ಬರಕ್ಕೆ ತತ್ತರಿಸಿದ ರೈತನಿಗಿಲ್ಲ ಸಂಕ್ರಾಂತಿ ಸಡಗರ..

By: ಬಿ.ಎಂ.ಲವಕುಮಾರ್
Subscribe to Oneindia Kannada

ಮಳೆ ಬಿದ್ದಿಲ್ಲ.. ಬೆಳೆ ಬೆಳೆದಿಲ್ಲ.. ಈ ಬಾರಿ ಅದ್ಯಾಕೋ ರೈತರ ಮೊಗದಲ್ಲಿ ನಗುವಿಲ್ಲ.. ಸಂಕ್ರಾತಿಯ ಸಡಗರವೂ ಇಲ್ಲ... ಬೆಳೆಯೇ ಬಾರದಿದ್ದ ಮೇಲೆ ಧಾನ್ಯಲಕ್ಷ್ಮಿಗೆ ಪ್ರಿಯವಾದ ಸಂಕ್ರಾಂತಿಯನ್ನು ಆಚರಿಸಲುವುದಾದರೂ ಎಲ್ಲಿಂದ ಎಂದು ರೈತ ಸುಮ್ಮನಾಗಿದ್ದಾನೆ. ಇನ್ನ ದುಬಾರಿ ವೆಚ್ಚದ ನಡುವೆಯೂ ನಗರ ಪ್ರದೇಶಗಳಲ್ಲಿ ಹಬ್ಬ ಆಚರಣೆ ನಡೆದಿದೆ.

ನಿಜವಾಗಿ ಸಂಕ್ರಾಂತಿ ಹಬ್ಬ ರೈತಾಪಿ ಜನರ ಹಬ್ಬ. ಸುಗ್ಗಿ ಕಾಲದಲ್ಲಿ ಆಚರಿಸುವ ಹಬ್ಬ. ಧಾನ್ಯಗಳನ್ನು ಮನೆಗೆ ತುಂಬಿಸಿ ಸಂಭ್ರಮ ಪಡುವ ಸಮಯ.[ಸಂಕ್ರಾಂತಿ ವಿಶೇಷ: ಸ್ಮಾರ್ಟ್ ಫೋನಿನಲ್ಲೇ ದೇಗುಲಗಳ ದರ್ಶನ]

Makara Sankranti: this year's crop grown by farmers due to drought

ಆದರೆ ಇವತ್ತು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಬೇಕಾದ ರೈತ ಮಂಕಾಗಿದ್ದಾನೆ. ಅವನಲ್ಲಿ ಸಂಭ್ರಮಿಸೋಕೆ ಯಾವ ಸಂತೋಷವೂ ಉಳಿದಿಲ್ಲ. ಮಳೆಯಿಲ್ಲದೆ ಕೆರೆಕಟ್ಟೆಗಳು ತುಂಬಿಲ್ಲ. ಬೋರ್‍ವೆಲ್ ಗಳಲ್ಲಿ ಅಂತರ್ಜಲ ಕುಸಿದಿದೆ. ಜಮೀನು ಒಣಗಿದೆ. ಜಾನುವಾರುಗಳಿಗೆ ಮೇವಿಲ್ಲದೆ ಮಾರುವಂತಾಗಿದೆ. ಮಾಡಿಕೊಂಡ ಸಾಲಗಳಿಗೆ ಬಡ್ಡಿ ಬೆಳೆಯುತ್ತಿದೆ.

ಈಗ ಮೂರು ಹೊತ್ತು ಊಟ ಮಾಡಲು ಕೂಡ ಸಾಲ ಮಾಡುವಂತಾಗಿದೆ. ಹಬ್ಬವನ್ನು ಸಾಲ ಮಾಡಿ ಮಾಡುವ ಪರಿಸ್ಥಿತಿಗೆ ರೈತರು ಬಂದು ನಿಂತಿದ್ದಾರೆ. ಹೀಗಾಗಿ ಸಂಕ್ರಾಂತಿ ಹಬ್ಬದ ಸಡಗರ ಬಡ ರೈತರ ಮುಖದಲ್ಲಿ ಕಾಣುತ್ತಿಲ್ಲ. ಆತನಿಗೆ ಬರೀ ಬದುಕಿನದ್ದೇ ಚಿಂತೆಯಾಗಿದೆ.[ಬಳ್ಳಾರಿಯಲ್ಲಿ ಗಾಲಿ ರೆಡ್ಡಿ ಸಂಕ್ರಾಂತಿ ಆಚರಣೆಗೆ ಸುಪ್ರೀಂ ಅನುಮತಿ]

Makara Sankranti: this year's crop grown by farmers due to drought

ಕಳೆದೆರಡು ವರ್ಷಗಳಿಂದ ಪ್ರಕೃತಿಯಲ್ಲಿ ಏರು ಪೇರಾಗಿದೆ. ವಾಡಿಕೆಯ ಮಳೆ ಸುರಿಯಲಿಲ್ಲ. ಕೆರೆ, ಜಲಾಶಯಗಳು ಭರ್ತಿಯಾಗಲಿಲ್ಲ. ಹೀಗಾಗಿ ಕಾಲುವೆಗಳಿಗೆ ನೀರು ಬಾರದೆ ಯಾವ ಬೆಳೆಯನ್ನೂ ಬೆಳೆದಿಲ್ಲ. ಕೆಲವು ಕಡೆ ಬೆಳೆದ ಬೆಳೆ ಫಸಲಿಗೆ ಬಂದಿದ್ದರೂ ನೀರಿಲ್ಲದೆ ಒಣಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಾಗಿದೆ. ಹೀಗಾಗಿ ಧಾನ್ಯ ಲಕ್ಷ್ಮಿಯೇ ಮನೆಗೆ ಬಾರದ ಮೇಲೆ ಸಂಕ್ರಾಂತಿ ಹಬ್ಬದ ಸಡಗರ ಎಲ್ಲಿಂದ ಬರಬೇಕು?

