ಪರಶುರಾಮ ಜಯಂತಿ ಯಾವತ್ತು? ಈ ದಿನದ ಮಹತ್ವ ಮತ್ತು ಪೂಜಾ ವಿಧಾನದ ವಿವರ ಇಲ್ಲಿದೆ

ಪರಶುರಾಮ ಜಯಂತಿ 2025: ಮಹರ್ಷಿ ಪರಶುರಾಮನನ್ನು ವಿಷ್ಣುವಿನ ಆರನೇ ಅವತಾರವೆಂದು ಕರೆಯಲಾಗುತ್ತದೆ. ಪುರಾಣಗಳಲ್ಲಿ ಬರುವ ಏಳು ಚಿರಂಜೀವಿಗಳಲ್ಲಿ ಪರಶುರಾಮ ಕೂಡಾ ಒಬ್ಬರು.ಪರಶುರಾಮ ಎಂದರೆ ಕೊಡಲಿಯನ್ನು ಹಿಡಿದಿರುವ ರಾಮ. ಈ ಕೊಡಲಿಯನ್ನು ಶಿವನು ಪರಶುರಾಮನಿಗೆ ನೀಡಿದನು ಎನ್ನುತ್ತದೆ ಪುರಾಣ. ಪರಶುರಾಮ ಜಯಂತಿಯನ್ನು ನಮ್ಮ ದೇಶದ ನಾನಾ ಭಾಗಗಳಲ್ಲಿ ಹಬ್ಬದ ರೀತಿಯಲ್ಲಿಯೇ ಆಚರಿಸುತ್ತಾರೆ. ಈ ವರ್ಷ, ಪರಶುರಾಮ ಜಯಂತಿಯನ್ನು ಏಪ್ರಿಲ್ 19ರ ಭಾನುವಾರದಂದು ಆಚರಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಪರಶುರಾಮ ಜಯಂತಿಯನ್ನು ಆಚರಿಸಲಾಗುತ್ತದೆ. ಇದೇ ದಿನ ಅಕ್ಷಯ ತೃತೀಯ ಕೂಡಾ ಇರುತ್ತದೆ. ಈ ದಿನದಂದು ಪರಶುರಾಮನನ್ನು ಪೂಜಿಸುವುದರಿಂದ ಶಕ್ತಿ, ಧೈರ್ಯ ಮತ್ತು ದುಷ್ಟಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಎನ್ನುವುದು ನಂಬಿಕೆ.

ಪರಶುರಾಮ ಜಯಂತಿ 2026 ದಿನಾಂಕ:

ಪರಶುರಾಮ ಜಯಂತಿ 2026: ಏಪ್ರಿಲ್ 19, 2026
ತಿಥಿ: ವೈಶಾಖ ಶುಕ್ಲ ತೃತೀಯ

ಪರಶುರಾಮ ಜಯಂತಿಯ ವಿಶೇಷ:

ಪರಶುರಾಮ ಜಯಂತಿ ಅಕ್ಷಯ ತೃತೀಯದೊಂದಿಗೆ ಹೊಂದಾಣಿಕೆಯಾಗುತ್ತದೆ. ಈ ದಿನ ಮಾಡುವ ಪ್ರತಿಯೊಂದು ಒಳ್ಳೆಯ ಕಾರ್ಯ, ಸಲ್ಲಿಸುವ ಪ್ರಾರ್ಥನೆ ಮತ್ತು ದಾನ ಧರ್ಮದ ಫಲ ದ್ವಿಗುಣವಾಗಿರುತ್ತದೆ. ಪರಶುರಾಮ ಜಯಂತಿ ದಿನವು ಸದಾಚಾರ, ಧೈರ್ಯ ಮತ್ತು ಭಕ್ತಿಯ ವಿಜಯದ ಸಂಕೇತ.ವಿಷ್ಣುವಿನ ಅವತಾರವಾದ ಪರಶುರಾಮ ಆಕ್ರಮಣಕಾರಿ ಮತ್ತು ಯುದ್ಧದಲ್ಲಿ ಪರಿಣಿತ ಎಂದೇ ಹೇಳಲಾಗುತ್ತದೆ. ಪರಶುರಾಮ ಶಿವನ ಭಕ್ತರಾಗಿದ್ದು, ಶಿವನಿಂದ ಕೊಡಲಿಯಂತಹ ಆಯುಧವನ್ನು ವರವಾಗಿ ಪಡೆದಿದ್ದರು ಎನ್ನಲಾಗಿದೆ. ಪುರಾಣಗಳ ಪ್ರಕಾರ, ಶಿವನೇ ಪರಶುರಾಮರಿಗೆ ಯುದ್ಧ ಕಲೆಯನ್ನು ಕೂಡಾ ಕಲಿಸಿದ್ದನಂತೆ.

