ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬಗಳಿಗೆ ಮುನ್ನುಡಿ, ನಿಸರ್ಗದ ಮರುಹುಟ್ಟು ಈ ಯುಗಾದಿ

By ಬಿ ಎಂ ಲವಕುಮಾರ್
|
Google Oneindia Kannada News

ಯುಗಾದಿ ಬಂತೆಂದರೆ ಸಾಕು ಪ್ರಕೃತಿಯಲ್ಲೊಂದು ಹೊಸ ಪುಳಕ. ಗಿಡ ಮರಗಳು ಚಿಗುರಿ ಹಸಿರೆಲೆಗಳಿಂದ ಕಂಗೊಳಿಸುತ್ತಿದ್ದರೆ, ಸುಡು ಬಿಸಿಲ ನಡುವೆಯೂ ಆಗಾಗ್ಗೆ ಬೀಸುವ ತಂಗಾಳಿ ಮನಕ್ಕೆ ಮುದನೀಡುತ್ತದೆ. ನಿಸರ್ಗದ ಮಡಿಲಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅರಳಿ ನಿಂತು ಸುವಾಸನೆ ಬೀರುವ ಕುಸುಮಗಳು... ಅವುಗಳ ಮೇಲೆ ಹಾರಾಡಿ ಮಕರಂದ ಹೀರುವ ಜೇನು ನೊಣಗಳ ಝೇಂಕಾರ ಎಲ್ಲೆಡೆ ಕಂಡು ಬರುತ್ತದೆ.

ಹಾಗೆನೋಡಿದರೆ ಯುಗಾದಿ ಎನ್ನುವುದು ನಿಸರ್ಗಕ್ಕೊಂದು ಮರುಹುಟ್ಟು ಅಷ್ಟೇ ಅಲ್ಲ ಮುಂದೆ ಬರಲಿರುವ ಎಲ್ಲಾ ಹಬ್ಬಗಳಿಗೂ ಇದು ಮುನ್ನುಡಿ ಎಂದರೂ ತಪ್ಪಾಗಲಾರದು.[ಚಿತ್ರಗಳು: ಶಂಭು ಹುಬ್ಬಳ್ಳಿ][ಕನ್ಯಾ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

yugadi

ಪಾಶ್ಚಿಮಾತ್ಯರು ಜನವರಿ 1ನ್ನು ಹೊಸವರ್ಷವಾಗಿ ಆಚರಿಸಿದರೆ, ಭಾರತೀಯರು ಯುಗಾದಿಯನ್ನು ಹೊಸವರ್ಷವನ್ನಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ವಿಕ್ರಮ ಶಕೆಯ ಮೊದಲ ದಿನವಾದ ಕಾರ್ತಿಕ ಶುದ್ಧ ಪಾಡ್ಯವನ್ನು ಉತ್ತರ ಭಾರತದಲ್ಲಿ ಯುಗಾದಿ ಹಬ್ಬವನ್ನಾಗಿ ಆಚರಿಸಿಕೊಂಡು ಬರುತ್ತಿರುವುದನ್ನು ನಾವು ಕಾಣಬಹುದು. ಯುಗಾದಿ ಆಚರಣೆಯಲ್ಲಿ ಮೂರು ರೀತಿಯ ಲೆಕ್ಕಾಚಾರ ಜ್ಯೋತಿಷ್ಯ ಶಾಸ್ತ್ರದಲ್ಲಿದ್ದು, ಅವುಗಳೆಂದರೆ, ಬಾರ್ಹಸ್ಪತ್ಯಮಾನ, ಚಾಂದ್ರಮಾನ, ಸೌರಮಾನವಾಗಿದೆ.

ಭಾರತದಲ್ಲಿ ಯುಗಾದಿ ಆಚರಣೆಯೂ ಕೂಡ ವಿಭಿನ್ನವಾಗಿದೆ. ಉತ್ತರ ಭಾರತದಲ್ಲಿ ಬಾರ್ಹಸ್ಪತ್ಯಮಾನದಲ್ಲಿ ಯುಗಾದಿಯನ್ನು ಆಚರಿಸಿದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿಯನ್ನು ಆಚರಿಸುವ ಪದ್ಧತಿಯಿದೆ. ಈ ಎರಡು ಯುಗಾದಿ ಆಚರಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ಚಂದ್ರ ಮತ್ತೊಂದು ಸೂರ್ಯನನ್ನು ಅವಲಂಭಿಸಿರುವುದು ಸ್ಪಷ್ಟವಾಗುತ್ತದೆ.

