ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿವಿ ಹಕ್ಕಿಗಳ ನಾಡಿನಲ್ಲಿ ಕನ್ನಡ ಕುಹೂ ಕುಹೂ ಯುಗಾದಿ

By Staff
|
Google Oneindia Kannada News
ನ್ಯೂಜಿಲೆಂಡ್‌ ಕನ್ನಡ ಕೂಟವು ಆಕ್ಲೆಂಡ್‌ ನಗರದಲ್ಲಿ ಏಪ್ರಿಲ್‌ 09.2005ರಂದು ಯುಗಾದಿ ಹಬ್ಬವನ್ನು ಭಾರೀ ಸಂಭ್ರಮ ಸಡಗರದಿಂದ ಆಚರಿಸಿತು.

ಏಪ್ರಿಲ್‌ 09ರ ಸಂಜೆ 5 ಗಂಟೆಗೆ ಮೌಂಟ್‌ ಈಡನ್‌ಯುದ್ಧ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಪ್ರಾರ್ಥನೆ ಮೂಲಕ ರತ್ನಾ ವಾಮನಮೂರ್ತಿ ಚಾಲನೆ ನೀಡಿದರು.

ಆನಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಸುಗ್ಗಿಯೋ ಸುಗ್ಗಿ. ಖ್ಯಾತ ನರ್ತಕಿ ಕು. ನೂತನ್‌ ಭಟ್‌ ಅವರು ಮಾಡಿದ ಸ್ವಾಗತ ನೃತ್ಯ ಎಲ್ಲರನ್ನೂ ರಂಜಿಸಿತು. ಕನ್ನಡ ಕೂಟದ ಅಧ್ಯಕ್ಷರಾದ ಪ್ರೊ.ಎಂ.ಕೆ. ವಾಮನಮೂರ್ತಿಯವರು ಸ್ವಾಗತ ಭಾಷಣ ಮಾಡಿ ಎಲ್ಲರಿಗೂ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ನಾಲ್ಕು ವರ್ಷದ ಬಾಲಕ ಸುಮಂತ ಹಾಡಿದ ಗಾಂಧೀಜಿ ಸ್ಮೃತಿ ಸೊಗಸಾಗಿತ್ತು. ಮತ್ತಯ್ಯ ಭಾಗವತರ ರಚನೆ ಸುಧಾಮಯಿಯನ್ನು ಬಾಲ ಪ್ರತಿಭೆ ಪ್ರತೀಕ್‌ ಅವರು ಕೀ ಬೋರ್ಡಿನಲ್ಲಿ ನುಡಿಸಿದರು.

ಗಾಯಕಿ ವರ್ಷ ಪೈ ಹಾಡಿದ ಸಂಪಿಗೆ ಮರದ ಹಸಿರಲೆ ನಡುವೆ...ಗೀತೆ ಎಲ್ಲರ ಸೆಳೆಯಿತು. ದೇವರ ಆಟ ಬಲ್ಲವರಾರು, ನಾ ನಿನ್ನ ಮರೆಯಲಾರೆ, ಕಾರ್‌ ಕಾರ್‌ ಎಲ್ಲ್ನೋಡಿ ಕಾರ್‌, ಬಾಜಿ ಕಟ್ಟಿ ನೋಡು ಬಾರ ಮೀಸೆ ಮಾವ... ಮತ್ತಿತರ ಗೀತೆಗಳನ್ನು ಅನುಪಮ ಪ್ರಭಾಕರ್‌, ಸುಹಾಸ್‌, ಚೈತ್ರ ರವಿಶಂಕರ್‌, ಸೃಜನ, ದರ್ಶನ್‌, ಲತಾ ಹೆಗ್ಡೆ , ವಿನಯ್‌ ಸುಮಧುರವಾಗಿ ಹಾಡಿದರು.