Parashurama Jayanti

ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಆರನೇಯ ಅವತಾರವೇ ಪರಶುರಾಮ. ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಭ್ರಷ್ಟ ಮತ್ತು ದಬ್ಬಾಳಿಕೆ ನಡೆಸುವ ಕ್ಷತ್ರಿಯ ಆಡಳಿತಗಾರರನ್ನು ನಿರ್ಮೂಲನೆ ಮಾಡುವ ಮೂಲಕ ವಿಶ್ವದಲ್ಲಿ ಸಮತೋಲನವನ್ನು ಪುನಃಸ್ಥಾಪಿಸಲು ಜನಿಸಿದವರೇ ಪರಶುರಾಮ. ಅವರು ಭಾರ್ಗವ ಕುಲದ ಋಷಿ ಜಮದಗ್ನಿ ಮತ್ತು ರೇಣುಕಾ ದಂಪತಿಯ ಪುತ್ರ. ಸ್ಕಂದ ಪುರಾಣ ಮತ್ತು ಭವಿಷ್ಯ ಪುರಾಣದಂತಹ ಗ್ರಂಥಗಳ ಪ್ರಕಾರ, ಅವರ ಜನನವು ಅಕ್ಷಯ ತೃತೀಯದಂದು ಸಂಜೆಯ ಸಮಯದಲ್ಲಿಆಯಿತು ಎನ್ನಲಾಗಿದೆ.

ಮಹಾಭಾರತದಲ್ಲಿ ಪರಶುರಾಮ:

ಮಹಾಭಾರತದಲ್ಲಿ, ಪರಶುರಾಮನನ್ನು ಅತ್ಯುನ್ನತ ದರ್ಜೆಯ ಗುರು ಎಂದು ಪೂಜಿಸಲಾಗುತ್ತದೆ. ಇವರನ್ನು ಭಾರ್ಗವ ರಾಮ ಎಂದು ಕೂಡಾ ಕರೆಯಲಾಗುತ್ತದೆ . ಅವರು ಮೂವರು ಪೌರಾಣಿಕ ಯೋಧರಿಗೆ ತರಬೇತಿ ನೀಡಿದರು ಎನ್ನುತ್ತದೆ ಕಥೆ ಪುರಾಣ. ಅವರೆಂದರೆ ಭೀಷ್ಮ,ದ್ರೋಣ ಮತ್ತು ಕರ್ಣ.

ಪರಶುರಾಮ ಮತ್ತು ಗಣೇಶ:

ಶೈವ-ವೈಷ್ಣವ ಪುರಾಣದಲ್ಲಿ ಬರುವ ಕಥೆ ಪರಶುರಾಮ ಮತ್ತು ಗಣೇಶನ ನಡುವಿನ ಸಂಬಂಧದ ಬಗ್ಗೆ ಹೇಳುತ್ತದೆ. ಪರಶುರಾಮ ಶಿವನನ್ನು ಭೇಟಿಯಾಗಲು ಕೈಲಾಸ ಪರ್ವತಕ್ಕೆ ತೆರಳಿದಾಗ ಅಲ್ಲಿ ಗಣೇಶನು ಪರಶುರಾಮನನ್ನು ತಡೆಯುತ್ತಾನೆ.ಈ ಸಂದರ್ಭದಲ್ಲಿ ಇಬ್ಬರ ನಡುವೆ ನಡೆಯುವ ಜಗಳದಲ್ಲಿ ಪರಶುರಾಮನು ತನ್ನ ದೈವಿಕ ಕೊಡಲಿಯನ್ನು ಗಣೇಶನ ಮೇಲೆ ಎಸೆಯುತ್ತಾರೆ.ಈ ಸಂದರ್ಭದಲ್ಲಿ ಗಣೇಶನ ಒಂದು ದಂತ ಮುರಿಯಲ್ಪಡುತ್ತದೆ.ಹಾಗಾಗಿಯೇ ಗಣೇಶನನ್ನು ಏಕದಂತ ಎನ್ನುತ್ತಾರೆ ಎನ್ನುವುದು ಇಲ್ಲಿ ಉಲ್ಲೇಖಿಸಿರುವ ಕತೆ.

