ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾತ್ರಿ ವಿಶೇಷ : ಶ್ರೀಶೈಲ ಮಲ್ಲಿಕಾರ್ಜುನ ಮಹಾತ್ಮೆ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಆಂಧ್ರಪ್ರದೇಶದಲ್ಲಿರುವ ಶ್ರೀಶೈಲ ಪುಣ್ಯಕ್ಷೇತ್ರವು ಹೈದ್ರಾಬಾದ್ ಕರ್ನಾಟಕಕ್ಕೆ ಹತ್ತಿರವಾಗಿದೆ. ಇಲ್ಲಿರುವ ಶಿವಲಿಂಗವನ್ನು ಜ್ಯೋತಿರ್ಲಿಂಗದಲ್ಲಿ ಎರಡನೆಯದಾಗಿ ಪರಿಗಣಿಸಲಾಗುತ್ತದೆ. ಈ ಜ್ಯೋತಿರ್ಲಿಂಗದ ಪೌರಾಣಿಕ ಹಿನ್ನೆಲೆಯು ಬಹಳಷ್ಟು ಜನರಿಗೆ ಗೊತ್ತಿದೆ. ಆದರೂ ಇಲ್ಲಿ ಆ ಕಥೆಯನ್ನು ಚುಟುಕಾಗಿ ಹೀಗೆ ಹೇಳಬಹುದು.

ಸರ್ಪರಾಜನು ಶಿವನನ್ನು ಒಲಿಸಿಕೊಂಡು ತನ್ನ ರಕ್ಷಿಸಲು ಮನವಿ ಮಾಡಿದ್ದನೊಮ್ಮೆ. ಆಗ ಮಹಾಶಿವನು ಶೇಷದೇವನಿಗೆ ಮುಂದೊಂದು ದಿನ ನಾನು ಶ್ರೀಶೈಲದಲ್ಲಿ ನೆಲೆಸಿರುತ್ತೇನೆ. ಆಗ ನೀನು ಬೆಟ್ಟವಾಗಿರುತ್ತೀಯಾ. ಆ ಬೆಟ್ಟವು ಹಾವಿನ ರೂಪದಲ್ಲಿಯೇ ಇರುತ್ತದೆ. ಹೆಡೆಯಂತಿರುವ ಪ್ರದೇಶದಲ್ಲಿ ವಿಷ್ಣುವು ವಾಸ ಮಾಡಿದರೆ, ನಾನು ಬಾಲದ ಬಳಿ ನೆಲೆಸುತ್ತೇನೆಂದಿದ್ದನು.

ಇದೇ ಇಂದಿನ ಶೇಷಗಿರಿ ಪರ್ವತವಾಗಿ ಕರೆಸಿಕೊಳ್ಳುತ್ತಿದೆ. ಇಂಥ ದೈವಸ್ವರೂಪದ ಬೆಟ್ಟದಲ್ಲಿ ಮಹಾಶಿವನು ಕೈಲಾಸ ಪರ್ವತದಿಂದ ಬಂದು ಸ್ವಲ್ಪ ದಿನ ನೆಲೆಸಿದನು. ತನ್ನೊಂದಿಗೆ ಪಾರ್ವತಿ, ಗಣೇಶ ಹಾಗೂ ಷಣ್ಮುಖರನ್ನು ಕರೆತಂದನು. ಇಂದ್ರಲೋಕದಲ್ಲಿನ ಎಲ್ಲ ದೇವಾನುದೇವತೆಗಳು ಮಹಾಶಿವನ ಸೇವೆಗೆಂದು ಈ ಬೆಟ್ಟದಲ್ಲಿಯೇ ವಾಸ ಮಾಡಹತ್ತಿದರು. ಬೆಟ್ಟದಲ್ಲಿದ್ದಷ್ಟು ದಿನ ಮಹಾಶಿವನಿಗೆ ಭಕ್ತಿಯಿಂದ ಸೇವೆ ಮಾಡಿದ ಶಿವಭಕ್ತ ರವೀರನು ಇಲ್ಲಿಯೇ ಕಣಗಲಿ ಮರವಾಗಿ ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ.

Shivaratri : Mallikarjuna temple in Srisailam

ಹೀಗಿರುವಾಗ, ಶಿವ-ಪಾರ್ವತಿಯರಿಬ್ಬರೂ ಉಭಯಕುಶಲೋಪರಿ ಮಾತನಾಡುತ್ತಾ ಕುಳಿತಿದ್ದರು. ಆಗ ಪಾರ್ವತಿ ಮತ್ತು ಮಹಾಶಿವ, ಗಣೇಶ-ಷಣ್ಮುಖರನ್ನು ಕರೆದು ಇಬ್ಬರೂ ಈ ಭೂಲೋಕವನ್ನು ಏಳು ಬಾರಿ ಪ್ರದಕ್ಷಿಣೆ ಹಾಕಿ ಬನ್ನಿ ಎಂದರು. ಯಾರು ಮೊದಲು ಬರುತ್ತಾರೋ ಅವರಿಗೆ ಬಹುಮಾನ ನೀಡತ್ತೇವೆ ಎಂದರು. ತಂದೆ-ತಾಯಿಯ ಅಪ್ಪಣೆಯಂತೆ ಷಣ್ಮುಖನು ಎಲ್ಲರ ಸಮ್ಮುಖದಲ್ಲಿ ಭೂಪ್ರದಕ್ಷಿಣೆಗೆ ತನ್ನ ವಾಹನ ನವಿಲನ್ನು ಏರಿಕೊಂಡು ಹೊರಟು ಹೋದನು.

ಇತ್ತ ಗಣೇಶನು ಹೆಚ್ಚೇನೂ ಯೋಚಿಸದೇ ತನ್ನ ವಾಹನವಾದ ಇಲಿಯನ್ನೇರಿ ಅಲ್ಲಿಯೇ ಕುಳಿತಿದ್ದ ಶಿವ-ಪಾರ್ವತಿಯರನ್ನೇ ಏಳು ಬಾರಿ ಪ್ರದಕ್ಷಿಣೆ ಹಾಕಿ ಅವರೆದುರಿಗೆ ಕರಮುಗಿದು ನಿಂತನು. ನನ್ನ ಪ್ರದಕ್ಷಿಣೆ ಕಾರ್ಯ ಮುಗೀತು ಎಂದನು. ಇದರಿಂದ ವಿಸ್ಮಯಗೊಂಡ ಎಲ್ಲ ದೇವಾನುದೇವತೆಗಳು ಮಹಾಶಿವನ ಉತ್ತರಕ್ಕಾಗಿ ಕಾಯ್ದು ನಿಂತರು. ಮಹಾಶಿವನು ಗಣೇಶನಿಗೆ ಏನಿದು ಇಲ್ಲೇ ನಮ್ಮನ್ನು ಸುತ್ತು ಹೊಡೆದು ಭೂಲೋಕ ಪ್ರದಕ್ಷಿಣೆ ಆಯ್ತು ಅಂದರೆಂಗೆ ಎಂದು ಪ್ರಶ್ನಿಸಿದನು. ಆಗ ಗಣೇಶನು ಈ ಲೋಕವೆಂದರೇನೇ ನೀನು ತಂದೆ, ನಿನ್ನನ್ನೇ ಪ್ರದಕ್ಷಿಣೆ ಹಾಕಿದರಾಯ್ತಲ್ಲಾ ಲೋಕಪ್ರದಕ್ಷಿಣೆ ಆದಂಗಲ್ಲವೇ ಎಂದು ಶಿವನ ಶಕ್ತಿಯನ್ನು ಕೊಂಡಾಡಿದನು.

