ತನ್ನಿರೆ ಹಾಲ ತನಿಯೆರೆಯೋಣ, ತಾಯ ಹಾಲ ಋಣ
ಪಂಚಮಿ ಹಬ್ಬ ಉಳಿದಾವ ದಿನ ನಾಕಾ, ಅಣ್ಣ ಬರಲಿಲ್ಲ ಯಾಕೋ ಕರಿಯಾಕಾ?....., ನಾಗರಪಂಚಮಿ ನಾಡಿಗೆ ದೊಡ್ಡದು ನಾರಿಯರೆಲ್ಲರು ಕುಣಿದಾರು....... ತನ್ನಿರೆ ಹಾಲ ತನಿಯೆರೆಯೋಣ ತಾಯ ಹಾಲ ಋಣ ತೀರಿಪ ಇಂದೆ ಪುಣ್ಯದಿನ..... ಮುಂತಾದ ಹಾಡುಗಳು, ಪದ್ಯದ ಸಾಲುಗಳು ನಾಗರ ಪಂಚಮಿಯ ಹಿರಿಮೆಯನ್ನು ಸಾರುತ್ತವೆ.
ಶ್ರಾವಣ ಶುದ್ಧ ಪಂಚಮಿಯಂದು ಆಚರಿಸುವ ಈ ಹಬ್ಬ ಭ್ರಾತೃತ್ವದ ಸಂಕೇತ. ನಾಗರ ಪಂಚಮಿ ಅಥವಾ ಗರುಡ ಪಂಚಮಿ ಎಂದೂ ಇದನ್ನು ಕರೆಯುವುದುಂಟು. ನಾಗ ಪಂಚಮಿಯ ದಿನ ಹಾವಿನ ಹುತ್ತಕ್ಕೆ ಅಥವಾ ಮನೆಯಲ್ಲಿ ಹುತ್ತದ ಮಣ್ಣಿಗೆ, ರಂಗೋಲಿಯಿಂದ ಬರೆದ ನಾಗರ ಹಾವಿನ ಚಿತ್ರಕ್ಕೆ ಇಲ್ಲವೇ ನಾಗರ ಪ್ರತಿಮೆಗೆ ಹಾಲೆರೆಯುವುದು ವಾಡಿಕೆ.
ಇದನ್ನು ಕಂಡೇ ಕಲ್ಲು ನಾಗರ ಕಂಡರೆ ಹಾಲೆರೆವರಯ್ಯ, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂದು ವಚನಕಾರರು ಹಾಡಿದ್ದು. ಹಿಂದಿನಿಂದಲೂ ಶ್ರಾವಣ ಶುದ್ಧ ಪಂಚಂಮಿಯಂದು ಈ ಹಬ್ಬವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸುತ್ತಾರೆ. ಶ್ರಾವಣ ಶುದ್ಧ ಪಂಚಮಿಯಂದೇ ಏಕೆ ಈ ಹಬ್ಬ ಆಚರಿಸಬೇಕು. ನಿರ್ದಿಷ್ಟವಾದ ತಿಂಡಿಯನ್ನೇ ಅಂದೇಕೆ ಮಾಡಬೇಕು? ಅಂದು ತನಿ ಏರೆಯುವುದು ಏಕೆ?
