ಬಿಟ್ ಕಾಯಿನ್ ಪ್ರಕರಣ: ಸುರ್ಜೇವಾಲ ಪ್ರಶ್ನೆಗೆ ಸುಧಾಕರ್ ತಿರುಗೇಟು
ಬೆಂಗಳೂರು, ನವೆಂಬರ್ 14: ಬಿಟ್ ಕಾಯಿನ್ ಪ್ರಕರಣವು ರಾಜ್ಯದಲ್ಲಿ ಈಗ ಬಾರೀ ಸಂಚಲನ ಮೂಡಿಸಿದೆ. ಶನಿವಾರ ಕಾಂಗ್ರೆಸ್‌ನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆರು ಪ್ರಶ್ನೆಗಳನ್ನು ಎಸೆದಿದ್ದಾರೆ. ಈ ಪ್ರಶ್ನೆಗಳಿಗೆ ಆರೋಗ್ಯ ಸಚಿವ, ವೈದ್ಯಕೀಯ ಶಿಕ್ಷಣ ಸಚಿವರಾದ ಕೆ ಸುಧಾಕರ್ ತಿರುಗೇಟು ನೀಡಿದ್ದಾರೆ.
ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, "ರಾಜ್ಯದ ಪೊಲೀಸರ ಬಗ್ಗೆ ದೇಶದಲ್ಲಿ ಗೌರವ ಇದೆ. ರಾಜಕಾರಣಿಗಳು ಆ ಗೌರವಕ್ಕೆ ಅಪಮಾನ ಮಾಡಬಾರದು, ಪ್ರಸ್ತುತ ಬಿಟ್ ಕಾಯಿನ್ ಪ್ರಕರಣದ ತನಿಖೆಯು ನಡೆಯುತ್ತಿದೆ. ಸರ್ಕಾರವು ಪಾರದರ್ಶಕವಾಗಿ ತನಿಖೆಯನ್ನು ನಡೆಸಲಾಗುತ್ತಿದೆ," ಎಂದು ಹೇಳಿದರು.
ಬಿಟ್‌ಕಾಯಿನ್: ದೆಹಲಿಯಿಂದ ಸಿಎಂ ಬೊಮ್ಮಾಯಿಗೆ ಸುರ್ಜೇವಾಲ 6 ಪ್ರಶ್ನೆಗಳು
"ಕಾಂಗ್ರೆಸ್ ಈಗ ಸುಳ್ಳುಗಳನ್ನು ಯಾವ ರೀತಿಯಲ್ಲಾದರೂ ಸತ್ಯ ಎಂದು ಬಿಂಬಿಸಬೇಕು ಎಂಬ ಯತ್ನವನ್ನು ಮಾಡುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ಈ ಪ್ರಕರಣದ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. ಯಾವುದೇ ಬಿಟ್ ಕಾಯಿನ್ ವರ್ಗಾವಣೆ ಮಾಡಿಲ್ಲ," ಎಂದು ಸ್ಪಷ್ಟನೆಯನ್ನು ನೀಡಿದರು. "ನಾವು ರಾಜಕೀಯವನ್ನು ರಾಜಕೀಯ ಹಿನ್ನೆಲೆಯಿಂದ ನೋಡಿಕೊಳ್ಳಬೇಕು. ಸುಖಾಸುಮ್ಮನೇ ಯಾವುದೇ ವಿಚಾರದಲ್ಲೂ ಯಾರದೇ ಚಾರಿತ್ಯ್ರ ಹರಣ ಮಾಡಬಾರದು. ಜನಸಾಮಾನ್ಯರು ಮುಖ್ಯಮಂತ್ರಿ ಆಗಿದ್ದಾರೆ ಎಂದು ಹೊಟ್ಟೆಕಿಚ್ಚು ಶುರು ಆಗಿದೆ. ಅವರ ತಟ್ಟೆಯಲ್ಲಿ ಬಿದ್ದ ಹೆಗ್ಗಣವನ್ನು ನೋಡಿಕೊಳ್ಳದೆ, ಇಳಿಯನ್ನೇ ಹೆಗ್ಗಣ ಎಂದು ಮಾಡಲು ಮುಂದಾಗಿದ್ದಾರೆ. ಯಾವುದೇ ಹಗರಣ ನಡೆಯದಿದ್ದರೂ, ಬಿಟ್ ಕಾಯಿನ್ ಹಗರಣ ನಡೆದಿದೆ ಎಂದು ಬಿಂಬಿಸುವ ಯತ್ನ ಮಾಡುತ್ತಿದ್ದಾರೆ," ಎಂದು ಆರೋಪ ಮಾಡಿದರು.

