KAS: ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಕೆಪಿಎಸ್‌ಸಿ
ಬೆಂಗಳೂರು, ಫೆಬ್ರವರಿ 11: ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಕೆಪಿಎಸ್‌ಸಿ ನೇಮಕಾತಿ ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಈ ಕುರಿತು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ ಎಂದು ಹೇಳಿದೆ.

ಪ್ರಕಟಣೆ ಮಾಹಿತಿ: ಆಯೋಗದ ಅಧಿಸೂಚನೆ ದಿನಾಂಕ 26-02-2024ರಲ್ಲಿ ಹಾಗೂ ತಿದ್ದುಪಡಿ ಅಧಿಸೂಚನೆಗಳನ್ವಯ ಅಧಿಸೂಚಿಸಲಾದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ 384 ಹುದ್ದೆಗಳಿಗೆ ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997 ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳನ್ವಯ ಪೂರ್ವಭಾವಿ ಮರುಪರೀಕ್ಷೆಯನ್ನು ದಿನಾಂಕ 29-12-2024ರಂದು ನಡೆಸಲಾಗಿತ್ತು ಎಂದು ಹೇಳಿದೆ.
ಈ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ ಎಂದು ಹೇಳಿದೆ. ಅಭ್ಯರ್ಥಿಗಳಿ ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರದ ಯಡವಟ್ಟಿನ ಕಾರಣ ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿ ಪೂರ್ವಭಾವಿ ಪರೀಕ್ಷೆ ಭಾರೀ ಸುದ್ದಿಯಾಗಿತ್ತು. ದಿನಾಂಕ 29-12-2024ರಂದು ನಡೆಸಿದ ಮರು ಪರೀಕ್ಷೆಯಲ್ಲಿಯೂ ಪ್ರಶ್ನೆ ಪತ್ರಿಕೆ ದೋಷವಿತ್ತು.
ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿ ಪೂರ್ವಭಾವಿ ಪರೀಕ್ಷೆಗಳನ್ನು ಮೊದಲು 2024 ಆಗಸ್ಟ್‌ನಲ್ಲಿ ನಡೆಸಿತ್ತು. ಆದರೆ ಆಗ ಕನ್ನಡ ಪತ್ರಿಕೆಯಲ್ಲಿನ ಭಾಷಾಂತರದ ಗೊಂದಲದ ಕಾರಣ ಕೆಪಿಎಸ್‌ಸಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮರು ಪರೀಕ್ಷೆ ನಡೆಸುವಂತೆ ಒತ್ತಾಯಿಸಲಾಗಿತ್ತು.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಘೋಷಣೆ ಮಾಡಿದ್ದರು. ಬಳಿಕ ಡಿಸೆಂಬರ್ 29ರಂದು ಮರು ಪರೀಕ್ಷೆಗಳನ್ನು ನಡೆಸಲಾಗಿತ್ತು. ಆದರೆ ಎರಡನೇ ಬಾರಿಯೂ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿನ ತಪ್ಪುಗಳ ಕಾರಣಕ್ಕೆ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಆರೋಪವಿದೆ.
ಆದ್ದರಿಂದ ಹಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು. ಮೊದಲು ಅರ್ಜಿಯ ವಿಚಾರಣೆ ನಡೆಸಿದ್ದ ಕೆಎಟಿ ಫಲಿತಾಂಶ ಪ್ರಕಟಿಸದಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿತ್ತು. ಬಳಿಕ ಎರಡನೇ ಬಾರಿ ಅರ್ಜಿ ವಿಚಾರಣೆ ನಡೆಸಿದಾಗ ಫಲಿತಾಂಶ ಪ್ರಕಟಿಸಲು ಅನುಮತಿ ನೀಡಿತ್ತು.
ಈಗ ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಪ್ರಕಟಿಸಿದೆ. ಈ ಮೂಲಕ 384 ಕೆಎಎಸ್ ಹುದ್ದೆಗಳ ನೇಮಕಾತಿ ಮುಂದಿನ ಹಂತಕ್ಕೆ ತಲುಪಿದೆ. ಮುಖ್ಯ ಪರೀಕ್ಷೆಯನ್ನು ಯಾವಾಗ ನಡೆಸಲಾಗುತ್ತದೆ? ಎಂದು ಕೆಪಿಎಸ್‌ಸಿ ಇನ್ನೂ ಸಹ ದಿನಾಂಕ ಘೋಷಣೆ ಮಾಡಿಲ್ಲ.
2ನೇ ಬಾರಿಗೆ ಪೂರ್ವಭಾವಿ ಪರೀಕ್ಷೆ ನಡೆಸಿದ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗ ಸ್ಪಷ್ಟಪಡಿಸಿತ್ತು. ಆದ್ದರಿಂದ ಈಗ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.












Click it and Unblock the Notifications