ನಿಮ್ಮ ಪ್ರಶ್ನೆಗೆ ಹೀಗಿದೆ ಉತ್ತರ : ಸಾಮಾನ್ಯವಾಗಿ ಪಂಚಮಿಯಂದು ಎಣ್ಣೆಯಲ್ಲಿ , ತುಪ್ಪದಲ್ಲಿ ಕರಿದ ತಿಂಡಿಗಳನ್ನು ಮಾಡುವುದಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆಯಂತೆ. ಚಂದ್ರನು ಶ್ರಾವಣ ಪಾಡ್ಯದಿಂದ ಪ್ರತಿ ದಿನವೂ 12 ಡಿಗ್ರಿಯಂತೆ ಚತುರ್ಥಿಯವರೆಗೆ 48 ಡಿಗ್ರಿ ಕೋನಕ್ಕೆ ಬರುತ್ತಾನೆ. ಅಂದು ಅವನು 60 ಡಿಗ್ರಿಯತ್ತ ಸಂಚರಿಸುತ್ತಾನೆ. ಚಂದ್ರನು ತ್ರಿಕೋನಕ್ಕೆ ಬಂದಾಗ ಅವನ ಪ್ರಭಾವ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಒಳ್ಳೆಯ ಸಾತ್ವಿಕ ಆಹಾರ ಸೇವಿಸಬೇಕಂತೆ ( ಎಲ್ಲ ಕಾಲಕ್ಕೂ ಈ ಮಾತು ನಿಮಗೆ ಗೊತ್ತಿರಲಿ ಎನ್ನುತ್ತಾರೆ ಅನುಭವಿಕರು) ಇದು ವಿಜ್ಞಾನ ಕಣಯ್ಯ ನಿನ್ನ ಆರೋಗ್ಯಕ್ಕೆ ತುಂಬಾ ಉಪಯುಕ್ತ ಎಂದರೆ ನಮ್ಮ ಜನಕ್ಕೆ ಪಥ್ಯವಾಗುವುದಿಲ್ಲ . ಎಂತಲೇ ಇದಕ್ಕೆ ಶಾಸ್ತ್ರದ ಚೌಕಟ್ಟು ಕಟ್ಟಿದರು. ಸಾತ್ವಿಕ ಆಹಾರಗಳ ಪಟ್ಟಿಯಲ್ಲಿ ಉದ್ದಿನ ಕಡುಬು ಹಾಗೂ ಸಿಹಿ ಕಡುಬು, ತಂಬಿಟ್ಟುಗಳನ್ನು ಸೇರಿಸಿದರು. ನಮಗಂತೂ ಇದರಿಂದ ಒಳ್ಳೆಯದೇ ಆಯಿತು. ನಾಳೆ ಕಡುಬು ಸಿಗುತ್ತದೆ. ಹಬ್ಬವಲ್ಲದಿದ್ದರೆ ನಮ್ಮ ಹೆಂಗಸರು ಇಂಥ ರುಚಿರುಚಿಯಾದ ತಿಂಡಿಗಳನ್ನು ಸಾಮಾನ್ಯವಾಗಿ ಮಾಡುವುದಿಲ್ಲ, ಮತ್ತದೇ ಉಪ್ಪಿಟ್ಟನ್ನು ಮಾಡಿಟ್ಟು ಟೆಲಿ ಧಾರಾವಾಹಿ ನೋಡುತ್ತಾ ಕುಕ್ಕರಬಡಿಯುತ್ತಾರೆ.
ಅಂದು ಸಾತ್ವಿಕ ಆಹಾರ ತಿಂದು ಪಾರಮಾರ್ಥಿಕ ಚಿಂತನೆಗೆ ಸಮಯ ಸೂಕ್ತವಾದುದರಿಂದ ಹಾವಿನ ಹೆಡೆಗೆ ಪೂಜೆ ಮಾಡಿ ನಮ್ಮ ಮೆದುಳನ್ನು ಇನ್ನಷ್ಟು ಚುರುಕು ಮಾಡಿಕೊಳ್ಳಬೇಕು ಎನ್ನುವುದು ಅನೂಚಾನವಾಗಿ ಬಂದಿರುವ ಆಲೋಚನೆ . ಸಾತ್ವಿಕ ರೀತಿಯಲ್ಲಿ ಮನುಷ್ಯನ ಮೆದುಳನ್ನು ಜಾಗೃತ ಗೊಳಿಸುವ ಈ ನಂಬಿಕೆಗೆ ಕುಂಡಲಿನಿ ಎನ್ನುತ್ತಾರೆ.












Click it and Unblock the Notifications