ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದಿನ ಶಿವರಾತ್ರಿ ಜಾತ್ರೆಯ ಮಜಾ ಇಂದೆಲ್ಲಿ?

By * ವಿನಾಯಕ ಪಟಗಾರ, ಬೆಟ್ಕುಳಿ, ಕುಮಟಾ (ಉ.ಕ)
|
Google Oneindia Kannada News

Shivaratri festival in good old days
ಮತ್ತೆ ಶಿವರಾತ್ರಿ ಬಂದಿದೆ. ನಮಗೆಲ್ಲ ಶಿವರಾತ್ರಿ ಒಂದು ರೀತಿ ಚುಮು ಚುಮು ಚಳಿಗಾಲಕ್ಕೆ ತಣ್ಣನೆಯ ವಿದಾಯ ಹಾಗೂ ಬೆವರಿನ ಬೇಸಿಗೆಗೆ ಬಿಸಿಬಿಸಿಯಾದ ಸ್ವಾಗತ ಕೊರುವ ದಿನವೆಂದೆ ರೂಢಿ. ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಭಕ್ತರಿಗೆ ಬರವಾದರೂ ಶಿವನ ತಾಣಗಳಿಗೇನು ಬರವಿಲ್ಲ. ನಾವೆಲ್ಲ ಗೋಕರ್ಣಕ್ಕೆ ತೀರ ಹತ್ತಿರ ಇರುವುದರಿಂದ ಗೋಕರ್ಣದ ಶಿವರಾತ್ರಿ ಜಾತ್ರೆ ಜೊತೆ ನಮಗೆಲ್ಲ ಅವಿನಾಭಾವ ಸಂಬಂಧ.

ಇವತ್ತಿನ ಜಾತ್ರೆಗಳು ಮೊದಲಿನ ಸಡಗರ ಸಂಭ್ರಮ ತರುತ್ತಿಲ್ಲ ಅಥವಾ ನಮಗೆ ಜಾತ್ರಾ ಸಂಭ್ರಮವನ್ನು ಸವಿಯಲು ಇವತ್ತಿನ ಯಾಂತ್ರಿಕ ಜೀವನ ಬಿಡುತ್ತಿಲ್ಲ. ಇದಕ್ಕೆ ಶಿವರಾತ್ರಿ ಕೂಡ ಹೊರತಲ್ಲ. ತುಂಬಾ ಹೆಚ್ಚೇನಲ್ಲ, ಹತ್ತಾರು ವರ್ಷಗಳ ಹಿಂದಿನ ಮಾತು. ಗೋಕರ್ಣದ ಶಿವರಾತ್ರಿ ಎಂದರೆ ನಮಗೆ ಒಂದು ವಾರದಿಂದಲೇ ಜಾತ್ರೆಯನ್ನು ಯಾವ ರೀತಿ ಭಾಗವಹಿಸುವುದು ಅಂತ ಗೆಳೆಯರ ಜೊತೆಗೂಡಿ ಪ್ಲಾನ್ ಹಾಕುತ್ತಿದ್ದೆವು. ಟೂರಿಂಗ್ ಟಾಕೀಸ್ ಸಿನಿಮಾ ನೋಡುವುದೋ, ಯಕ್ಷಗಾನ ವೀಕ್ಷಿಸುವುದೋ ಎಂಬ ಗೊಂದಲ. ಜೊತೆಗೆ ನಾಟಕಗಳನ್ನು ನೋಡಿದ್ದರೆ ಬಜೆಟ್ ಹೊಂದಿಸುವುದು ಹೇಗೆ ಎಂಬ ಚಿಂತೆ.

