ವಾರಕ್ಕೆ 90 ಗಂಟೆ ಕೆಲಸ: ಕೇಂದ್ರ ಸರ್ಕಾರ ಹೇಳುವುದೇನು?
ನವದೆಹಲಿ, ಫೆಬ್ರವರಿ 04: ದೇಶದಲ್ಲಿ ವಾರಕ್ಕೆ 70 ಗಂಟೆ ಕೆಲಸ, 90 ಗಂಟೆ ಕೆಲಸದ ಚರ್ಚೆಗಳು ಜೋರಾಗಿವೆ. ಈ ಕುರಿತು ಪ್ರಸ್ತಾಪ ಮಾಡಿದ್ದ ಉದ್ಯಮಿಗಳು ಟೀಕೆಗಳನ್ನು ಎದುರಿಸುವಂತಾಗಿದೆ. ಇಂತಹ ಸಮಯದಲ್ಲಿಯೇ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಉದ್ಯೋಗಿಗಳ ಕೆಲಸದ ಅವಧಿ ಕುರಿತು ಲಿಖಿತ ಉತ್ತರವನ್ನು ನೀಡಿದೆ. ಈ ಮೂಲಕ ಚರ್ಚೆಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.
ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಲೋಕಸಭೆಗೆ ಸೋಮವಾರ ಈ ಕುರಿತು ಲಿಖಿತ ಉತ್ತರವನ್ನು ನೀಡಿದ್ದಾರೆ. "ದೇಶದಲ್ಲಿ ವಾರದ ಕೆಲಸದ ಅವಧಿಯನ್ನು 70 ರಿಂದ 90 ಗಂಟೆಗೆ ಏರಿಕೆ ಮಾಡುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲವು ಖಾಸಗಿ ಕಂಪನಿಗಳ ಮುಖ್ಯಸ್ಥರು ಕಳೆದ ಒಂದು ತಿಂಗಳಿನಿಂದ ಉದ್ಯೋಗಿಗಳ ವಾರದ ಕೆಲಸದ ಅವಧಿ ಏರಿಕೆ ಮಾಡುವ ಕುರಿತು ಮಾತನಾಡಿದ್ದರು. ಈ ಕುರಿತು ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದವು. ಅಲ್ಲದೇ ಉದ್ಯಮಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಟೀಕಿಸಲಾಗಿತ್ತು.
ಸರ್ಕಾರ ಹೇಳಿದ್ದೇನು?; ಲೋಕಸಭೆ ಬಜೆಟ್ ಅಧಿವೇಶನ ನಡೆಯುತ್ತಿದೆ. ಕಲಾಪದಲ್ಲಿ ಸದಸ್ಯರು ಈ ಕುರಿತು ಕೇಳಿದ್ದ ಪ್ರಶ್ನೆಗೆ ಸರ್ಕಾರ ಉತ್ತರ ನೀಡಿದೆ. ವಾರದ ಕೆಲಸದ ಅವಧಿಯನ್ನು ಹೆಚ್ಚಳ ಮಾಡುವಂತಹ ಯಾವುದೇ ಪ್ರಸ್ತಾವನೆಗಳು ನಮ್ಮ ಮುಂದೆ ಇಲ್ಲ ಎಂದು ಸರ್ಕಾರ ತನ್ನ ಉತ್ತರದಲ್ಲಿ ಸ್ಪಷ್ಟಪಡಿಸಿದೆ.
ಸಚಿವರು ತಮ್ಮ ಉತ್ತರದಲ್ಲಿ, "ನೌಕರರು ಸಮವರ್ತಿ ಪಟ್ಟಿಯ ಅಡಿಯಲ್ಲಿ ಬರುವುದರಿಂದ ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದ ತೀರ್ಮಾನಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳುತ್ತವೆ. ಕೆಲಸದ ಅವಧಿಯನ್ನು ವಾರದಲ್ಲಿ 70 ರಿಂದ 90ಕ್ಕೆ ಏರಿಕೆ ಮಾಡುವ ಪ್ರಸ್ತಾವನೆ ಇಲ್ಲ" ಎಂದು ಹೇಳಿದ್ದಾರೆ.
ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಲೋಕಸಭೆಯಲ್ಲಿ ಮಂಡನೆ ಮಾಡಿದ್ದ ಆರ್ಥಿಕ ಸಮೀಕ್ಷೆ ವರದಿಯಲ್ಲಿ ವಾರದಲ್ಲಿ 60 ಗಂಟೆ ಕೆಲಸ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಉಲ್ಲೇಖಿಸಲಾಗಿತ್ತು.
12 ಗಂಟೆಗಳಿಗೂ ಅಧಿಕ ಕಾಲ ಕುಳಿತು ಕೆಲಸ ಮಾಡುವವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾರೆ. ಇದರಿಂದಾಗಿ ಆರ್ಥಿಕ ನಷ್ಟವೂ ಉಂಟಾಗಲಿದೆ ಎಂದು ಸಮೀಕ್ಷೆ ತಿಳಿಸಿತ್ತು. ಉದ್ಯೋಗಿಗಳ ಕೆಲಸದ ಅವಧಿ ಸೇರಿದಂತೆ ಇತರ ವಿಷಯಗಳು ಕಾರ್ಖಾನೆ ಕಾಯ್ದೆ 1948, ಅಂಗಡಿ ಮತ್ತು ಸಂಸ್ಥೆಗಳ ಕಾಯ್ದೆ ಅಡಿಯಲ್ಲಿ ನಿರ್ಧರಿತವಾಗುತ್ತದೆ.
2023ರಲ್ಲಿ ಬಿಡುಗಡೆಯಾದ ಸ್ಲ್ಯಾಕ್ ಸಂಸ್ಥೆಯ ಸಮೀಕ್ಷೆ ವರದಿ ಹೆಚ್ಚು ಹೊತ್ತು ಕಛೇರಿಯಲ್ಲಿ ಇರುವ ಉದ್ಯೋಗಿಗಳಿಗಿಂತ ನಿಗದಿತ ಸಮಯಕ್ಕೆ ಕಛೇರಿಯಿಂದ ಹೊರಡುವ ಉದ್ಯೋಗಿಗಳ ಕೆಲಸದ ಗುಣಮಟ್ಟ ಉತ್ತಮವಾಗಿದೆ ಎಂದು ಹೇಳಿತ್ತು.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಕೆಲವು ದಿನಗಳ ಹಿಂದೆ ಭಾರತೀಯ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನೀಡಿದ ಹೇಳಿಕೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ನಡುವೆ ವಾರಕ್ಕೆ 90 ಗಂಟೆ ದುಡಿಯಬೇಕು, ರವಿವಾರವೂ ದುಡಿಯಬೇಕು, ಮನೆಯಲ್ಲಿದ್ದು ಹೆಂಡತಿಯ ಮುಖವನ್ನು ದಿಟ್ಟಿಸುವುದೇನಿದೆ ಎಂದು ಲಾರ್ಸೆನ್ ಆ್ಯಂಡ್ ಟೂಬ್ರೊ ಇನ್ಫೊಟೆಕ್ ಅಧ್ಯಕ್ಷ ಸುಬ್ರಹ್ಮಣ್ಯನ್ ಹೇಳಿಕೆ ನೀಡಿ ಈ ಚರ್ಚೆಯ ಬಿಸಿಯನ್ನು ಮತ್ತಷ್ಟು ಹೆಚ್ಚಿಸಿದ್ದರು.












Click it and Unblock the Notifications