Health Department Recruitment; ಅಭ್ಯರ್ಥಿಗಳಿಗೆ ಮಾಹಿತಿ
ಬೆಂಗಳೂರು, ಫೆಬ್ರವರಿ 29; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ನೇಮಕಾತಿ ಕುರಿತು ಅಭ್ಯರ್ಥಿಗಳಿಗೆ ಮಾಹಿತಿಯೊಂದನ್ನು ನೀಡಿದೆ. ನೇಮಕಾತಿಗೆ ಅರ್ಜಿ ಸಲ್ಲಿಕೆ ಮಾಡಿದವರು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು ಎಂದು ದಿನಾಂಕವನ್ನು ನಿಗದಿ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ನೇಮಕಾತಿ ಸಮಿತಿಯು ಹೊರಡಿಸಿದ ಅಧಿಸೂಚನೆ ದಿನಾಂಕ 24/08/2022ರ ಅನುಗುಣವಾಗಿ ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ವಿವಿಧ ಅರೆ-ವೈದ್ಯಕೀಯ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿದ ವಿವರಗಳ ಅನುಸಾರ ಸಂಬಂಧಪಟ್ಟ ಎಲ್ಲಾ ಮೂಲ ದಾಖಲೆಗಳು ಮತ್ತು ಅವುಗಳ ಎರಡು ಸೆಟ್ ಸ್ವಯಂ ದೃಢಿಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಪರಿಶೀಲನೆಗಾಗಿ 'ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರ, ಸೆಮಿನಾರ್ ಹಾಲ್-2, ಕುಷ್ಠರೋಗ ಆಸ್ಪತ್ರೆ ಆವರಣ, ಮಾಗಡಿ ರಸ್ತೆ, ಬೆಂಗಳೂರು-560023' ಇಲ್ಲಿಗೆ ಹಾಜರಾಗಲು ಸೂಚಿಸಲಾಗಿದೆ.
ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಪ್ರಯಾಣ/ ದಿನ ಭತ್ಯೆ ಮತ್ತು ಇತರೇ ಭತ್ಯೆಗಳನ್ನು ನೀಡಲಾಗುವುದಿಲ್ಲ, ವೃಂದವಾರು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇಲಾಖೆಯ ವೆಬ್ ಸೈಟ್‌ನಲ್ಲಿ ಕರೆ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ಕರೆಪತ್ರದಲ್ಲಿ ತಿಳಿಸಲಾಗಿರುವ ದಿನಾಂಕ ಹಾಗೂ ಸಮಯಕ್ಕೆ ತಪ್ಪದೇ ಮೂಲ ದಾಖಲಾತಿಗಳೊಂದಿಗೆ ಖುದ್ದಾಗಿ ಅಭ್ಯರ್ಥಿಯು ಹಾಜರಾಗಲು ಸೂಚನೆ ನೀಡಲಾಗಿದೆ.
ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ 11/3/2024 ರಿಂದ 12/3/2024. ಫಾರ್ಮಸಿ ಅಧಿಕಾರಿ 12/3/2024 ರಿಂದ 14/3/2024. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ 14/03/2024 ರಿಂದ 16/03/2024. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ಕ್ಷೇಮು ಮಾಡಿರುವ ಮಾಹಿತಿಯ ಅನುಗುಣವಾಗಿ ಪರಿಶೀಲನೆಗೆ ಹಾಜರುಪಡಿಸಬೇಕಾದ ಮೂಲದಾಖಲೆಗಳ ವಿವರಗಳನ್ನು ನೀಡಲಾಗಿದೆ.
ಯಾವ-ಯಾವ ದಾಖಲೆಗಳು
* ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯ ಮುದ್ರಿತ ಪ್ರತಿ. ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಿರುವ ಪೋಸ್ಟಲ್ ಚಲನ್ ಪ್ರತಿ. ಅಭ್ಯರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಎರಡು ಬಣ್ಣದ ಭಾವಚಿತ್ರ (Colour Photo). ಸರ್ಕಾರದಿಂದ ನೀಡಲಾಗಿರುವ ಭಾವಚಿತ್ರವಿರುವ ಮೂಲ ಗುರುತಿನ ಚೀಟಿ (Voter ID / Driving Lisence / Aadhar Card/Passport/ Pancard/ Rationcard etc.)