ಹೋಗುವಾಗ ಬಸ್ಸಲ್ಲಿ ಹೋಗಿ, ಬರುವಾಗ ನಡೆದುಕೊಂಡು ಬರುವುದು. ನಡೆದುಕೊಂಡು ಬರುವುದಾದರೆ ಕಡಿಮೆ ದೂರದ ಅಡ್ಡ ಹಾದಿ ಯಾವುದೆಂದು ತಿಳಿದುಕೊಂಡು, ರಾತ್ರಿ ಕದ್ದು ಮೀನು ಹಿಡಿಯಲು ಬಲೆ ಹಾಕಲು ಯೋಜನೆ ಹೂಡುತ್ತಿದ್ದೆವು. ಇದನ್ನು ಇಷ್ಟಪಡದ ಸ್ನೇಹಿತನೊಬ್ಬ ರಾತ್ರಿ ಅಲ್ಲಲ್ಲಿ ಅಡ್ಡಾಡುವ ದೆವ್ವಗಳ ಬಗ್ಗೆ ತನ್ನ ಸ್ವಾನುಭವವನ್ನು ಭಯಾನಕವಾಗಿ ಹೇಳಿ ನಮಗೆ ಒಳಗಿಂದೊಳಗೆ ಚಳಿ ನಡುಕ ಹುಟ್ಟಿಸುತ್ತಿದ್ದ. ಇದರ ಜೊತೆಗೆ ಜಾತ್ರೆಗೆ "ಅವಳು" ಬರಬಹುದೇ? ಬಂದರೇ ಅವಳ ಮುಂದೆ ಹೇಗೆ ನಾನು ಹೇಗೆ ಕಾಣಿಸಿಕೊಳ್ಳಬೇಕು, ಎನ್ನುವುದರ ಕುರಿತು ಎಲ್ಲರೂ ತಮ್ಮ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದರು.

ಶಿವರಾತ್ರಿ ಜಾತ್ರೆ ಬರೋಬ್ಬರಿ ಮೂರು ದಿನದ ಮೂರು ರೀತಿಯ ವೈರೈಟಿ ಜನಕ್ಕೆ. ಮೊದಲಿನ ದಿನ ರಾತ್ರಿ ಇಲ್ಲವೇ ಉಪವಾಸದ ದಿನ ಬೆಳಿಗ್ಗೆ ಮೂರು ಗಂಟೆಗೆ ಯಾವುದಾರೂ ಜಾತ್ರಾ ಗಾಡಿ ಹಿಡಿದು ಹೋಗಿ ಮೂಗು ಬಾಯಿ ಕಿವಿ ಮುಚ್ಚಿ ಕೋಟಿತೀರ್ಥದಲ್ಲಿ ಮುಳಗೆದ್ದು ಮೈಯನ್ನೆಲ್ಲಾ ತುರುಸಿಕೊಳ್ಳುತ್ತಾ ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತರೆ ಉಪವಾಸದ ಬಹುತೇಕ ವೇಳೆಯನ್ನು ಅಲ್ಲೇ ಕಳೆದ ಹಾಗೆಯೆ. ಹಾಗೂ ಹೀಗೂ ದೂಡುತ್ತಾ, ಪೊಲೀಸರ ಕೆಂಗಣ್ಣಿಗೆ ಒಳಗಾಗುತ್ತಾ, ಆಗಾಗ ಸರದಿ ಸಾಲಿಗೆ ಬ್ರೆಕ್ ನೀಡುವ "ದೊಡ್ಡವರ ದೇವರ ದರ್ಶನ"ಕ್ಕೆ ಹಿಡಿ ಶಾಪ ಹಾಕುತ್ತ, ಪೊಲೀಸರ ಗೆಳತನ ಮಾಡಿ "ಕಾಣಿಕೆ" ಇಟ್ಟು ಒಂದೇ ಸಲ ಸರದಿ ಸಾಲಿನಿಂದ ಪ್ರೊಮೋಷನ್ ಪಡೆದು ದೇವರ ದರ್ಶನಕ್ಕೆ ಎಂಟ್ರಿ ಪಡೆಯವಲ್ಲಿಗೆ ಒಂದು ಹಂತದ ಉಪವಾಸ ಮುಗಿದಂತೆ.

ಇನ್ನು ಎರಡನೇ ದಿನ "ಬಿಡ ದಿನ" ಇದು ನಮ್ಮ ಪೋಲಿ ಮುಂಡೆವು ಭಾಷೆಯಲ್ಲಿ ಮುದುಕರ ಜಾತ್ರೆ. ನಮ್ಮ ಹಿರಿಯರು ತೀರಿ ಹೋದವರ ನೆನಪಿಗೆ ಬ್ರಾಹ್ಮಣರಿಗೆ ಪಡಿ ಕೊಡುವ ಪದ್ದತಿ. ಎರಡು ಕುಡಿ ಬಾಳೆ ಏಲೆ ಮೇಲೆ ಸ್ವಲ್ಪ ಅಕ್ಕಿ, ಒಂದು ತೆಂಗಿನ ಕಾಯಿ, ಹಾಗೂ ಹತ್ತರದೋ ಐದರದೋ ಒಂದು ನೋಟನ್ನು 25 ಪೈಸೆ ಒಂದು ನಾಣ್ಯ(ಅಂದಿನ ಕಾಲದಲ್ಲಿ)ವನ್ನು ಇಟ್ಟು ತಮ್ಮ ಖಾಯಂ ಬ್ರಾಹ್ಮಣರಿಗೆ ಪಡಿ ಇಟ್ಟು ಕಾಲಿಗೆ ಬೀಳುತ್ತಿದ್ದ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ಕ್ರಮೇಣ ನಾವೂ ದೊಡ್ಡವರಾದಂತೆ ಮುಖದ ಮೇಲೆ ಮೀಸೆ ಮೂಡತೊಡಗಿದ ಮೇಲೆ ನಮಗೆ "ಬಿಡ ದಿನ" ಮತ್ತು ಹಿರಿಯರ ಜೊತೆ ಹೋಗೋದು ಅವಮಾನವೆನಿಸತೊಡಗಿತ್ತು. ಮುಂದೆ ನಮಗೆ "ಬಿಡ ದಿನ " ಬ್ಲಾಕ್ & ವೈಟ್ ಟಿವಿಯಲ್ಲಿ ಕಂಡು ಬರುವ ಚಿತ್ರದಂತೆ ನೀರಸವೆನಿಸತೊಡಗಿತ್ತು. ಬಣ್ಣಬಣ್ಣ ಬಟ್ಟೆಗಳಲ್ಲಿ ಓಡಾಡುವ ಹುಡುಗಿಯರ ಕನಸುವ ಕಾಣುವ ನಮಗೆ ಮಾರನೆ ದಿನದ ಶಿವರಾತ್ರಿ ಜಾತ್ರೆಯ ಧ್ಯಾನ.

ಮೂರನೆ ದಿನ ಶಿವರಾತ್ರಿ ತೇರು ಏಳೆಯವ ದಿನ. ಶಿವರಾತ್ರಿ ಹಬ್ಬದ ಕೊನೆಯ ದಿನ. ನಮ್ಮಂತಹ ಹೆದರುಪುಕ್ಕಲ ಪೋಲಿಗಳಿಗೆ, ಕುಡಿಯಬೇಕು ಎನ್ನುವವರಿಗೆ, ಕುಡುಕರಿಗೆ, ತುಂಟ ಹುಡುಗಿಯರಿಗೆ, ಪ್ರೇಯಸಿ ತನ್ನನ್ನು ನೋಡಿಯಾಳು ಎನ್ನುವ ಆಶೆಯ ಭಗ್ನ ಪ್ರೇಮಿಗಳಿಗೆ, ಹುಡುಗಿಯರಿಗೆ ಕಾಳು ಹಾಕುವ ಪೋಲಿ ಹುಡುಗರಿಗೆ, ಸುಂದರ ಆಂಟಿಯರನ್ನು ನೋಡಿ ಕಣ್ ತುಂಬಿಸಿಕೊಳ್ಳಲು ಹೆಂಡತಿಯನ್ನು ಮನೆಯಲ್ಲಿ ಬಿಟ್ಟು ಬಂದಿರುವ ತುಂಟ ಅಂಕಲ್‌ಗಳಿಗೆ, ಈ ಸಲನಾದ್ರೂ ಯಾರಾದರೂ ವರ ನನ್ನ ನೋಡಿ ವರಸಿಯಾನು ಎಂದು ಕಾಯುತ್ತಿರುವ ವಧುಗಳಿಗೆ, ತೇರು ಎಳೆಯುವ ದಿನ ಹೇಳಿ ಮಾಡಿಸಿದ ದಿನ. ಎಲ್ಲರಿಗೂ ಅವರವರ ಸಾಮರ್ಥ್ಯಕ್ಕನುಗುಣವಾಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು. ಇವರೆಲ್ಲರ ಮಧ್ಯೆ ತೇರಿಗೆ ಬಾಳೆ ಹಣ್ಣು ಹೊಡೆಯಬೇಕು ಎಂದು ಹರಕೆ ಹೊತ್ತವರು, ತೇರನ್ನು ಎಳೆದು ಕೃತಾರ್ಥರಾಗುವವರು, ತೇರನ್ನು ನೋಡಿ ಭಕ್ತಿ ಪರವಶರಾಗುವವರ ಒಂದು ಗುಂಪು ಇದ್ದೇ ಇರುತ್ತದೆ.

