ಸಿಂಧುತ್ವ ಪ್ರಮಾಣ ಪತ್ರ ಕಡ್ಡಾಯವಲ್ಲ; ಸಿದ್ದರಾಮಯ್ಯ ಟಿಪ್ಪಣಿ
ಬೆಂಗಳೂರು, ಅಕ್ಟೋಬರ್ 31: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾನ್ಯ ವರ್ಗದ ಹುದ್ದೆಗಳಿಗೆ ಎದುರಾಗಿ ಆಯ್ಕೆಗೊಂಡ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸದಂತೆ ಟಿಪ್ಪಣಿ ಹೊರಡಿಸಿದ್ದಾರೆ. ಇದರಿಂದಾಗಿ ನೇಮಕಾತಿಗಳಲ್ಲಿ ಅಭ್ಯರ್ಥಿಗಳಿಗೆ ಸಹಾಯಕವಾಗಲಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಸಿದ್ದರಾಮಯ್ಯ ಟಿಪ್ಪಣಿ ನೀಡಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡಲು ಮುಖ್ಯಮಂತ್ರಿಗಳು ಟಿಪ್ಪಣಿಯಲ್ಲಿ ಸೂಚಿಸಿದ್ದಾರೆ.

ಟಿಪ್ಪಣಿಯ ವಿವರಗಳು; ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಗಳು ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ನಿಯಮಗಳು, 1992 ರನ್ವಯ ರಾಜ್ಯ ನಾಗರಿಕ ಸೇವಾ ಹದಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆಗೊಳ್ಳುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಅಂತಿಮ ಆಯ್ಕೆಪಟ್ಟಿಯಲ್ಲಿ ವಿವಿಧ ಮೀಸಲಾತಿಯಡಿ ಆಯ್ಕೆ ಹೊಂದುವ ಹಾಗೂ ಸದರಿ ಮೀಸಲಾತಿಯಿಂದ ರಿಯಾಯತಿ ಪಡೆಯುವ ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣ ಪತ್ರಗಳು ಸಿಂಧುವೇ ಎಂಬ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
ಆದರೆ, ಮೀಸಲಾತಿ ಕೋರಿ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಯಲ್ಲಿ ಸಾಮಾನ್ಯ ವರ್ಗದ ಹುದ್ದೆಗಳಿಗೆ ಎದುರಾಗಿ ಆಯ್ಕೆಗೊಂಡಾಗಲೂ ಸಿಂಧುತ್ವ ಪುಮಾಣ ಪತ್ರ ಸಲ್ಲಿಸುವಂತೆ ಕೆಲವು ನೇಮಕಾತಿ ಪ್ರಾಧಿಕಾರಿಗಳು ಅಭ್ಯರ್ಥಿಗಳಿಗೆ ಸೂಚಿಸುತ್ತಿವೆ. ಇದರಿಂದ ಅಂತಿಮ ಆಯ್ಕೆಪಟ್ಟಿಯಲ್ಲಿ ಮೆರಿಟ್ ಆಧಾರದಲ್ಲಿ ಸಾಮಾನ್ಯ ವರ್ಗದ ಹುದ್ದೆಗಳಿಗೆ ಎದುರಾಗಿ ಆಯ್ಕೆಯಾದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅನಾವಶ್ಯಕ ತೊಂದರೆಯಾಗುತ್ತಿದೆ ಎಂದು ಟಿಪ್ಪಣಿ ಹೇಳಿದೆ.
ಆದ್ದರಿಂದ, ಮೀಸಲಾತಿ ಕೋರಿ ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಮೀಸಲಾತಿಯಿಂದ ಯಾವುದೇ ರಿಯಾಯತಿ ಪಡೆಯದ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸಾಮಾನ್ಯ ವರ್ಗದ ಹುದ್ದೆಗಳಿಗೆ ಎದುರಾಗಿ ಆಯ್ಕೆಗೊಂಡ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸದಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಮರಿಗೆ ಸೂಕ್ತ ನಿರ್ದೇಶನ ನೀಡಲು ಸೂಚಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್‌ನಲ್ಲಿ ಜಾತಿ/ ಸಿಂಧುತ್ವ ಪ್ರಮಾಣ ಪತ್ರವನ್ನು ಕಡ್ಡಾಯದ ಗೊಂದಲ ಕುರಿತು ಸಭೆಯನ್ನು ನಡೆಸಿದ್ದದರು. ಸಭೆಯಲ್ಲಿ ಅಧಿಕಾರಿಗಳು ವಿವರಣೆಯನ್ನು ನೀಡಿದ್ದರು. ಸಿಂಧುತ್ವ ಪ್ರಮಾಣ ಪತ್ರವನ್ನು ಪಡೆಯಲು ಪತ್ರ ಬರೆಯುವುದು ಕಛೇರಿಗಳಿಗೆ ಅಲೆದಾಡುವುದು ಸೇರಿದಂತೆ ಪ್ರಕ್ರಿಯೆಗಳಿಗೆ ಮುಖ್ಯಮಂತ್ರಿಗಳ ಟಿಪ್ಪಣಿಯಿಂದ ತಡೆ ಬಿದ್ದಂತೆ ಆಗಿದೆ.












Click it and Unblock the Notifications