ಕೂರ್ಮ ಜಯಂತಿ ಯಾವತ್ತು? ದಿನಾಂಕ, ಮಹತ್ವದ ವಿವರ ಇಲ್ಲಿದೆ
ಹಿಂದೂ ಧರ್ಮಗ್ರಂಥಗಳ ಪ್ರಕಾರ, ವೈಶಾಖ ಮಾಸದ ಹುಣ್ಣಿಮೆಯು ವಿಶೇಷ ಮಹತ್ವವನ್ನು ಹೊಂದಿದೆ. ಈ ಪವಿತ್ರ ದಿನದಂದು, ವಿಷ್ಣುವು ಕೂರ್ಮ ಅವತಾರ ತಾಳಿದನು ಎಂದು ಹೇಳಲಾಗುತ್ತದೆ. ಹಾಗಾಗಿ ಈ ದಿನವನ್ನು ಕೂರ್ಮ ಜಯಂತಿ ಎಂದು ಆಚರಿಸುತ್ತೇವೆ.
ವಿಷ್ಣುವಿನ ಕೂರ್ಮಾವತಾರ:
ಧಾರ್ಮಿಕ ನಂಬಿಕೆಯ ಪ್ರಕಾರ, ಕೂರ್ಮಾವತಾರವು ವಿಷ್ಣುವಿನ ಎರಡನೇಯ ಅವತಾರ. ದೇವಾಸುರರು ಅಮೃತಕ್ಕಾಗಿ ಕ್ಷೀರಸಾಗರವನ್ನು ಮಂಥನ ಮಾಡಿದಾಗ, ಮಂದಾರ ಪರ್ವತವು ಮುಳುಗದಂತೆ ತಡೆಯಲು ವಿಷ್ಣುವು ಬೃಹತ್ ಆಮೆಯ ರೂಪವನ್ನು ತಾಳುತ್ತಾನೆ. ಆಮೆ ಎಂದರೆ ಕೂರ್ಮ. ಹಾಗಾಗಿಯೇ ಇದು ವಿಷ್ಣುವಿನ ಕೂರ್ಮಾವತಾರ. ಹೀಗೆ ಕೂರ್ಮಾವತಾರ ತಾಳಿದ ವಿಷ್ಣು ಪರ್ವತವನ್ನು ತನ್ನ ಬೆನ್ನಿನ ಮೇಲೆ ಹೊತ್ತು ಸಮುದ್ರಮಂಥನಕ್ಕೆ ನೆರವಾಗುತ್ತಾನೆ. ಈ ಮೂಲಕ ದೇವತೆಗಳಿಗೆ ಅಮೃತ ದೊರಕುವಂತೆ ಮಾಡಲು ಸಹಾಯ ಮಾಡುತ್ತಾನೆ.

ಕೂರ್ಮ ಜಯಂತಿ 2026:
ವೈದಿಕ ಕ್ಯಾಲೆಂಡರ್ ಪ್ರಕಾರ, ವೈಶಾಖ ಪೂರ್ಣಿಮೆಯ ದಿನಾಂಕ ಮತ್ತು ಪೂಜಾ ಸಮಯಗಳು ಈ ಕೆಳಗಿನಂತಿವೆ:
ಕೂರ್ಮ ಜಯಂತಿ ದಿನಾಂಕ: ಮೇ 01, 2026 (ಶುಕ್ರವಾರ)
ಪೂರ್ಣಿಮಾ ತಿಥಿ ಏಪ್ರಿಲ್ 30, 2026 ರಾತ್ರಿ 09: 12 ಕ್ಕೆ ಆರಂಭವಾಗುತ್ತದೆ.
ಮೇ 01, 2026 ರಂದು ರಾತ್ರಿ 10: 52 ಕ್ಕೆ ಕೊನೆಗೊಳ್ಳುತ್ತದೆ.
ಪೂಜೆಗೆ ಶುಭ ಸಮಯ: ಸಂಜೆ 04:17 ರಿಂದ 06:56. ಅಂದರೆ ಒಟ್ಟು 2 ಗಂಟೆ 39 ನಿಮಿಷಗಳವರೆಗೆ ಪೂಜೆಗೆ ಸಮಯ ಶುಭವಾಗಿರುತ್ತದೆ.
ವಿಷ್ಣುವಿನ ಕೂರ್ಮ ಅವತಾರದ ಮಹತ್ವ:
ಧರ್ಮಗ್ರಂಥಗಳ ಪ್ರಕಾರ, ಕೂರ್ಮ ಅವತಾರವು ವಿಷ್ಣುವಿನ 10 ಪ್ರಮುಖ ಅವತಾರಗಳಲ್ಲಿ ಎರಡನೆಯದ್ದಾಗಿದೆ.
