ದಾವಣಗೆರೆ: ಮಾರ್ಚ್ 15ರಂದು ಬೃಹತ್ ಉದ್ಯೋಗ ಮೇಳ, 5 ಸಾವಿರ ಹುದ್ದೆಗಳ ನೇಮಕಾತಿ
ದಾವಣಗೆರೆ, ಮಾರ್ಚ್ 12: ದಾವಣಗೆರೆ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಸಿದ್ಧವಾಗುತ್ತಿದೆ. ಮಾರ್ಚ್ 15ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, 50ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಲಿವೆ. 5000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರಸ್ವಾಮಿ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಮಾರ್ಚ್ 15ರಂದು ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿಯೂ ನಡೆಯಲಿದೆ.

ಬಿಐಟಿಯಲ್ಲಿ ಬಿಇ ಹಾಗೂ ಎಂಬಿಎ ಪದವಿ ಪಡೆದ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಐಟಐ ಕಾಲೇಜಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಪದವಿ, ಸ್ನಾತಕೋತ್ತರ ಪದವಿ ಪಡೆದವರ ಆಯ್ಕೆ ನಡೆಯಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
50 ಕಂಪನಿಗಳು ಭಾಗಿ: ಈ ಬೃಹತ್ ಉದ್ಯೋಗ ಮೇಳದಲ್ಲಿ 50ಕ್ಕೂ ಹೆಚ್ಚಿನ ಕಂಪನಿಗಳು ಭಾಗವಹಿಸಲು ಆಸಕ್ತಿ ವ್ಯಕ್ತಪಡಿಸಿವೆ. ಆದ್ದರಿಂದ ಜಿಲ್ಲೆಯ ನಿರುದ್ಯೋಗಿಗಳಿಗೆ ಮೇಳ ವರದಾನವಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರಸ್ವಾಮಿ ಹೇಳಿದ್ದಾರೆ.
ಮೇಳದಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಕಂಪನಿಗಳು ಭಾಗವಹಿಸುತ್ತಿವೆ. ಜಿಲ್ಲೆಯ 1000ಕ್ಕೂ ಹೆಚ್ಚಿನ ಯುವಕ, ಯುವತಿಯರು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಿದ್ದು ಎಲ್ಲಾ ದಾಖಲೆಗಳೊಂದಿಗೆ ನೇರವಾಗಿಯು ಭಾಗವಹಿಸಲು ಅವಕಾಶ ಇದೆ. ಆಗಮಿಸುವ ಅಭ್ಯರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ 6 ಸಾವಿರಕ್ಕಿಂತಲೂ ಹೆಚ್ಚು ಪದವಿ, ಡಿಪ್ಲೋಮಾ ಪಾಸಾದವರಿಗೆ ಯುವನಿಧಿಯಡಿ ನಿರುದ್ಯೋಗ ಭತ್ಯೆ ನೀಡುತ್ತಿದ್ದು ಇವರೆಲ್ಲರಿಗೂ ಎಸ್‍ಎಂಎಸ್ ಮೂಲಕ ಮಾಹಿತಿ ನೀಡಲಾಗಿದೆ. ಮಾರ್ಚ್ 15ರಂದು ಬೆಳಗ್ಗೆ 10 ಗಂಟೆಯಿಂದ ಉದ್ಯೋಗ ಮೇಳ ಆರಂಭವಾಗಲಿದ್ದು, ಜಿಲ್ಲೆಯ ಅರ್ಹ ಅಭ್ಯರ್ಥಿಗಳು ನೇರವಾಗಿಯೂ ಭಾಗವಹಿಸಬಹುದಾಗಿದೆ.
ಜಿಲ್ಲೆಯಾದ್ಯಂತ ಪ್ರತಿ ವರ್ಷವು ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ ಬದುಕಲು ಉದ್ಯೋಗವನ್ನು ಅರಸಿ ದೇಶ, ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ಗಮನಿಸಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಕೌಶಲ್ಯ ಮತ್ತು ನೈಪುಣ್ಯತೆ ಹೊಂದಿರುವ ವಿದ್ಯಾವಂತ ಯುವ ಜನರಿಗೆ, ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಈಗಾಗಲೇ https://tinyurl.com/mnm8vykz ಜಾಲತಾಣದಲ್ಲಿ ಆನ್‍ಲೈನ್ ಮೂಲಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಸಂದರ್ಶನಕ್ಕಾಗಿ 40 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಸ್ವಚ್ಛತೆ, ಕುಡಿಯುವ ನೀರು, ಆರೋಗ್ಯ ಸುರಕ್ಷತೆ, ಲಘು ಉಪಹಾರ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ದಾವಣಗೆರೆ ಜವಳಿ ಕ್ಷೇತ್ರದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದೆ. ಐಟಿಐನಿಂದ ಡಿಪ್ಲೋಮಾ, ಇಂಜಿನಿಯರಿಂಗ್, ಮೆಡಿಕಲ್ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಿದೆ. ಜೊತೆಗೆ ಕೃಷಿಯಲ್ಲಿಯು ಜಿಲ್ಲೆ ಸಾಕಷ್ಟು ಅಭಿವೃದ್ದಿ ಹೊಂದಿದ್ದು, ಉನ್ನತ ಶಿಕ್ಷಣ ಪಡೆದವರು ಉದ್ಯೋಗಕ್ಕಾಗಿ ಹೊರ ಹೋಗಬೇಕಿದೆ.
ಜಿಲ್ಲೆಯ ಮಾನವ ಸಂಪನ್ಮೂಲ ಬೇರೆ ಕಡೆ ಬಳಕೆಯಾಗುವ ಬದಲು ಇಲ್ಲಿಯೇ ಬಳಕೆಯಾಗುವುದರಿಂದ ಜಿಲ್ಲೆ ಮತ್ತಷ್ಟು ಅಭಿವೃದ್ದಿ ಹೊಂದಲು ಸಾಧ್ಯವಾಗಲಿದೆ. ಇಂತಹ ಬೃಹತ್ ಉದ್ಯೋಗ ಮೇಳಗಳ ಮೂಲಕ ಜಿಲ್ಲೆಯ ಯುವಕ, ಯುವತಿಯರಿಗೆ ಅನುಕೂಲವಾಗಲಿದೆ.












Click it and Unblock the Notifications