ಪುಟಾಣಿ ಮಕ್ಕಳು ಬಿಂಬಿಸಿದ ನೃತ್ಯರೂಪಕ ಚಿವ್‌ ಚಿವ್‌ ಚಿಕ್ಕ ಗುಬ್ಬಿ... ಮತ್ತು ಅಮ್ಮ ಅಮ್ಮ ಅಮ್ಮ...ಮನಮೋಹಕವಾಗಿತ್ತು. ಕವಿ ಜಿ.ಎಸ್‌.ಶಿವರುದ್ರಪ್ಪನವರ ಜನಪ್ರಿಯ ಕವಿತೆಯನ್ನು ಕ್ರಿಕೆಟ್‌ ಆಟಗಾರ ಸಮಿಉಲ್ಲಾ ಎದೆತುಂಬಿ ಹಾಡಿದರು. ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ...ಎಂಬ ಜಾನಪದ ಗೀತೆಯನ್ನು ಹಾಡಿ ಸ್ಮಿತ ಗೌರಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಪ್ರಭಾಕರ್‌ ಮತ್ತು ರವಿಶಂಕರ್‌ ಅಭಿನಯಿಸಿದ ಕಿರು ನಾಟಕ ಹೆಂಡ್ತೀರೆಹುಷಾರ್‌, ರಾಘವೇಂದ್ರ ಅವರು ಹಾಡಿದ ಪುರಂದರ ದಾಸರ ಕೀರ್ತನೆ ‘ಆಡಿಸಿದಳೆಶೋಧೆ ಜಗದೋದ್ಧಾರನ.. ’ , ಮತ್ತು ಶ್ರೀಕಾಂತ್‌ ಕೊಳ್ಳಿ ಹಾಗೂ ಸಂಗಡಿಗರು ಹಾಡಿದ ಗೀತೆ ಉತ್ತಮವಾಗಿ ಮೂಡಿ ಬಂತು.

ವೃತ್ತಿಯಲ್ಲಿ ಮನೋವೈದ್ಯರಾದ ಡಾ.ಅಶೋಕ್‌ ಮಾಲೂರ್‌ ಅವರು ವಯಲಿನ್‌ ವಾದನದಲ್ಲಿ ಕೃಷ್ಣ ನೀ ಬೇಗನೆ ಬಾರೋ ಗೀತೆ ಹಾಗೂ ಗಂಧದ ಗುಡಿ ಚಿತ್ರದ ನಾವಾಡುವ ನುಡಿಯೆ ಕನ್ನಡ ನುಡಿ ಗೀತೆಗಳನ್ನು ನುಡಿಸಿ ಮೋಡಿ ಮಾಡಿದರು.

ಕನ್ನಡಕೂಟದ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರ ಪರಿಚಯವನ್ನು ಕಾರ್ಯದರ್ಶಿ ಸುಜಾತ ದತ್ತಾತ್ರೇಯ ಅವರು ಮಾಡಿ ಕೊಟ್ಟರು. ಶೀಘ್ರದಲ್ಲಿಯೆ ಕೂಟದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿರುವ ಡಾ.ಲಿಂಗಪ್ಪ ಕಲ್ಬುರ್ಗಿ ಅವರು ಭಾರತೀಯ ಸಂಘದ ಸಭೆಯಲ್ಲಿ ಭಾಗವಹಿಸಲು ಕ್ರೈಸ್ಟ್‌ ಚರ್ಚ್‌ ನಗರಕ್ಕೆ ತೆರಳಿದ್ದು, ಅಲ್ಲಿಂದಲೇ ಸಮಾರಂಭದ ಯಶಸ್ಸಿಗೆ ಶುಭ ಸಂದೇಶ ಕಳುಹಿಸಿದ್ದರು.

ಉಮೇಶ್‌ ಪ್ರಸಾದ್‌ ಅವರು ವಂದಿಸಿದರು. ಕೊನೆಯಲ್ಲಿ ಎಲ್ಲರೂ ನ್ಯೂಜಿಲೆಂಡ್‌,ಭಾರತ ರಾಷ್ಟ್ರಗೀತೆಗಳನ್ನು ಹಾಗೂ ನಾಡ ಗೀತೆ ಜಯ ಭಾರತ ಜನನಿಯ ತನುಜಾತೆ ಗೀತೆಯನ್ನು ಹಾಡುವುದರ ಮೂಲಕ ಸಮಾರಂಭಕ್ಕೆ ತೆರೆ ಎಳೆದರು. ಕುಮಾರ್‌ ರಾಮಸ್ವಾಮಿ ಮತ್ತು ಪ್ರಕಾಶ್‌ ಮೈಸೂರ್‌ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಕಾರ್ಯಕ್ರಮದ ಕಡೆಯಲ್ಲಿ ನಡೆದ ಒಬ್ಬಟ್ಟಿನ ಹಬ್ಬದೂಟ ಎಲ್ಲರಲ್ಲೂ ಖುಷಿ ಮೂಡಿಸಿತ್ತು.

ಮುಖಪುಟ / ಯುಗಾದಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X