ಚಾಂದ್ರಮಾನ, ಸೌರಮಾನ ಯುಗಾದಿ

*ಟಿ.ಎಂ. ಸತೀಶ್‌

ಹಿಂದೂ ಪುರಾಣ, ಶಾಸ್ತ್ರಗಳ ರೀತ್ಯ ಇರುವುದು ನಾಲ್ಕು ಯುಗ. ಕೃತಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗ. ಕೃತಯುಗದ ಪುರಾಣಗಳು ಅಷ್ಟು ಜನಪ್ರಿಯವಾಗದಿದ್ದರೂ, ತ್ರೇತಾಯುಗದ ರಾಮಾಯಣ, ದ್ವಾಪರದ ಮಹಾಭಾರತ, ಕಲಿಯುಗದ ಕಥೆಗಳು ಭಾರತೀಯರಿಗೆ ತಿಳಿದೇ ಇದೆ.

ನಮ್ಮ ಪೂರ್ವಿಕರು, ಈ ಯುಗಗಳಲ್ಲಿ ದಿನಗಣನೆಗೆ ಪಂಚಾಂಗವನ್ನು ಸೃಷ್ಟಿಸಿದರು. ಸೂರ್ಯ ಚಂದ್ರಾದಿ ಭೂಮಿಯ ಚಲನೆ ಆಧರಿಸಿ ಧರ್ಮಸಿಂಧು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂವತ್ಸರ, ಆಯನ, ಋತು, ಮಾಸ, ಪಕ್ಷ, ತಿಥಿಗಳನ್ನು ಗುರುತಿಸಿದರು. ಈ ಎಲ್ಲದರ ವೈಜ್ಞಾನಿಕ ಸಮ್ಮಿಲನವೇ ಪಂಚಾಂಗ. ಆದರೆ ಇದಕ್ಕೊಂದು ಆದಿ ಬೇಕಲ್ಲ. ಅದನ್ನೇ ಯುಗಾದಿ ಎಂದರು. ಯುಗಾದಿ ಎಂದರೆ, ಯುಗದ ಆರಂಭ ಅರ್ಥಾತ್‌ ಸೃಷ್ಟಿಯ ಪ್ರಾರಂಭ.

ಸೃಷ್ಟಕರ್ತನಾದ ಬ್ರಹ್ಮದೇವನು ತನ್ನ ಸೃಷ್ಟಿ ಕಾರ್ಯವನ್ನು ಚೈತ್ರ ಶುಕ್ಲ ಪಾಡ್ಯದಿಂದ ಪ್ರಾರಂಭಿಸಿದ ಎಂದೂ ಹೇಳಲಾಗುತ್ತದೆ. ಅಂದಿನಿಂದಲೇ ಕಾಲಗಣನೆ ಆರಂಭವಾಯಿತು. ಗಣನೆಗೆ ಅನುಕೂಲವಾಗಲೆಂದು ಬ್ರಹ್ಮನೇ ವಾರ, ತಿಥಿ, ನಕ್ಷತ್ರ, ಮಾಸ, ಋತುಗಳನ್ನು ಮಾಡಿದ ಎನ್ನುತ್ತವೆ ಪುರಾಣ.

ಯುಗಾದಿಯಲ್ಲಿ ಚಾಂದ್ರಮಾನ ಯುಗಾದಿ, ಸೌರಮಾನ ಯುಗಾದಿ ಎಂಬ ಎರಡು ಪ್ರಬೇಧಗಳು.

ಭಾರತದಲ್ಲಿ ಗುಜರಾತ್‌ ಮತ್ತು ರಾಜಸ್ಥಾನದ ಕೆಲವು ಭಾಗಗಳನ್ನು ಹೊರತು ಪಡಿಸಿ, ಮಿಕ್ಕೆಲ್ಲ ಕಡೆ ಚೈತ್ರ ಮಾಸದಿಂದಲೇ ಹೊಸ ವರ್ಷ ಯಾನೇ ಸಂವತ್ಸರ ಆರಂಭ. ಇಂಗ್ಲಿಷ್‌ ಕ್ಯಾಲೆಂಡರ್‌ ರೀತ್ಯ ಜನವರಿ 1ರಿಂದ ಹೊಸವರ್ಷ ಆರಂಭವಾದರೆ, ಹಿಂದೂಗಳಲ್ಲಿ ಚೈತ್ರ ಪಾಡ್ಯದಿಂದ ಹೊಸ ವರ್ಷ ಆರಂಭವಾಗುತ್ತದೆ. ಪಾಶ್ಚಾತ್ಯರು ಹೊಸವರ್ಷದ ಹಿಂದಿನ ದಿನ ರಾತ್ರಿ ಸಂಭ್ರಮ ಪಟ್ಟರೆ, ಹಿಂದೂಗಳು ಹೊಸ ವರ್ಷದಂದು ಹಬ್ಬವಾಚರಿಸಿ, ಮಾರನೆಯ ದಿನ ವರ್ಷ ತೊಡಕು ಎಂಬ ಹೆಸರಿನಲ್ಲಿ ವರ್ಷವಿಡೀ ಯಾವುದೇ ತೊಡಕುಗಳು ಬಾರದಿರಲಿ ಎಂದು ಪೂಜೆ, ಪುನಸ್ಕಾರ ಮಾಡುತ್ತಾರೆ.

