ಆಟೋಮೊಬೈಲ್ ಕ್ಷೇತ್ರದ ಕೌಶಲ್ಯ ಅಭಿವೃದ್ಧಿ; ಟೊಯೋಟಾದಿಂದ ತರಬೇತಿ
ಬೆಂಗಳೂರು, ಜುಲೈ 27; ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಆಟೋ ಮೊಬೈಲ್ ವೆಲ್ಡಿಂಗ್ ಮತ್ತು ಆಟೋ ಮೊಬೈಲ್ ಅಸೆಂಬ್ಲಿ ಟ್ರೇಡ್‍ಗಳಲ್ಲಿ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲು ಟೊಯೋಟಾ ಕೈ ಜೋಡಿಸಲಿದೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ಉದ್ಯೋಗ ಹುಡುಕುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.
ಆಟೋಮೊಬೈಲ್ ವೆಲ್ಡಿಂಗ್ ಮತ್ತು ಆಟೋಮೊಬೈಲ್ ಅಸೆಂಬ್ಲಿ ಟ್ರೇಡ್‍ಗಳಲ್ಲಿ 3 ವರ್ಷಗಳ ತರಬೇತಿಗೆ ಹೆಸರು ನೋಂದಾಯಿಸಿಕೊಂಡಿರುವ ತರಬೇತಿದಾರರಿಗೆ ಉದ್ಯಮ ನಿಷ್ಠ ಕೌಶಲ್ಯ ತರಬೇತಿ ನೀಡಲು ಜಿಟಿಟಿಸಿ (ಸರ್ಕಾರಿ ಉಪಕರಣಗಾರ ಮತ್ತ ತರಬೇತಿ ಕೇಂದ್ರ) ಹಾಗೂ ಟೊಯೋಟಾ (ಟೊಯೋಟಾ ಕಿರ್ಲೋಸ್ಕರ್ ಮೋಟಾರ್) ಒಪ್ಪಂದ ಮಾಡಿಕೊಂಡಿವೆ.

ಕರ್ನಾಟಕದ 30 ಜಿಟಿಟಿಸಿ ಸಂಸ್ಥೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಟಿಕೆಎಂ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಜಿ. ಶಂಕರ ನೇತೃತ್ವದ ತಂಡ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಜಿಟಿಟಿಸಿ ಕೇಂದ್ರಕ್ಕೆ ಭೇಟಿ ನೀಡಿ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಚ್. ರಾಘವೇಂದ್ರ ಅವರೊಂದಿಗೆ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
11 ಜಿಟಿಟಿಸಿಗಳ ಅಭಿವೃದ್ಧಿ; ಈ ಒಪ್ಪಂದದ ಅನ್ವಯ ನುರಿತ ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸಲು ಜಿಟಿಟಿಸಿ, ಟೊಯೋಟಾ ಸಂಸ್ಥೆಯನ್ನು ಕೈಗಾರಿಕಾ ತರಬೇತಿ ಪೂರೈಕೆದಾರ (ಐಟಿಪಿ) ಸಂಸ್ಥೆ ಎಂದು ಗುರುತಿಸಿದೆ. 2021-22ರಲ್ಲಿ 4 ಜಿಟಿಟಿಸಿ ಸಂಸ್ಥೆಗಳ ಜೊತೆಗಿನ ಒಪ್ಪಂದದೊಂದಿಗೆ ಪ್ರಾರಂಭವಾದ ಟಿಕೆಎಂ ಇಲ್ಲಿಯವರೆಗೆ 11 ಜಿಟಿಟಿಸಿ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿದೆ.
2023-24ರ ಹಣಕಾಸು ವರ್ಷದಲ್ಲಿ, ವಾಹನ ಉದ್ಯಮ ಸಂಸ್ಕಂತಿ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಟಿಕೆಎಂ ಇನ್ನೂ 5 ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕದ ಎಲ್ಲಾ ತರಬೇತಿ ಕಾರ್ಯಕ್ರಮದ ಭಾಗವಾಗಿ, ಟೊಯೋಟಾ ಉತ್ಪಾದನಾ ವ್ಯವಸ್ಥೆಯಲ್ಲಿ ವ್ಯಾಪಕ ಅನುಭವ ಹೊಂದಿರುವ ಟೊಯೋಟಾ ವೃತ್ತಿಪರರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ದೆಹಲಿಯ ಆಟೋಮೋಟಿವ್ ಸ್ಕಿಲ್ ಡೆವಲಪ್‌ಮೆಂಟ್ ಕೌನ್ಸಿಲ್ ಜೊತೆಗೂಡಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ನೀಡಲು ಪರೀಕ್ಷೆಯನ್ನು ಸಹ ನಡೆಸಲಾಗುತ್ತದೆ.
ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಚ್. ರಾಘವೇಂದ್ರ ಮಾತನಾಡಿ, "ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯಮ ನಿಷ್ಠ ಕೌಶಲ್ಯ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಟಿಕೆಎಂ ಕಂಪನಿ 'ಕಲಿಯಿರಿ ಮತ್ತು ಸಂಪಾದಿಸಿ' ವಿಧಾನದ ಮೂಲಕ ತರಬೇತಿದಾರರಿಗೆ ಉದ್ಯೋಗದ ಸುಧಾರಣೆಗಾಗಿ ಅವಕಾಶವನ್ನು ಒದಗಿಸಲಿದೆ. ಸಂಸ್ಥೆಗಳಲ್ಲಿ ಉದ್ಯಮ, ನಿರ್ದಿಷ್ಟ ಕೌಶಲ್ಯ, ಜ್ಞಾನ ಮತ್ತು ಸಂಸ್ಕಂತಿಯ ಅಭಿವೃದ್ಧಿಗೆ ಟಿಕೆಎಂ ಪೂರ್ವಭಾವಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಸಹಯೋಗದ ಪ್ರಯತ್ನಗಳ ಮೂಲಕ, ನಾವು ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿ ಹೊಂದಿದ್ದೇವೆ" ಎಂದರು.
ಟಿಕೆಎಂ ಜಿ. ಶಂಕರ ಮಾತನಾಡಿ, "ಅಸಾಧಾರಣ ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ತಲುಪಿಸುವ ಕೇಂದ್ರದಲ್ಲಿ ವಿಶ್ವದರ್ಜೆಯ ವ್ಯಕ್ತಿಗಳನ್ನು ಪೋಷಿಸಲು ಸಂಸ್ಥೆ ಬದ್ಧವಾಗಿದೆ. ಜಿಟಿಟಿಸಿಯೊಂದಿಗಿನ ಸಹಯೋಗ ಮತ್ತು ಪ್ರಾರಂಭಿಸಿದ ಚಟುವಟಿಕೆಗಳು ಭಾರತೀಯ ಆಟೋ ಉದ್ಯಮದ ಬೆಳವಣಿಗೆಯನ್ನು ಮುನ್ನಡೆಸುವ ನುರಿತ ಮತ್ತು ಸುರಕ್ಷತಾ-ಪ್ರಜ್ಞೆಯ ಕಾರ್ಯಪಡೆಯನ್ನು ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ" ಎಂದು ಹೇಳಿದರು.
ಕರ್ನಾಟಕ ಸರ್ಕಾರದ ಕಾರ್ಖಾನೆಗಳು, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶಕ ಕೆ. ಶ್ರೀನಿವಾಸ್ ಮಾತನಾಡಿ, "ಸ್ಕಿಲ್ ಇಂಡಿಯಾ ಮಿಷನ್‍ನ ಉದ್ದೇಶಗಳನ್ನು ಮುಂದುವರಿಸಲು ಮತ್ತು ಉದ್ಯಮದಲ್ಲಿ ಸುರಕ್ಷಿತ ಮನಸ್ಥಿತಿಯೊಂದಿಗೆ ಕೆಲಸ ಮಾಡಲು ವಿದ್ಯಾರ್ಥಿಗಳಲ್ಲಿ ಸುರಕ್ಷತೆಯ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಟಿಕೆಎಂ ಬೆಂಬಲ ನೀಡುತ್ತಿದೆ. ಸಾಮೂಹಿಕ ಪ್ರಯತ್ನ ಮತ್ತು ಸಹಯೋಗದೊಂದಿಗೆ, ವಿದ್ಯಾರ್ಥಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಉದ್ಯಮದ ಅವಶ್ಯಕತೆಗಳನ್ನು ಪೂರೈಸಲು ಹಾಗೂ ಸುರಕ್ಷಿತ ಉದ್ಯಮ ಸಂಸ್ಕಂತಿಯನ್ನು ಬೆಳೆಸಲಾಗುವುದು" ಎಂದರು.












Click it and Unblock the Notifications