ಬಗ್ಗೆ ತಮ್ಮ ಹಂತದಲ್ಲೇ ಪರಿಶೀಲಿಸಿ ದೃಢೀಕರಿಸುವಂತೆ ತಿಳಿಸಿದೆ.
1) ಆಡಳಿತ ಮಂಡಳಿಯ ಪೂರ್ಣಕಾಲಿಕವಾಗಿ ಮಾಡಿದ ನೇಮಕಾತಿ ಆದೇಶ ಪ್ರತಿ
2) ಕರ್ತವ್ಯಕ್ಕೆ ವರದಿ ಮಾಡಿಕೊಂಡ ಬಗ್ಗೆ ದಾಖಲೆ
3) ಕರ್ತವ್ಯ ನಿರ್ವಹಿಸಿದ ವಾರ್ಷಿಕ ಕಾರ್ಯಭಾರದ ಮಾಹಿತಿ
4) ಕರ್ತವ್ಯ ನಿರ್ವಹಿಸಿದ ವರ್ಷಗಳು ನಿರಂತರವಾಗಿ ವೇತನ ಪಡೆದ ಬಗ್ಗೆ ದಾಖಲೆ
5) ಕರ್ತವ್ಯ ನಿರ್ವಹಿಸಿದ ವರ್ಷಗಳ ಹಾಜರಾತಿ
ಹಾಗೂ ವಯೋಮಿತಿ ವಿನಾಯಿತಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳ ಬಗ್ಗೆ ಅಸಂಗತೆಗಳು ಉಂಟಾದಲ್ಲಿ ತಮ್ಮ ಹಂತದಲ್ಲೇ ನಿರಾಕರಿಸಲು ಸಹ ತಿಳಿಸುತ್ತಾ, ಒಂದು ವೇಳೆ ಇಂತಹ ಅರ್ಹ ಅಭ್ಯರ್ಥಿಗಳು ನೇಮಕಾತಿಗೆ ಆಯ್ಕೆಗೊಂಡಲ್ಲಿ ಅಂತಹ ಅಭ್ಯರ್ಥಿಗೆ ಸಂಬಂಧಿಸಿದಂತೆ ಈ ಮೇಲ್ಕಂಡ ದಾಖಲೆಗಳ ಸಹಿತ ನೇಮಕಾತಿ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಆದೇಶ ಹೇಳಿದೆ.












Click it and Unblock the Notifications