ಗಡಿ ಜಿಲ್ಲೆಯಲ್ಲಿ "ಹೊನ್ನೇರು" ಸಂಭ್ರಮ, ಏನಿದು? ಯುಗಾದಿಗೂ ಇದಕ್ಕೂ ಏನು ಸಂಬಂಧ?-ಮಾಹಿತಿ
ಚಾಮರಾಜನಗರ, ಏಪ್ರಿಲ್, 09: ಇಂದು ಉಳುಮೆ ಮಾಡಲು ನೇಗಿಲು ಬಿಟ್ಟು ಟ್ರ್ಯಾಕ್ಟರ್‌ಗಳನ್ನು ಹೆಚ್ಚು ಜನರು ಅವಲಂಬಿಸಿದ್ದಾರೆ. ಇವತ್ತಿನ ದಿನಗಳಲ್ಲಿ ಯಾರ ಮನೆಯಲ್ಲೂ ಎತ್ತುಗಳು ಮತ್ತು ಎತ್ತಿನ ಗಾಡಿಗಳು ಇದ್ದಿಯೋ ಅವರು ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಇಂದು ಗಡಿಜಿಲ್ಲೆ ಚಾಮರಾಜನಗರದ ಬಹುಪಾಲು ಹಳ್ಳಿಗಳಲ್ಲಿ ಯುಗಾದಿ ಹಬ್ಬವನ್ನು ಹೊಸ ವರ್ಷದ ಜೊತೆಗೆ ಕೃಷಿ ಚಟುವಟಿಕೆಗಳನ್ನು ಆರಂಭ ಮಾಡುತ್ತಾರೆ. ಈ ಮೂಲಕ 'ಹೊನ್ನೇರು' ಕಟ್ಟುವ ಸಂಪ್ರದಾಯವನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ.
ಇಂದು ಕೂಡ ಯುಗಾದಿ ಹಬ್ಬದ ದಿನ ಹೊನ್ನೇರಿನ ಸಂಭ್ರಮ ಜಿಲ್ಲೆಯಾದ್ಯಂತ ಕಾಣಿಸಿಕೊಂಡಿದೆ. ಯುಗಾದಿ ಬಂತೆಂದರೆ ರೈತರ ಕೃಷಿ ಚಟುವಟಿಕೆಗಳಿಗೆ ಜೀವ ಬಂತು ಎಂದೇ ಅರ್ಥ. ಹೀಗಾಗಿಯೇ ಚಾಮರಾಜನಗರ ಜಿಲ್ಲೆಯ ದೊಡ್ಡರಾಯ ಪೇಟೆ, ಹಂಗಳ, ಹೆಬ್ಬಸೂರು, ಜ್ಯೋತಿಗೌಡನಪುರ, ಹೊನ್ನೂರು, ಹನೂರು ತಾಲ್ಲೂಕಿನ ರಾಮಾಪುರ, ಪೊನ್ನಾಚಿ ಮೊದಲಾದ ಗ್ರಾಮಗಳಲ್ಲಿ ಹೊನ್ನೇರು ಕಟ್ಟುವ ಸಂಪ್ರದಾಯ ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ.

ಏನಿದು ಹೊನ್ನೇರು?: ಯುಗಾದಿ ಶುರುವಾಗುತ್ತಿದ್ದಂತೆ ಮಳೆ ಬರಲಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಎತ್ತುಗಳು ಮತ್ತು ಗಾಡಿಗೆ ಹೊಂಬಾಳೆ ಕಟ್ಟಿ ಪೂಜೆ ಸಲ್ಲಿಸಿ ಗೊಬ್ಬರವನ್ನು ಜಮೀನುಗಳಿಗೆ ಸಿಂಪಡಿಸುವ ಸಂಪ್ರದಾಯಕ್ಕೆ ಹೊನ್ನೇರು ಎಂದು ಕರೆಯುತ್ತಾರೆ. 'ಹೊನ್ನೇರು' ಅನ್ನದಾತರ ಚಿನ್ನದ ತೇರಾಗಿದೆ.
ಚಾಮರಾಜನಗರ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನೂತನ ವರ್ಷದ ಮೊದಲ ದಿನ ರೈತರು ಆ ವರ್ಷದ ಕೃಷಿ ಚಟುವಟಿಕೆ ವಿಧಿವತ್ತಾಗಿ ಅಡಿಯಿಡುವ ಸಂಪ್ರದಾಯ ತಲ-ತಲಾಂತರದಿಂದ ನಡೆದುಕೊಂಡು ಬಂದಿದ್ದು, ಇಂದಿಗೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಈ ವಿಶೇಷ ಆಚರಣೆ ಜೀವಂತವಾಗಿದೆ.
