Job Cuts: 9,000 ಉದ್ಯೋಗಿಗಳನ್ನು ವಜಾ ಮಾಡಲು ಮುಂದಾದ ದೈತ್ಯ ಕಂಪನಿ
ಜಪಾನ್‌ನ ಪ್ರಮುಖ ಆಟೊಮೇಟಿವ್ ದೈತ್ಯ ನಿಸ್ಸಾನ್ ಮೋಟಾರ್ ಭಾರತ ಸೇರಿದಂತೆ ವಿಶ್ವಾದಾದ್ಯಂತ ತನ್ನ ಉದ್ಯೋಗಿಗಳಿಗೆ ಶಾಕ್ ಕೊಡಲು ಮುಂದಾಗಿದೆ. ವೆಚ್ಚವನ್ನು ಕಡಿಮೆ ಮಾಡಲು ಕಂಪನಿ ಯೋಜಿಸಿದ್ದು ಇದರ ಭಾಗವಾಗಿ ಸುಮಾರು 9,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸಿದೆ. ಚೀನಾದಂತಹ ಪ್ರಮುಖ ಕಾರು ಮಾರುಕಟ್ಟೆಯಲ್ಲಿ ನಿಸ್ಸಾನ್ ಸಂಸ್ಥೆ ಹಿನ್ನಡೆ ಅನುಭವಿಸಿದ್ದು, ಈ ನಿರ್ಧಾರ ಮಾಡಲಾಗಿದೆ ಎಂದು ವರದಿಯಾಗಿದೆ.
ನಿಸ್ಸಾನ್ ಜಾಗತಿಕವಾಗಿ ಉತ್ಪಾದನಾ ಸಾಮರ್ಥ್ಯವನ್ನು 20% ರಷ್ಟು ಕಡಿಮೆ ಮಾಡುವುದಾಗಿ ಘೋಷಿಸಿದೆ. ಇದು ಕಂಪನಿಯ ಲಾಭ ಕಡಿಮೆಯಾಗುತ್ತಿದೆ ಎನ್ನುವುದರ ಸೂಚನೆಯಲ್ಲ, ಆದರೆ ವೆಚ್ಚವನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶ ಎಂದು ಕಂಪನಿ ಸಿಇಒ ಮ್ಯಾಕೋಟೊ ಉಚಿಡಾ ಮಾಹಿತಿ ನೀಡಿದ್ದಾರೆ.

ನಿಸ್ಸಾನ್ ತನ್ನ ವ್ಯಾಪಾರದ ವಾತಾವರಣದಲ್ಲಿ ಬದಲಾವಣೆಗಳಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಅದರ ಭಾಗವಾಗಿ ಉದ್ಯೋಗಗಳ ಕಡಿತಕ್ಕೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.
ಕಡಿಮೆಯಾದ ಲಾಭದ ಪ್ರಮಾಣ
ನಿಸ್ಸಾನ್ ಕಂಪನಿಯ ಲಾಭದ ಪ್ರಮಾಣದಲ್ಲಿ ಗಣನೀಯ ಕುಸಿತವನ್ನು ನೋಡಲಾಗಿದೆ. 500 ಬಿಲಿಯನ್ ಯೆನ್ ಲಾಭದ ನಿರೀಕ್ಷೆ ಮಾಡಿದ್ದ ಕಂಪನಿ ಇದೀಗ ನಿರೀಕ್ಷೆಯನ್ನು 150 ಬಿಲಿಯನ್ ಯೆನ್‌ಗೆ ಕಡಿಮೆ ಮಾಡಿದೆ.
ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಕಂಪನಿಯು ಒಟ್ಟು 32.9 ಶತಕೋಟಿ ಯೆನ್ ಲಾಭವನ್ನು ಗಳಿಸಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ಲಾಭದ ಮೊತ್ತ 208.1 ಶತಕೋಟಿ ಯೆನ್‌ಗಳಷ್ಟಾಗಿತ್ತು. ಲಾಭದ ಪ್ರಮಾಣದಲ್ಲಿ 85 ಪ್ರತಿಶತ ಕುಸಿತ ಕಂಡಿದ್ದು, ಪರಿಹಾರ ಕ್ರಮಗಳನ್ನು ಹುಡುಕಲು ಮುಂದಾಗಿದೆ.
ಜಾಗತಿಕವಾಗಿ ನಿಸ್ಸಾನ್ ಕಾರುಗಳ ಮಾರಾಟದಲ್ಲಿ 3.8 ಪ್ರತಿಶತ ಕುಸಿತ ಕಂಡಿದೆ. ಚೀನಾ ದೇಶದಲ್ಲಿ ನಿಸ್ಸಾನ್ ಕಾರು ಮಾರಾಟ 14.3 ಪ್ರತಿಶತ ಕುಸಿತ ಕಂಡಿರುವುದು ಕಂಪನಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಚೀನಾದ ಸ್ಥಳೀಯ ಕಾರು ಕಂಪನಿಗಳು ನಿಸ್ಸಾನ್‌ಗೆ ಪ್ರಬಲ ಪೈಪೋಟಿ ನೀಡುತ್ತಿದ್ದು, ಮಾರಾಟ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಅಮೆರಿಕದಲ್ಲಿ ಕೂಡ ನಿಸ್ಸಾನ್ ಕಾರುಗಳ ಮಾರಾಟದಲ್ಲಿ ಕುಸಿತ ಕಂಡಿರುವುದು ಕಂಪನಿಯ ಲಾಭ ಕಡಿಮೆಯಾಗಲು ಮತ್ತೊಂದು ಕಾರಣವಾಗಿದೆ.
ನಿಸ್ಸಾನ್ ಮಾತ್ರವಲ್ಲ ಜಪಾನ್‌ನ ಮತ್ತೊಂದು ಪ್ರಮುಖ ಆಟೊಮೊಬೈಲ್ ಕಂಪನಿ ಹೊಂಡಾ ಮೋಟಾರ್ ಕೂಡ ಲಾಭದ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ವರದಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಲಾಭದಲ್ಲಿ 15 ಪ್ರತಿಶತ ಕುಸಿತವಾಗಿದೆ ಎಂದು ವರದಿ ತಿಳಿಸಿದೆ.












Click it and Unblock the Notifications