• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೌತ್‌-ಕ್ಯಾರೋಲಿನಾದ ಸಿರಿಗನ್ನಡಕ್ಕೆ ಯುಗಾದಿ ಸಂಭ್ರಮ

By Staff
|

ಕಳೆದವಾರ ಶನಿವಾರ(ಏ.16)ದಂದು ಸೌತ್‌-ಕ್ಯಾರೋಲಿನಾದ ಕನ್ನಡಿಗರಿಗೆ ಎಲ್ಲಿಲ್ಲದ ಸಡಗರ ಮತ್ತು ಸಂಭ್ರಮ. ಅದಕ್ಕೆ ಕಾರಣ, ಸೌತ್‌-ಕ್ಯಾರೋಲಿನಾದ ಸಿರಿಗನ್ನಡ ಕನ್ನಡ ಸಂಘದ ವತಿಯಿಂದ ಯುಗಾದಿ ಹಬ್ಬದ ಆಚರಣೆ. ಕೊಲಂಬಿಯಾದ ಪೋಲೋ ರಸ್ತೆಯಲ್ಲಿ ಏಪ್ರಿಲ್‌ 16ರಂದು ಹಬ್ಬವೋ ಹಬ್ಬ. ಅಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ತಂಡೋಪತಂಡವಾಗಿ ಸಂಘದ ಸದಸ್ಯರು ಸಕುಟುಂಬ ಪರಿವಾರದೊಂದಿಗೆ ಆಗಮಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಲ್ಲುತ್ತಿದ್ದ ದೃಶ್ಯ ನಿಜಕ್ಕೂ ಮನಸ್ಸಿಗೆ ಹಿತತರುತ್ತದೆ. ಕಾರ್ಯಕ್ರಮಕ್ಕೆ ಆಗಮಿಸಿ ಪರಸ್ಪರ ಕ್ಷೇಮ ಸಮಾಚಾರವನ್ನು ವಿನಿಮಯ ಮಾಡಿಕೊಳ್ಳುತ್ತಾ ಹರಟೆಯಲ್ಲಿ ಸಂಘದ ಸದಸ್ಯರು ಮಗ್ನರಾದರು.

ಸುಮಾರು 12:30ಕ್ಕೆ ಅಧಿಕೃತವಾಗಿ ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮಗಳು ಆರಂಭಗೊಂಡವು. ಪ್ರೇಮಾ ವಾಸುಕಿ ಅವರ ಪ್ರಾರ್ಥನೆಯಾಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ನಿರ್ವಹಣೆಯ ಹೊಣೆಯನ್ನು ಸಂಘದ ಅಧ್ಯಕ್ಷೆ ಮಾಲತಿ ನಾಗರಾಜ್‌ ವಹಿಸಿಕೊಂಡಿದ್ದರು. ಅವರು ಸಂಘಕ್ಕೆ ಹೊಸದಾಗಿ ಸೇರ್ಪಡೆಯಾದ ಸದಸ್ಯರನ್ನು ವೇದಿಕೆಗೆ ಸ್ವಾಗತಿಸಿ, ಪರಿಚಯಮಾಡಿಕೊಟ್ಟರು. ನಂತರ ಸಂಘದ ವಿವಿಧ ಚಟುವಟಿಕೆಗಳ ಹಿನ್ನೋಟ ಮತ್ತು ಮುನ್ನೋಟಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು.

ಡಾ.ನಾರಾಯಣಸ್ವಾಮಿ ನಾಡಿಗ್‌ ಮಾತನಾಡಿ, ಯುಗಾದಿ ಹಬ್ಬದ ಪ್ರಾಮುಖ್ಯತೆ ಹಾಗು ಆಚರಣೆಯ ಬಗ್ಗೆ ಸ್ವಾರಸ್ಯಕರವಾದ ವಿವರಣೆಯನ್ನು ಕೊಟ್ಟರು.

‘ಅತಿ ಮಧುರಾ ಅನುರಾಗ..’ ಎಂಬ ಜನಪ್ರಿಯ ಚಲನಚಿತ್ರದ ಯುಗಳ ಗೀತೆಯನ್ನು ಚಿತ್ರಾ ಹಾಗೂ ಪಾರ್ಥಸಾರಥಿ ದಂಪತಿಗಳು ಅತಿ-ಮಧುರವಾಗಿ ಹಾಡಿದರು. ಇದಾದ ನಂತರ ಮಲ್ಲಿ ಸಣ್ಣಪ್ಪನವರ ಹಾಸ್ಯಕವನಗಳು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿ ನಲಿಸಿದವು.

