• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಾಭಾರತದ ನೆತ್ತರ ಕಾಲುವೆಯಲಿ ಮಾತೃತ್ವದ ಹಾಯಿದೋಣಿ

By Staff
|

ಅವಳು ಹಣ್ಣು ಹಣ್ಣು ಮುದುಕಿ. ಮಂಜು ಕಣ್ಣುಗಳ, ಸೋತ ಕಾಲುಗಳ, ಬಿಲ್ಲಿನಂತೆ ಬಾಗಿದ ಬೆನ್ನಿನ ಕೃಶ ಶರೀರಿ. ಪ್ರತಿಹೆಜ್ಜೆಗೂ ಜೀವ ಕಳಕೊಂಡ ಶರೀರವನ್ನ ಎಡವುತ್ತಾಳೆ. ಜೀವ ಬಾಯಿಗೆ ಬಂದಂತೆ ಬೆಚ್ಚುತ್ತಾಳೆ. ಎಡವಿದ ಪ್ರತಿಕ್ಷಣ ಆ ಶರೀರ ತನ್ನ ಮಗನದಿರಬಹುದೇ ಎಂದು ಮುಖವನ್ನು ಎರಡೂ ಕೈಗಳಲ್ಲಿರಿಸಿಕೊಂಡು ಕಣ್ಣಗಲಿಸುತ್ತಾಳೆ. ಮತ್ತೆ ಮುಂದೆ ಸಾಗುತ್ತಾಳೆ.

ರಕ್ತ ಕಾಲುಗಳನ್ನು ತೋಯಿಸುತ್ತದೆ. ಕಮಟು ಘಾಟು ಮೂಗು ತುಂಬುತ್ತದೆ. ಅವಳಿಗೊ ಕಳ್ಳುಕುಡಿಯ ಕಾಣುವ ತವಕ. ಕಡೆಗೊಮ್ಮೆ ಯುದ್ಧಭೂಮಿಯ ನಾಲ್ಕೂ ದಿಕ್ಕುಗಳ ತುಂಬ ಆ ಮುದುಕಿಯ ಆರ್ತನಾದ ಪ್ರತಿಧ್ವನಿಸುತ್ತದೆ. ಅಂಥದ್ದೇ ಹತ್ತಾರು ಧ್ವನಿಗಳಲ್ಲಿ ಅವಳ ಧ್ವನಿ ಲೀನವಾಗಿ ಕರಗಿಹೋಗುತ್ತೆ .

ಅದು ಹದಿನೆಂಟು ದಿನಗಳ ಮಹಾಭಾರತ ಯುದ್ಧ . ಅಲ್ಲಿದ್ದಾರೆ ಅರ್ಜುನ, ದ್ರೋಣ, ಭೀಷ್ಮ , ಕರ್ಣ, ಭೀಮ, ದುರ್ಯೋಧನ ಮುಂತಾಗಿ ಉತ್ತರಕುಮಾರನವರೆಗೆ. ಎಲ್ಲರೂ ನೆತ್ತರ ಚೆಲ್ಲಲಿಕ್ಕೆ- ಹರಿಸಲಿಕ್ಕೆ ಸಮರ್ಥರಾದವರು. ಇಂಥ ನೆತ್ತರ ಹೊಳೆಯಲ್ಲಿ ಮಾತೃತ್ವದ ಛಾಯೆ ಢಾಳಾಗಿ ಎಲ್ಲಿಂದ ಕಾಣಬೇಕು? ಅಲ್ಲಲ್ಲಿ ಮಮತೆಯ ಪತಾಕೆಯ ಹಾರಿಸುತ್ತ ಕಾಣಿಸಿಕೊಂಡು ಮರೆಯಾಗುತ್ತದೆ ಮಾತೃತ್ವದ ಹಾಯಿದೋಣಿ. ಗಂಗೆಯಿಂದ ಭಾನುಮತಿಯವರೆಗೆ, ಕುಂತಿಯಿಂದ ರಾಧೆವರೆಗೆ ಹತ್ತಾರು ಅಮ್ಮಂದಿರು ಮಹಾಭಾರತದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರೆಲ್ಲ ವಿಷಣ್ಣ ಅಮ್ಮಂದಿರೇ ಅನ್ನುವುದು ಅವರ ನಡುವಿನ ಸಾಮ್ಯತೆ.

