ಅಮ್ಮನ ಚಿತ್ರಗಳು...
ಅವಳು-
ದುಡಿದುಡಿದು ಸತ್ತವಳು,
ದುಡಿದು ಬೇಸತ್ತವಳು,
ಬದುಕ ಹೆಗ್ಗಾಲಿಯ ಕೆಳಗೆ
ನುಚ್ಚು ನೂರಾದವಳು
ಅವಳಿಲ್ಲ ಈಗ-
ಹೀಗನ್ನುವುದು ದಾಷ್ಟೀಕ
ಇದ್ದೇ ಇದ್ದಾಳೆ ಮನದಾಳದೊಳಗೆ-
ನಾನೊಂದು ಕಣ್ಣೀರಿಡುವಾಗ
ಮೈದಡವಿ ಸಂತೈಸುತ್ತಾಳೆ,
ನನ್ನ ಸುಖ, ಸಾಧನೆಗಳಿಗೆ
ತಾನೂ ಸಂಭ್ರಮಿಸಿ ನಲಿಯುತ್ತಾಳೆ,
ತೀರದ ಕೊರಗಾಗಿ ಕಾಡುತ್ತಾಳೆ,
ಆರದ ಗಾಯವಾಗಿ ಉರಿಯುತ್ತಾಳೆ,
ಭಾರದ ನೆನಪಾಗಿ ಮೀಟುತ್ತಾಳೆ
ಇಲ್ಲಿ... ಅಮೆರಿಕಾದ ಅಡಿಗೆ ಮನೆಯಲ್ಲಿ
ತಿಳಿಸಾರು ಕುದಿವಾಗ
ಕರಿಬೇವ ಘಮದಂತೆ ಹಿತವಾಗಿ ಸುಳಿಯುತ್ತಾಳೆ
ನನ್ನ ಎಳೆ ಕಂದಗಳ ಹಾಲು ನಗೆಯಲ್ಲಿ ಪಕ್ಕನೆ
ಮಿಂಚಿ ಮರೆಯಾಗುತ್ತಾಳೆ...
ದೂರದಾರಿಯಲ್ಲಿ ಏಕಾಂಗಿ ನಡೆವಾಗ
ಮಂದ ದನಿಯಲ್ಲಿ ನನ್ನ ಹೆಸರು
ಕೂಗಿ ಕರೆಯುತ್ತಾಳೆ
ಅವಳು.. ಮಹಾದೇವಿಯಲ್ಲ,
ಮಹಾನುಭಾವಳಲ್ಲ,
ಎಲ್ಲೆಲ್ಲೂ ಕಾಣಸಿಗುವ ಸರ್ವೆ ಸಾಧಾರಣ
ಪ್ರೇಮಮಯಿ ಹೆಂಗಸು,
ಅವಳು.. ಅವಳೇ... ನನ್ನಮ್ಮ...
ಆಗಿದ್ದಿರಲೂ ಬಹುದು ಅವಳು ನಿಮ್ಮಮ್ಮ.
ಕೆ. ತ್ರಿವೇಣಿ ಶ್ರೀನಿವಾಸರಾವ್, ನ್ಯೂಜೆರ್ಸಿ












Click it and Unblock the Notifications