ಪಟ್ಟಣದಲ್ಲಿರುವ ಮಂದಿ ಮಾತ್ರ ಹಬ್ಬವನ್ನು ಸಂಭ್ರಮದಲ್ಲಿ ಆಚರಿಸುತ್ತಿರುವುದು ಕಂಡು ಬಂದಿದೆ. ಎಲ್ಲೆಡೆ, ಕಬ್ಬು, ಹೂವು, ಹಣ್ಣು, ತರಕಾರಿ, ಎಳ್ಳುಬೆಲ್ಲ ಖರೀದಿ ಜೋರಾಗಿ ನಡೆಯುತ್ತಿದೆ. ಮೈಸೂರಿನಲ್ಲಿ ಕಬ್ಬು ಜಲ್ಲೆಯೊಂದಕ್ಕೆ 25 ರಿಂದ 50ರ ತನಕ ಮಾರಾಟ ಮಾಡುತ್ತಿದ್ದರೆ, ಹೂವಿಗೆ ದುಪ್ಪಟ್ಟು ಬೆಲೆಯಾಗಿದೆ. ನಿನ್ನೆಮೊನ್ನೆಯವರೆಗೆ ಮಾರು ಹೂವಿಗೆ 60 ರಿಂದ 80ಕ್ಕೇರಿದೆ. ಎಳ್ಳುಬೆಲ್ಲ ಮಿಶ್ರಣದ ಕೆಜಿಯ ಪ್ಯಾಕೆಟ್‍ಗಳ ಬೆಲೆ 150 ರೂ.ಗಳಿಂದ ಆರಂಭವಾಗುತ್ತಿವೆ.[ಮಕರ ಸಂಕ್ರಾಂತಿ, ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ]

Makara Sankranti: this year's crop grown by farmers due to drought

ಕಬ್ಬು, ಹೂವು ಬೆಳೆದವರು ಹಬ್ಬದ ಹಿನ್ನಲೆಯಲ್ಲಿ ಒಂದಷ್ಟು ಹಣ ಮಾಡಿಕೊಳ್ಳುವ ಕಾತರದಲ್ಲಿದ್ದಾರೆ. ಆದರೆ ಹೆಚ್ಚಿನ ರೈತರಿಗೆ ಮಧ್ಯವರ್ತಿಗಳ ಹಾವಳಿಯಿಂದ ಸಿಗಬೇಕಾದ ಹಣವೂ ಸಿಗುತ್ತಿಲ್ಲ. ಹಬ್ಬ ಆಚರಿಸುವ ಸಲುವಾಗಿ ಖರೀದಿಯಲ್ಲಿ ತೊಡಗಿರುವ ಗ್ರಾಹಕರು ಮಾತ್ರ ಇದೇನು ಇಷ್ಟೊಂದು ಬೆಲೆ ಎಂದು ಗೊಣಗುತ್ತಾ ಅಂಗಡಿಯಿಂದ ಅಂಗಡಿಗೆ ಎಡತಾಕುತ್ತಿದ್ದಾರೆ.

ಮೊದಲೆಲ್ಲ ಮನೆಯಲ್ಲಿ ಎಳ್ಳುಬೆಲ್ಲದ ತಯಾರಿಕೆ ಹಬ್ಬಕ್ಕೆ ತಿಂಗಳು ಇರುವಾಗಲೇ ಆರಂಭವಾಗುತ್ತಿತ್ತು. ಹೆಣ್ಣು ಮಕ್ಕಳು ಅದನ್ನು ತಯಾರಿಸುವ ಕಾರ್ಯದಲ್ಲಿ ನಿರತರಾಗಿಬಿಡುತ್ತಿದ್ದರು. ಹಬ್ಬದ ದಿನ ಮನೆಮನೆಗೆ ಎಳ್ಳುಬೆಲ್ಲ ಬೀರುತ್ತಿದ್ದರು. ಹೊಸಬಟ್ಟೆ ತೊಟ್ಟು ಭಕ್ಷ್ಯಬೋಜನ ತಯಾರಿಸಿ ಹಬ್ಬವನ್ನು ಆಚರಿಸುತ್ತಿದ್ದರು. ಹಲವೆಡೆ ರೈತರು ವರ್ಷಪೂರ್ತಿ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಕಿಚ್ಚು ಹಾಯಿಸಿ ಖುಷಿಪಡುತ್ತಿದ್ದರು.

ಕಾಲ ಕಳೆದಂತೆಲ್ಲ ಹಬ್ಬದ ಆಚರಣೆಗಳಲ್ಲಿ ಒಂದಷ್ಟು ಬದಲಾವಣೆಗಳಾಗಿವೆ. ಮೊದಲಿನ ಸಡಗರವೂ ಹೋಗಿದೆ. ರೈತನಿಂದಲೇ ಆರಂಭವಾದ ಸಂಕ್ರಾಂತಿ ಹಬ್ಬದಲ್ಲಿ ಆತ ಸಂಭ್ರಮಿಸಬೇಕಿತ್ತು. ಆದರೆ ನೋಡಿ ಈ ಬಾರಿ ಬರ ಬಂದು ಆತನ ಸಂತೋಷವನ್ನೇ ಕಿತ್ತುಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Makara Sankranti is a major harvest festival in south India. But this year's(2016) crop grown by farmers due to drought. Sankranti is celebrated in only an urban area.
Please Wait while comments are loading...