* ಜನ್ಮ ದಿನಾಂಕವನ್ನು ತೋರಿಸುವ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪಮಾಣಪತ್ರ/ ಶಾಲಾವರ್ಗಾವಣೆ ಪ್ರಮಾಣಪತ್ರ/ ಜನ್ಮ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದ್ದೃತಭಾಗ (Extract of Cumulative Record). ಅಧಿಸೂಚನೆಯಲ್ಲಿ ಸಂಬಂಧಪಟ್ಟ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಎಲ್ಲಾ ಮೂಲ
ಅಂಕಪಟ್ಟಿಗಳು/ ಪ್ರಮಾಣ ಪತ್ರಗಳು.
* ಜಾತಿ ಪಮಾಣ ಪತ್ರಗಳು. ಸಂಬಂಧಪಟ್ಟ ತಹಸೀಲ್ದಾರರಿಂದ ನಿಗದಿತ ನಮೂನೆಯಲ್ಲಿ ಪಡೆದಿರುವ ಜಾತಿ/ ವರ್ಗದ ಪಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು (ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಿರುವ ಜಾತಿ/ ವರ್ಗದ ಪ್ರಮಾಣ ಪತ್ರವನ್ನು ಪರಿಗಣಿಸಲಾಗುವುದಿಲ್ಲ.)
* ಗ್ರಾಮೀಣ ಮೀಸಲಾತಿ. 01 ರಿಂದ 10 ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಪ್ರಮಾಣ ಪತ್ರವನ್ನು ಅಧಿಸೂಚನೆಯಲ್ಲಿನ ನಮೂನೆಯಲ್ಲಿಯೇ ಮುಖ್ಯೋಪಾಧ್ಯಾಯರಿಂದ ಪಡೆದು ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಮಾಡಿಸಿರತಕ್ಕದ್ದು. ಸಾಮಾನ್ಯ ವರ್ಗದಡಿ ಗ್ರಾಮೀಣ ಮೀಸಲಾತಿ ಕೋರುವ ಅಭ್ಯರ್ಥಿಗಳು ಮೇಲುಸ್ತರಕ್ಕೆ ಸೇರಿಲ್ಲವೆಂಬ ಬಗ್ಗೆ (Creamy Layer) ಸಂಬಂಧಿಸಿದ ಪ್ರಮಾಣ ಪತ್ರವನ್ನು ಆನ್ ಲೈನ್ ಅರ್ಜಿಯಲ್ಲಿ ನಮೂದಿಸಿರುವ ದಿನಾಂಕದ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು.
* ಕನ್ನಡ ಮಾಧ್ಯಮ ಮೀಸಲಾತಿ. 01 ರಿಂದ 10 ನೇತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವವರು ಪ್ರಮಾಣ ಪತ್ರವನ್ನು ಶಾಲೆಯ ಮುಖ್ಯೋಪಾಧ್ಯಾಯರಿಂದ ಅಧಿಸೂಚನೆಯಲ್ಲಿನ ನಮೂನೆಯಂತೆ ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿರುವ ದಿನಾಂಕದ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು.
* ವಿಕಲಚೇತನ ಅಭ್ಯರ್ಥಿ ಮೀಸಲಾತಿ. ವಿಕಲ ಚೇತನ ಕೋಟಾದಡಿ ಮೀಸಲಾತಿ ಬಯಸುವ ಅಭ್ಯರ್ಥಿಗಳು ಸಂಬಂಧಪಟ್ಟ ವೈದ್ಯಕೀಯ ಮಂಡಳಿಯವರು ನೀಡಿರುವ ನಿಗದಿತ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು.
* ಯೋಜನಾ ನಿರಾಶ್ರಿತ ಮೀಸಲಾತಿ. ಸರ್ಕಾರದ ಆದೇಶ ದಿನಾಂಕ 23/11/2000ರ ನಮೂನೆಯಲ್ಲಿ ಸಂಬಂಧಪಟ್ಟ ತಹಶೀಲ್ದಾರ್‌ರಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು.