ಎತ್ತುಗಳಿಗೆ ಅಲಂಕಾರ: ಹೊನ್ನೇರಿನ ವಿಶೇಷತೆ ಎಂದರೆ ಸೂರ್ಯೋದಯಕ್ಕೂ ಮುನ್ನ ರೈತರು ತಮ್ಮ ಎತ್ತುಗಳನ್ನು ತೊಳೆಯುತ್ತಾರೆ. ಬಳಿಕ ಎತ್ತುಗಳ ಕೊಂಬುಗಳಿಗೆ ಹೊಂಬಾಳೆ, ಕೊರಳಿಗೆ ಬಿಳಿಗಣಗಲೆ ಹೂವು, ಮಂಡೆ ಹುರಿ ಕಟ್ಟಿ ಅಲಂಕರಿಸುತ್ತಾರೆ.
ಎತ್ತಿನ ಗಾಡಿಗಳಿಗೂ ಸಿಂಗಾರ: ಎತ್ತಿನ ಗಾಡಿಗಳನ್ನು ಸಹ ಬಣ್ಣಗಳಿಂದ ಶೃಂಗರಿಸಿ, ಮಾವಿನ ಎಲೆ, ಬಾಳೆ ಕಂದು, ಹೊಂಬಾಳೆಗಳನ್ನು ಕಟ್ಟಿ ಶೃಂಗರಿಸಿದ ಎತ್ತಿನ ಗಾಡಿಗಳಿಗೆ ಸಾಂಕೇತಿಕವಾಗಿ ಒಂದಿಷ್ಟು ಕೊಟ್ಟಿಗೆ ಗೊಬ್ಬರ ತುಂಬುತ್ತಾರೆ. ಬಳಿಕ ನೊಗ ಹೂಡಿದ ಎತ್ತುಗಳು ಹಾಗೂ ಎತ್ತಿನ ಗಾಡಿಗಳನ್ನು ಮಂಗಳವಾದ್ಯಗಳೊಂದಿಗೆ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ.
ಹೊನ್ನೇರುಗಳ ಮೆರವಣಿಗೆ ಸಾಗುತ್ತಿದ್ದಾಗ ಮುತ್ತೈದೆಯರು ಹೊನ್ನೇರಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ರೈತರು ತಮ್ಮ ಜಮೀನುಗಳಲ್ಲಿ ಗೊಬ್ಬರ ಸುರಿದು, ಸಾಂಕೇತಿಕವಾಗಿ ಉಳುಮೆ ಮಾಡಿ ಕೃಷಿ ಚಟುವಟಿಕೆಗಳ ಆರಂಭಕ್ಕೆ ಮುನ್ನುಡಿ ಬರೆಯುತ್ತಾರೆ.
ಹಬ್ಬಕ್ಕೆ ಭೂರಿ ಭೋಜನ: ಗೊಬ್ಬರ ಸಿಂಪಡಿಸಿದ ಬಳಿಕ ಮನೆಗೆ ಹಿಂತಿರುಗುವ ರೈತರು ಮನೆಯಲ್ಲಿ ಇಡ್ಲಿ, ಹೋಳಿಗೆ ಹಾಗೂ ಪಾಯಸದ ಭೋಜನ ಸವಿದು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಹೊನ್ನೇರು ನಿಜಕ್ಕೂ ಅನ್ನದಾತನ ರಥವೇ ಆಗಿದ್ದು, ಇಡೀ ಕುಟುಂಬದವರು ಹೊಸ ಬಟ್ಟೆ ಧರಿಸಿ ಚಿಣ್ಣರನ್ನು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾರೆ.
ರೈತನ ಅವಿಭಾಜ್ಯ ಅಂಗವಾದ ಜೋಡೆತ್ತಿಗೆ ಇಂದು ವಿಶೇಷ ಸ್ಥಾನ ಸಿಗಲಿದ್ದು, ಅದಕ್ಕೆ ಮಕ್ಕಳ ಕೈಯಿಂದ ಪೂಜೆ ಸಲ್ಲಿಸುವುದು ವಿಶೇಷ. ವರ್ಷದ ಮೊದಲ ದಿನವಾದ ಇಂದು ಜಿಲ್ಲೆಯ ರೈತರು ವಿಧಿವತ್ತಾಗಿ ಕೃಷಿಗೆ ಅಡ್ಡಿಯಿಟ್ಟಿದ್ದಾರೆ. ಈ ಮೂಲಕ ಹೊನ್ನೇರು ರೈತರ ಯುಗಾದಿ ಸಂಭ್ರಮವನ್ನು ಹೆಚ್ಚಿಸಿದೆ.












Click it and Unblock the Notifications