KAS: ಕೆಎಎಸ್ ಮುಖ್ಯ ಪರೀಕ್ಷೆ ಮುಂದೂಡಿಕೆ ಮಾಡಿದ ಕೆಪಿಎಸ್‌ಸಿ
ಬೆಂಗಳೂರು, ಮಾರ್ಚ್ 22: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮತ್ತೆ ಸುದ್ದಿಯಲ್ಲಿದೆ. ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಕೆಪಿಎಸ್‌ಸಿ ನೇಮಕಾತಿ ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು, ಮುಖ್ಯ ಪರೀಕ್ಷೆಯ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿತ್ತು. ಆದರೆ ಪರೀಕ್ಷೆಗೆ ಕೆಲವು ದಿನಗಳು ಇರುವಾಗಲೇ ಕರ್ನಾಟಕ ಲೋಕಸೇವಾ ಆಯೋಗ ಮುಖ್ಯ ಪರೀಕ್ಷೆಯನ್ನು ಮುಂದೂಡಿಕೆ ಮಾಡಿದೆ. ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿ ಮುಖ್ಯ ಪರೀಕ್ಷೆಗೆ ತಯಾರಾಗಲು ಅಭ್ಯರ್ಥಿಗಳಿಗೆ ಇನ್ನಷ್ಟು ಸಮಯ ಸಿಕ್ಕಿದೆ.
ಫೆಬ್ರವರಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಕೆಎಎಸ್ ನೇಮಕಾತಿ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಬಳಿಕ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಸಹ ಘೋಷಣೆ ಮಾಡಿತ್ತು. ಮಾರ್ಚ್ 28, 29 ಮತ್ತು ಏಪ್ರಿಲ್ 1, 2ರಂದು ಮುಖ್ಯ ಪರೀಕ್ಷೆ ನಡೆಯಬೇಕಿತ್ತು.

ಪರೀಕ್ಷೆ ಮುಂದೂಡಿಕೆ: ಈಗ ಕೆಎಎಸ್ ಮುಖ್ಯ ಪರೀಕ್ಷೆ ಮುಂದೂಡಿಕೆ ಮಾಡಿದ ಬಗ್ಗೆ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಈ ಹಿಂದಿನ ಅಧಿಸೂಚನೆಯಂತೆ ಮಾರ್ಚ್ 28, 29 ಮತ್ತು ಏಪ್ರಿಲ್ 1, 2ರಂದು ಮುಖ್ಯ ಪರೀಕ್ಷೆಗಳು ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕೆಪಿಎಸ್‌ಸಿ ತನ್ನ ಪ್ರಕಟಣೆಯಲ್ಲಿ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಸಿ ಮತ್ತು ಗ್ರೂಪ್ ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಧಿಸಿದಂತೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಿಗೆ ಅಧಿಸೂಚನೆಗಳನ್ನು, ಕ್ರಮವಾಗಿ 26-02-2024, ಮತ್ತು 13-02-2025ರಂದು ಹೊರಡಿಸಲಾಗಿರುತ್ತದೆ ಎಂದು ಹೇಳಿದೆ.

ದಿನಾಂಕ 06 13-02-2025ರ ಮುಖ್ಯ ಪರೀಕ್ಷೆಯ ಅಧಿಸೂಚನೆಯಲ್ಲಿ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯಪರೀಕ್ಷೆಗೆ 1:15 ಅನುಪಾತದಲ್ಲಿ, ಅರ್ಹರಾದ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಲು 17-02-2025 ರಿಂದ 03-03-2025ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು ಎಂದು ತಿಳಿಸಿದೆ.
ಮಾನ್ಯ ಕರ್ನಾಟಕ ಆಡಳಿತ ಮಂಡಳಿಯ ಅರ್ಜಿಯಲ್ಲಿ ಸದರಿ ಹುದ್ದೆಗಳ ಮುತ್ತು ಪರೀಕ್ಷೆಯ ಪ್ರಕ್ರಿಯೆಯನ್ನು abeyanceನಲ್ಲಿ, ಇಡಲು ಆದೇಶ ನೀಡಿದ್ದ ಕಾರಣ ಸದರಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ, ಸದರಿ ಪ್ರಕರಣದಲ್ಲಿ 25-02-2025ರಂದು ಅರ್ಹರಾದ ಅಭ್ಯರ್ಥಿಗಳಿಂದ ಮುಖ್ಯ ಪರೀಕ್ಷೆಗೆ ಅರ್ಜಿ ಸ್ವೀಕರಿಸಬಹುದೆಂದು ಮಾನ್ಯ ನ್ಯಾಯಮಂಡಳಿಯು ಮಾರ್ಪಾಡು/ ಸ್ಪಷ್ಟೀಕರಣ ನೀಡಿರುವ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳು ದಿನಾಂಕ 27-02-2025 ರಿಂದ 13-03-2025ರವರೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆದರೆ ಕೆಲವು ಕಾರಣಕ್ಕೆ ಈ ಹಿಂದಿನ ಅಧಿಸೂಚನೆಯಲ್ಲಿ ಹೇಳಿದಂತೆ ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿ ಮುಖ್ಯ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಮುಂದಿನ ದಿನಾಂಕವನ್ನು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಹೇಳಿದೆ.
