Raksha Bandhan 2023: ಈ ರಾಖಿ ಬೆಲೆ ಎಷ್ಟು? ಸ್ವಲ್ಪ ಕಡಿಮೆ ಮಾಡಿ
ಈ ರಾಖಿ ಬೆಲೆ ಎಷ್ಟು? ಸ್ವಲ್ಪ ಕಡಿಮೆ ಮಾಡಿ, ಇದರ ಬೆಲೆ ಜಾಸ್ತಿ ಆಯ್ತು, ಇಷ್ಟು ಚಿಕ್ಕ ರಾಖಿಗೆ ಇಷ್ಟೊಂದು ಹಣ ಕೊಡಬೇಕಾ? ಇದೇ... ಇದೇ ಮಾತುಗಳು ಕಳೆದೆರಡು ದಿನಗಳಿಂದ ಮಾರುಕಟ್ಟೆಯಲ್ಲಿ ಜೋರಾಗಿ ಕೇಳಿ ಬರುತ್ತಿವೆ. ಅದ್ರಲ್ಲೂ ಮಹಿಳಾ ಮಣಿಗಳು ರಕ್ಷ ಬಂಧನ ಹಬ್ಬದ ತಯಾರಿಯಲ್ಲಿ ಭರ್ಜರಿ ಶಾಪಿಂಗ್ ನಡೆಸಿದ್ದಾರೆ.
ರಕ್ಷಾ ಬಂಧನ ವರ್ಷಕ್ಕೆ ಒಂದು ಬಾರಿ ಬರುವ ಹಿಂದೂ ಹಬ್ಬ. ಈ ಹಬ್ಬಕ್ಕಾಗಿ ಸಹೋದರಿಯರು ಕಾತುರದಿಂದ ಕಾಯುತ್ತಾರೆ. ಸಹೋದರನನ್ನು ಭೇಟಿ ಮಾಡಲು ಅವನೊಂದಿಗೆ ಈ ಸಂಭ್ರಮದ ಕ್ಷಣವನ್ನು ಕಳೆಯಲು ಮಹಿಳೆಯರು ಕಾತುರರಾಗಿದ್ದಾರೆ. ಹೀಗಾಗಿ ಒಂದಲ್ಲಾ ಎರಡಲ್ಲಾ ಮೂರು ನಾಲ್ಕು ಕಡೆ ಮಾರುಕಟ್ಟೆಗಳಿಗೆ ತೆರಳಿ ಎಲ್ಲರಿಗಿಂತ ಭಿನ್ನವಾದ, ಚಂದದ ರಾಖಿಯನ್ನು ಖರೀದಿ ಮಾಡಲು ಶುರು ಮಾಡಿದ್ದಾರೆ.

ಕೆಲವರು ಒಂದು ವರ್ಷಕ್ಕೆ ಒಂದು ಬಾರಿ ಬರುವ ಹಬ್ಬ ತಾನೆ ಬೆಲೆ ನೋಡುವುದು ಬೇಡ, ಎಷ್ಟಾದರು ಪರವಾಗಿಲ್ಲ ಹಣ ಕೊಟ್ಟುಬಿಡೋಣ ಅಂತ ಯೋಚನೆ ಮಾಡಿದ್ರೆ, ಇನ್ನೂ ಕೆಲವರು ಚೌಕಾಸಿ ಮಾಡಿ ರಾಖಿ ಖರೀದಿಯಲ್ಲಿ ಬ್ಯೂಸಿ ಆಗಿದ್ದಾರೆ. ಹೀಗೆ ಆಗಸ್ಟ್ 30 ಹಾಗೂ 31 ರಂದು ಆಚರಿಸಲಾಗುವ ಹಬ್ಬಕ್ಕೆ ಸಾಕಷ್ಟು ತಯಾರಿ ನಡೆಯುತ್ತಿದೆ.
ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿರುವ ವಿಧವಿಧವಾದ ರಾಖಿಗಳು
ರಕ್ಷಾ ಬಂಧನ ನಿಮಿತ್ಯ ಮಾರುಕಟ್ಟೆಯ ತುಂಬಾಲ್ಲಾ ರಾಖಿಗಳದ್ದೇ ಕಾರುಬಾರು. ಕಣ್ಣು ಹಾಸಿದಲೆಲ್ಲಾ ವಿಧವಿಧವಾದ ರಾಖಿಗಳು ಕಂಗೊಳಿಸುತ್ತಿವೆ. ಹಲವಾರು ಬಣ್ಣದ ದಾರದಲ್ಲಿ ಮಣಿಗಳು, ಪಕ್ಷಿಗಳು, ದೇವರ ಚಿತ್ರಗಳೊಂದಿಗೆ ನೋಡುಗರನ್ನು ಆಕರ್ಷಿಸುತ್ತಿವೆ. ಕಲರ್ ಕಲರ್ ಹೂವುಗಳು, ಗಣೇಶ, ಲಕ್ಷ್ಮಿ, ಸರಸ್ವತಿ ದೇವರ ಚಿತ್ತಾರದೊಂದಿಗೆ ಕೆಲ ರಾಖಿಗಳು ಕಂಗೊಳಿಸಿದರೆ, ಇನ್ನೂ ಕೆಲ ರಾಖಿಗಳು ಪುಟ್ಟ ಮಕ್ಕಳಿಗಾಗಿ ಚೂಟಾ ಭೀಮ್, ಗೊಂಬೆಗಳನ್ನೊಳಗೊಂಡಂತೆ ಬೃಹತ್ತಾಕಾರದಲ್ಲಿ ನೋಡುಗರನ್ನು ಸೆಳೆಯುತ್ತಿವೆ.

