ಕಾವೇರಿಯಲ್ಲಿ ಯುಗಾದಿ ‘ಔತಣ’ : ಬೇವು-ಬೆಲ್ಲಗಳ ಸಮ ಪ್ರಮಾಣ ಮಿಶ್ರಣ
- ಶ್ರೀವತ್ಸ ಜೋಶಿ; ಮೇರಿಲ್ಯಾಂಡ್
[email protected]
ಇತ್ತೀಚಿನ ವರ್ಷಗಳಲ್ಲಿ ಅಮೆರಿಕನ್ನಡಿಗರಲ್ಲಿ ಹಾಸ್ಯನಾಟಕಗಳ ಅನಭಿಷಿಕ್ತ ದೊರೆ ಎನಿಸಿಕೊಂಡಿರುವ ‘ಯಮ’ ಖ್ಯಾತಿಯ ವಲ್ಲೀಶ ಶಾಸ್ತ್ರಿಯವರ ನಿರ್ಮಾಣ-ನಿರ್ದೇಶನ ಮತ್ತು ನಟನೆಯ ಈ ನಾಟಕವು, ಅಷ್ಟು ಹೊತ್ತು ತಾಳ್ಮೆಯಿಂದ (ತಾಳ್ಮೆ ಪರೀಕ್ಷಿಸುವಂತಿದ್ದ ಕೆಲ ಇತರ ಪ್ರಸ್ತುತಿಗಳನ್ನು ಸಹಿಸಿಕೊಂಡು) ಕಾತರದಿಂದ ನಿರೀಕ್ಷಿಸಿದ್ದ ಪ್ರೇಕ್ಷಕರ ಭರ್ಜರಿ ಪ್ರಶಂಸೆಗೆ ಪಾತ್ರವಾಯಿತು. ನಾಟಕದ ವಿಷಯ, ಸಂಭಾಷಣೆ, ರಂಗಪರಿಕರ, ಎಲ್ಲ ಪಾತ್ರಧಾರಿಗಳ ಅಭಿನಯ - ಇವೆಲ್ಲವೂ ತುಂಬಾ ಚೆನ್ನಾಗಿದ್ದುವು. ವಲ್ಲೀಶರ ಬಳಗದಲ್ಲಿದ್ದ ಆರು ಮಂದಿಯ ಜತೆಗೆ, ಬರೀ ಒಂದು ದಿನದ ಪ್ರಾಕ್ಟಿಸ್‌ನಿಂದ ಸೇರಿಕೊಂಡ ಸ್ಥಳೀಯ ಪ್ರತಿಭೆಗಳೂ ನಾಟಕಕ್ಕೆ ರಂಗೇರಿಸಿದವು.
|





ಅಷ್ಟಕ್ಕೂ ಈ ನಗೆನಾಟಕಕ್ಕೆ ಪ್ರಾಕ್ಟೀಸ್ ಬೇಕೆ ಎಂಬ ಪ್ರಶ್ನೆಬರಬಹುದು, ಯಾಕಂದ್ರೆ ನಾಟಕದ ವಸ್ತುವೇ ‘ನಾಟಕ ಪ್ರಾಕ್ಟಿಸ್’ ಅಥವಾ ಡ್ರೆಸ್-ರಿಹರ್ಸಲ್. ಮಂಡ್ಯ ಕಡೆಯ ಕನ್ನಡ ಮಾತಾಡುವ ಹಳ್ಳಿಜನರಿಂದ ‘ಶ್ರೀಕೃಷ್ಣ ಸಂಧಾನ’ ಪೌರಾಣಿಕ ನಾಟಕವನ್ನಾಡಿಸುವ ನಾಟಕಮೇಷ್ಟ್ರ ಪರಿಪಾಟಲಿನ ಸನ್ನಿವೇಷಗಳೇ ಈ ನಾಟಕದ ದೃಶ್ಯಗಳು. ಹಳ್ಳಿಪರಿಸರ, ಅನಕ್ಷರತೆಯ ಪಿಡುಗಿನಲ್ಲಿ ‘ಅ’ ಮತ್ತು ‘ಹ’ ಕಾರಗಳು ಅದಲು ಬದಲಾಗುವ ಉಚ್ಚಾರ, ಕ್ಷುಲ್ಲಕ ಕಾರಣಗಳ ವೈಯಕ್ತಿಕ ವೈಷಮ್ಯವಿರುವ ಜನರೇ ನಾಟಕವಾಡಲು ಒಂದಾದಾಗ ಆಗುವ ಆಭಾಸಗಳು, ಪೌರಾಣಿಕ ನಾಟಕದ ಸಂಭಾಷಣೆಯಲ್ಲೂ ನುಸುಳುವ ‘ಹಸ್ತಿನಾವತಿ ಯುದ್ಧಕ್ಕೆ ರೆಡಿಯಾಗಿರಿ...!’ ಮುಂತಾದ ಆಚ್ಚರಿಗಳು - ವಲ್ಲೀಶರಿಗೆ ಅಮೆರಿಕನ್ನಡಿಗರನ್ನು ನಗಿಸುವ ಕಲೆ ಕರತಲಾಮಲಕವಾಗಿದೆ ಎಂದು ಸಾಬೀತುಪಡಿಸುವ ಮತ್ತು ಅವರ ಪ್ರತಿಭೆಗೆ ಯಾರಾದರೂ ತಲೆದೂಗಲೇಬೇಕಾದ ಸ‘ರಸ’ ಸಂಗತಿಗಳು. ಈ ಪ್ರಯೋಗದಲ್ಲಿ ವಲ್ಲೀಶ್ ಬಳಗದ ಮಾರುತಿಪ್ರಸಾದ್, ಹರಿ, ಅರುಣ್ ಮಾಧವ್, ಅಪ್ಪಿ ಮತ್ತು ಸೋಮು, ಹಾಗೆಯೇ ಸ್ಥಳೀಯರಾದ ಆಂಜನೇಯಸ್ವಾಮಿ, ಸಂಜಯ್‌ರಾವ್, ಮಾದೇಶ ಬಸವರಾಜು, ರವಿಹರಪ್ಪನಹಳ್ಳಿ ಮತ್ತು ಸಂಭ್ರಮ್ ಶ್ರೀನಿವಾಸ್ - ನಾಟಕದ ಪೋಷಣೆಗೆ ಇವರೆಲ್ಲರೂ ಉತ್ತಮ ಕೊಡುಗೆಸಲ್ಲಿಸಿದರು; ನಾಟಕರಂಜನೆಯಲ್ಲಿ, ಯಶಸ್ಸಿನಲ್ಲಿ ಇವರೆಲ್ಲರ ಪಾಲಿದೆ.












Click it and Unblock the Notifications