ಕಲಬುರಗಿ, ಉಡುಪಿಯಲ್ಲಿ ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಹಾಕಿ
ಕಲಬುರಗಿ, ಜುಲೈ 17; ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ, ಕಲಬುರಗಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಾನೂನು ಸಲಹೆಗಾರರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಜುಲೈ ಅಂತ್ಯದ ತನಕ ಆಸಕ್ತ, ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಂದಾಯ ಇಲಾಖೆಯಲ್ಲಿನ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ನಿರ್ವಹಿಸಲು ಮತ್ತು ಜಿಲ್ಲಾಧಿಕಾರಿಗಳಿಗೆ ಕಾನೂನು ಸಲಹೆ ನೀಡಲು ಗುತ್ತಿಗೆ ಆಧಾರದ ಮೇಲೆ ಕಾನೂನು ಸಲಹೆಗಾರರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಕಲಬುರಗಿಯ ವಿವರ; ಕಲಬುರಗಿಯಲ್ಲಿ ಕಾನೂನು ಸಲಹೆಗಾರರ ಹುದ್ದೆಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಸಿವಿಲ್ ನ್ಯಾಯಾಧೀಶರು, ಕಾನೂನು ಪದವೀಧರರು (ಎಲ್‌ಎಲ್‌ಬಿ), ಕಂದಾಯ ಇಲಾಖೆಯ ನಿವೃತ್ತ ವಿಶೇಷ ಜಿಲ್ಲಾಧಿಕಾರಿ, ನಿವೃತ್ತ ತಹಶೀಲ್ದಾರ್ ಹಾಗೂ ನಿವೃತ್ತ ಉಪ ತಹಶೀಲ್ದಾರ್ ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿಗಳನ್ನು ಜುಲೈ 12ರಿಂದ ಪ್ರಾರಂಭಗೊಂಡು ಜುಲೈ 30ರ ಮಧ್ಯಾಹ್ನ 3ಗಂಟೆಯ ತನಕ ಸಲ್ಲಿಸಬಹುದು. ನಿಗದಿತ ಅವಧಿಯಲ್ಲಿ ಜಿಲ್ಲಾಧಿಕಾರಿಗಳು, ಕಲಬುರಗಿ ಕಾರ್ಯಾಲಯಕ್ಕೆ ಅರ್ಜಿದಾರರು ನೇರವಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ತಡವಾಗಿ ಬಂದಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕಾನೂನು ಸಲಹೆಗಾರರೆಂದು ನೇಮಕವಾದವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು-1958ರ ನಿಯಮ 313(ಬಿ) ಪ್ರಕಾರ ಮಾಸಿಕ ಸಂಚಿತ ವೇತನವನ್ನು ಪಾವತಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಉಡುಪಿಯಲ್ಲಿನ ಕೆಲಸದ ವಿವರ; ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೂ ಭೂ ಸ್ವಾಧೀನ ಹಾಗೂ ಇತರ ಕಾನೂನು ಸಂಬಂಧಿತ ಪ್ರಕರಣಗಳಲ್ಲಿ ಸಲಹೆ ನೀಡಲು, ವಿವಿಧ ನ್ಯಾಯಾಲಯ ಪ್ರಕರಣಗಳಿಗೆ ಕಂಡಿಕೆವಾರು ಉತ್ತರಗಳನ್ನು ಸಿದ್ಧಪಡಿಸಲು ಕಾನೂನು ಸಲಹೆಗಾರರ ನೇಮಕ ಮಾಡಲಾಗುತ್ತಿದೆ.
ನಿವೃತ್ತ ಜಿಲ್ಲಾ ನ್ಯಾಯಾಧೀಶರು, ನಿವೃತ್ತ ಸಿವಿಲ್ ನ್ಯಾಯಾಧೀಶರು ಅಥವಾ ಕಾನೂನು ಪದವೀಧರರಾಗಿರುವ (ಎಲ್ಎಲ್‌ಬಿ) ಕಂದಾಯ ಇಲಾಖೆಯ ನಿವೃತ್ತ ವಿಶೇಷ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಉಪ ತಹಶೀಲ್ದಾರ್‌ರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ರೆಸ್ಯೂಮ್‌ನೊಂದಿಗೆ ಸಲ್ಲಿಸಲು ಜುಲೈ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ, ರಜತಾದ್ರಿ, ಮಣಿಪಾಲ, ಉಡುಪಿಯ ಆಡಳಿತ ಶಾಖೆಯನ್ನು ಸಂಪರ್ಕಿಸಬಹುದು.
ದೂರವಾಣಿ ಸಂಖ್ಯೆ 0820-2574925 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications