206 ಸೀನ್ ಆಫ್ ಕ್ರೈಂ ಆಫೀಸರ್ ಹುದ್ದೆಗಳ ನೇಮಕಕ್ಕೆ ಪೊಲೀಸ್ ಇಲಾಖೆಯಿಂದ ಅರ್ಜಿ ಆಹ್ವಾನ
ಬೆಂಗಳೂರು ಡಿ. 16: ನ್ಯಾಯ ವಿಜ್ಞಾನ ಪ್ರಯೋಗಾಲಯ ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ 206 ಸೀನ್ ಆಫ್ ಕ್ರೈಂ ಆಫೀಸರ್ (soco) ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪೊಲೀಸ್ ಇಲಾಖೆ ಅರ್ಜಿ ಆಹ್ವಾನಿಸಿದೆ.
ಡಿಸೆಂಬರ್ 17 ರಿಂದಲೇ ಸೀನ್ ಆಫ್ ಕ್ರೈಂ ಆಪೀಸರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆ ದಿನಾಂಕ 2022 ಜನವರಿ 15. ಶುಲ್ಕ ಪಾವತಿಸಲು ಜನವರಿ 18, 2022 ಕೊನೆ ದಿನಾಂಕ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಪರೀಕ್ಷಾ ಶುಲ್ಕವನ್ನು ಅಂಚೆ ಕಚೇರಿ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್ ನ ಅಧಿಕೃತ ಶಾಖೆಗಳಲ್ಲಿ ಮಾತ್ರ ಪಾವತಿ ಮಾಡಲು ಸೂಚಿಸಲಾಗಿದೆ. ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ವೆಬ್ ತಾಣ https://recruitment.ksp.gov.in/# ಮೂಲಕ ಅರ್ಜಿ ಸಲ್ಲಿಸಬೇಕು.
ಹುದ್ದೆಗಳ ವಿವರ:
ರಾಜ್ಯ ಸರ್ಕಾರ ಇತ್ತೀಚೆಗೆ ವಿಧಿ ವಿಜ್ಞಾನ ಪ್ರಯೋಗಾಲಯ/ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ (ಸೀನ್ ಆಫ್ ಕ್ರೈಂ ಆಫೀಸರ್ - SOCO) ಹುದ್ದೆಗಳನ್ನು ನೇಮಕ ಮಾಡವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದರು. ಅದರಂತೆ ಖಾಲಿ ಇರುವ ಸ್ಥಳೀಯ ವೃಂದದ 28 ಹುದ್ದೆ ಹಾಗೂ ಮಿಕ್ಕುಳಿದ ವೃಂದದ 178 ಹುದ್ದೆ ಸೇರಿ ಒಟ್ಟು 206 SOCO ಹುದ್ದೆಗಳ ಭರ್ತಿಯಾಗಲಿದೆ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಮೀಸಲಾತಿ ಕಲ್ಪಿಸಿಲ್ಲ. ಹೀಗಾಗಿ ಸ್ಥಳೀಯ ಹಾಗೂ ಮಿಕ್ಕ ವೃಂದದ ವಿಭಾಗದಲ್ಲಿಯೇ ಅರ್ಜಿ ಸಲ್ಲಿಸಲು ಕಲ್ಯಾಣ ಕರ್ನಾಟಕ ವಿಭಾಗದ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ.

ಶೈಕ್ಷಣಿಕ ಅರ್ಹತೆಗಳು ಏನು?