ಅಭ್ಯರ್ಥಿಗಳು ಮೂಲದಾಖಲೆಗಳ ಪರಿಶೀಲನಾ ಸಮಯದಲ್ಲಿ ಹಾಜರುಪಡಿಸುವ ಎಲ್ಲಾ ಮೂಲ ಪ್ರಮಾಣ ಪತ್ರಗಳನ್ನು ಅರ್ಜಿಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 28/09/2022ರೊಳಗೆ ಪಡೆದು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿರುವ ದಿನಾಂಕದ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು, ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಲು ವೆಬ್-ಸೈಟ್ ನಲ್ಲಿ ಡೌನ್-ಲೋಡ್ ಮಾಡಿಕೊಂಡ ಸೂಚನಾ ಪತ್ರವನ್ನು ಹಾಜರುಪಡಿಸತಕ್ಕದ್ದು.
ಆನ್-ಲೈನ್ ಅರ್ಜಿಯಲ್ಲಿ ಕ್ಷೇಮು ಮಾಡಿರುವ ಮೀಸಲಾತಿಗಳನ್ನು ಮಾತ್ರ ಪರಿಗಣಿಸಲಾಗುವುದು. ವಿವಿಧ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ಮೂಲ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಅಂತಹ ಮೀಸಲಾತಿಯನ್ನು ತಿರಸ್ಕರಿಸಲಾಗುವುದು. ಮೂಲ ದಾಖಲೆಗಳ ಪರಿಶೀಲನೆಯನ್ನು ಗಣಕೀಕೃತ ತಂತ್ರಾಂಶದಲ್ಲಿ ನಿರ್ವಹಿಸುತ್ತಿರುವುದರಿಂದ ಎಲ್ಲಾ ಮೂಲದಾಖಲೆಗಳನ್ನು ಪರಿಶೀಲನಾ ಸ್ಥಳದಲ್ಲಿಯೇ ಕಡ್ಡಾಯವಾಗಿ ಹಾಜರು ಪಡಿಸುವುದು ಮತ್ತು ಯಾವುದೇ ದಾಖಲೆಗಳನ್ನು ಹಾಜರುಪಡಿಸಲು ಮತ್ತೊಂದು ಅವಕಾಶ ನೀಡಲಾಗುವುದಿಲ್ಲ.
ಒಂದು ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕರೆಪತ್ರದಲ್ಲಿ ನಮೂದಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮಾತ್ರ ಮೂಲದಾಖಲಾತಿ ಪರಿಶೀಲನೆಗೆ ಹಾಜರಾಗತಕ್ಕದ್ದು. ಅಧಿಸೂಚನೆಯಲ್ಲಿ ಪ್ರಕಟಿಸಿರುವ ಖಾಲಿ ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣವು ಅನಿವಾರ್ಯ ಸಂಧರ್ಭಗಳಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ.
ಮೂಲ ದಾಖಲಾತಿ ಪರಿಶೀಲನೆಗೆ ನಿಗದಿಪಡಿಸಿದ ದಿನಾಂಕದಂದೇ ಕಡ್ಡಾಯವಾಗಿ ಹಾಜರಾಗತಕ್ಕದ್ದು, ಗೈರು ಹಾಜರಾದವರಿಗೆ ಮತ್ತೊಂದು ಅವಕಾಶವನ್ನು ನೀಡಲಾಗುವುದಿಲ್ಲ ಮತ್ತು ಗೈರು ಹಾಜರಾದ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ಮೂಲ ದಾಖಲಾತಿ ಪರಿಶೀಲನೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಯೇ ಖುದ್ದು ಹಾಜರಾಗತಕ್ಕದ್ದು. ಒಂದು ವೇಳೆ ಅಭ್ಯರ್ಥಿಗೆ ವೈದ್ಯಕೀಯ ಆಧಾರದ ಮೇಲೆ ಪ್ರಯಾಣ ಮಾಡಲು ವೈದ್ಯರು ನಿಷೇಧಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳ ಪರವಾಗಿ ಅವರ ಹತ್ತಿರದ ಸಂಬಂಧಿಕರು ತಮ್ಮ ಗುರುತಿನ ಚೀಟಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ವೈದ್ಯಕೀಯ ಪ್ರಮಾಣ ಪತ್ರ ಮತ್ತು ಅಭ್ಯರ್ಥಿಯಿಂದ ಒಪ್ಪಿಗೆ ಪತ್ರದೊಂದಿಗೆ ನಿಗದಿಪಡಿಸಿರುವ ದಿನಾಂಕದಂದು ತಪ್ಪದೇ ಹಾಜರಾಗತಕ್ಕದ್ದು.












Click it and Unblock the Notifications