ಚಾಂದ್ರಮಾನ ರೀತ್ಯ ಯುಗಾದಿ ಆಚರಿಸುವವರು ಚೈತ್ರ ಮಾಸದಿಂದಲೇ ಯುಗಾದಿ ಹಾಗೂ ವರ್ಷಾಚರಣೆ ಆರಂಭಿಸುತ್ತಾರೆ. ದಕ್ಷಿಣ ಭಾರತದಲ್ಲಿ ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲೂ ಸೌರಮಾನ ಯುಗಾದಿಯ ಪಂಚಾಂಗ ಅನುಸರಿಸಲಾಗುತ್ತದೆ. ಚಾಂದ್ರಮಾನ ಹೆಸರೇ ಹೇಳುವಂತೆ ಚಂದ್ರಾಚಾರದಿಂದಲೂ, ಸೌರಮಾನವನ್ನು ಸೂರ್ಯನು ಮೇಷ ರಾಶಿ ಪ್ರವೇಶಿಸುವ ದಿನದಿಂದಲೂ ಆಚರಿಸಲಾಗುತ್ತದೆ.

ಚೈತ್ರ ಮಾಸ : ಹಿಂದೂ ಪಂಚಾಂಗದ ರೀತ್ಯ ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತೀಕ , ಮಾರ್ಗಶಿರ, ಪುಷ್ಯ, ಮಾಘ, ಪಾಲ್ಗುಣ ಎಂಬ 12 ತಿಂಗಳುಗಳಿವೆ. ಜನವರಿ.. ಡಿಸೆಂಬರ್‌ ನಂತೆಯೇ ಇಲ್ಲೂ 12 ತಿಂಗಳೇ. ಚಂದ್ರನು ಹುಣ್ಣಿಮೆಯ ದಿನ ಚಿತ್ತಾ ನಕ್ಷತ್ರದಲ್ಲಿ ಬರುತ್ತಾನೆ. ಹೀಗಾಗೇ ಚಾಂದ್ರಮಾನದ ರೀತ್ಯ ಈ ತಿಂಗಳಿಗೆ ಚೈತ್ರ ಮಾಸ ಎಂದು ಹೆಸರು.

ಪ್ರಕೃತಿಯ ಋತುಪರಿವರ್ತನೆಯಿಂದ ಈ ಮಾಸದಲ್ಲಿ ಹಣ್ಣೆಲೆಗಳೆಲ್ಲಾ ಉದುರಿ, ಹೊಸ ಚಿಗುರೆಲೆ ಪಲ್ಲವಿಸುತ್ತವೆ. ಗಿಡ ಮರಗಳಲ್ಲಿ ಹೂ, ಹಣ್ಣು ಕಾಣಿಸಿಕೊಳ್ಳುತ್ತವೆ. ಮನುಷ್ಯನ ಶರೀರದಲ್ಲೂ ಸಾಕಷ್ಟು ಬದಲಾವಣೆ ಆಗುತ್ತದೆ. ಹಾವು ಪೊರೆ ಬಿಡುವ ಮಾದರಿಯಲ್ಲೇ ಶಿಶಿರದ ಚಳಿಯ ನಂತರ ಬಿರಿದ ಚರ್ಮದ ಹೊಟ್ಟು ಉದುರಿ, ಹೊಸ ಚರ್ಮದೊಂದಿಗೆ ಮನುಷ್ಯನಲ್ಲಿ ನವಚೈತನ್ಯ ಮೂಡುತ್ತದೆ. ಪ್ರಕೃತಿಯ ವೈಭವ ಕಾಣುತ್ತಾ ಮನಸ್ಸು ಉಲ್ಲಸಿತವಾಗಿರುತ್ತದೆ. ಹೀಗಾಗೇ ಆನಂದ ತರುವ ಈ ತಿಂಗಳಲ್ಲಿ ಹೊಸವರ್ಷದ ಹಬ್ಬವನ್ನು ಆಚರಿಸುವ ಪದ್ಧತಿಯನ್ನು ನಮ್ಮ ಹಿರೀಕರು ಅನುಷ್ಠಾನಕ್ಕೆ ತಂದಿದ್ದಾರೆ ಎನ್ನಲಡ್ಡಿಯಿಲ್ಲ.

ಮುಖಪುಟ / ಯುಗಾದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+