ಕಾನೂನು ರೀತ್ಯಾ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಲ್ಲಿ ವಿಧಿ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಶೇ. 55 ಅಂಕಗಳೊಂದಿಗೆ ಉತ್ತೀರ್ಣರಾದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಅಥವಾ ವಿಧಿ ವಿಜ್ಞಾನ ವಿಷಯದಲ್ಲಿ ಪದವಿಯಲ್ಲಿ ಶೇ. 55 ಅಂಕ ಗಳಿಸಿದ್ದು, ಒಂದು ವರ್ಷದ ಡಿಪ್ಲೋಮಾ ಪಡೆದವರು ಅರ್ಜಿ ಸಲ್ಲಿಸಬಹುದು. ಅಥವಾ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ವಿಧಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಶೇ. 55 ಅಂಕಗಳೊಂದಿಗೆ ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿ :
ಸೀನ್ ಆಫ್ ಕ್ರೈಂ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವರು 2022 ಜನವರಿ 1 ಕ್ಕೆ ಅನ್ವಯವಾಗುವಂತೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಅಭ್ಯರ್ಥಿಗಳ ವಯೋಮಿತಿ 35 ವರ್ಷ ಗರಿಷ್ಠ ಮೀರಿರಬಾರದು. ಹಿಂದುಳಿದ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ 40 ವರ್ಷ, ಇನ್ನು ಮಾಜಿ ಸೈನಿಕರಿಗೆ ಅವರು ಸಲ್ಲಿಸಿದ ಸೇವೆಯ ವರ್ಷಗಳಿಗೆ ಮೂರು ವರ್ಷ ಸೇರ್ಪಡೆ ಮಾಡಿ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ ಮೂಲಕ ಸೀನ್ ಆಫ್ ಕ್ರೈಂ ಅಫೀಸರ್ ಹುದ್ದೆಗಳ ನೇಮಕಾತಿ ನಡೆಸಲಾಗುತ್ತದೆ. ತಲಾ 75 ಅಂಕಗಳಿಗೆ ಅನುಗುಣವಾಗಿ ಒಂದು ಸಾಮಾನ್ಯ ಪ್ರಶ್ನೆ ಪ್ರತ್ರಿಕೆ ಮತ್ತೊಂದು ನಿರ್ಧಿಷ್ಟ ಪತ್ರಿಕೆಗೆ ಲಿಖಿತ ಪರೀಕ್ಷೆ ನಡೆಯಲಿದೆ. ಒಂದೂವರೆ ತಾಸು ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆ ಪರೀಕ್ಷೆ ಬರೆಯಲು ನಿಗದಿ ಮಾಡಿರುವ ಕಾಲಮಿತಿ. ಪಠ್ಯಕ್ರಮವನ್ನು ಇಲಾಖೆಯ ವೆಬ್ ತಾಣದಲ್ಲಿ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ. ಹುದ್ದೆಗಳ ವರ್ಗೀಕರಣ ಈಗಾಗಲೇ ಜಾರಿಯಲ್ಲಿರುವ ಸೇವಾ ನಿಯಮಗಳಿಗೆ ಸರ್ಕಾರದ ಅಧಿಸೂಚನೆಗಳಿಗೆ ಹಾಗೂ ನ್ಯಾಯಾಲಯದ ತೀರ್ಪುಗಳಿಗೆ ಅನ್ವಯ ಬದಲಾವಣೆಗೆ ಒಳಪಟ್ಟಿರುತ್ತದೆ.
ಮೀಸಲಾತಿ ಕೋರುವರಿಗೆ ಮಾಹಿತಿ:
ಇನ್ನೂ ಯೋಜನಾ ನಿರಾಶ್ರಿತ ಅಭ್ಯರ್ಥಿಗಳು 2000 ಅಧಿಸೂಚನೆ ಅನ್ವಯ 20 ವರ್ಷಕ್ಕೂ ಮುನ್ನ ನಿರಾಶ್ರಿತರಾದವರು ಯೋಜನಾ ನಿರಾಶ್ರಿತರ ಅಡಿ ಮೀಸಲಾತಿ ಪಡೆಯಲು ಅರ್ಹರಿರುವುದಿಲ್ಲ. ಉಳಿದಂತೆ ಅರ್ಹರು ಸಂಬಂಧಪಟ್ಟ ತಹಶೀಲ್ದಾರ್ ಅವರಿಂದ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆ ದಿನಾಂಕದ ಒಳಗೆ ಪ್ರಮಾಣ ಪತ್ರ ಮಾಡಿಸಿಕೊಂಡಿರಬೇಕು.
ಇನ್ನು ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿರುವ ಅಭ್ಯರ್ಥಿಗಳು ಕನ್ನಡ ಮಾಧ್ಯಮ ಮೀಸಲಾತಿ ಬಯಸುವರು ಸಂಬಂಧಪಟ್ಟ ಶಾಲೆಯಿಂದ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿರಬೇಕು. ವಿಕಲಚೇತನ ಅಭ್ಯರ್ಥಿಗಳು ಶೇ. 40 ಕ್ಕಿಂತಲೂ ಕಡಿಮೆ ಇಲ್ಲದ ಅಂಗವೈಕಲ್ಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದವರು ಮಾತ್ರ ಅಂಗವಿಕಲ ಕೋಟಾದಡಿ ಅರ್ಜಿ ಸಲ್ಲಿಸಲು ಅರ್ಹರು. ಗ್ರಾಮೀಣ ಅಭ್ಯರ್ಥಿಗಳು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆ ದಿನಾಂಕಕ್ಕೂ ಮೊದಲು ಸಂಬಂಧಪಟ್ಟ ದಾಖಲಾತಿಗಳನ್ನು ಪಡೆದಿರಬೇಕು ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 080-22943346












Click it and Unblock the Notifications