• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡಕೂಟದ ಯುಗಾದಿ ಸಮಾರಂಭಕ್ಕೆ ನ್ಯೂಜಿಲೆಂಡ್‌ ಪ್ರಧಾನಿ!

By Staff
|
  • ಪ್ರಕಾಶ್‌ ರಾಜರಾವ್‌, ಆಕ್ಲೆಂಡ್‌, ನ್ಯೂಜಿಲೆಂಡ್‌.
ಕನ್ನಡನಾಡಿನಲ್ಲಿ ಚಳಿಗಾಲ ಮುಗಿದು ಹೊಸ ಚಿಗುರಿನ ಹರುಷ ತರುವ ವಸಂತಕಾಲದಲ್ಲಿ ಬರುತ್ತದೆ ಯುಗಾದಿ. ಆದರೆ, ನಮ್ಮ ನ್ಯೂಜಿಲೆಂಡಿನಲ್ಲಿ ಎಲ್ಲರೂ ಬಯಸುವ ಬೇಸಿಗೆ ಮುಗಿದು ಕೊರೆಯುವ ಚಳಿಗಾಲದಲ್ಲಿ ಬರುತ್ತದೆ. ಎಲ್ಲಿದ್ದರೇನು, ಹೇಗಿದ್ದರೇನು, ಬೇಂದ್ರೆ ಹೇಳಿದಂತೆ, ಯುಗಾದಿ ಮಾತ್ರ ಯಾವಾಗಲೂ ಹೊಸತು ಹೊಸತು ತರುತ್ತದೆ.

ಭಾನುವಾರ(ಏ.23) ಸಂಜೆ ಆಕ್ಲೆಂಡ್‌ ನಗರದ ಮೌಂಟ್‌ ಈಡನ್‌ ಯುದ್ಧ ಸ್ಮಾರಕ ಭವನದಲ್ಲಿ ನ್ಯೂಜಿಲೆಂಡ್‌ ಕನ್ನಡ ಕೂಟ ಆಯೋಜಿಸಿದ್ದ ಯುಗಾದಿ ಕಾರ್ಯಕ್ರಮಕ್ಕೆ ಈ ದೇಶದ ಪ್ರಧಾನ ಮಂತ್ರಿ ಹೆಲೆನ್‌ಕ್ಲಾರ್ಕ್‌ ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ನಿಜಕ್ಕೂ ಎಲ್ಲರಿಗೂ ಹೊಸ ಹರುಷ ತಂದಿತ್ತು. ಈ ಸಿಹಿಯೊಂದಿಗೆ ದಿ.ಡಾ.ರಾಜ್‌ ಕುಮಾರ್‌ ಅವರ ನಿಧನದ ಶೋಕದಿಂದುಂಟಾದ ಕಹಿ ಬೆರೆತಿತ್ತು.

Helenclarkಸಾಂಪ್ರದಾಯಿಕ ಪೂಜೆ ಹಾಗೂ ಪ್ರಾರ್ಥನೆಯ ನಂತರ , ಸಭೆ ಡಾ. ರಾಜ್‌ಕುಮಾರ್‌ ಅವರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಿತು. ವಾಸವಿಶೆಟ್ಟಿ ಅವರು ಕೂಟದ ಪರವಾಗಿ ಸಂತಾಪಸೂಚಕ ಸಂದೇಶವನ್ನು ಓದಿದರು. ಪ್ರಕಾಶ್‌ ರಾಜರಾವ್‌ ಅವರು ಡಾ.ರಾಜ್‌ ಕುಮಾರ್‌ ಅವರ ದಿವ್ಯ ಸ್ಮೃತಿಗಾಗಿ ರಚಿಸಿದ ಕವನವನ್ನು ಓದಿದರು.

ಕೂಟದ ಕಾರ್ಯದರ್ಶಿ ಸುಜಾತ ದತ್ತಾತ್ರೇಯ ಅವರು ಎಲ್ಲರನ್ನು ಸ್ವಾಗತಿಸಿದರು. ಅಧ್ಯಕ್ಷ ಡಾ.ಲಿಂಗಪ್ಪ ಕಲ್ಬುರ್ಗಿ ಅವರು ಮುಖ್ಯ ಅತಿಥಿಗಳಾದ ಹೆಲೆನ್‌ ಕ್ಲಾರ್ಕ್‌ ಹಾಗೂ ಸಮಾರಂಭಕ್ಕೆ ಆಗಮಿಸಿದ್ದ ಅನೇಕ ಭಾರತೀಯ ಸಂಘ ಸಂಸ್ಥೆಗಳ ಗಣ್ಯರು, ಸ್ಥಳೀಯ ಸಾಂಸ್ಕೃತಿಕ ಸಮುದಾಯಗಳ ಮುಖ್ಯಸ್ಥರು, ಪತ್ರಿಕೆಯವರು ಎಲ್ಲರನ್ನು ವಂದಿಸಿ ಮಾತನಾಡುತ್ತಾ ಕಳೆದ ಹನ್ನೊಂದು ವರ್ಷದ ಆವಧಿಯಲ್ಲಿ ಕನ್ನಡ ಕೂಟದ ಸಾಧನೆಗಳು ಮತ್ತು ಅಶೋತ್ತರಗಳ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ನೀಡಿದರು.