ಗಾಂಧಾರಿ - ಕುಂತಿಯರೆಂಬ ಮಹಾತಾಯಿಯರು !

ಭಾರತದ ಅಮ್ಮಂದಿರ ಸಾಲಿನಲ್ಲಿ ಮೊದಲಿಗೆ ನಿಲ್ಲುವಂಥವರು ಗಾಂಧಾರಿ ಹಾಗೂ ಕುಂತಿ, ವರಸೆಗೆ ಸೋದರರ ಹೆಂಡತಿಯರು. ಒಬ್ಬಾಕೆ ನೂರೊಂದು ಮಕ್ಕಳ ಮಹಾತಾಯಿಯಾದರೆ, ಮತ್ತೊಬ್ಬ ತಾಯಿ ಹೆತ್ತ ಮಗನನ್ನು ಗಂಗೆಯಲ್ಲಿ ತೇಲಿಬಿಟ್ಟವಳು, ಮಗನೆಂದು ಕರುಳರಿತರೂ ಮೌನ ಧರಿಸುವ ಮನಸ್ಸಿನ ಗಟ್ಟಿಗಳು.

ಗಾಂಧಾರಿಯದ್ದು ಬಣ್ಣವಿಲ್ಲದ ಬದುಕು. ಗಂಡ ಜಗತ್ತನ್ನು ಕಾಣನೆಂದು ತಾನೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಅಂಧಳಾದ ಈ ಹೆಣ್ಣು , ಭ್ರೂಣ ಫಲಿಸುವವರೆಗೂ ಕಾಯದ ಅಸಹನಿಯೂ ಹೌದು. ಆಕೆ ಹೊಸಗಿದ ಭ್ರೂಣದ ಜೀವಕಣಗಳು ದುರ್ಯೋಧನಾದಿ ನೂರು ಕೌರವರಾಗುತ್ತವೆ. ದುಶ್ಯಲೆ ಏಕಮಾತ್ರ ಹೆಣ್ಣು ಸಂತಾನ.

ಗಾಂಧಾರಿ ನಮ್ಮ ನಡುವಿನ ಅಮ್ಮನಂಥವಳೇ ಸಾಮಾನ್ಯ ತಾಯಿ. ಮಕ್ಕಳ ಸುಖಕ್ಕಾಗಿ ಇನ್ನೊಬ್ಬರ ಮಕ್ಕಳ ದುಃಖವನ್ನೂ ಅರಗಿಸಿಕೊಳ್ಳಬಲ್ಲ ಹೃದಯಿ. ಆ ಕಾರಣದಿಂದಲೇ ಆಕೆ, ಹಿರಿಮಗನ ದೇಹವ ವಜ್ರಕಾಯವಾಗಿಸಲು ಪ್ರಯತ್ನಿಸುತ್ತಾಳೆ. ತೊಡೆಯ ಹೊರತಾಗಿ ಉಳಿದೆಲ್ಲ ಶರೀರವನ್ನು ವಜ್ರಕಾಯವಾಗಿಸುವಲ್ಲಿ ಯಶಸ್ವಿಯೂ ಆಗುತ್ತಾಳೆ. ಅದೇ ಗಾಂಧಾರಿ ಮಕ್ಕಳನ್ನು ಕಳಕೊಂಡಾಗ ಕೃಷ್ಣನಂತಹ ದೇವನಿಗೂ ಮುನಿಯಲಿಕ್ಕೆ ಹಿಂಜರಿಯುವುದಿಲ್ಲ .

