ಬೆಂಗಳೂರು ನಗರಕ್ಕೆ ಮತ್ತೊಂದು ವಿಶೇಷ ಜಿಲ್ಲಾಧಿಕಾರಿ ಹುದ್ದೆ
ಬೆಂಗಳೂರು, ಜನವರಿ 23; ಬೆಂಗಳೂರು ನಗರ ಜಿಲ್ಲೆಗೆ ವಿಶೇಷ ಜಿಲ್ಲಾಧಿಕಾರಿ ಹುದ್ದೆ -3 ಸೃಜಿಸುವ ಕುರಿತು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ನಗರ ಜಿಲ್ಲೆಯಲ್ಲಿ ಎರಡು ಜಿಲ್ಲಾಧಿಕಾರಿ ಹುದ್ದೆಗಳಿವೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 136 (3)
ರಡಿ ಅತಿ ಹೆಚ್ಚು ಪ್ರಕರಣಗಳು ಬಾಕಿ ಇರುವುದರಿಂದ ಅವುಗಳ ವಿಲೇವಾರಿಗಾಗಿ ವಿಶೇಷ ಜಿಲ್ಲಾಧಿಕಾರಿ-3 ಹುದ್ದೆಯನ್ನು ಸೃಜಿಸಲಾಗುತ್ತಿದೆ.
10/10/2014ರಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯ ವಿಶೇಷ ಜಿಲ್ಲಾಧಿಕಾರಿ-1 ಮತ್ತು ಜಿಲ್ಲಾಧಿಕಾರಿ-2 ಹುದ್ದೆಗಳಿಗೆ ಕಾರ್ಯ ಹಂಚಿಕೆ ಹಾಗೂ ಅಧಿಕಾರ ಪ್ರತ್ಯಾಯೋಜಿಸಿ, ಸದರಿ ಹುದ್ದೆಗೆ ಐಎಎಸ್ ಅಧಿಕಾರಿಗಳನ್ನು ನೇಮಿಸುವಂತೆ ಆದೇಶಿಸಲಾಗಿತ್ತು.

31/12/2021ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಇರುವ ನ್ಯಾಯಿಕ ಅರೆ ನ್ಯಾಯಿಕ ಪ್ರಕರಣಗಳ ಪರಿಶೀಲನೆ ನಡೆಸಿದಾಗ ಬೆಂಗಳೂರು ನಗರ ಜಿಲ್ಲೆಯ ಪ್ರಾಧಿಕಾರದಲ್ಲಿಅತಿ ಹೆಚ್ಚು ಪ್ರಕರಣ ಬಾಕಿ ಇರುವುದು ತಿಳಿದುಬಂತು.
ಅವುಗಳ ವಿಲೇವಾರಿಗಾಗಿ ಸೂಕ್ತ ವ್ಯವಸ್ಥೆ ಮಾಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರು. ನಗರ ಜಿಲ್ಲೆಯ ಬೆಲೆ ಬಾಳುವ ಜಮೀನುಗಳ ಭೂ ಕಬಳಿಕೆಯನ್ನು ಪರಿಣಾಮಕಾರಿಯಾಗಿ ತಡೆಯುವುದು/ ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಅಪಾರ ಪ್ರಮಾಣದ ಅರೆ ನ್ಯಾಯಿಕ ಪ್ರಕರಣಗಳು ತೀರ್ಮಾನಕ್ಕೆ ಬಾಕಿ ಇರುವುದರಿಂದ ಸರ್ಕಾರವು ಇದನ್ನು ಗಣನೆಗೆ ತೆಗೆದುಕೊಂಡು ಅತೀ ಶೀಘ್ರವಾಗಿ ಇತ್ಯರ್ಥಪಡಿಸಲು ತೀರ್ಮಾನಿಸಿರುತ್ತದೆ.
ಈ ಹಿನ್ನಲೆಯಲ್ಲಿ 10/10/2014ರಂದು ಸೃಜಿಸಲಾದ ಹುದ್ದೆಗಳೊಂದಿಗೆ ವಿಶೇಷ ಜಿಲ್ಲಾಧಿಕಾರಿಗಳ ಮತ್ತೊಂದು ಹುದ್ದೆ ಸೃಜಿಸಲು ಹಾಗೂ ಈ ಹುದ್ದೆಯನ್ನು ಐಎಎಸ್ ವೃಂದದಿಂದ ತುಂಬಲು ಸರ್ಕಾರ ತೀರ್ಮಾನಿಸಿದೆ.
ಸದರಿ ಹುದ್ದೆಯನ್ನು ವಿಶೇಷ ಜಿಲ್ಲಾಧಿಕಾರಿ-3 ಎಂದು ಪದನಾಮೀಕರಿಸಿದೆ. ವಿಶೇಷ ಜಿಲ್ಲಾಧಿಕಾರಿ-2, ವಿಶೇಷ ಜಿಲ್ಲಾಧಿಕಾರಿ ಹುದ್ದೆ-3, ಐಎಎಸ್ ವೃಂದದ ಅಧಿಕಾರಿಗಳನ್ನು ನ್ಯಾಯಿಕ ಅರೆ ನ್ಯಾಯಿಕ ಪ್ರಕರಣಗಳನ್ನು ಆಲಿಸುವುದು. ಸದರಿ ಆಡಳಿತಾತ್ಮಕ ಹಾಗೂ ಇತರೆ ವಿಷಯಗಳನ್ನು ವಿಶೇಷ ಜಿಲ್ಲಾಧಿಕಾರಿ-1 ನಿರ್ವಹಣೆ ಮಾಡುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮೇಲೆ ತಿಳಿಸಿರುವ ಅಂಶಗಳ ಮೇರೆಗೆ ಉಲ್ಲೇಖದಲ್ಲಿರುವ ಸರ್ಕಾರದ ಆದೇಶ 10/10/2014 ಪರಿಷ್ಕರಣೆ ಮಾಡಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 9ರಡಿ ಒಂದು ವಿಶೇಷ ಜಿಲ್ಲಾಧಿಕಾರಿ (ಐಎಎಸ್ ವೃಂದ) ಹುದ್ದೆಯನ್ನು ಸೃಜಿಸಿ ಅದನ್ನು ವಿಶೇಷ ಜಿಲ್ಲಾಧಿಕಾರಿ-3 ಎಂದು ಪದನಾಮೀಕರಿಸಿ ಕಾರ್ಯ ಹಂಚಿಕೆ ಮಾಡಲಾಗಿದೆ.












Click it and Unblock the Notifications