ಸುಬ್ಬಲಕ್ಷ್ಮಿಅವರನ್ನು ಅಧ್ಯಕ್ಷರು ವೇದಿಕೆಗೆ ಕರೆಸಿ, ಎಲ್ಲರಿಗೂ ಪರಿಚಯಿಸಿದರು. ಸೌತ್‌-ಕೆರೋಲಿನಾದ ಪಾಲಿಗೆ ಇವರೇ ಎಂ.ಎಸ್‌ ಸುಬ್ಬಲಕ್ಷ್ಮಿಎಂದು ಅಧ್ಯಕ್ಷರು ಬಣ್ಣಿಸಿದರು. ಸುಬ್ಬಲಕ್ಷ್ಮಿ ಅವರ ಶಾಸ್ತ್ರೀಯ ಸಂಗೀತ ಕೇಳಿದ ಮೇಲೆ ಅಧ್ಯಕ್ಷರ ಮಾತಿನಲ್ಲಿ ಅತಿಶಯವಿಲ್ಲ ಎನ್ನಿಸಿತು.

ಮಾಲತಿ ನಾಗರಾಜ್‌ ದಂಪತಿಗಳಿಂದ ಕನ್ನಡನಾಡಿನ ಕೀರ್ತಿ ಸಾರುವ ಹಾಡು ತುಂಬಾ ಅಚ್ಚುಕಟ್ಟಾಗಿ ಮೂಡಿಬಂತು. ಉಮಾ ಕೃಷ್ಣಮೂರ್ತಿಯವರ ಭರತನಾಟ್ಯಯುಗಾದಿ ಹಬ್ಬಕ್ಕೆ ತಳಿರು ತೋರಣದಂತೆ ಕಾರ್ಯಕ್ರಮಕ್ಕೆ ವಿಶಿಷ್ಟವಾದ ಮೆರೆಗು ನೀಡಿತ್ತು. ಉಮಾ ಕೃಷ್ಣಮೂರ್ತಿಯವರ ಹಾಡಿಗೆ ಅವರ ಎಂಟು ವರ್ಷದ ಮಗ ವಿಕ್ರಮ್‌ ತಬಲಾ ಬಾರಿಸುವ ಭಂಗಿ ನೋಡಿ ಪ್ರೇಕ್ಷಕರು ಚಪ್ಪಾಳೆಯ ಮಳೆಗರೆದರು.

ಶಿಶುನಾಳರ ಗೀತೆಗಳನ್ನು ಸಂಘದ ಕಾರ್ಯದರ್ಶಿ ಸುನಿಲ್‌ ತುಪಾಲಿ ಹಾಡಿ ಎಲ್ಲರ ಗಮನಸೆಳೆದರು. ಅಂತಿಮವಾಗಿ ಅಭಿನಂದನಾ ಸಮರ್ಪಣೆಯನ್ನು ಶಂಕರ್‌ ಗುಪ್ತಾ ಅವರು ನೆರವೇರಿಸಿದರು. ಆ ಮೂಲಕ ಕಾರ್ಯಕ್ರಮಗಳಿಗೆ ತೆರೆ ಬಿತ್ತು.

ಕಾರ್ಯಕ್ರಮವನ್ನು ಆಸ್ವಾದಿಸುತ್ತಿದ್ದ ಸಂಘದ ಸದಸ್ಯರಿಗೆ ಹೊಟ್ಟೆ ಹಸಿವು ಗಮನಕ್ಕೆ ಬಂದಿರಲಿಲ್ಲ. ಕಾರ್ಯಕ್ರಮ ಮುಗಿದ ನಂತರ ಹೊಟ್ಟೆರಾಯ ಸದ್ದು ಮಾಡತೊಡಗಿದ. ಅಷ್ಟು ಹೊತ್ತಿಗೆ ನಳಪಾಕದ ವಾಸನೆ ಎಲ್ಲರ ಮೂಗಿಗೂ ಬಡಿದಿತ್ತು. ಬಿಸಿಬೇಳೆ ಬಾತ್‌, ಪಲಾವ್‌, ತರತರನಾದ ಪಲ್ಯೆಗಳೊಂದಿಗೆ ಚಪಾತಿ, ಅಂಬೋಡೆ, ಕರಿದ ಹಪ್ಪಳ , ಕೆಸರಿಬಾತ್‌, ಜಾಮೂನ್‌, ಮೊಸರನ್ನ ಮತ್ತಿತರ ಭಕ್ಷ್ಯಗಳು ಸಿರಿಗನ್ನಡ ಸಂಘದ ಸದಸ್ಯರನ್ನು ತೃಪ್ತಿಪಡಿಸುವಲ್ಲಿ ಸಫಲವಾದವು.

