Teacher Recruitment: 4.47 ಲಕ್ಷ ಟಿಇಟಿ ಅರ್ಹರಲ್ಲಿ ಉದ್ಯೋಗ ಪಡೆದವರೆಷ್ಟು? ಪರೀಕ್ಷೆ ಸ್ಥಗಿತಕ್ಕೆ ಒತ್ತಾಯ
ಬೆಂಗಳೂರು: ರಾಜ್ಯ ಸರ್ಕಾರ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿಗೆ ಮುಂದಾಗಿಲ್ಲ. ಕಳೆದ 10 ವರ್ಷಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET Exam) ನಲ್ಲಿ ಉತ್ತೀರ್ಣರಾದವರಿಗೂ ಹಾಗೂ ಉತ್ತೀರ್ಣವಾಗಿ ಉದ್ಯೋಗ ಪಡೆದವರ ಪ್ರಮಾಣಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಟಿಇಟಿ ಅರ್ಹತೆ ಪಡೆದ 4.47 ಲಕ್ಷ ಜನರಿಗೆ ಹೋಲಿಕೆ ಮಾಡಿದರೆ ಉದ್ಯೋಗ ಪಡೆದವರ ಪ್ರಮಾಣ ಕೇವಲ ಶೇಕಡಾ 7ರಷ್ಟು ದಾಟಿಲ್ಲ. ಹೀಗೆ ಆಗುವುದಿದ್ದರೆ ಕೆಲವು ವರ್ಷಗಳ ಕಾಲ ಟಿಇಟಿ ಪರೀಕ್ಷೆ ನಡೆಸದೇ ಸ್ಥಗಿತಗೊಳಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಟಿಇಟಿ ತೇರ್ಗಡೆಯಾಗಿ ಉದ್ಯೋಗ ಹೊಂದಿದವರು ಸಂಖ್ಯೆ ಬರೀ 28,000 ಮಂದಿ ಮಾತ್ರ. ಉಳಿದವರು ಅರ್ಹತೆ ಹೊಂದಿದರು ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಅತಿ ಹೆಚ್ಚು 79,694 ಹುದ್ದೆಗಳು ಖಾಲಿ ಇವೆ. ಸರ್ಕಾರ ನೇಮಕಾತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಅರ್ಹತೆ ಪಡೆದವರ ಅಳಲು ಎಂದು ಡಿಎಚ್ ವರದಿ ಮಾಡಿದೆ.

ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಅರ್ಹರಿಗೆ ಉದ್ಯೋಗ ಒದಗಿಸಲು ಆಗದಿದ್ದರೆ ಒಂದಷ್ಟು ವರ್ಷಗಳ ಕಾಲ ಟಿಇಟಿ ಪರೀಕ್ಷೆ ನಡೆಸದೇ ಸ್ಥಗಿತಗೊಳಿಸಬೇಕೆಂದು ಕೆಲವು ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಶಾಲಾ ಶಿಕ್ಷಕರು ಅಭಿಪ್ರಾಯ ಹೊರ ಹಾಕಿದ್ದಾರೆ. ಪ್ರಸಕ್ತ ವರ್ಷ ದಾಖಲೆ ಮಟ್ಟದಲ್ಲಿ ಅಭ್ಯರ್ಥಿಗಳು ಟಿಇಟಿ ಬರೆದು ಅರ್ಹತೆ ಪಡೆದಿದ್ದಾರೆ. ನೇಮಕಾತಿ ನಡೆಯಲಿದೆ ಎಂಬ ಭಾವನೆಯಲ್ಲಿಯೇ ಇದ್ದಾರೆ. ಅವರಿಗೆಲ್ಲ ಸರ್ಕಾರ ನಿರಾಸೆ ಮಾಡಿದೆ ಎಂದು ಮತ್ತೊಬ್ಬ ಶಿಕ್ಷಕರು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆ ಬೇಕು ಎಂಬ ಕಾರಣಕ್ಕೆ ಶಿಕ್ಷಕರಿಗೆ ಈ ಅರ್ಹತಾ ಪರೀಕ್ಷೆಯನ್ನು 2014-15 ರಿಂದ ಕಡ್ಡಾಯಗೊಳಿಸಲಾಯಿತು. ಅಂದಿನಿಂದ ಖಾಲಿ ಹುದ್ದೆಗಳು ಸಾಕಷ್ಟಿದ್ದರು ಸಹಿತ ಪೂರ್ತಿಯಾಗಿ ಭರ್ತಿ ಮಾಡದ ಸರ್ಕಾರ ಕೇವಲ 28,277 ಹುದ್ದೆಗಳನ್ನು ತುಂಬಿ ಉಳಿದ ಟಿಇಟಿ ಅರ್ಹ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯ ಮಾಡಿದೆ.