ಕೂಟದ ಯಶಸ್ಸಿಗಾಗಿ ಸೇವೆ ಸಲ್ಲಿಸಿದ ಎಲ್ಲರನ್ನು ಸ್ಮರಿಸಿದರು. ಮೊದಲ ಹತ್ತು ವರುಷಗಳ ಕಾಲ ಕನ್ನಡ ಕೂಟದ ಅಧ್ಯಕ್ಷರಾಗಿದ್ದು, ಪ್ರಸ್ತುತ ಸಲಹೆಗಾರರಾಗಿರುವ ಎಲ್ಲರ ಪ್ರೀತಿಯ ಅಂಕಲ್‌ ಪ್ರೊ.ಎಂ.ಕೆ. ವಾಮನಮೂರ್ತಿ ಅವರ ಅನನ್ಯ ಕೊಡುಗೆಯನ್ನು ಶ್ಲಾಘಿಸಿದರು. ಹಿಂದೆ ಹತ್ತು ವರುಷಗಳಕಾಲ ಕೂಟದ ಕಾರ್ಯದರ್ಶಿ ಸ್ಥಾನದಲ್ಲಿದ್ದು, ಈಗ ಒಂದು ವರುಷದಿಂದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿತ್ತಿರುವ ಡಾ.ಲಿಂಗಪ್ಪ ಕಲ್ಬುರ್ಗಿಯವರ ಸೇವೆಯನ್ನು ಸಹ ಇಲ್ಲಿ ಕೃತಜ್ಞತಾಪೂರ್ವಕವಾಗಿ ಸ್ಮರಿಸ ಬೇಕಾಗಿದೆ.

ಹೆಲೆನ್‌ ಕ್ಲಾರ್ಕ್‌, ನ್ಯೂಜಿಲೆಂಡಿನ ಜನಪ್ರಿಯ ಪ್ರಧಾನ ಮಂತ್ರಿ. ಈ ದೇಶದ ಎಲ್ಲ ವರ್ಗದವರ ಪ್ರೀತಿ ಗೌರವಗಳಿಗೆ ಪಾತ್ರರಾದ ಈ ಹಸನ್ಮುಖಿ ಮಹಿಳೆ ಸತತ ಮೂರನೇ ಆವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುತ್ತಾರೆ. ಸುಮಾರು 18 ತಿಂಗಳ ಹಿಂದೆ ಬೆಂಗಳೂರಿಗೆ ಭೇಟಿ ನೀಡಿದ ನಂತರ ಕರ್ನಾಟಕದ ಪ್ರಗತಿಯ ಬಗ್ಗೆ ಅದರಲ್ಲೂ ಮಾಹಿತಿ ತಂತ್ರ ಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕನ್ನಡಿಗರು ಮಾಡಿರುವ ಸಾಧನೆಯ ಬಗ್ಗೆ ಅಪಾರಮೆಚ್ಚುಗೆ ಹೊಂದಿರುತ್ತಾರೆ. ಎಲ್ಲರಿಗೂ ಯುಗಾದಿಯ ಶುಭಾಶಯ ಹೇಳಿ ಮಾತನಾಡಿದ ಅವರು, ಭಾರತೀಯ ಸಮುದಾಯ ನ್ಯೂಜಿಲಂಡ್‌ ಜನರೊಡನೆ ಬೆರೆತು ಇಲ್ಲಿನ ಪ್ರಗತಿಗಾಗಿ ಶ್ರಮಿಸುತ್ತಿರುವದನ್ನು ಪ್ರಶಂಸಿಸಿದರು.

ಕರ್ನಾಟಕದ ಸುಮಾರು ಎರಡು ಸಾವಿರ ವರ್ಷಗಳ ಭವ್ಯ ಪರಂಪರೆ ಮತ್ತು ಇತಿಹಾಸಕ್ಕೆ ಹೋಲಿಸಿದಲ್ಲಿ ನಮ್ಮ ನ್ಯೂಜಿಲೆಂಡ್‌ ಬಹಳ ಕಿರಿಯ ದೇಶ ಎಂದರು. ಕನ್ನಡ ಕೂಟದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಅವರು, ಕೂಟ ನಡೆಸುತ್ತಿರುವ ಕನ್ನಡ ಶಾಲೆ, ಕನ್ನಡ ವಾಣಿ ರೇಡಿಯೋ ಕಾರ್ಯಕ್ರಮ, ಕನ್ನಡ ಪತ್ರಿಕೆ ಇವುಗಳು ಮುಂದಿನ ಪೀಳಿಗೆಗೆ ಉತ್ತಮ ತಳಹದಿ ನಿರ್ಮಿಸುತ್ತದೆ ಎಂದರು. ಇತ್ತೀಚೆಗೆ ನ್ಯೂಜಿಲೆಂಡಿನ ಗೌವರ್ನರ್‌ ಜನರಲ್‌ ಹುದ್ದೆಗೆ ಆಯ್ಕೆಯಾಗಿರುವ ಭಾರತೀಯ ಮೂಲದ ನ್ಯಾಯಮೂರ್ತಿ ಆನಂದ್‌ ಸತ್ಯಾನಂದ್‌ ಅವರನ್ನು ಅಭಿನಂದಿಸಿ, ಈ ದೇಶದ ಅತ್ಯುನ್ನತ ಸಂವೈಧಾನಿಕ ಹುದ್ದೆಯನ್ನಲಂಕರಿಸಲು ಅವರು ಅತ್ಯಂತ ಸೂಕ್ತ ವ್ಯಕ್ತಿ ಎಂದು ಬಣ್ಣಿಸಿದರು.