ಮಹಿಳೆಯರಿಗೆ ರಾಖಿ ಹಬ್ಬ ಅಂದರೆ ಎಲ್ಲಿಲ್ಲದ ಸಂತೋಷ
ಮಹಿಳೆಯರಿಗೆ ರಾಖಿ ಹಬ್ಬ ಅಂದರೆ ಎಲ್ಲಿಲ್ಲದ ಖುಷಿ. ಯಾಕೆಂದರೆ ಈ ಹಬ್ಬ ಸಹೋದರ ಹಾಗೂ ಸಹೋದರಿಯ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಈ ದಿನ ಸಹೋದರಿಯ ರಕ್ಷಣೆಗಾಗಿ ಸಹೋದರ ಭರವಸೆ ನೀಡಿದರೆ, ಸಹೋದರನ ಸಂತೋಷ, ಸಮೃದ್ಧಿಗಾಗಿ ಸಹೋದರಿ ಪ್ರಾರ್ಥಿಸುತ್ತಾಳೆ. ರಕ್ಷಾ ಬಂಧನ ಇಬ್ಬರ ನಡುವೆ ಪರಸ್ಪರ ಬಾಂಧವ್ಯವವನ್ನು ಬಲಪಡಿಸುತ್ತದೆ. ಹೀಗೆ ಸಹೋದರಿ ಪ್ರೀತಿಯಿಂದ ಈ ರಕ್ಷಾ ಬಂಧನಕ್ಕೆ ಪ್ರತಿಯಾಗಿ ಸಹೋದರ ಆಕೆಗೆ ಉಡುಗೊರೆಯನ್ನು ನೀಡುತ್ತಾನೆ.

ದುಬಾರಿ ರಾಖಿ
ವರ್ಷಕ್ಕೆ ಒಂದು ಬಾರಿ ಬರುವ ಈ ಹಬ್ಬಕ್ಕೆ ಸಹೋದರಿಯರಂತೆ ವ್ಯಾಪಾರಿಗಳೂ ಕಾತುರದಿಂದ ಕಾಯುತ್ತಾರೆ. ಯಾಕೆಂದರೆ ಈ ಹಬ್ಬದಲ್ಲಿ ವ್ಯಾಪಾರಿಗಳಿಗೆ ನಷ್ಟವೆಂಬ ಮಾತೇ ಇಲ್ಲ. ಒಂದು ಸಾಮಾನ್ಯ ದಾರದ ರಾಖಿಗೆ ಏನಿಲ್ಲಾ ಅಂದ್ರು 20ರೂಪಾಯಿಯಿಂದ ಬೆಲೆ ಪ್ರಾರಂಭವಾಗುತ್ತದೆ. ಇವುಗಳ ಬೆಲೆ ಮಾರುಕಟ್ಟೆಯಲ್ಲಿ ಕನಿಷ್ಟ ಅಂದ್ರ 5000 ರೂಪಾಯಿಗಳವರೆಗೆಗೂ ಇದೆ. ಬೆಲೆ ಅಧಿಕ ಇದೆ ಅಂತ ಈ ರಾಖಿ ಕೂಡ ದೊಡ್ಡದಾಗಿದೆ ಅಂತ ಭಾವಿಸಬೇಡಿ. ಯಾಕೆಂದರೆ ಈ ರಾಖಿಗಳ ಬೆಲೆ ಅದರ ಗುಣಮಟ್ಟದ ಮೇಲೆ ನಿಗಧಿಯಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಬಂಗಾರದಲ್ಲಿ ರಾಖಿ ಮಾಡಿಸುವವರು ಇದ್ದಾರೆ.

ವಿಶೇಷವಾಗಿ ಈ ಬಾರಿ ರಾಖಿಯೊಂದಿಗೆ ಕುಂಕುಮ, ಅಕ್ಕಿ ಇರುವ ಸೆಟ್‌ಗಳು ಮಾರುಕಟ್ಟೆಗೆ ಬಂದಿವೆ. ಇದರೊಂದಿಗೆ ಸಿಹಿ ಕೂಡ ಪ್ರತ್ಯೇಕವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಇವೆಲ್ಲವೂ ಲಭ್ಯವಿರುವಂತಹ ರಾಖಿ ಬಾಕ್ಸ್‌ಗಳೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಸಹೋದರಿಯರಿಗೆ ಗಿಫ್ಟ್
ಇನ್ನೂ ರಾಖಿ ಮಾತ್ರವಲ್ಲದೆ ಬಗೆ ಬಗೆಯ ಗಿಫ್ಟ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಸಹೋದರಿಯರಿಗೆ ಸಹೋದರರು ರಾಖಿ ಕಟ್ಟಿದ ಬಳಿಕ ಹಣ ನೀಡುವ ಕಾಲ ಇದಲ್ಲ. ಬದಲಿಗೆ ರಾಖಿ ಕಟ್ಟಿದ ಬಳಿಕ ಸಹೋದರರು ವಿಶೇಷವಾದ ಆಕರ್ಷಕ ಉಡುಗೊರೆಗಳನ್ನು ನೀಡುವುದು ಟ್ರೆಂಡ್ ಆಗಿದೆ. ಟ್ರೆಂಡ್ ತಕ್ಕಂತೆ ಮಾರುಕಟ್ಟೆಯಲ್ಲಿ ಗಿಫ್ಟ್‌ಗಳು ಆಕರ್ಷಿಸುತ್ತಿವೆ.












Click it and Unblock the Notifications