KPSC Recruitment; ಸದನದಲ್ಲಿ ಮುಖ್ಯಮಂತ್ರಿಗಳ ಉತ್ತರ
ಬೆಂಗಳೂರು, ಮಾರ್ಚ್ 25; ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಕುರಿತು ಮುಖ್ಯಮಂತ್ರಿ, ಹಣಕಾಸು ಸಚಿವರು ಆಗಿರುವ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್‌ನಲ್ಲಿ ಉತ್ತರ ನೀಡಿದ್ದಾರೆ. ಎನ್. ರವಿ ಕುಮಾರ್ ಕೇಳಿದ್ದ ಪ್ರಶ್ನೆಗೆ ನೀಡಿದ ಉತ್ತರ ಇಲ್ಲಿದೆ.
ರಾಜ್ಯ ಸರ್ಕಾರವು ಕಳೆದ 3 ವರ್ಷಗಳಲ್ಲಿ ಕೆಪಿಎಸ್‌ಸಿ ಮೂಲಕ ಎಷ್ಟು ಇಲಾಖೆಗಳ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಸೂಚಿಸಿತ್ತು. ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ?. ಎಷ್ಟು ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ?. ಎಷ್ಟು ಹುದ್ದೆಗಳ ಪರೀಕ್ಷೆ ನಡೆಸಲಾಗಿದೆ?. ಎಷ್ಟು ಹುದ್ದೆಗಳ ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗಿದೆ?. ಎಷ್ಟು ಹುದ್ದೆಗಳ ಸಂದರ್ಶನ ಪ್ರಕ್ರಿಯೆ ಮುಗಿದಿದೆ?. ಎಷ್ಟು ಹುದ್ದೆಗಳ ಅಭ್ಯರ್ಥಿಗಳ ಪಟ್ಟಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ? ಎಂದು ಇಲಾಖಾವಾರು ವಿವರಗಳನ್ನು ನೀಡುವುದು ಎಂದು ಪ್ರಶ್ನಿಸಲಾಗಿತ್ತು.
ಇದಕ್ಕೆ ಉತ್ತರ ನೀಡಿರುವ ಮುಖ್ಯಮಂತ್ರಿಗಳು ಕರ್ನಾಟಕ ಲೋಕಸೇವಾ ಆಯೋಗವು ನೀಡಿರುವ ಮಾಹಿತಿಯಂತೆ ಸರ್ಕಾರದ ವಿವಿಧ ಇಲಾಖೆ/ ನೇಮಕಾತಿ ಪ್ರಾಧಿಕಾರಗಳಿಂದ ಸ್ವೀಕೃತವಾಗಿದ್ದ ಪ್ರಸ್ತಾವನೆಗಳ ಪೈಕಿ 21827 ಹುದ್ದೆಗಳನ್ನು ಭರ್ತಿ ಮಾಡಲು ಆಯೋಗದಿಂದ ಅಧಿಸೂಚನೆ ಹೊರಡಿಸಲಾಗಿತ್ತು ಎಂದು ಹೇಳಿದ್ದಾರೆ.
ಈ ಸಂಬಂಧ ಕಳೆದ ಮೂರು ವರ್ಷಗಳಲ್ಲಿ 12780 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಕೆಲವು ಅಧಿಸೂಚಿಸಿದ ಹುದ್ದೆಗಳ ಪೈಕಿ 2320 ಹುದ್ದೆಗಳನ್ನು 2019ರ ಪೂರ್ವದಲ್ಲಿಯೇ ಪೂರ್ಣಗೊಳಿಸಿ ಇಲಾಖೆಗೆ ರವಾನಿಸಲಾಗಿದೆ. ಉಳಿದಂತೆ 6314 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಮತ್ತು 413 ಹುದ್ದೆಗಳನ್ನು ವಿವಿಧ ಕಾರಣಗಳಿಂದಾಗಿ ಅರ್ಹ ಅಭ್ಯರ್ಥಿಗಳ ಕೊರತೆಯ ಕಾರಣ ಭರ್ತಿ ಮಾಡಲಾಗಿರುವುದಿಲ್ಲ ಎಂದು ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ.