ಕೂಟದ ಸದಸ್ಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ವೀಕ್ಷಿಸಿದ ಪ್ರಧಾನಿಯವರು ಭಾಗವಹಿಸಿದ ಕಲಾವಿದರನ್ನು ಅಭಿನಂದಿಸಿದರು. ನೂತನವಾಗಿ ಪ್ರಾರಂಭಿಸಿರುವ ಮಹಿಳಾ ವಿಭಾಗದ ಸದಸ್ಯರು ಮಾಡಿದ ಜನಪದ ಕೋಲಾಟದ ನೃತ್ಯ ಅವರನ್ನು ಬಹುವಾಗಿ ಆಕರ್ಷಿಸಿತು.

ಈ ವರ್ಷ ಭಾರತೀಯ ಸಮುದಾಯದವರು ನಡೆಸಿದ ವಾರ್ಷಿಕ ಕ್ರಿಕೆಟ್‌ ಟೂರ್ನಮೆಂಟ್‌ ನಲ್ಲಿ ದ್ವಿತೀಯ ಸ್ಥಾನ ಪಡೆದ ಕನ್ನಡ ಕೂಟದ ತಂಡದ ಸದಸ್ಯರನ್ನು ಹಾಗೂ ಕೂಟದ ಪಿಕ್ನಿಕ್‌ ಸಂದರ್ಭದಲ್ಲಿ ನಡೆಸಿದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವರಿಗೂ ಬಹುಮಾನ ವಿತರಣೆ ಮಾಡಲಾಯಿತು.

ಸಮಾರಂಭದ ಅಂಗವಾಗಿ ನಡೆದ ಕಾರ್ಯಕ್ರಮಗಳು ವರ್ಣರಂಜಿತವೂ ವೈವಿಧ್ಯಮಯವೂ ಆಗಿದ್ದವು.ಪ್ರಸಿದ್ಧಕನ್ನಡ ಕವಿಗಳ ಕವಿತೆಗಳ ಗಾಯನ,ಸುಗಮ ಸಂಗೀತ, ಜಾನಪದ ಗೀತೆ,ಭಕ್ತಿಗೀತೆಗಳು,ಹಾಗೂ ಮುಖ್ಯವಾಗಿ ಡಾ.ರಾಜಕುಮಾರ್‌ ಅವರ ಚಿತ್ರಗಳ ಹಾಡುಗಳು ಇಂಪಾಗಿದ್ದವು. ಜಯದೇವ ಅಷ್ಟಪದಿಯ ಭರತನಾಟ್ಯ,ಜಾನಪದ ನೃತ್ಯ,ಕನ್ನಡಶಾಲೆಯ ಮಕ್ಕಳ ಸುಂದರ ಬ್ಯಾಲೆ ,ಕೊನೆಯಲ್ಲಿ ಹಳೆಯು ಸಿನಿಮಾ ಹಾಡುಗಳ ತುಣುಕುಗಳ ಹಾಸ್ಯಮಯ ಕವ್ವಾಲಿ ಎಲ್ಲವೂ ಸೊಗಸಾಗಿತ್ತು.

ಪುಷ್ಪ ರಾಘವೆಂದ್ರ ಮತ್ತು ಬಾಲಕಿ ಅನುಶಾ ದತ್ತಾತ್ರೇಯ ಅವರು ಕಾರ್ಯಕ್ರಮವನ್ನು ಸೊಗಸಾಗಿ ನಿರೂಪಿಸಿದರು. ಜಯ ಮರಾಠೆ ಅವರು ಮಹಿಳಾ ವಿಭಾಗದ ಬಗ್ಗೆ ವಿವರಣೆ ನೀಡಿದರು. ಈ ಸುಂದರ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆ ರವಿರಾವ್‌ ಹಾಗೂ ಪ್ರಭಾಕರ್‌ ಅವರದಾಗಿತ್ತು. ಖಚಾಂಚಿ ಗೋವಿಂದ್‌ಮರಾಠೆ ಯವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಹಬ್ಬದ ಮೃಷ್ಠಾನ್ನ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಮುಖಪುಟ / ವ್ಯಯನಾಮ ಸಂವತ್ಸರಕ್ಕೆ ಸ್ವಾಗತ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more