ರಣದೀಪ್ ಪ್ರಶ್ನೆಗಳು ಏನು?
ಕಾಂಗ್ರೆಸ್‌ನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆರು ಪ್ರಶ್ನೆಗಳನ್ನು ಎಸೆದಿದ್ದಾರೆ. ಈ ಪ್ರಶ್ನೆಗೆ ಕೆ ಸುಧಾಕರ್ ನೀಡಿದ ಪ್ರತಿಕ್ರಿಯೆ ನೀಡಿದ್ದಾರೆ. ಬಿಟ್‌ಕಾಯಿನ್ ಕವರ್ ಅಪ್ ಸ್ಕ್ಯಾಮ್" ನಲ್ಲಿ ಹಿಂದಿರೋರು ಯಾರು?. ಕಳುವಾಗಿದೆ ಎನ್ನಲಾಗುತ್ತಿರುವ ಬಿಟ್‌ಕಾಯಿನ್‌ಗಳನ್ನು ಆಪಾದಿತ ಹ್ಯಾಕರ್ ಶ್ರೀ ಕೃಷ್ಣನ ವ್ಯಾಲೆಟ್‌ನಿಂದ ವರ್ಗಾಯಿಸಲಾಗಿದೆಯೇ? ಹಾಗಿದ್ದರೆ ಎಷ್ಟು ಬಿಟ್‌ಕಾಯಿನ್‌ಗಳು ಮತ್ತು ಅದರ ಮೌಲ್ಯ ಎಷ್ಟು?. ಇನ್ನು ಪೊಲೀಸ್ ವ್ಯಾಲೆಟ್‌ಗೆ ವರ್ಗಾಯಿಸಲಾಗಿದೆ ಎಂದು ಹೇಳಲಾದ 31 ಮತ್ತು 186 ಬಿಟ್‌ಕಾಯಿನ್‌ಗಳು ಕಳೆದುಹೋಗಿವೆಯಾ ಅಥವಾ ನಕಲಿ ವಹಿವಾಟುಗಳು ನಡೆದಿದೆಯಾ ಇದನ್ನು (22ನೇ ಜನವರಿ 2021 ರ ಮೂರನೇ ಪಂಚನಾಮದಲ್ಲಿ) ಹೇಗೆ ಸೂಚಿಸುತ್ತಾರೆ?. ವೇಲ್ ಅಲಾರ್ಟ್ಸ ಮಾಹಿತಿಯಂತೆ 14,682 ರೂಪಾಯಿ ಮೌಲ್ಯದ ಬಿಟ್‌ಕಾಯಿನ್‌ಗಳ ವರ್ಗಾವಣೆಯನ್ನ ಎರಡು ದಿನಾಂಕಗಳಲ್ಲಿ ಅಂದರೆ ಡಿಸೆಂಬರ್ 1ರ 2020 ರಂದು 5,240 ಕೋಟಿ ರೂಪಾಯಿ ಹಾಗೂ 14 ಏಪ್ರಿಲ್, 2021, ಶ್ರೀ ಕೃಷ್ಣ ಮಾಡಲಾಗಿದೆ. ಇದು ಶ್ರೀ ಕೃಷ್ಣ ಬಂಧನದಲ್ಲಿ ಇದ್ದಾಗ ನಡೆದಿದೆ. ವರ್ಗಾವಣೆಗೊಂಡ ಕೆಲವು ಬಿಟ್‌ಕಾಯಿನ್‌ಗಳು ಶ್ರೀಕೃಷ್ಣನ ವ್ಯಾಲೆಟ್‌ನಿಂದ ಬಂದಿದ್ದರೆ ಅದನ್ನು ತನಿಖೆ ಮಾಡಲಾಗಿದೆಯೇ?. ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಬಂಧಿತ ಸಮಯದಲ್ಲಿ ಉಸ್ತುವಾರಿ ಗೃಹ ಸಚಿವರಾಗಿದ್ದವರು) ಮತ್ತು ಇತರರ ಪಾತ್ರ ಮತ್ತು ಜವಾಬ್ದಾರಿ ಏನು?. ಸ್ಪಷ್ಟ ಅಂತರಾಷ್ಟ್ರೀಯ ಕವಲುಗಳಿರುವ ಇಂತಹ ದೊಡ್ಡ ಅಪರಾಧಗಳ ಹೊರತಾಗಿಯೂ ಇಂಟರ್‌ಪೋಲ್‌ಗೆ ಏಕೆ ಮಾಹಿತಿ ನೀಡಲಿಲ್ಲ? 2021ರ ಏಪ್ರಿಲ್ 17ರಂದು ಶ್ರೀಕೃಷ್ಣನ ಬಿಡುಗಡೆಯಾದ ನಂತರವೂ ಇಂಟರ್‌ಪೋಲ್‌ಗೆ ಪತ್ರ ಬರೆಯಲು ಬಿಜೆಪಿ ಸರ್ಕಾರ 24ನೇ ಏಪ್ರಿಲ್ 2021ರವರೆಗೆ ಐದು ತಿಂಗಳವರೆಗೆ ಏಕೆ ಕಾದು ಕುಳಿತಿತ್ತು. ಕರ್ನಾಟಕ ಬಿಜೆಪಿ ಸರ್ಕಾರದಿಂದ NIA/SFIO/ED ಏಕೆ ತಿಳಿಸಲಾಗಿಲ್ಲ? ಎಂದು ಆರು ಪ್ರಶ್ನೆಗಳನ್ನು ಕಾಂಗ್ರೆಸ್ ಉಸ್ತುವಾರಿ ಮುಂದಿರಿಸಿದ್ದಾರೆ.

ಈ ಪ್ರಶ್ನೆಗಳಿಗೆ ತಿರುಗೇಟು ನೀಡಿದ ಕೆ ಸುಧಾಕರ್
ಕಾಂಗ್ರೆಸ್‌ನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆರು ಪ್ರಶ್ನೆಗಳನ್ನು ಎಸೆದಿದ್ದಾರೆ. ಈ ಪ್ರಶ್ನೆಗಳಿಗೆ ಸುಧಾಕರ್ ತಿರುಗೇಟು ನೀಡಿದ್ದಾರೆ.
* ಈ ಹಿಂದೆಯ ಸರ್ಕಾರವೇ ಈ ಬಿಟ್‌ಕಾಯಿನ್ ಪ್ರಕರಣದ ತನಿಖೆಗೆ ಆದೇಶ ನೀಡಿದೆ. ಈ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ರಾಜ್ಯದ ಗೃಹ ಸಚಿವರು ಆಗಿದ್ದರು. ಹಾಗಿರುವಾದ ಸಿಎಂ ಹೇಗೆ ಬಿಟ್‌ಕಾಯಿನ್ ಸೂತ್ರದಾರರು ಆಗುತ್ತಾರೆ.
* ಕ್ರಿಪ್ಟೊಕರೆನ್ಸಿ ಖಾತೆಯನ್ನು ಯಾರು ಬೇಕಾದರೂ ನೋಡಲು ಸಾಧ್ಯವಾಗಲ್ಲ. 31.8 ಬಿಟ್‌ಕಾಯಿನ್ ಇದೆ ಎಂದು ಶ್ರೀಕಿ ಹೇಳಿದ್ದಾನೆ. ನಾನು ಈ ಬಗ್ಗೆ ಕೋರ್ಟ್‌ಗೆ ತಿಳಿಸಿದ್ದೇನೆ. ಆ ಬಳಿಕ ಶ್ರೀಕಿ ವ್ಯಾಲೆಟ್‌ನಲ್ಲಿ 186.1 ಬಿಟ್‌ಕಾಯಿನ್ ಇದೆ ಎಂದು ಹೇಳಿದ್ದ. ಈ ಬಗ್ಗೆ ಪೊಲೀಸರು ಸೈಬರ್ ತಜ್ಞರು, ಐಐಎಸ್‌ಸಿ ತಜ್ಞರ ನೆರವಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಆತನ ಹೇಳಿಕೆ ಸುಳ್ಳು ಎಂದು ತಿಳಿದು ಬಂದಿದೆ.