ಫಲಿತಾಂಶ ಏಕೆ ಪ್ರಕಟಿಸಿಲ್ಲ?
ಫೆಬ್ರವರಿ 2021ರಲ್ಲಿ 107 ಕೆಎಎಸ್ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಒಂದು ವರ್ಷ ಕಳೆದರು ಪರೀಕ್ಷಾ ಫಲಿತಾಂಶ ಪ್ರಕಟಿಸದಿರಲು ಕಾರಣವೇನು?. ಈ ವಿಳಂಬಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ? ಎಂದು ಪ್ರಶ್ನಿಸಲಾಗಿತ್ತು.
ಕರ್ನಾಟಕ ಲೋಕಸೇವಾ ಆಯೋಗದ ಮಾಹಿತಿಯಂತೆ 106 ಕೆಎಎಸ್ ಹುದ್ದೆಗಳಿಗೆ ಮುಖ್ಯ ಪರೀಕ್ಷೆಯನ್ನು ಫೆಬ್ರವರಿ 2021ರಂದು ನಡೆಸಲಾಗಿದೆ. ಕೋವಿಡ್ ಸಾಂಕ್ರಾಮಿಕ ಲಾಕ್‌ಡೌನ್‌ನಿಂದಾಗಿ ಫಲಿತಾಂಶವನ್ನು ಪ್ರಕಟಿಸಿಲ್ಲ ಎಂದು ತಿಳಿಸಲಾಗಿದೆ.

ಪರೀಕ್ಷೆಗಳನ್ನು ನಡೆಸಲಾಗಿದೆ
2017-18ನೇ ಸಾಲಿನ ಗೆಜೆಟೆಡ್ ಪ್ರೋಬೆಷನರ್ 106 ಹುದ್ದೆಗಳಿಗೆ 31/1/2020ರಂದು ಅಧಿಸೂಚನೆ ಹೊರಡಿಸಿ ಕೋವಿಡ್ 19 ಲಾಕ್‌ಡೌನ್‌ನಿಂದಾಗಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಕೋವಿಡ್ 19 ಹರಡುತ್ತಿದ್ದ ಸಂದರ್ಭದಲ್ಲಿಯೇ ಭಾರತ ಸರ್ಕಾರದ ಮಾರ್ಗಸೂಚಿ ಅನ್ವಯ 24/8/2020ರಂದು ಪೂರ್ವಭಾವಿ ಮತ್ತು 13/2/2021ರಿಂದ 16/2/2021ರ ತನಕ ಮುಖ್ಯ ಪರೀಕ್ಷೆಯನ್ನು ನಡೆಸಲಾಗಿದೆ.
ಗೆಜೆಟೆಡ್ ಪ್ರೋಬೆಷನರ್ 2015ನೇ ಸಾಲಿನ ಮುಖ್ಯ ಪರೀಕ್ಷೆಯಲ್ಲಿ ಆಯ್ಕೆಯಾಗದ ಕೆಲವು ಅಭ್ಯರ್ಥಿಗಳು ಮೌಲ್ಯ ಮಾಪನದ ಕುರಿತು ಆರೋಪಿಸಿ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ ಎಂದು ಸರ್ಕಾರ ಹೇಳಿದೆ.

ಫಲಿತಾಂಶ ವಿಳಂಬ ಏಕೆ?
ಎನ್. ರವಿ ಕುಮಾರ್ ವಿವಿಧ ಇಲಾಖೆಯ ಎಇ/ ಜೆಇ ಸಹಾಯಕ ಅಭಿಯಂತರರು/ ಕಿರಿಯ ಅಭಿಯಂತರರು ಹುದ್ದೆಗಳಿಗೆ ನಡೆದ ಪರೀಕ್ಷಾ ಫಲಿತಾಂಶ ವಿಳಂಬವಾಗಲು ಕಾರಣವೇನು? ವಿವರ ನೀಡುವುದು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.
ಕೆಪಿಎಸ್‌ಸಿ ನೀಡಿದ ಮಾಹಿತಿಯಂತೆ ಸಹಾಯಕ ಅಭಿಯಂತರರು/ ಕಿರಿಯ ಅಭಿಯಂತರರ ಹುದ್ದೆಗೆ 14/12/2021, 15/12/2021 ಮತ್ತು 29/12/2021ರಂದು ಸ್ಮರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ 5/1/2022ರಂದು ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಶೀಘ್ರವೇ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ
ಆಯೋಗ ಅಧಿಸೂಚಿಸಿದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮನುಗತವಾಗಿ ಪರೀಕ್ಷೋತ್ತರ ಕಾರ್ಯಗಳು ನಿರ್ವಹಣೆಯಾಗುತ್ತಿದೆ. ಸಹಾಯಕ ಅಭಿಯಂತರ/ ಕಿರಿಯ ಅಭಿಯಂತರ ಹುದ್ದೆಗಳ ಪರೀಕ್ಷೆಗಳನ್ನು ಡಿಸೆಂಬರ್ 2021ರ ಅಂತ್ಯದಲ್ಲಿ ನಡೆಸಲಾಗಿದೆ. ಸದ್ಯದಲ್ಲೇ ಸದರಿ ಹುದ್ದೆಗಳ ಪರಿಕ್ಷೋತ್ತರ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಸರ್ಕಾರ ಉತ್ತರದಲ್ಲಿ ಹೇಳಿದೆ.












Click it and Unblock the Notifications