ಶಿವರಾತ್ರಿ ತೇರಿನ ದಿನ, ಬೆಳಿಗ್ಗೆ ಹತ್ತು ಗಂಟೆಗೆ ಮನೆಯಲ್ಲಿನ ಬಿಸಿ ಬಿಸಿ ಕುಚ್ಚಗಲಕ್ಕಿ ಗಂಜಿಯನ್ನು, ಸುಟ್ಟ ಒಣ ಮೀನಿನ್ನು ನೆಂಚಿಕೊಂಡು ಊಟಮಾಡಿ, ಆಗತಾನೇ ಚಡ್ಡಿಯಿಂದ ಪ್ಯಾಂಟಿಗೆ ಭಡ್ತಿ ಹೊಂದಿದ ಕಾರಣ ಹೊಸದಾಗಿ ಹೊಲೆಸಿದ ಪ್ಯಾಂಟನ್ನು ಹಾಕಿಕೊಂಡು, ಅದಕ್ಕೆ ದೊಡ್ಡವರಿಂದ ಕಾಡಿ ಬೇಡಿ ಇಸ್ಕೊಂಡ ಬಣ್ಣ ಮಾಸಿದ ಹಳೇ ಬೆಲ್ಟ್‌ನ್ನು ಸಿಕ್ಕಿಸಿಕೊಂಡು, ಕೆಂಪು ಬಿಳಿ ಪಟ್ಟಿ ಪಟ್ಟಿ ಬಣ್ಣದ ಅಂಗಿ ಧರಿಸಿ, ಪ್ಯಾರಾಗಾನ್ ಚಪ್ಪಲಿ ಕಾಲಿಗೆ ಸಿಕ್ಕಿಸಿಕೊಂಡು ಜಾತ್ರೆಗೆ ಹೊರಟರೆ, ಓಣಿಯ ಹೆಂಗಸರು ಯಾವ ಊರು ಹಾಳಗೆಡವಲು ಹೊರಟ್ರೋ ಹಾಳಾದವರೂ ಎಂದು ಬೈದಿದ್ದನ್ನು ಆಶೀರ್ವಾದವೆಂದು ತಿಳಿದು ಗೋಕರ್ಣಕ್ಕೆ ಹೊರಡುವ ನಮ್ಮ ಪೋಲಿ ಹುಡುಗರ ದಂಡು.

