KFD Recruitment; ಅರಣ್ಯ ವೀಕ್ಷಕ 310 ಹುದ್ದೆ, ವಿದ್ಯಾರ್ಹತೆ ವಿವರ
ಬೆಂಗಳೂರು, ಸೆಪ್ಟೆಂಬರ್ 25; ಕರ್ನಾಟಕ ಅರಣ್ಯ ಇಲಾಖೆ ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 310 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 26 ಕೊನೆ ದಿನವಾಗಿದೆ.
ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಾವಳಿಗಳು 2021 ಹಾಗೂ ಸರ್ಕಾರದ ಅಧಿಸೂಚನೆ ದಿನಾಂಕ 6/8/2019ರ ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು, 2019ರನ್ವಯ ಅರಣ್ಯ ವೀಕ್ಷಕ ಗ್ರೂಪ್ 'ಡಿ' ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ.

ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಅರಣ್ಯ ಇಲಾಖೆಯ https://aranya.gov.in/ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸತಕ್ಕದ್ದು. ಬೇರೆ ಯಾವುದೇ ವಿಧಾನದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
ಅರ್ಜಿಯನ್ನು ಭರ್ತಿ ಮಾಡುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯಲ್ಲಿನ ಸೂಚನೆ/ ನಿರ್ದೇಶನ ಹಾಗೂ ಷರತ್ತುಗಳನ್ನು ಕೂಲಂಕಷವಾಗಿ ಅರ್ಥೈಸಿಕೊಂಡು ತಮಗೆ ಅನ್ವಯವಾಗುವ ವಿವರಗಳನ್ನು ನಿಗದಿತ ಅಂಕಣದಲ್ಲಿ ಭರ್ತಿ ಮಾಡತಕ್ಕದ್ದು, ಅಭ್ಯರ್ಥಿಗಳು ಭರ್ತಿ ಮಾಡಿದ ಆನ್‌ಲೈನ್ ಅರ್ಜಿಯ ಪ್ರತಿಯನ್ನು ಮುದ್ರಿಸಿ ಮಾಹಿತಿಗಾಗಿ ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು. ಒಮ್ಮ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ/ ಸೇರ್ಪಡೆ ಮಾಡಲು ಅವಕಾಶವಿಲ್ಲ.
ವಿದ್ಯಾರ್ಹತೆಯ ವಿವರಗಳು; ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಅಥವಾ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ಈ ಮೇಲೆ ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಹೊಂದಿರಬೇಕು.
ಸರ್ಕಾರದ ಸುತ್ತೋಲೆ ದಿನಾಂಕ 27/2/2018ರಲ್ಲಿ ಸ್ಪಷ್ಟಪಡಿಸಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಗಳು
* ಸಿ.ಬಿ.ಎಸ್.ಇ. ಮತ್ತು ಐ.ಸಿ.ಎಸ್.ಇ. ಮಂಡಳಿಯು ನಡೆಸುವ ಕ್ಲಾಸ್ 10 ಪರೀಕ್ಷೆ
* ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 10 ಪರೀಕ್ಷೆ
* ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್ (ಕೆ.ಓ.ಎಸ್)
* ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್.ಐ.ಓ.ಎಸ್.) ವತಿಯಿಂದ ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್