ಪದೇ ಪದೇ ಎಡವಟ್ಟು: ಕೆಪಿಎಸ್‌ಸಿ 384 ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' (ಕೆಎಎಸ್) ಹುದ್ದೆಗೆಳಿಗೆ ಅರ್ಜಿಯನ್ನು ಆಹ್ವಾನಿತ್ತು. ಬಳಿಕ ಪೂರ್ವಭಾವಿ ಪರೀಕ್ಷೆಯನ್ನು 2024ರಲ್ಲಿ ಎರಡು ಬಾರಿ ನಡೆಸಲಾಗಿತ್ತು. ಆದರೆ ಪತ್ರಿಕೆಯಲ್ಲಿ ಕನ್ನಡ ದೋಷದ ಕಾರಣ ಪರೀಕ್ಷೆ ಸುದ್ದಿ ಮಾಡಿತ್ತು.
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ 384 ಹುದ್ದೆಗಳಿಗೆ ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997 ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳನ್ವಯ ಪೂರ್ವಭಾವಿ ಮರುಪರೀಕ್ಷೆಯನ್ನು ದಿನಾಂಕ 29-12-2024ರಂದು ನಡೆಸಲಾಗಿತ್ತು. 2025ರ ಫೆಬ್ರವರಿಯಲ್ಲಿ ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು.
ದಿನಾಂಕ 29-12-2024ರಂದು ನಡೆಸಲಾದ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿಯೂ ದೋಷಗಳಿವೆ. ಆದ್ದರಿಂದ ಕೆಲವು ಅಭ್ಯರ್ಥಿಗಳು ಇದನ್ನು ಪ್ರಶ್ನೆ ಮಾಡಿ ಕೆಎಟಿ ಮೊರೆ ಹೋಗಿದ್ದಾರೆ. ಆದರೆ ಕೆಪಿಎಸ್‌ಸಿ ಈಗಾಗಲೇ ಪೂರ್ವಭಾವಿ ಪರೀಕ್ಷೆಯನ್ನು ಮತ್ತೆ ನಡೆಸುವುದಿಲ್ಲ ಎಂದು ಹೇಳಿದೆ.
ಮುಖ್ಯಮಂತ್ರಿಗಳ ಉತ್ತರ: ಕರ್ನಾಟಕದ ವಿಧಾನಸಭೆ ಬಜೆಟ್ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿದೆ. ವಿಧಾನಸಭೆಯಲ್ಲಿ ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯ ಕುರಿತು ಚರ್ಚೆಗಳು ನಡೆದಿತ್ತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಉತ್ತರ ನೀಡಿದ್ದರು.
* 384 ಹುದ್ದೆಗಳ ಗೆಜೆಟೆಡ್ ಪ್ರೊಬೆಷನರ್ ಪೂರ್ವಭಾವಿ ಪರೀಕ್ಷೆಯನ್ನು ಆಯೋಗವು ಮೊದಲಿಗೆ ದಿನಾಂಕ 27-08-2024 ರಂದು ನಡೆಸಿದ್ದು, ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳ ಕನ್ನಡ ಭಾಷಾಂತರದಲ್ಲಿನ ಲೋಪದೋಷಗಳು ಉಂಟಾಗಿರುವ ಬಗ್ಗೆ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಲು, ಆಯೋಗವು ವಿಷಯ ತಜ್ಞರುಗಳ ಸಮಿತಿಗಳನ್ನು ರಚಿಸಿದೆ. ಸದರಿ ಸಮಿತಿಯು ಭಾಷಾಂತರದ ಲೋಪದಿಂದಾಗಿ ಎರಡೂ ಪತ್ರಿಕೆಗಳಿಂದ ಒಟ್ಟು 10 ಪ್ರಶ್ನೆಗಳ ಕೀ-ಉತ್ತರಗಳು ಪರಿಷ್ಕೃತಗೊಳ್ಳಲಿವೆ ಎಂಬ ಅಭಿಪ್ರಾಯವನ್ನು ನೀಡಿದ್ದರು ಎಂದು ಹೇಳಿದ್ದರು.
* ಆದಾಗ್ಯೂ, ಆಯೋಗವು ಮರು ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿ, ದಿನಾಂಕ 29-12-2024ರಂದು ಮರುಪರೀಕ್ಷೆಯನ್ನು ನಡೆಸಲಾಗಿರುತ್ತದೆ. ಸದರಿ ಮರು ಪರೀಕ್ಷೆಯಲ್ಲಿಯೂ ಸಹ ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ಬಾಷಾಂತರದಲ್ಲಿ ಲೋಪವಿರುವುದಾಗಿ ದೂರುಗಳು ಸ್ವೀಕೃತವಾದ ಹಿನ್ನೆಲೆಯಲ್ಲಿ ಆಯೋಗವು ವಿಷಯ ತಜ್ಞರುಗಳ ಸಮಿತಿಗಳನ್ನು ಮತ್ತೊಮ್ಮೆ ರಚಿಸಿದ್ದು, ಸದರಿ ಸಮಿತಿಯು ಎರಡೂ ಪತ್ರಿಕೆಗಳನ್ನು ಪರಿಶೀಲಿಸಿ, ಒಟ್ಟು 6 ಪ್ರಶ್ನೆಗಳು ತಪ್ಪಾಗಿದ್ದು, ಕೃಪಾಂಕ ನೀಡಬಹುದೆಂದು ಅಭಿಪ್ರಾಯಿಸಿರುತ್ತಾರೆ.