ಇನ್ನು ದುಡ್ಡು ಉಳಿಸಲು ಗೂಡ್ಸ್ ರಿಕ್ಷಾನ್ನೋ, ಟ್ರಕ್‌ನ್ನೋ ಹತ್ತಿ ಗೋಕರ್ಣ ಮುಟ್ಟಲಿಕ್ಕೂ ಸೂರ‍್ಯ ನೆತ್ತಿ ಮೇಲೆ ಬರಲಿಕ್ಕೂ ಸರಿಹೋಗುತ್ತೆ. ದಾಹ ತಣಿಸಿಕೊಳ್ಳಲು ತ್ರೀ ಬೈ ಸಿಕ್ಸ್ ಕಬ್ಬಿನ ಹಾಲು ಕುಡಿದ ನಮಗೆ, "ಇವರು ಕೊಟ್ಟ ದುಡ್ಡಿಗಿಂತ ಗ್ಲಾಸ್ ತೊಳೆದ ಖರ್ಚೇ ಹೆಚ್ಚಾಯಿತು" ಎಂಬ ದುರುದುರು ನೋಟ. ತೇರು ಎಳೆಯವ ಸಮಯದರೆಗೆ ಜಾತ್ರಾ ಅಂಗಡಿಯ ಓಣಿಗಳಲ್ಲಿ ಓಡಾಡುತ್ತಾ ಹುಡುಗಿಯರೇ ತುಂಬಿರುವ ಬಳೆ ಅಂಗಡಿಗಳಲ್ಲಿ ನಾವೂ ಹೋಗಿ ಬಳೆ ರೇಟು ಕೇಳುವುದು, ಬಳೆ ವ್ಯಾಪಾರಿ ನಮ್ಮನ್ನು ವಕ್ರದೃಷ್ಟಿಯಿಂದ ನೋಡುವುದು, ಒಂದು ಕ್ಷಣ ಹುಡುಗಿಯೊಬ್ಬಳು ನೋಡಿದಳೆಂದರೆ, ನನ್ನನ್ನೇ ನೋಡುತ್ತಿದ್ದಾಳೆಂದು ಅವಳ ಹಿಂದೆ ಹಿಂದೆ ಹೋಗುವುದು, ಅವಳ ಹಿಂದೆ ಹೋದವನ ಹಿಡಿದು ಪುನ: ನಮ್ಮ ಗುಂಪಿಗೆ ಎಳೆದು ತರುವುದು, ಆಟಿಗೆ ಸಾಮಾನು ಒಂದು ಒಂದೆರಡು ಖರೀದಿಸಿದರೆ ನಾಲ್ಕಾರು ನಮ್ಮ ಜೇಬು ಸೇರುತ್ತಿದ್ದು, ಹೀಗೆ ನಾವಾಡುತ್ತಿದ್ದ ಹುಡುಗಾಟ ಒಂದೆರಡಲ್ಲ.

ಇವತ್ತಿನ ದಿನಗಳಲ್ಲಿ ಶಿವರಾತ್ರಿ ಜಾತ್ರೆ ಜಾತ್ರೆಯಾಗಿಲ್ಲ. ಒಂದು ಕಾರ್ಯಕ್ರಮವಾಗಿದೆ. ಎಲ್ಲವೂ ಅಚ್ಚುಕಟ್ಟು. ಸಾಕಷ್ಟು ವಾಹನ ವ್ಯವಸ್ಥೆ, ಮೂಲಭೂತ ಸೌಕರ‍್ಯ. ಭಕ್ತಾದಿಗಳಿಗೆ ಯಾವುದೇ ತೊಂದರೆ ಇಲ್ಲ. ಸುರಳಿತ ದೇವರ ದರ್ಶನ, ಕಡಿಮೆಯಾಗುತ್ತಿರುವ ಜನಜಂಗುಳಿ, ಉಚಿತ ಊಟದ ವ್ಯವಸ್ಥೆ, ಇನ್ನು ಜನರಿಗೆ ಜಾತ್ರೆಗಳಲ್ಲಿ ವಿಶೇಷವಾಗಿ ನೋಡಬೇಕು ಅನ್ನಿಸುವಂತಹದು ಯಾವುದೂ ಇಲ್ಲ. ಮನೆ ಮನೆಯಲ್ಲಿ ಟಿವಿ. ಅಂಗೈಯಲ್ಲಿ ಮೋಬೈಲ್. ಮನರಂಜನೆಗಾಗಲಿ, ಹುಡುಗನಿಗೆ ಹುಡುಗಿ, ಹುಡುಗಿಗೆ ಹುಡುಗನ ನೋಡಬೇಕೆಂದರೆ ಜಾತ್ರೆನೆ ಬರಬೇಕು ಅಂತೇನು ಇಲ್ಲ. ಇವತ್ತು ಜನರ ದಿನ ನಿತ್ಯದ ಓಡಾಟ ಹೆಚ್ಚಿದೆ. ಜಾತ್ರೆಯಲ್ಲಿ ಸಿಗುವ ಮನರಂಜನೆ, ಸಾಮಾನುಗಳು, ದಿನನಿತ್ಯ ನಮ್ಮೂರಲ್ಲೇ ಸಿಗುವಂತಾಗಿದೆ. ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆಯೇ. ಏನಂತೀರಾ?

English summary
Shivaratri festival has lost the touch of olden days. Vinayak Patgar from Kumata, Uttara Kannada goes down the lane and recalls the good old days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X