ಜನರ ಬಾಯಿಗಂಜಿ ಮಡಿಲನ್ನು ಮುಚ್ಚಿಕೊಂಡ ಈ ಪರಿಯ ಅಮ್ಮ

ಗಾಂಧಾರಿಗಿಂತ ಕುಂತಿ ಅಷ್ಟೇನೂ ಭಿನ್ನ ಅಮ್ಮನೇನೂ ಅಲ್ಲ . ಗಾಂಧಾರಿಯಂತೆಯೇ ಮಕ್ಕಳ ಹಿತಾಸಕ್ತಿಯ ವಕ್ತಾರಳಾಗಲಿಕ್ಕೆ ಆಕೆ ಹಿಂಜರಿಯುವುದಿಲ್ಲ . ಆ ನಿಟ್ಟಿನಲ್ಲಿ ಗಂಗೆಯಲ್ಲಿ ತೇಲಿಬಿಟ್ಟ ಮಗನನ್ನು (ಕರ್ಣ) ಕಳಕೊಳ್ಳುತ್ತಾಳೆ. 'ಮಕ್ಕಳ ತಲೆಕಾಯಿ, ಹೋದಬಾಣವ ಮರಳಿ ತೊಡದಿರು" ಎಂದು ಕರ್ಣನಿಂದ ವಚನ ಪಡೆಯುವ ಕುಂತಿ, ಪಾಂಡವರಿಂದ ಕರ್ಣನ ತಲೆಗೆ ಆಶ್ವಾಸನೆ ಪಡೆಯುವ ಯೋಚನೆಯನ್ನೂ ಮಾಡುವುದಿಲ್ಲ . ಇದರಿಂದಾಗಿ ಕರ್ಣನ ಕೊಲೆಯಲ್ಲಿ ಆಕೆಯೂ ಪ್ರಮುಖ ಪಾತ್ರಧಾರಿಯಾಗುತ್ತಾಳೆ.

ಚೇಷ್ಟೆಯಿಂದಾಗಿ ಸೂರ್ಯನಿಂದ ಪುತ್ರನನ್ನು ಪಡೆಯುವ ಕುಮಾರಿ ಕುಂತಿ ಅದನ್ನು ಅರಗಿಸಿಕೊಳ್ಳಲಾಗದೆ ಬಿಸಿ ತುಪ್ಪವ ಕೊನೆವರೆಗೂ ಅನುಭವಿಸುತ್ತಾಳೆ. ಮುಂದೊಂದು ದಿನ ದ್ರೋಣಾಚಾರ್ಯರ ಶಿಷ್ಯರು ತಂತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಿದ್ದಾಗ ಪ್ರವೇಶಿಸುವ ಕರ್ಣ, ಅವಳಿಗೆ ತನ್ನ ಮಗನೆಂದು ಗೊತ್ತಾಗುತ್ತದೆ. ಎದೆಯುಬ್ಬಿ ರವಕೆ ಒದ್ದೆಯಾದರೂ, ಕುಂತಿ ಮನಸ್ಸಿನ ಚಿಪ್ಪು ಕಳಕೊಳ್ಳುವುದಿಲ್ಲ . ಅದು ಒಡೆಯುವುದು ಕರ್ಣನ ಸಾವಿನೊಂದಿಗೆ. ಕುಂತಿಗೆ ಹೋಲಿಸಿದಲ್ಲಿ ಸೂತಪತ್ನಿ ರಾಧೆಗೆ ಮಾತೃತ್ವದಲ್ಲಿ ಹೆಚ್ಚಿನ ಅಂಕಗಳು. ತೇಲಿ ಬಂದ ಮಗು ಮಕ್ಕಳಿಲ್ಲದ ಆಕೆಯ ಪಾಲಿಗೆ ಗಂಗಾಪ್ರಸಾದ. ಯಾರೊ ಹೆತ್ತ ಮಗುವನ್ನು ಆಕೆ, ಕೊನೆವರೆಗೂ ತನ್ನ ಕುಡಿಯೆಂದೇ ಪ್ರೀತಿಸುತ್ತಾಳೆ.

ದ್ರೌಪದಿ ಹಾಗೂ ಸುಭದ್ರೆ ಭಾರತ ಕಥಾ ಪ್ರವಾಹದಲ್ಲಿ ಎದ್ದು ಕಾಣುವ ಮತ್ತಿಬ್ಬರು ತಾಯಂದಿರು. ದ್ರೌಪದಿ ಪಂಚಪಾಂಡವರ ಪತ್ನಿಯಾದರೆ, ಸುಭದ್ರೆ ಮಧ್ಯಮ ಪಾಂಡವನ ಪತ್ನಿ . ಇಬ್ಬರೂ ರಣಕ್ಕೆ ಮಕ್ಕಳನ್ನು ಅರ್ಪಿಸಿ ಅಳುತ್ತಾರೆ. ವೀರಮಾತೆಯರೆನಿಸಿಕೊಂಡು ಬರಿ ಮಡಿಲಿನವರಾಗುತ್ತಾರೆ.