ಚಾಂದ್ರಮಾನ ಯುಗಾದಿ ಕುರಿತಂತೆ ಹೇಳುವುದಾದರೆ, ಚಂದ್ರನ ಚಲನೆಯನ್ನು ಆಧರಿಸಿ ಸಾಮಾನ್ಯವಾಗಿ ಅಮಾವಾಸ್ಯೆ-ಹುಣ್ಣಿಮೆಯನ್ನು ಮತ್ತು ಇವುಗಳ ಆಧಾರದಲ್ಲಿ ತಿಂಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಪದ್ಧತಿಯೇ ಚಾಂದ್ರಮಾನವಾಗಿದೆ. ಈ ಪದ್ಧತಿಯಲ್ಲಿ ಚಂದ್ರನ ಚಲನೆಯಲ್ಲಿ ವ್ಯತ್ಯಾಸವಾಗುವುದರಿಂದ ಚಾಂದ್ರಮಾನ ಯುಗಾದಿ ಕೂಡ ನಿರ್ಧಿಷ್ಟ ದಿನಾಂಕದಲ್ಲಿ ಬಾರದಿರುವುದನ್ನು ನಾವು ಕಾಣಬಹುದಾಗಿದೆ.

yugadi

ಸೌರಮಾನ ಯುಗಾದಿಯನ್ನು ಮೇಷ ರಾಶಿಗೆ ಸೂರ್ಯ ಪ್ರವೇಶಿಸುವ ದಿನದಂದು ಆಚರಿಸಲಾಗುತ್ತದೆ. ಭೂಮಿಯ ಚಲನೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿರುವುದರಿಂದ ಸಾಮಾನ್ಯವಾಗಿ ನಿಗದಿತ ಸಮಯದಲ್ಲಿ (ಏಪ್ರಿಲ್ 14) ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಪ್ರತಿವರ್ಷದ ಚೈತ್ರಮಾಸದಲ್ಲಿ ಬರುವ ಮೊದಲ ದಿನವನ್ನು ಸಂವತ್ಸರಾದಿ ಪಾಡ್ಯಮಿ ಎಂದು ಪರಿಗಣಿಸಿ ಯುಗಾದಿಯನ್ನು ವರ್ಷದ ಮೊದಲ ಹಬ್ಬವಾಗಿ ಚೈತ್ರಮಾಸ ಶುದ್ಧಪಾಡ್ಯಮಿಯಂದು ಆಚರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕದ ಕೆಲವೆಡೆ ಸೌರಮಾನ ಯುಗಾದಿಯನ್ನು ಆಚರಿಸುವುದು ಕೂಡ ಕಂಡು ಬರುತ್ತದೆ.

ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುವುದನ್ನು ನಾವು ಕಾಣಬಹುದು.[ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಲು 6 ಸರಳ ಸೂತ್ರಗಳು]

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವರ್ಷದಲ್ಲಿ ಬರುವ ಮೂರೂವರೆ ದಿನಗಳ ಶುಭಗಳಿಗೆ ಅತ್ಯಂತ ಶ್ರೇಷ್ಠಾವಾದದು ಎಂದು ಹೇಳಲಾಗಿದೆ. ಇದರಲ್ಲಿ ಯುಗಾದಿಯೂ ಒಂದಾಗಿದ್ದು, ಯುಗಾದಿ ದಿನದಂದು ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬ ನಂಬಿಕೆ ಜನವಲಯದಲ್ಲಿದೆ. ಹಾಗಾಗಿ ಯುಗಾದಿ ಹಬ್ಬದ ದಿನದಂದು ಹೊಸ ಕಾರ್ಯ ಚಟುವಟಿಕೆ, ಹೊಸ ಪದಾರ್ಥಗಳ ಖರೀದಿ ಸೇರಿದಂತೆ ಹಲವು ಕೆಲಸ ಕಾರ್ಯಗಳನ್ನು ಆರಂಭಿಸುವುದನ್ನು ನಾವು ಕಾಣಬಹುದು.