1,38,856 ಅಭ್ಯರ್ಥಿಗಳು ಉತ್ತೀರ್ಣ
ಶಿಕ್ಷಣ ಇಲಾಖೆಯಲ್ಲಿನ ಮಾಹಿತಿ ಪ್ರಕಾರ, 2014-15 ಮತ್ತು 2025 ರಲ್ಲಿ ಒಟ್ಟು 1,38,856 ಅಭ್ಯರ್ಥಿಗಳು ಟಿಇಟಿ ಪತ್ರಿಕೆ -1 ರಲ್ಲಿ ಉತ್ತೀರ್ಣರಾಗಿದ್ದಾರೆ. 5ನೇ ತರಗತಿಯವರೆಗೆ ಪ್ರಾಥಮಿಕ ಶಾಲೆಗಳಲ್ಲಿ ಬೋಧನೆಗೆ ಅರ್ಹರಾಗಿದ್ದಾರೆ. ಇನ್ನೂ ಪತ್ರಿಕೆ-2ರಲ್ಲಿ 3,08,395 ಮಂದಿ ತೇರ್ಗಡೆಯಾಗಿದ್ದು, ಅವರು ಪ್ರೌಢಶಾಲೆ 6 ರಿಂದ 8 ನೇ ತರಗತಿಗಳಿಗೆ ಬೋಧಿಸಲು ಅರ್ಹತೆ ಪಡೆದಿದ್ದಾರೆ. ಅವರೆಲ್ಲ ಸರ್ಕಾರದ ನೇಮಕಾತಿಗಾಗಿ ಕಾಯುತ್ತಾ ಕುಳಿತಿದ್ದಾರೆ.
ಇನ್ನೂ ಮುಖ್ಯವಾದ ವಿಷಯವೆಂದರೆ ಶಿಕ್ಷಣ ಇಲಾಖೆಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಜೊತೆಗೆ ವಿಆರ್‌ಎಸ್, ಮರಣ, ನಿವೃತ್ತಿ ಕಾರಣಗಳಿಂದಲೂ ವಾರ್ಷಿಕವಾಗಿ ಸಾವಿರಾರು ಉದ್ಯೋಗಿಗಳು ಸೃಷ್ಟಿಯಾಗುತ್ತಿವೆ. ಇದೆಲ್ಲ ಗೊತ್ತಿದ್ದರೂ ಸರ್ಕಾರ ನೇಮಕಾತಿ ಮಾಡಿಕೊಳ್ಳದೇ ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿದೆ. ಇದಕ್ಕೆ ಟಿಇಟಿ ಪಾಸಾದ ಅಭ್ಯರ್ಥಿಗಳು ಹಿಡಿ ಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ನೇಮಕಾತಿ ಮಾತು ಕೊಟ್ಟು ತಪ್ಪಿದ ಸರ್ಕಾರ
ವಾರ್ಷಿಕ 10,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ಕೊಟ್ಟಿತ್ತು. ಆದರೆ ಅದನ್ನು ಮರೆತು 51,000 ಅತಿಥಿ ಶಿಕ್ಷಕರ ನೇಮಿಸಿಕೊಳ್ಳಲು ಆಸಕ್ತಿ ತೋರಿದೆ. ಇತ್ತೀಚಿನ ಬೆಳಗಾವಿ ಚಳಿಗಾಲ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ಅದಕ್ಕೆ ಸಚಿವ ಮಧು ಬಂಗಾರಪ್ಪ ಅವರು ಶೀಘ್ರವೇ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.












Click it and Unblock the Notifications