* ಈ ಹಿಂದಿನ ಪರೀಕ್ಷೆಗಳ ತುಲನಾತ್ಮಕ ದತ್ತಾಂಶ ವಿಶ್ಲೇಷಣೆಯನ್ವಯ 2023-24ನೇ ಸಾಲಿನಲ್ಲಿ ಕನ್ನಡ ಮಾಧ್ಯಮ ಪರೀಕ್ಷೆಯನ್ನು ತೆಗೆದುಕೊಂಡು ಮುಖ್ಯ ಪರೀಕ್ಷೆಗೆ ಅರ್ಹರಾದ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಸಂಖ್ಯೆಯು ಕಳೆದ ಸಾಲಿನ ನೇಮಕಾತಿಗೆ ಹೋಲಿಸಿದಲ್ಲಿ ಶೇ.6.50 ರಷ್ಟು ಹೆಚ್ಚಳವಾಗಿರುತ್ತದೆಂದು ಆಯೋಗವು ಮಾಧ್ಯಮಗಳಿಗೆ ಪ್ರಕಟ ಮಾಡಿದೆ ಎಂದು ಸ್ಪಷ್ಟಪಡಿಸಿದ್ದರು.
* ಈಗಾಗಲೇ ಮುಖ್ಯ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಿ, ಆಯೋಗವು ಅಧಿಸೂಚನೆಯನ್ನು ಹೊರಡಿಸಿದ್ದು, ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದು, ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಕರಣ ಬಾಕಿ ಇರುತ್ತದೆ ಎಂದು ವಿವರಣೆ ನೀಡಿದ್ದರು. ಪ್ರಸ್ತುತ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಈ ಹಂತದಲ್ಲಿ ಸರ್ಕಾರವು ಯಾವುದೇ ನಿರ್ಣಯವನ್ನು ಕೈಗೊಳ್ಳುವುದು ನ್ಯಾಯೋಚಿತವಾಗಿರುವುದಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ನಂತರ ಆಯೋಗವು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವು ಆಯೋಗಕ್ಕೆ ಸೂಚನೆ ನೀಡುತ್ತದೆ. ಈ ಹಂತದಲ್ಲಿ ಸರ್ಕಾರವು ಯಾವುದೇ ಕ್ರಮಗಳನ್ನು ಕೈಗೊಳ್ಳಲು ಬರುವುದಿಲ್ಲ ಎಂದು ಹೇಳಿದ್ದರು.
* ಕೆಎಎಸ್ ಪೂರ್ವಭಾವಿ ಪರೀಕ್ಷೆ ಹಾಗೂ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳಲ್ಲಿನ ಕನ್ನಡ ಭಾಷಾಂತರದಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ ಪೂರ್ವಭಾವಿ ಪರೀಕ್ಷೆ ಹಾಗೂ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳಲ್ಲಿನ ಕನ್ನಡ ಭಾಷಾಂತರದಲ್ಲಿ ಲೋಪದೋಷಗಳಿಗೆ ಕಾರಣರಾದ ವಿಷಯ ತಜ್ಞರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅವರ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರ ತೀರ್ಮಾನಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು.
* ಭಾಷಾಂತರಕಾರರ ಲೋಪವಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಆಯೋಗವು ನಡೆಸುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಮೊದಲು ಕನ್ನಡದಲ್ಲಿ ತಯಾರಿಸಿ, ನಂತರ ಇಂಗ್ಲೀಷ್ ಬಗ್ಗೆ ಭಾಷಾಂತರ ಮಾಡಲು ಆಯೋಗಕ್ಕೆ ಸೂಚನೆಯನ್ನು ನೀಡಲಾಗುವುದು. ಏನೇ ಆದರೂ ಈಗ ಪ್ರಕರಣವು ಉಚ್ಛ ನ್ಯಾಯಾಲಯ ಹಾಗೂ ಕೆಎಟಿಗಳು ನೀಡುವ ಆದೇಶಗಳನ್ನು ಆಧರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ಯಾವುದೇ ಮುಲಾಜುಗಳು ಸರ್ಕಾರಕ್ಕಿಲ್ಲ ಎಂಬುದನ್ನು ಸದನಕ್ಕೆ ತಿಳಿಸಬಯಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು.












Click it and Unblock the Notifications