ಕೊಪ್ಪಳದಲ್ಲಿ 21 ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿವರ
ಕೊಪ್ಪಳ, ಮಾರ್ಚ್ 06: ಕೊಪ್ಪಳ ಜಿಲ್ಲಾ ಪಂಚಾಯಿತಿ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲಾ ವ್ಯಾಪ್ತಿಯ 21 ಗ್ರಾಮ ಪಂಚಾಯತಿಗಳಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಪ್ರಸ್ತುತ ಖಾಲಿ ಇರುವ ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಒಟ್ಟು 21 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತರು ಅರ್ಜಿ ನಮೂನೆಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತ್, ಕೊಪ್ಪಳ ಹಾಗೂ ಎಲ್ಲಾ ತಾಲೂಕ ಪಂಚಾಯತಿ ಮತ್ತು ಸಂಬಂಧಿಸಿದ 21 ಗ್ರಾಮ ಪಂಚಾಯತಿಗಳಲ್ಲಿ ಮತ್ತು ಜಿಲ್ಲಾ ವೆಬ್‌ಸೈಟ್ www.koppal.nic.in ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 3 ಕೊನೆಯ ದಿನವಾಗಿದ್ದು, ಅಂದು ಸಂಜೆ 5.30 ಗಂಟೆಯೊಳಗೆ ನಿಗದಿತ ನಮೂನೆಯಲ್ಲಿ ಭರ್ತಿಮಾಡಿದ ಅರ್ಜಿಯೊಂದಿಗೆ ದೃಢೀಕರಿಸಿದ ಅಗತ್ಯ ದಾಖಲೆಗಳನ್ನು ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ 'ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್, ಜಿಲ್ಲಾ ಆಡಳಿತ ಭವನ, ಹೊಸಪೇಟೆ ರೋಡ್ ಕೊಪ್ಪಳ' ವಿಳಾಸಕ್ಕೆ ಸಲ್ಲಿಸಬೇಕು.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಗಾಗಿ ಜಿಲ್ಲಾ ವೆಬ್‌ಸೈಟ್ ಅಥವ ದೂರವಾಣಿ ಸಂಖ್ಯೆ 9480871001 ಯನ್ನು ಸಂಪರ್ಕಿಸಬಹುದು.
ಖಾಲಿ ಇರುವ ಗ್ರಾಮ ಪಂಚಾಯಿತಿಗಳು: ಕುಷ್ಟಗಿ ತಾಲ್ಲೂಕಿನ ಅಂಟರಠಾಣ, ಕೇಸೂರು, ಗುಮಗೇರಾ, ತುಮರಿಕೊಪ್ಪ, ಬಿಳೇಕಲ್, ಶಿರಗುಂಪಿ, ಹಾಬಲಕಟ್ಟಿ ಹಾಗೂ ಹಿರೇನಂದಿಹಾಳ ಗ್ರಾಮ ಪಂಚಾಯತಿ.
ಕೊಪ್ಪಳ ತಾಲ್ಲೂಕಿನ ಕಲಕೇರಿ, ಮುನಿರಾಬಾದ ಡ್ಯಾಂ, ವಣಬಳ್ಳಾರಿ ಹಾಗೂ ಹಾಲವರ್ತಿ ಗ್ರಾಮ ಪಂಚಾಯತಿ. ಯಲಬುರ್ಗಾ ತಾಲ್ಲೂಕಿನ ತುಮ್ಮರಗುದ್ದಿ, ಬೋದೂರು ಹಾಗೂ ಸಂಕನೂರು ಗ್ರಾಮ ಪಂಚಾಯತಿ.
ಗಂಗಾವತಿ ತಾಲ್ಲೂಕಿನ ಜಂಗಮರಕಲ್ಗುಡಿ ಹಾಗೂ ಸಣಾಪೂರ ಗ್ರಾಮ ಪಂಚಾಯತಿ. ಕನಕಗಿರಿ ತಾಲ್ಲೂಕಿನ ಜೀರಾಳ ಹಾಗೂ ಬಸರಿಹಾಳ ಗ್ರಾಮ ಪಂಚಾಯತಿ. ಕನಕಗಿರಿಯ ನೆಲಜೇರಿ ಗ್ರಾಮ ಪಂಚಾಯತಿ, ಕಾರಟಗಿ ತಾಲ್ಲೂಕಿನ ಮೈಲಾಪೂರ ಗ್ರಾಮ ಪಂಚಾಯತಿಗಳಲ್ಲಿ ಹುದ್ದೆ ಭರ್ತಿ ಮಾಡಲಾಗುತ್ತಿದೆ.
ಮಿನಿ ಉದ್ಯೋಗ ಮೇಳ; ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮಾರ್ಚ್ 7 ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಿನಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಹಲವು ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕ ಇರುವುದಿಲ್ಲ. ಪಿಯುಸಿ/ ತತ್ಸಮಾನ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ, ಅಭ್ಯರ್ಥಿಗಳನ್ನು ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳಿಗೆ 18 ರಿಂದ 32 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಅರ್ಹ ವಿದ್ಯಾರ್ಹತೆ ಹೊಂದಿದ ಯುವಕ ಮತ್ತು ಯವತಿಯರು, ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು ಮತ್ತು ಆಧಾರ್ ಕಾರ್ಡ್ ಪ್ರತಿ, ಬಯೋಡಾಟಾ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಹಾಜರಾಗಬೇಕು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08539-220859, 8105693234.












Click it and Unblock the Notifications