ಮಲ್ಲಿನಾಥನೆಂಬ 14ನೇ ತೀರ್ಥಂಕರ ಹುಟ್ಟಿದ್ದು ಹಾಗೂ ಆದಿ ತೀರ್ಥಂಕರನ ಮಗ ಭರತ ಚಕ್ರವರ್ತಿ ದಿಗ್ವಿಜಯ ಸಾಧಿಸಿದ್ದು ಯಗಾದಿಯ ದಿನವಾದ್ದರಿಂದ ಯುಗಾದಿ ಹಬ್ಬವು ಜೈನರಿಗೂ ಮಹತ್ವದ ದಿನವಾಗಿದೆ ಎಂದರೆ ತಪ್ಪಾಗಲಾರದು.[ಸಿಂಹ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

ಯುಗಾದಿ ಆಚರಣೆ ವೇದಗಳ ಕಾಲದಿಂದಲೂ ನಡೆದು ಬಂದಿದ್ದು, ಈ ಕುರಿತಂತೆ ಅಥರ್ವಣ ವೇದ, ಶತಪಥ ಬ್ರಾಹ್ಮಣ, ಧರ್ಮಸಿಂಧು, ನಿರ್ಣಯ ಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಯುಗಾದಿಯ ಬಗ್ಗೆ ಉಲ್ಲೇಖವಿದೆ.

ಹೇಮಾದ್ರಿ ಪಂಡಿತನ "ಚತುರ್ವರ್ಗ ಚಿಂತಾಮಣ" ಎಂಬ ಪುರಾಣ ಗ್ರಂಥದಲ್ಲಿ ಬ್ರಹ್ಮ ದೇವನು ಚೈತ್ರಮಾಸದ ಶುಕ್ಲಪಕ್ಷದ ಮೊದಲನೆಯ ದಿನದ ಸೂರ್ಯೋದಯ ಕಾಲ ಅರ್ಥಾತ್ ಯುಗಾದಿಯಂದು ಭೂಮಂಡಲವನ್ನು ಸೃಷ್ಟಿಸಿದ್ದು, ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ ಕಾಲಗಣನೆ ಆರಂಭಿಸಿದನೆಂದು ಉಲ್ಲೇಖಿಸಲಾಗಿದೆ.

ಶ್ರೀರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದು ರಾಮರಾಜ್ಯವಾಳಲು ಪ್ರಾರಂಭಿಸಿದ್ದು, ಶಾಲಿವಾಹನ ಶಕೆ ಆರಂಭವಾದದ್ದು ಕೂಡ ಯುಗಾದಿ ದಿನವೇ ಎಂದು ಹೇಳಲಾಗುತ್ತಿದೆ. ಯುಗಾದಿ ಹಬ್ಬದ ಆಚರಣೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಿಭಿನ್ನವಾಗಿರುವುದನ್ನು ನಾವು ಕಾಣಬಹುದಾದರೂ ಸಾಮಾನ್ಯವಾಗಿ ಹಬ್ಬದ ದಿನದಂದು ಸೂರ್ಯೋದಯಕ್ಕೂ ಮುನ್ನ ಅಂದರೆ ಮುಂಜಾನೆ ಎದ್ದು ಮಂಗಳ ಸ್ನಾನ ಮಾಡಿ ಶ್ರೀರಾಮನನ್ನು ಸ್ಮರಣೆ ಮಾಡಿ ಹೊಸಬಟ್ಟೆ ತೊಟ್ಟು ಮನೆಯನ್ನೆಲ್ಲ ಮಾವು-ಬೇವು ಎಲೆಗಳ ತೋರಣದಿಂದ ಸಿಂಗರಿಸಿ ಹೊಸವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ.

ಈ ಸಂದರ್ಭ ಬಾವುಟ ಹಾರಿಸುವುದು, ಬೇವು-ಬೆಲ್ಲ ತಿನ್ನುವುದು, ಪಂಚಾಂಗ ಶ್ರವಣ, ವಸಂತ ನವರಾತ್ರಿ ಆರಂಭ ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ, ಕಾಲಪುರುಷನ ಮತ್ತು ವರ್ಷಾಧಿಪತಿಯ ಆರಾಧನೆಯೂ ನಡೆಯುತ್ತದೆ.