ಕರಾವಳಿ ಭೂಮಿಯ ಸೃಷ್ಟಿ:

ಇನ್ನು ಕರಾವಳಿ ಭೂಮಿ ಸೃಷ್ಟಿಯಾದ ಕತೆ ಕೂಡಾ ರೋಚಕವಾಗಿದೆ. ಪರಶುರಾಮನು ಕ್ಷತ್ರಿಯರನ್ನು 21 ಬಾರಿ ಸೋಲಿಸಿದ ನಂತರ, ತನ್ನ ಆವೇಶವನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಪಶ್ಚಿಮಘಟ್ಟಗಳಲ್ಲಿ ತಪಸ್ಸು ಮಾಡುತ್ತಾರೆ. ಈ ತಪಸ್ಸಿನ ನಂತರ, ಮಹೇಂದ್ರಗಿರಿಯ ಮೇಲೆ ನಿಂತು ಪರಶುರಾಮ ತನ್ನ ಕೊಡಲಿಯನ್ನು ಅರಬ್ಬಿ ಸಮುದ್ರದತ್ತ ಎಸೆಯುತ್ತಾರೆ.ಸಮುದ್ರ ರಾಜನ ಬಳಿ ಭೂಮಿಯನ್ನು ವಿಸ್ತರಿಸುವಂತೆ ಕೋರುತ್ತಾರೆ. ಸಮುದ್ರ ರಾಜನು ಪರಶುರಾಮನ ಶಕ್ತಿಗೆ ಮೆಚ್ಚಿ ಪರಶುರಾಮನ ಕೊಡಲಿ ಬಿದ್ದ ಸ್ಥಳದವರೆಗೆ ಹಿಂದಕ್ಕೆ ಸರಿಯುತ್ತಾನೆ. ಈ ಮೂಲಕ ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ಅಂದರೆ ಕರಾವಳಿ ಭೂಮಿ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕಾಗಿ ಈ ಪ್ರದೇಶವನ್ನು 'ಪರಶುರಾಮ ಸೃಷ್ಟಿ' ಎಂದು ಕರೆಯಲಾಗುತ್ತದೆ.ಹಾಗಾಗಿ ಗೋವಾ, ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ಈ ದಿನವು ವಿಶೇಷವಾಗಿ ಮಹತ್ವದ್ದಾಗಿದೆ.

ಪರಶುರಾಮ ಜಯಂತಿಯ ಮಹತ್ವ:

ನ್ಯಾಯ, ಶಿಸ್ತು ಮತ್ತು ನೀತಿವಂತ ಶಕ್ತಿಯ ಸಂಕೇತವಾದ ವಿಷ್ಣುವಿನ ಆರನೇ ಅವತಾರದ ಜನನದ ಆಚರಣೆ ಇದಾಗಿದೆ.ರಾಮ ಜಮದಗ್ನಿ, ರಾಮ ಭಾರ್ಗವ ಅಥವಾ ವೀರರಾಮ ಎಂದೂ ಕರೆಯಲ್ಪಡುವ ಭಗವಾನ್ ಪರಶುರಾಮರು ಬ್ರಾಹ್ಮಣ (ವಿದ್ವಾಂಸ) ಮತ್ತು ಕ್ಷತ್ರಿಯ (ಯೋಧ) ಇಬ್ಬರ ಗುಣಗಳನ್ನು ಅಳವಡಿಸಿಕೊಂಡವರು. ವಿಶೇಷವಾಗಿ ಚಿತ್ಪಾವನ ಬ್ರಾಹ್ಮಣರು, ಭಂಡಾರಿಗಳು ಮತ್ತು ಕೊಂಕಣಿ ಸಾರಸ್ವತ ಸಮುದಾಯಗಳಿಂದ ಇವರು ಪೂಜಿಸಲ್ಪಡುತ್ತಾನೆ.
ಅಕ್ಷಯ ತೃತೀಯ ಕೂಡಾ ಇದೇ ದಿನ ಬರುವುದರಿಂದ ಈ ದಿನ ಮಾಡುವ ಪೂಜೆ, ದಾನ ಧರ್ಮ ಮತ್ತು ಹೊಸ ಕೆಲಸಗಳ ಆರಂಭಕ್ಕೆ ದುಪ್ಪಟ್ಟು ಫಲ ಸಿಗುತ್ತದೆ ಎನ್ನಲಾಗುತ್ತದೆ.