ಸುಭದ್ರೆಯ ಹಿಂದೂಡುವ ಪಂಚಪುತ್ರರ ಪಾಂಚಾಲಿ

ಐವರು ಗಂಡಂದಿರಿಂದ ಐವರು ಮಕ್ಕಳನ್ನು ಪಡೆದ ದ್ರೌಪದಿ, ಐವರನ್ನೂ ಅಶ್ವತ್ಥಾಮನ ಕತ್ತಿಗೆ ಕಳಕೊಳ್ಳುತ್ತಾಳೆ. ಕಥೆಯಲ್ಲಿ ದ್ರೌಪದಿಯದ್ದು ಬಹುಮುಖ, ಅವುಗಳಲ್ಲಿ ಮಾತೃತ್ವದ್ದು ಒಂದು ಆಯಾಮ ಮಾತ್ರ. ಉದ್ದಕ್ಕೂ ಅಪ್ಪಟ ಕ್ಷಾತ್ರ ಹೆಣ್ಣಾಗಿ, ಚೆಲುವು- ಸೇಡು- ಭಕ್ತಿ ಭಾವಗಳ ಸಂಗಮವಾಗಿ ಕಾಣಿಸಿಕೊಳ್ಳುವ ಆಕೆಯ ಮಾತೃಮುಖದ ಅನಾವರಣವಾಗುವುದು ಮಕ್ಕಳ ಸಾವಿನೊಂದಿಗೇ. ಆ ದುಃಖದ ಹೊತ್ತಿನಲ್ಲೂ ದ್ರೌಪದಿ ಪ್ರತೀಕಾರ ಬುದ್ಧಿಯ ತೊರೆಯುವುದಿಲ್ಲ . ಅವಳ ಪುತ್ರಶೋಕ ಅಶ್ವತ್ಥಾಮನ ಶಿರೋರತ್ನ ಭಂಗಕ್ಕೆ ಕಾರಣವಾಗುತ್ತದೆ.

ಸುಭದ್ರೆಯ ಮಾತೃಶೋಕ ಅಷ್ಟಾಗಿ ಭಾರತದಲ್ಲಿ ಕಾಣಿಸುವುದಿಲ್ಲ . ಲೋಕೋತ್ತರನಾದ ಮಗ ಅಭಿಮನ್ಯು ಚಕ್ರವ್ಯೂಹದಲ್ಲಿ ಹತನಾದಾಗ, ಎದೆಬಿರಿಯುವಂತೆ ಒದ್ದಾಡುವುದು ಸುಭದ್ರೆಯಲ್ಲ - ಅರ್ಜುನ. ಸುಭದ್ರೆ ಸೈಡ್‌ವಿಂಗ್‌ನಲ್ಲಿ ನಿಂತು ತಣ್ಣಗಾಗುತ್ತಾಳೆ. ಆಕೆಯ ಕಣ್ಣೀರು ಅರ್ಜುನನ ವೀರಾಲಾಪದಲ್ಲಿ ಕರಗಿದ್ದೆಲ್ಲಿ ಅನ್ನುವುದೇ ಪತ್ತೆಯಾಗುವುದಿಲ್ಲ . ಆ ಮಟ್ಟಿಗೆ ಸುಭದ್ರೆ ನಿರ್ಭಾಗ್ಯೆ, ಅಲಕ್ಷಿತ ತಾಯಿ. ಕಥೆಯ ಓಘಕ್ಕೆ ಧಕ್ಕೆ ಬರಬಹುದೆನ್ನುವ ಕಾರಣದಿಂದಲೋ ಅಥವಾ ಆಕೆ ಕಥಾ ನಾಯಕಿ ಅಲ್ಲವೆನ್ನುವ ಕಾರಣದಿಂದಲೋ ಕವಿ ಸುಭದ್ರೆಯ ಬಗ್ಗೆ ಅಷ್ಟೇನೂ ಕಾಳಜಿ ವಹಿಸುವುದಿಲ್ಲ .