ಗಣೇಶನ ಮಾತಿನಿಂದ ಪ್ರಸನ್ನರಾದ ಶಿವ-ಪಾರ್ವತಿಯರು ಸಿದ್ಧಿ-ಬುದ್ಧಿ ಎಂಬ ಕನ್ಯೆಯರೊಂದಿಗೆ ಅವನ ಮದುವೆ ಮಾಡಿಸಿದರು. ಅವರೊಂದಿಗೆ ತನ್ನ ಹೊಸಜೀವನವನ್ನು ಗಣೇಶನು ಆರಂಭಿಸಿದನು. ಏಳು ಪ್ರದಕ್ಷಿಣೆಗಳನ್ನು ಮುಗಿಸಿಕೊಂಡು ತಂದೆ-ತಾಯಿಯಲ್ಲಿದ್ದಲ್ಲಿಗೆ ಷಣ್ಮುಖನು ಬರುವಾಗ ಮಹರ್ಷಿ ನಾರದರು ಅವನನ್ನು ತಡೆದರು. ಏನಿದು ನಿನ್ನ ಸಹೋದರ ಗಣೇಶನ ಮದುವೆಯಾಗುವ ಶುಭ ಸಂದರ್ಭದಲ್ಲಿ ನೀನೆಲ್ಲಿದ್ದೆ ಎಂದು ಆಶ್ಚರ್ಯದಿಂದ ಕೇಳಿದರು. ಆಗ ಷಣ್ಮುಖನು ಭೂಪ್ರದಕ್ಷಿಣೆ ಸಂಗತಿ ವಿವರಿಸಿದನು. ಇದಕ್ಕೆ ನಾರದರು ಹಾಗಾದರೆ ಇದರಲ್ಲೇನೋ ಗುಟ್ಟು ಅಡಗಿದೆ ಎಂದು ಷಣ್ಮುಖನ ಕಿವಿಯೂದಿದರು. ನಿನ್ನನ್ನು ಭೂಪ್ರದಕ್ಷಿಣೆಗೆಂದು ಅತ್ತ ಕಳಿಸಿ ತಮ್ಮ ಪ್ರೀತಿಯ ಮಗ ಗಣೇಶನ ಮದುವೆ ಮಾಡಿಸಿದ್ದಾರೆ ಎಂದು ಶಿವ-ಪಾರ್ವತಿಯರ ಬಗ್ಗೆ ಚಾಡಿ ಹೇಳಿದರು ನಾರದರು.

ನಾರದರು ಜಗಳದ ದಾರಿ ಯಾರಿಗಾದರೂ ತೋರಿಸಿದ್ದರೆ ಅದರಲ್ಲಿ ಲೋಕಕಲ್ಯಾಣದ ವಿಷಯವೇ ಇರುತ್ತವೆ ಎಂಬುದು ಹಿಂದಿನ ಹಲವಾರು ಪೌರಾಣಿಕ ಕಥೆಗಳಲ್ಲಿ ನಮಗೆಲ್ಲ ಗೊತ್ತಿರುವ ವಿಷಯವೇ. ನಾರದರ ಮಾತಿನಿಂದ ಶಿವ-ಪಾರ್ವತಿಯರನ್ನು ದ್ವೇಷಿಸಲಾರಂಭಿಸಿದ ಷಣ್ಮುಖನು ಸಿಟ್ಟಿನ ಭರದಲ್ಲಿ ಪರ್ವತವೊಂದರಲ್ಲಿನ ಗುಹೆಯಲ್ಲಿ ಹೋಗಿ ಕುಳಿತುಬಿಟ್ಟನು. ವಿಷಯ ತಿಳಿದು ಶಿವ-ಪಾರ್ವತಿಯರು ಪುತ್ರಶೋಕದಿಂದ ಕಂಗಾಲಾಗಿ ಕುಳಿತು ಬಿಟ್ಟರು. ಶಿವ-ಪಾರ್ವತಿಯರ ಪರಿಸ್ಥಿತಿ ನೋಡಲಾಗದೇ ದೇವಾನುದೇವತೆಗಳು ಷಣ್ಮುಖನಿದ್ದ ಗುಹೆಗೆ ಹೋಗಿ ಅವನ ಮನವೊಲಿಸಿದರು.