ಪರಶುರಾಮ ಜಯಂತಿ ಆಚರಣೆಯ ಬಗೆ ಹೇಗೆ?:

* ಭಕ್ತರು ಈ ದಿನ ಬೇರೆ ಬೇರೆ ರೀತಿಯ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾರೆ. ವಿಶೇಷ ಪ್ರಾರ್ಥನೆ ಮತ್ತು ಸಾಮೂಹಿಕ ಪೂಜಾ ಕಾರ್ಯಗಳು ಕೂಡಾ ನಡೆಯುತ್ತವೆ.

* ಪರಶುರಾಮ ಜಯಂತಿಯ ಒಂದು ದಿನದ ಮೊದಲೇ ಭಕ್ತರು ಉಪವಾಸ ವೃತ ಕೈಗೊಳ್ಳುತ್ತಾರೆ. ಉನ್ನತ ಗುರಿಗಳನ್ನು ಸಾಧಿಸುವ ಉದ್ದೇಶದಿಂದ ಈ ದಿನ ಉಪವಾಸ ನಡೆಸಲಾಗುತ್ತದೆ.

* ಪರಶುರಾಮ ದೇವರ ವಿಗ್ರಹ ಅಥವಾ ಮೂರ್ತಿಗೆ ಹೂವು-ಹಣ್ಳು, ತುಳಸಿ ಮತ್ತು ಧೂಪವನ್ನು ಅರ್ಪಿಸಿ ಪೂಜಿಸಲಾಗುವುದು.

* ಶಕ್ತಿ, ಬುದ್ಧಿವಂತಿಕೆ ಮತ್ತು ರಕ್ಷಣೆಗಾಗಿ ಪರಶುರಾಮ ಗಾಯತ್ರಿ ಮಂತ್ರದ ಪಠಣ.

* ಪರಶುರಾಮ ಸ್ತೋತ್ರದ ಪಠಣ ಮತ್ತು ಭಾಗವತ ಪುರಾಣ ಮತ್ತು ಕಲ್ಕಿ ಪುರಾಣದ ಭಾಗಗಳ ಪಠಣ.

* ಪರಶುರಾಮ ಜಯಂತಿಯಂದು ಭಕ್ತರು ವಿಷ್ಣು ಸಹಸ್ರನಾಮ ಕೂಡಾ ಪಠಿಸುತ್ತಾರೆ. ಭಕ್ತರು ರಾತ್ರಿಯಿಡೀ ಜಾಗರಣೆ ಇದ್ದು ಭಕ್ತಿಗೀತೆಗಳನ್ನು ಹಾಡುತ್ತಾರೆ.ವಿಷ್ಣು ಮಂತ್ರಗಳನ್ನು ಪಠಿಸುತ್ತಾರೆ.

* ಅನೇಕರು ಪರಶುರಾಮ ಅಥವಾ ವಿಷ್ಣುವಿಗೆ ಅರ್ಪಿತವಾದ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಗೋವಾ, ಕೇರಳ ಮತ್ತು ಕೊಂಕಣ ಪ್ರದೇಶಗಳಲ್ಲಿ ಪರಶುರಾಮನಿಗೆ ಸಂಬಂಧಪಟ್ಟ ದೇವಾಲಯಗಳಿವೆ.

* ಹೊಸ ಕೆಲಸದ ಆರಂಭಕ್ಕೆ, ಚಿನ್ನ ಖರೀದಿಸಲು ಅಥವಾ ಆಸ್ತಿ ಖರೀದಿಗೆ ಈ ದಿನ ಸೂಕ್ತ ಎನ್ನಲಾಗಿದೆ.

* ಈ ದಿನದಂದು ಪರಶುರಾಮ ಭಕ್ತರು ಬಡವರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡುತ್ತಾರೆ.

* ವಿಷ್ಣುವಿಗೆ ತುಳಸಿ ಎಲೆಗಳು, ಹೂವುಗಳು, ಕುಂಕುಮ, ಚಂದನದ ಜೊತೆಗೆ ನೈವೇದ್ಯ ಅರ್ಪಿಸಲಾಗುತ್ತದೆ.

(ಬರಹ : ರಂಜಿತಾ ಆರ್‌.ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+