ಭಾರೀ ಭೋಜನ ಸೇವಿಸಿ ಹೊಟ್ಟೆ ಭಾರವಾಯಿತು ಅನ್ನುವವರಿಗಾಗಿಯೇ ಅದನ್ನು ಅರಗಿಸಿಕೊಳ್ಳಲು ‘ಮ್ಯೂಸಿಕಲ್‌ ಚೇರ್‌’ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಪ್ತಸಾಗರದಾಚೆಯ ಯುಗಾದಿಯ ಸಂಭ್ರಮವನ್ನು ಸೌತ್‌-ಕ್ಯಾರೋಲಿನಾಕ್ಕೆ ಕರೆತಂದ ಸಿರಿಗನ್ನಡ ಸಂಘಕ್ಕೆ ಧನ್ಯವಾದ ಹೇಳುತ್ತಾ ಎಲ್ಲರೂ ತಮ್ಮ ತಮ್ಮ ಮನೆಯ ಹಾದಿಹಿಡಿದರು.

ಭಾರತೀಯರ ಜನಸಂಖ್ಯೆ ವಿರಳವಾಗಿರುವ ಈ ಅಮೆರಿಕಾ ದೇಶದ ದಕ್ಷಿಣದ ರಾಜ್ಯದಲ್ಲಿ ಅದರಲ್ಲೂ ಕನ್ನಡಿಗರನ್ನು ಒಟ್ಟು ಹಾಕಿ ಕನ್ನಡ ಸಂಘ ಕಟ್ಟಲು ಕಾರಣಕರ್ತರಾದ ಸಂಘದ ಅಧ್ಯಕ್ಷೆ ಮಾಲತಿ ನಾಗರಾಜ್‌ ಮತ್ತು ಉಪಾಧ್ಯಕ್ಷ ಚೇತನ್‌ ದಯಾನಂದ್‌ ಅವರ ಸಾಹಸ ಮತ್ತು ಕನ್ನಡ ಶ್ರದ್ಧೆಯನ್ನು ಎಷ್ಟು ಹೊಗಳಿದರೂ ಸಾಲದು. ಅವರ ಕನ್ನಡ ಪ್ರೀತಿ ಸದಾ ಹಸಿರಾಗಿರಲಿ.

ಸಿರಿಗನ್ನಡ ಕನ್ನಡ ಸಂಘಟನೆಯ ಕಾರ್ಯಕಾರಿ ಸಮಿತಿ ಹೀಗಿದೆ :

ಅಧ್ಯಕ್ಷರು : ಮಾಲತಿ ನಾಗರಾಜ್‌

ಉಪಾದ್ಯಕ್ಷರು : ಚೇತನ್‌ ದಯಾನಂದ್‌

ಕಾರ್ಯದರ್ಶಿ : ಸುನಿಲ್‌ ತುಪಾಲೆ

ವಿದ್ಯಾರ್ಥಿ ಕಾರ್ಯದರ್ಶಿ: ಅಭಿಜಿತ್‌ ರಘುನಾಥ್‌

ಖಜಾಂಚಿಗಳು : ಶಿಲ್ಪಾ ಅಶೋಕ್‌ ಮತ್ತು ಪ್ರೇಮಾ ವಾಸುಕಿ

ನಿರ್ದೇಶಕರು : ಪಾರ್ಥಸಾರಥಿ ಬೆಳಗೋಡು ಮತ್ತು ಶಂಕರ್‌ ಗುಪ್ತಾ

ಸಂಘದ ಬಗ್ಗೆ ಹೆಚ್ಚಿನ ವಿವರಗಳಿಗಾಗಿ www.sirigannada.orgಗೆ ಭೇಟಿ ಕೊಡಿ.

ಮುಖಪುಟ / ಯುಗಾದಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more