ಹಠ ಬಿಡದ ಷಣ್ಮುಖನು ಕಡೆಗೆ ಪ್ರತಿ ಹುಣ್ಣಿಮೆ ದಿನದಂದು ಮಹಾಶಿವ ಮತ್ತು ಅಮವಾಸ್ಯೆಯಂದು ಮಾತೆ ಪಾರ್ವತಿ ನನ್ನ ದರ್ಶನ ಪಡೆಯಬಹುದೆಂದನು. ದೇವಾನುದೇವತೆಗಳು ಬಂದು ಶಿವ-ಪಾರ್ವತಿಯರಿಗೆ ಈ ವಿಷಯ ತಿಳಿಸಿದರು. ಪುತ್ರಶೋಕದಿಂದ ಬಿಡುಗಡೆ ಮಾಡಿಸಿದ ದೇವಾನುದೇವತೆಗಳಿಗೆ ಮಹಾಶಿವನು ವರ ಬೇಡಿರೆಂದು ಕೇಳಿಕೊಂಡನು. ಆಗ ಅವರು ಮಹಾಶಿವನೇ ನೀನು ದಂಪತಿ ಸಮೇತನಾಗಿ ಇಲ್ಲಿಯೇ ನೆಲೆಸಿ ಲೋಕಕಲ್ಯಾಣ ಮಾಡು ಎಂದು ಬೇಡಿಕೊಂಡರು. ದೇವತೆಗಳ ಬೇಡಿಕೆಗೆ ಅಸ್ತು ಎಂದ ಮಹಾಶಿವನು ಅಂದಿನಿಂದ ಶ್ರೀಶೈಲ ಪರ್ವತದಲ್ಲಿ ಪಾರ್ವತಿ ಸಮೇತನಾಗಿ ನೆಲೆಸಿದ್ದಾನೆ ಎಂಬ ನಂಬಿಕೆ ನಮ್ಮವರಲ್ಲಿದೆ.

ಇಲ್ಲಿರುವ ಮಲ್ಲಿಕಾರ್ಜುನ-ಭ್ರಮರಾಂಬಿಕೆಯನ್ನು ಶಿವಭಕ್ತರು ಅನಾದಿ ಕಾಲದಿಂದಲೂ ಭಕ್ತಿಯಿಂದ ಪೂಜಿಸುತ್ತ ಬಂದಿದ್ದಾರೆ. ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀಶೈಲ ಮಲ್ಲಿಕಾರ್ಜುನನ ಶಕ್ತಿ ಅವನಿಂದ ವರ ಪಡೆದ ಭಕ್ತರಿಗೆ ಸಾಕಷ್ಟು ಗೊತ್ತಿದ್ದ ವಿಷಯವೇ ಆಗಿದೆ. ಈ ಶಿವರಾತ್ರಿ ಸಮಯದಲ್ಲಿ ಹತ್ತಿರವಾದ ಈ ಜ್ಯೋತಿರ್ಲಿಂಗವನ್ನು ದರ್ಶನ ಮಾಡುವ ಸೌಭಾಗ್ಯ ನಿಮ್ಮದಾಗಲಿ ಎಂಬುದು ನಮ್ಮ ಹಾರೈಕೆ.

"ಉಜ್ಜಯಿನಿ ಮಹಾಕಾಲೇಶ್ವರ" ಎಂಬುದು ಮುಂದಿನ ಲೇಖನದಲ್ಲಿ (ಒನ್ ಇಂಡಿಯಾ)

ಶಿವರಾತ್ರಿ ಟಿಪ್ಸ್ : ಅನಾರೋಗ್ಯವಾಗಿ ಔಷಧೋಪಚಾರ ಪಡೆದುಕೊಳ್ಳಲೇಬೇಕಾದರೆ ಅಂಥವರು ಪೌಷ್ಟಿಕವಾದ ಆಹಾರ ಸೇವಿಸಿ ಅಲ್ಪ ಉಪವಾಸ ಆಚರಣೆ ಮಾಡಬಹುದು.

ಶಿವಕೃಪೆಗೆ : ಮಹಾಶಿವನು ವಾಸ ಮಾಡುವುದು ಸ್ಮಶಾನದಲ್ಲಿ. ಹೀಗಾಗಿ ಶಿವನಿಂದೆ ಮಾಡಿದವರಿಗೆ ಉಳಿಗಾಲವಿಲ್ಲ.

English summary
Mahashivaratri will be celebrated all over Karnataka and India devotees of Lord Shiva. Shivaratri is considered as Shiva's birthday. Astrologer S.S. Naganurmath writes about Mallikarjuna temple in Srisailam, Andhdra Pradesh. It is considered as one of 12 jyotirlingas in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X