ಯುಗಾದಿಯಲ್ಲಿ ಬೇವು-ಬೆಲ್ಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಹಬ್ಬದ ದಿನದಂದು ಹೋಳಿಗೆ, ಪಾಯಸ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಮಾಡಿದರೂ ಬೇವು-ಬೆಲ್ಲ ಸೇವಿಸುವ ಮೂಲಕ ಜೀವನದಲ್ಲಿ ಬರುವ ಕಷ್ಟ-ಸುಖ ಎರಡನ್ನೂ ನಾವು ಸಮಾನವಾಗಿ ಸ್ವೀಕರಿಸಬೇಕು ಎಂಬುವುದನ್ನು ಸಾರುತ್ತಾ ಬರಲಾಗುತ್ತಿದೆ. ಹಾಗಾಗಿ ಯುಗಾದಿಯಂದು ಬೇವು-ಬೆಲ್ಲ ಸೇವಿಸುವುದು ಎಂದರೆ ಕಷ್ಟಸುಖಗಳನ್ನು ಸಮಾನವಾಗಿ ಎದುರಿಸಿ ಬದುಕುವುದು ಎಂದರ್ಥವಾಗಿದೆ. ಬದುಕಿನಲ್ಲಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಬದುಕು ಎಂಬುವುದನ್ನು ಸಾರುವ ಸಂಕೇತವಾಗಿ ಬೇವು-ಬೆಲ್ಲವನ್ನು ಯುಗಾದಿ ಹಬ್ಬದಂದು ಸೇವಿಸಲಾಗುತ್ತಿದೆ.

ಯುಗಾದಿ ಹಬ್ಬದ ಮಾರನೆಯ ದಿನವನ್ನು 'ವರ್ಷ ತೊಡಕು' ಎಂದು ಆಚರಿಸಲಾಗುತ್ತದೆ. 'ವರ್ಷ ತೊಡಕು' ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕುಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆಯನ್ನು ನೀಡುವುದು ಕಂಡು ಬರುತ್ತದೆ.

ಈ ದಿನ ವಿವಿಧ ಬಗೆಯ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳು, ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸುವ ಮೂಲಕ ಮನರಂಜನೆಯನ್ನು ಪಡೆಯುತ್ತಾರೆ. ಅಂದು ಯಾವುದೇ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದರೆ ಅದನ್ನು ವರ್ಷಪೂರ್ತಿ ಮಾಡುತ್ತಾನೆ ಹಾಗೂ ಅಂದು ದೊರೆತ ಸಂಪತ್ತು ವರ್ಷ ಪೂರ್ತಿ ದೊರೆಯುತ್ತಲೇ ಇರುತ್ತದೆ ಎಂಬ ನಂಬಿಕೆ ಜನವಲಯದಲ್ಲಿದೆ.

ಒಂದೆಡೆ ಮಗಳು ಅಳಿಯನನ್ನು ಹಬ್ಬಕ್ಕೆ ಆಹ್ವಾನಿಸಿ ಸತ್ಕರಿಸಿದರೆ, ಮತ್ತೊಂದೆಡೆ ಅಕ್ಕ ತಂಗಿಯರು, ಅಣ್ಣ ತಮ್ಮಂದಿರನ್ನು ತಮ್ಮ ಮನೆಗಳಿಗೆ ಬರಮಾಡಿಕೊಂಡು ಹಬ್ಬದ ಅಡುಗೆ ಬಡಿಸಿ ಸತ್ಕರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಇತ್ತೀಚೆಗಿನ ಯಾಂತ್ರಿಕ ಯುಗದಲ್ಲಿ ಯುಗಾದಿ ಹಬ್ಬದ ಆಚರಣೆಗಳಲ್ಲಿ ಒಂದಷ್ಟು ವ್ಯತ್ಯಾಸಗಳು ಆಗಿರಬಹುದಾದರೂ ಹಬ್ಬದ ರಂಗು ಎಂದಿಗೂ ಕಳೆಗುಂದುವುದಿಲ್ಲ ಹಾಗಾಗಿಯೇ ಎಷ್ಟೇ ಯುಗ ಕಳೆದರೂ ಯುಗಾದಿ ಮರಳಿ ಬರುತ್ತಲೇ ಇರುತ್ತದೆ.

English summary
Wish you very happy ugadi for all. The ugadi festival marks the new year day for people of South Indian. The eating of a specific mixture Bevu-Bella symbolizes the fact that, life is a mixture of different experiences sadness and happiness. Happy New year..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X