* ಆರೋಪಿ ಶ್ರೀಕಿ ವಶದಲ್ಲಿ ಇದ್ದ ಸಂದರ್ಭದಲ್ಲಿ 14,682 ಬಿಟ್ ಕಾಯಿನ್ ಕಳ್ಳತನ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಹಾಗೆ ಆಗಿದ್ದರೆ ಬಿಟ್ ಕಾಯಿನ್ ಸಂಸ್ಥೆಗಳು, ಎಕ್ಸ್‌ಚೇಂಜ್ ಅಥವಾ ವಿವಿಧ ದೇಶಗಳ ವಿದೇಶಾಂಗ ಏಜೆನ್ಸಿಗಳು ಭಾರತವನ್ನು ಪ್ರಶ್ನೆ ಮಾಡುತ್ತಿಲಿಲ್ಲವೇ? ಆದರೆ ಈವರೆಗೆ ಯಾವುದೇ ಪ್ರಶ್ನೆ ಕೇಳಿಲ್ಲ. ಬಿಟ್‌ಫೀನಿಕ್ಸ್ ಕೂಡಾ ಬಿಟ್‌ಕಾಯಿನ್ ಕಳವು ಆಗಿದೆ ಎಂದು ಹೇಳಿಕೆ ನೀಡಿಲ್ಲ.
* ತನ್ನ ಜವಾಬ್ದಾರಿಯನ್ನು ಬೊಮ್ಮಾಯಿ ಸಮರ್ಥವಾಗಿ ನಿರ್ವಹಣೆ ಮಾಡಿದ್ದಾರೆ. ಕೇವಲ ತನಿಖೆಗೆ ಆದೇಶ ನೀಡಿ ಸುಮ್ಮನಿಲ್ಲ. ಡಿಐಜಿ ಮಟ್ಟದ ತಂಡವನ್ನು ಕೂಡಾ ರಚನೆ ಮಾಡಿದ್ದಾರೆ.
* ಈ ನಡುವೆ ಆರೋಪಿ ಶ್ರೀಕಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಪ್ರಭಾವಿ ವ್ಯಕ್ತಿಗಳ ವ್ಯವಹಾರ ಆತ ಹ್ಯಾಕ್ ಮಾಡಿದ್ದಾನೆ. ಅದರ ತನಿಖೆ ಮಾಡಬೇಕೋ ಬೇಡವೋ?
* ಒಂದು ಪ್ರಕರಣದಲ್ಲಿ ಅಕ್ರಮ ನಡೆದಿದೆ ಎಂದು ತಿಳಿದು ಬಂದರೆ ಅದನ್ನು ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡುತ್ತದೆ. ಈ ವಿಚಾರದಲ್ಲಿ ನಮ್ಮ ಸರ್ಕಾರವೇ ಇಡಿ, ಇಂಟರ್‌ಪೋಲ್‌ಗೆ ಮಾಹಿತಿ ನೀಡಿದೆ.

ಶ್ರೀಕಿಯನ್ನು ಕಾಂಗ್ರೆಸ್ ಸರ್ಕಾರ ಬಂಧನ ಮಾಡಿತ್ತಾ?
ಈ ಪ್ರಕರಣದಲ್ಲಿ ಶ್ರೀಕಿಯನ್ನು ಕಾಂಗ್ರೆಸ್ ಸರ್ಕಾರ ಬಂಧನ ಮಾಡಿತ್ತಾ? ಎಂದು ಪ್ರಶ್ನಿಸಿರುವ ಸುಧಾಕರ್, "ನಮ್ಮ ಸಿಎಂ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಮಾದಕ ವ್ಯಸನದ ವಿರುದ್ಧ ಆಂದೋಲನ ಮಾಡಿ ಯಾವ ದಾಕ್ಷಿಣ್ಯವಿಲ್ಲದೆ ಎಲ್ಲರ ಬಂಧನ ಮಾಡಿಸಿದ್ದಾರೆ. ರಾಜಕಾರಣಿಗಳ ಮಕ್ಕಳು, ಸೆಲೆಬ್ರೆಟಿಗಳು ಯಾರೇ ಆಗಲಿ ಎಲ್ಲರ ಬಂಧನ ಮಾಡಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆರೋಪಿ ಶ್ರೀಕಿ ಮಾದಕ ವ್ಯಸನಿಯಾಗಿದ್ದ. ಆತನ ವಿಚಾರಣೆ ಸಂದರ್ಭದಲ್ಲಿ ಆತ ಈ ಬಗ್ಗೆ ಒಪ್ಪಿಕೊಂಡಿದ್ದಾನೆ. ಈ ಸಂದರ್ಭದಲ್ಲೇ ಆತ ಬಿಕ್‌ಕಾಯಿನ್ ಬಗ್ಗೆಯೂ ಮಾಹಿತಿ ನೀಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಿಯಾಂಕ ಖರ್ಗೆ ವಿರುದ್ಧ ಟ್ವೀಟ್
ಇನ್ನು ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆಗೂ ಪ್ರತ್ಯುತ್ತರ ನೀಡಿದ್ದಾರೆ. "ಮಾನ್ಯ ಪ್ರಿಯಾಂಕ್ ಖರ್ಗೆ ಅವರ ಸಾಂದರ್ಭಿಕ ಮರೆವು, ಜಾಣ ಕುರುಡು, ಕೀಳು ರಾಜಕೀಯದ ಆಲೋಚನೆಗಳು ಯಾರನ್ನು ಮೆಚ್ಚಿಸಲು ಎನ್ನುವುದು ಜನರಿಗೆ ತಿಳಿದಿದೆ. ಚಳಿ,ಮಳೆ,ಗಾಳಿಗಳ ಕಷ್ಟ ಅರಿಯದ ಅವರು ಆನುವಂಶಿಕ ನೆರಳಿನಲ್ಲೇ ವಿಹರಿಸಲಿ, ಆದರೆ ಸಂಪುಟ ಸಚಿವರಿಗೆ ಸರ್ಕಾರದ ಪರವಾಗಿ ಮಾತನಾಡುವ ಸಾಮೂಹಿಕ ಹೊಣೆಗಾರಿಕೆ ಇದೆ ಎನ್ನುವುದನ್ನು ಮರೆತದ್ದೇಕೆ?," ಎಂದು ಪ್ರಶ್ನಿಸಿದ್ದಾರೆ. "ಇದು ಕಾಂಗ್ರೆಸ್ ಮುಖಂಡರ ಹತಾಶೆ, ಜನರನ್ನು ಹೇಗಾದರೂ ದಾರಿ ತಪ್ಪಿಸಬೇಕೆನ್ನುವ ಆತುರದ ಪ್ರದರ್ಶನವಲ್ಲದೆ ಇನ್ನೇನೂ ಅಲ್ಲ. ಈ ಕೀಳು ರಾಜಕೀಯ ಕಾಂಗ್ರೆಸ್ಸಿಗೆ ಸರಿ. ಪ್ರಿಯಾಂಕ್ ಖರ್ಗೆ ಐಟಿ ಸಚಿವರಾಗಿದ್ದಾಗ, ನಂತರ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಕೇವಲ ಅವರ ಇಲಾಖೆ ಬಗ್ಗೆ ಮಾತ್ರ ಮಾತನಾಡಿದ್ದರೇ ಎಂದು ಒಮ್ಮೆ ನೆನೆಪು ಮಾಡಿಕೊಳ್ಳಲಿ," ಎಂದು ಹೇಳಿದ್ದಾರೆ. "ಕಾಂಗ್ರೆಸ್ ಪಕ್ಷದ ಈ ಅಪಪ್ರಚಾರ, ಸುಳ್ಳಿನ ರಾಜಕಾರಣವನ್ನು ಬಿಜೆಪಿ ಸಹಿಸುವುದಿಲ್ಲ. ನಿಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ನೂರು ಸುಳ್ಳು ಹೇಳುವ ನಿಮ್ಮ ಕುತಂತ್ರಗಳನ್ನು ಜನರ ಮುಂದಿಡಲೇಬೇಕು. ಸಚಿವರು ಮಾತ್ರವಲ್ಲ, ಪ್ರತಿಯೊಬ್ಬ ಕಾರ್ಯಕರ್ತ ಕೂಡ ಕಾಂಗ್ರೆಸ್ ಪಕ್ಷದ ನಾಟಕವನ್ನು ಬಯಲಿಗೆಳೆಯಲು ಸಿದ್ಧರಾಗಿದ್ದಾರೆ," ಎಂದು ಸುಧಾಕರ್ ತಿಳಿಸಿದ್ದಾರೆ.
(ಒನ್‌ಇಂಡಿಯಾ ಸುದ್ದಿ)