ಈ ವಿದ್ಯಾರ್ಹತೆಯನ್ನು ಹೊಂದದೇ ಇರುವ ಅಥವಾ ಇತರೆ ಕಾರಣಗಳಿಂದ ಅನರ್ಹರಿರುವ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಿ, ಯಾವುದೇ ಕಾರಣದಿಂದ ಭಾಗವಹಿಸಿದಲ್ಲಿ, ನಂತರ ನಿಗದಿಪಡಿಸಲಾದ ವಿದ್ಯಾರ್ಹತೆ ಅಂಕಪಟ್ಟಿ ಹೊಂದಿರುವುದಿಲ್ಲವೆಂದು ಅಥವಾ ಇತರ ಕಾರಣಗಳಿಂದ ಅನರ್ಹರಿರುವುದು ಆಯ್ಕೆ ಪ್ರಾಧಿಕಾರ/ ನೇಮಕಾತಿ ಪ್ರಾಧಿಕಾರಕ್ಕೆ ಕಂಡುಬಂದಲ್ಲಿ, ಅಂತಹ ಅಭ್ಯರ್ಥಿಗಳ ಅಭ್ಯರ್ಥಿತ್ವವನ್ನು ಯಾವುದೇ ಹಂತದಲ್ಲಾದರೂ ರದ್ದುಪಡಿಸಲಾಗುವುದು ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೇನೆ ಎಂಬ ಕಾರಣಕ್ಕಾಗಿ ಅಭ್ಯರ್ಥಿಯು ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಈ ಕುರಿತು ಆಯ್ಕೆ ಪ್ರಾಧಿಕಾರಿ/ ನೇಮಕಾತಿ ಪ್ರಾಧಿಕಾರ ತೆಗೆದುಕೊಳ್ಳುವ ನಿರ್ಣಯ ಅಂತಿಮ.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ನಿಗದಿತ ವಿದ್ಯಾರ್ಹತೆಯ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಹಾಗೂ ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ ಹೊಂದಿಲ್ಲದೇ ಇರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ. ಮೇಲಿನ ವಿದ್ಯಾರ್ಹತೆಯನ್ನು ಹೊರತುಪಡಿಸಿ ಬೇರೆ ಯಾವ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅರ್ಜಿ ಶುಲ್ಕದ ವಿವರ; ಅರ್ಜಿ ಶುಲ್ಕ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ 31/10/2023. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು, ಪವರ್ಗ 2ಎ, 2ಬಿ, 3ಎ ಮತ್ತು 3ಬಿಗೆ ಸೇರಿದ ಅಭ್ಯರ್ಥಿಗಳಿಗೆ 200 ರೂ. ಮತ್ತು 20 ರೂ. ಸೇವಾ ಶುಲ್ಕ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ., ಸೇವಾ ಶುಲ್ಕ 20 ರೂ.ಗಳು. ಪಾವತಿಸಬೇಕು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ, ಇಲಾಖಾ ವೆಬ್‌ಸೈಟ್‌ನಿಂದ ಮುದ್ರಿತ ಅರ್ಜಿ ಶುಲ್ಕದ ಚಲನ್ ಪ್ರತಿಯನ್ನು ತೆಗೆದುಕೊಂಡು, ಇ-ಪಾವತಿ ಸೌಲಭ್ಯವಿರುವ ಭಾರತೀಯ ಅಂಚೆ ಕಚೇರಿಯಲ್ಲಿ ಸದರಿ ಪ್ರತಿಯನ್ನು ಹಾಜರುಪಡಿಸಿ, ಪ್ರವರ್ಗವಾರು ನಿಗದಿತ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕವನ್ನು ಭಾರತೀಯ ಅಂಚೆ ಕಚೇರಿಯಲ್ಲಿ ಮೇಲೆ ತಿಳಿಸಿರುವಂತೆ ನಿಗದಿತ ದಿನಾಂಕ ಹಾಗೂ ಸಮಯದೊಳಗೆ ಕಡ್ಡಾಯವಾಗಿ ಪಾವತಿಸತಕ್ಕದ್ದು.
ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ, ಅದನ್ನು ಯಾವುದೇ ಸಂದರ್ಭದಲ್ಲಿ ಹಿಂತಿರುಗಿಸಲಾಗುವುದಿಲ್ಲ ಅಥವಾ ಅದನ್ನು ಅರಣ್ಯ ಇಲಾಖೆ ನಡೆಸುವ ಇತರೆ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ. ಶುಲ್ಕವನ್ನು ಸಂದಾಯ ಮಾಡದಿದ್ದಲ್ಲಿ ಅಂತಹ ಅರ್ಜಿಗಳನ್ನು ಅಪೂರ್ಣ ಎಂದು ತಿರಸ್ಕರಿಸಲಾಗುವುದು.
ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರವೇ ಕಡ್ಡಾಯವಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಇದನ್ನು ಹೊರತುಪಡಿಸಿ ನೇರವಾಗಿ/ ಕೊರಿಯರ್/ ನೋಂದಾಯಿತ ಅಂಚೆ/ ಸಾಧಾರಣ ಅಂಚೆ/ ಇ-ಮೇಲ್/ ಮುದ್ದಾಂ/ ಇತ್ಯಾದಿ ಯಾವುದೇ ಇತರ ವಿಧಾನಗಳ ಮುಖಾಂತರ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅಲ್ಲದೇ, ಈ ಮೇಲೆ ನಮೂದಿಸಿದಂತೆ ಅರ್ಜಿ ಶುಲ್ಕ ಪಾವತಿ ವಿಧಾನವನ್ನು ಹೊರತುಪಡಿಸಿ, ಬೇರೆ ಇತರೆ ವಿಧಾನ (ಡಿಡಿ/ ಚೆಕ್/ ಪೋಸ್ಟಲ್ ಆರ್ಡರ್/ ಇತ್ಯಾದಿ)ವನ್ನು ಪರಿಗಣಿಸಲಾಗುವುದಿಲ್ಲ. ಇದಕ್ಕೆ ಅಭ್ಯರ್ಥಿಗಳೇ ನೇರ ಜವಾಬ್ದಾರ/ ಹೊಣೆಗಾರರಾಗಿರುತ್ತಾರೆ.
ವಯೋಮಿತಿಯ ವಿವರಗಳು; ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 6ರಲ್ಲಿ ಒಳಗೊಂಡಿರುವ ಯಾವುದೇ ವಿಷಯದ ಹೊರತಾಗಿಯೂ ಅಭ್ಯರ್ಥಿಗಳು ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಹಾಗೂ ಅಧಿಸೂಚನೆಯ ದಿನಾಂಕಕ್ಕೆ ಈ ಕೆಳಗಿನಂತೆ ಗರಿಷ್ಠ ವಯೋಮಿತಿಯೊಳಗಿರತಕ್ಕದ್ದು. ಸಾಮಾನ್ಯ ಅಭ್ಯರ್ಥಿ ಗರಿಷ್ಠ ವಯೋಮಿತಿ 30 ವರ್ಷ. ಪವರ್ಗ 2ಎ, 2ಬಿ, 3ಎ, 3ಬಿ ಹಿಂದುಳಿದ ಪ್ರವರ್ಗಗಳು ಗರಿಷ್ಠ ವಯೋಮಿತಿ 32 ವರ್ಷ. ಪರಿಶಿಷ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಗರಿಷ್ಠ ವಯೋಮಿತಿ 33 ವರ್ಷ.
ಮಾಜಿ ಸೈನಿಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿಯಮಾನುಸಾರ ನಿವೃತ್ತಿ/ ಡಿಮೊಬಿಲೈಸೇಷನ್ (Demobilisation) ಅಥವಾ ರಿಟ್ರೆಂಚ್‌ಮೆಂಟ್ (Retrenchment) ಹೊಂದಿದ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಯಾವ ಪ್ರವರ್ಗಕ್ಕೆ ಸೇರಿರುತ್ತಾರೆಯೊ ಈ ಮೇಲಿನ ಪ್ರವರ್ಗಕ್ಕೆ ನಿಗದಿಪಡಿಸಿದ ಗರಿಷ್ಠ ವಯೋಮಿತಿಗೆ ಅವರು ಎಷ್ಟು ವರ್ಷ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳಿಗೆ ಮೂರು ವರ್ಷ ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗುವುದು.
ಅರಣ್ಯ ಪ್ರೇಕ್ಷಕರಿಗೆ ವಯೋಮಿತಿ. ಅಧಿಸೂಚನೆಯ ದಿನಾಂಕಕ್ಕೆ ಅರಣ್ಯ ಇಲಾಖೆಯಲ್ಲಿ ನಿರಂತರ ಕನಿಷ್ಠ 5 ವರ್ಷಗಳ ಸೇವೆಯನ್ನು ಅರಣ್ಯ ಪ್ರೇರಕರಾಗಿ ಪೂರೈಸಿದ್ದು, ಪ್ರಸ್ತುತ ಅರಣ್ಯ ಪ್ರೇರಕರಾಗಿ ಸೇವೆಯಲ್ಲಿ ಇದ್ದು ನಿಶ್ಚಿತ ಗೌರವಧನವನ್ನು ಪಡೆಯುತ್ತಿರುವ ಅರಣ್ಯ ಪ್ರೇರಕರಿಗೆ ಮಾತ್ರ ಈ ಕೆಳಗಿನ ಗರಿಷ್ಠ ವಯೋಮಿತಿ ಅನ್ವಯವಾಗುವುದು.
ಸಾಮಾನ್ಯ ಅಭ್ಯರ್ಥಿ ಗರಿಷ್ಠ ವಯೋಮಿತಿ 40 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಹಿಂದುಳಿದ ಗರಿಷ್ಠ ವಯೋಮಿತಿ 42 ವರ್ಷ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಗರಿಷ್ಠ ವಯೋಮಿತಿ 43 ವರ್ಷಗಳು.
ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಾವಳಿಗಳು 2021ರನ್ವಯ ಹಾಗೂ ಸರ್ಕಾರದ ಅಧಿಸೂಚನೆ ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು, 2019ರನ್ವಯ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಪ್ರವರ್ಗವಾರು ಮೀಸಲಾತಿ ನಿಯಮಗಳಂತೆ ಮೀಸಲಾತಿ ವರ್ಗೀಕರಣ ನಿಗದಿಪಡಿಸಲಾಗಿದೆ.
ಅಭ್ಯರ್ಥಿಯು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಮೂದಿಸಿರುವ ಮಾಹಿತಿ ಮತ್ತು ವಿವರಗಳು ಹಾಗೂ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಿರುವ ಎಲ್ಲಾ ಪ್ರಮಾಣ ಪತ್ರ/ ದಾಖಲಾತಿಗಳ ಆಧಾರದ ಮೇಲೆ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಕ್ರಮಬದ್ಧವಲ್ಲದ/ ಅಪೂರ್ಣ/ ಅಸ್ಪಷ್ಟ ಮಾಹಿತಿಗಳಿಂದ ಕೂಡಿದ ಅರ್ಜಿಗಳನ್ನು ಪ್ರಾಥಮಿಕ ಹಂತದಲ್ಲಿಯೇ ತಿರಸ್ಕರಿಸಲಾಗುವುದು.
ವೃತ್ತ ಮತ್ತು ಹುದ್ದೆಗಳ ಸಂಖ್ಯೆ; ಅರಣ್ಯ ಇಲಾಖೆ ಒಟ್ಟು 13 ವಲಯಗಳ 310 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇವುಗಳಲ್ಲಿ ಬೆಂಗಳೂರು ವೃತ್ತ 33, ಬೆಳಗಾವಿ ವೃತ್ತ 20, ಬಳ್ಳಾರಿ ವೃತ್ತ 20, ಚಾಮರಾಜನಗರ ವೃತ್ತ 32, ಚಿಕ್ಕಮಗಳೂರು ವೃತ್ತ 25, ಧಾರವಾಡ 7, ಹಾಸನ 20, ಕೆನರಾ 32, ಕೊಡಗು 16, ಕಲಬುರಗಿ 23, ಮಂಗಳೂರು 20, ಮೈಸೂರು 32, ಶಿವಮೊಗ್ಗ ವೃತ್ತದಲ್ಲಿ 30 ಹುದ್ದೆಗಳನ್ನು ತುಂಬಲಾಗುತ್ತಿದೆ.












Click it and Unblock the Notifications