KSRTC Jobs Recruitment: ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗೆ ದಿನಾಂಕ ಫಿಕ್ಸ್
ಬೆಂಗಳೂರು, ಮೇ 08: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ಇತ್ತೀಚೆಗೆ ಸಾವಿರಾರು ಚಾಲಕ ಕಂ-ನಿರ್ವಾಹಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ಸಾರಿಗೆ ನಿಗಮವು ದೇಹದಾರ್ಢ್ಯ ಹಾಗೂ ದಾಖಲಾತಿ ಪರೀಕ್ಷೆಗಳಿಗೆ ದಿನಾಂಕ ಫಿಕ್ಸ್ ಮಾಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸುಮಾರು 2000 ಚಾಲಕ ಕಂ-ನಿರ್ವಾಹಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಕಳೆದ ಫೆಬ್ರವರಿ ಮಧ್ಯ ಭಾಗದಲ್ಲಿ ಅರ್ಜಿಗಳನ್ನು ಕರೆದಿತ್ತು. ನಿಯಮಗಳ ಪ್ರಕಾರ, ವರ್ಗವಾರು ಹುದ್ದೆಗಳ ಸಂಖ್ಯೆಯನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು.

ಈಗಾಗಲೇ ಅನೇಕ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆ ಅಭ್ಯರ್ಥಿಗಳ ಮೂಲ ದಾಖಲಾತಿ ಹಾಗೂ ದೇಹದಾರ್ಢ್ಯ ಪರಿಶೀಲನೆಯನ್ನು ಇದೇ ಮೇ 15ರಂದು ನಡೆಸುವುದಾಗಿ ಸಾರಿಗೆ ಸಂಸ್ಥೆ ಮಾಹಿತಿ ನೀಡಿದೆ.
ಪರಿಶೀಲನಾ ಸ್ಥಳದ ವಿಳಾಸ
ಈ ದಾಖಲಾತಿ ಹಾಗೂ ದೇಹದಾರ್ಢ್ಯ ಪರಿಶೀಲನೆಯು ಅಂದು ಬೆಂಗಳೂರಿನ ಶಾಂತಿನಗರದಲ್ಲಿರುವ KSRTC ಕೇಂದ್ರ ಕಚೇರಿಯಲ್ಲಿ ನಡೆಸಲು ಅಧಿಕಾರಿಗಳು ತಿಳಿಸಿದ್ದಾರೆ. ಅಭ್ಯರ್ಥಿಗಳು ಎಲ್ಲ ಮೂಲ ದಾಖಲೆಗಳ ಸಹಿತ ಹಾಜರಾಗಬೇಕಿದೆ.
ಯಾವೆಲ್ಲ ದಾಖಲೆಗಳನ್ನು ತರಬೇಕು ಎಂಬುದರ ಅಗತ್ಯ ಮಾಹಿತಿಯನ್ನು ನಿಗಮವು ಇಂದು ಮೇ 8ರಂದು ಬುಧವಾರ ಸಾರಿಗೆ ಸಂಸ್ಥೆ ಅಧಿಕೃತ ವೆಬ್‌ಸೈಟ್ ksrtcjobs.karnataka.gov.in ನಲ್ಲಿ ಪ್ರಕಟಿಸಲಾದ ಕರೆಪತ್ರವನ್ನು ಡೌನ್‌ಲೋಸ್ ಮಾಡಿಕೊಳ್ಳಬಹುದು. ನಿಗದಿತ ಸಮಯಕ್ಕೆ ಹಾಜರಿರುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.

ಅಭ್ಯರ್ಥಿಗಳಿಗೆ ವಿಶೇಷ ಸೂಚನೆ
ಪ್ರಸ್ತುತ ಅಭ್ಯರ್ಥಿಗಳ ಮೂಲ ದಾಖಲಾತಿ/ದೇಹದಾರ್ಢ್ಯ ಪರಿಶೀಲನೆ ಮಾತ್ರ ನಡೆಸಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಚಾಲನಾ ಪರೀಕ್ಷೆ ನಡೆಸುವ ಕುರಿತು ಪ್ರತ್ಯೇಕ ದಿನಾಂಕ/ಸ್ಥಳನನ್ನು ನಿಗದಿಪಡಿಸಲಾಗುವುದು.
ಸದರಿ ಹುದ್ದೆ ಆಯ್ಕೆಯು ಗಣಕೀಕೃತ ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಹಾಗೂ ಅಧಿಸೂಚನೆ ಸಂದರ್ಭದಲ್ಲಿ ಚಾಲ್ತಿ ಇದ್ದ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ, ಪಾರದರ್ಶಕಾಗಿ ನಡೆಯವುದರಿಂದ ಇದರಲ್ಲಿ ಮಾನವ ಹಸ್ತಕ್ಷೇಪ ಇರುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳು, ಇನ್ನಿತರ ಆಮಿಷಕ್ಕೆ ಒಳಗಾಗಬಾರದಂತೆ KSRTCಯು ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ರಾಜ್ಯ ಸಾರಿಗೆ ವ್ಯಾಪ್ತಿಯಲ್ಲಿ ಬಹುದಿನಗಳಿಂದ ಉದ್ಯೋಗ ಪಡೆಯಲು ಕಾಯುತ್ತಿದ್ದವರಿಗೆ ಕೆಎಸ್ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ. ಒಂದೊಮ್ಮೆ ಈ ಪ್ರಕಟಣೆ/ಮಾಹಿತಿ ಓದಿಕೊಂಡು ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದು.











Click it and Unblock the Notifications