ಲೋಕಮಾತೆ ಗಂಗೆ, ಪರೀಕ್ಷಿತ ಮಾತೆ ಉತ್ತರೆ

ಗಂಗೆ, ಉತ್ತರೆಯರನ್ನೂ ಭಾರತದ ಅಮ್ಮಂದಿರ ಸಾಲಿನಲ್ಲಿ ನೆನೆಯಬಹುದು. ಗಂಗೆ ದೇವತೆ. ಮನುಷ್ಯನೊಬ್ಬನಿಗೆ ಅಷ್ಟವಸುಗಳನ್ನು ಪುತ್ರರನ್ನಾಗಿ ಪಡೆದು, ಅವರ ಬದುಕನ್ನು ಹುಟ್ಟಿನಲ್ಲೇ ಕೊನೆಗಾಣಿಸುತ್ತಾಳೆ. ಕೊನೆಗೆ ಗಂಡ ಶಂತನುವಿನ ಕೋರಿಕೆಯ ಮೇರೆಗೆ ಭೀಷ್ಮನನ್ನು ಉಳಿಸಿ, ವಾಪಸ್ಸು ಮರಳುತ್ತಾಳೆ. ಆದರೆ, ಅಮ್ಮನ ಕರ್ತವ್ಯವ ಆಕೆ ಕೊನೆಯವರೆಗೂ ಪಾಲಿಸುತ್ತಾಳೆ. ಮಗನ ಹೆಜ್ಜೆಗಳನ್ನು ಗಮನಿಸುತ್ತಾಳೆ. ಮಹಾಭಾರತ ಯುದ್ಧಕ್ಕೆ ಮೂಕಸಾಕ್ಷಿಯಾಗುತ್ತಾಳೆ. ಕುಂತಿ ಒಪ್ಪಿಸಿದ ಕರ್ಣನನ್ನೂ ಕಾಯುತ್ತಾಳೆ. ಭೀಷ್ಮನ ಸಾವಿಗೆ ಕಾರಣನಾದವರ ಮೇಲೆ ಮುನಿದು ಶಾಪವನ್ನೂ ನೀಡುತ್ತಾಳೆ.

ಉತ್ತರೆ ಬಡಪಾಯಿ ಹೆಣ್ಣು . ಮಗು ಗರ್ಭದಲ್ಲಿರುವಾಗಲೇ ಗಂಡನನ್ನು ಕಳಕೊಂಡವಳು. ಅಶ್ವತ್ಥಾಮನ ದಿವ್ಯಾಸ್ತ್ರಕ್ಕೆ ಗರ್ಭವನ್ನು ಗುರಿಯಾಗಿಸಿಕೊಂಡವಳು. ಕೊನೆಗೆ ಕೃಷ್ಣಮಾಯೆಯಿಂದ ಮಗುವನ್ನು (ಪರೀಕ್ಷಿತ) ಉಳಿಸಿಕೊಳ್ಳುತ್ತಾಳೆ. ಆಕೆ. ಮಹಾಭಾರತದಲ್ಲಿ ಕೊನೆಯಲ್ಲಿ ಕಾಣಿಸಿಕೊಳ್ಳುವ ಅಮ್ಮ .

ಮನುಕುಲದ ಮಹಾಗಾಥೆಗಳಲ್ಲಿ ಹಿರಿದೆಂದು ಹೆಸರಾದ ಮಹಾಭಾರತದಲ್ಲಿ ಈ ಎಲ್ಲ ಅಮ್ಮಂದಿರು ಸಂದುಹೋದರೂ, ಯಾರೊಬ್ಬರೂ ಸ್ಮರಣೀಯ- ಅದರ್ಶ ಅಮ್ಮನ ಪಟ್ಟಕ್ಕೆ ಸಲ್ಲುವಲ್ಲಿ ಯಶಸ್ವಿಯಾಗುವುದಿಲ್ಲ . ಕಥೆಗಾರನ ಉದ್ದೇಶ ಧರ್ಮ- ಅಧರ್ಮಗಳ ಸಂಘರ್ಷದ ಚಿತ್ರಣ ಎನ್ನುವ ಹಿನ್ನೆಲೆಯಲ್ಲಿ ಮಹಾಭಾರತದಲ್ಲಿ 'ನೆನೆ ನೆನೆ .." ಅನ್ನುವಂಥಾ ಅಮ್ಮನನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X