ತಾಳ್ಮೆ ಮತ್ತು ದೃಢತೆ: ಆಮೆ ನಿಧಾನಗತಿಯ ಪ್ರಾಣಿ. ಆದರೆ ಇದು ತಾಳ್ಮೆಗೆ ಹೆಸರುವಾಸಿಯಾಗಿದೆ. ಕೂರ್ಮ ಕಷ್ಟಕರ ಸಂದರ್ಭಗಳಲ್ಲಿಯೂ ತಾಳ್ಮೆಯಿಂದ ಇರುವುದನ್ನು ಕಲಿಸುತ್ತದೆ.
ಸಮುದ್ರ ಮಂಥನದ ಆಧಾರ: ಸಮುದ್ರ ಮಂಥನದ ವೇಳೆ 14 ರತ್ನಗಳು ಮತ್ತು ಅಮೃತ ಹೊರ ಬಂತು ಎಂದು ಹೇಳಲಾಗುತ್ತದೆ. ಒಂದು ವೇಳೆ ವಿಷ್ಣು ಕೂರ್ಮಾವತಾರ ತಾಳದೇ ಇದ್ದಲ್ಲಿ ಮಂದಾರ ಪರ್ವತದ ಮೂಲಕ ಸಮುದ್ರ ಮಂಥನ ಸಾಧ್ಯವಾಗುತ್ತಿರಲಿಲ್ಲ.
ನಕಾರಾತ್ಮಕತೆಯ ನಾಶ: ಈ ದಿನ ಶ್ರೀ ಹರಿಯನ್ನು ಆಮೆಯ ರೂಪದಲ್ಲಿ ಪೂಜಿಸುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಮನೆಯಲ್ಲಿ ವಾಸ್ತು ದೋಷಗಳಿಂದ ಉಂಟಾಗಿರುವ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ.
ಕೂರ್ಮ ಜಯಂತಿಯ ವಿಶೇಷ ಪೂಜಾ ವಿಧಾನ:
ಈ ದಿನ, ಭಕ್ತರು ವಿಷ್ಣುವಿನ ಕೃಪೆಗೆ ಪಾತ್ರರಾಗಲು ವಿಶೇಷ ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸುತ್ತಾರೆ.
ಪವಿತ್ರ ಸ್ನಾನ: ಬೆಳಿಗ್ಗೆ ಬೇಗನೆ ಎದ್ದು ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು. ಇದು ಸಾಧ್ಯವಾಗದೇ ಇದ್ದರೆ ಮನೆಯಲ್ಲಿ ಸ್ನಾನ ಮಾಡುವ ನೀರಿಗೆ ಗಂಗಾ ಜಲ ಸೇರಿಸಬೇಕು.
ಸಂಕಲ್ಪ: ಸ್ವಚ್ಛವಾದ ಹಳದಿ ಬಟ್ಟೆಗಳನ್ನು ಧರಿಸಿ ಕೂರ್ಮಾವತಾರದಲ್ಲಿರುವ ವಿಷ್ಣುವನ್ನು ಪೂಜೆ ಮಾಡುವ ಸಂಕಲ್ಪ ಮಾಡಬೇಕು.
ವಿಗ್ರಹ ಸ್ಥಾಪನೆ: ತಾಮ್ರ ಅಥವಾ ಬೆಳ್ಳಿಯ ಆಮೆಯ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಮಾಡಬೇಕು.ನಿಮ್ಮ ಬಳಿ ವಿಗ್ರಹವಿಲ್ಲದಿದ್ದರೆ, ವಿಷ್ಣುವಿನ ಫೋಟೋ ಇಟ್ಟುಕೊಂಡು ಬೇಕಾದರೂ ಪೂಜೆ ಮಾಡಬಹುದು.
ನೈವೇದ್ಯ: ಹಳದಿ ಹೂವುಗಳು, ಶ್ರೀಗಂಧ, ಅಕ್ಷತೆ ಮತ್ತು ವಿಶೇಷವಾಗಿ ತುಳಸಿ ಎಲೆಗಳನ್ನು ಭಗವಂತನಿಗೆ ಅರ್ಪಿಸಬೇಕು.
ನೈವೇದ್ಯ: ಶ್ರೀ ಹರಿಗೆ ಕೇಸರಿ ಹಾಲು ಅಥವಾ ಹಳದಿ ಬಣ್ಣದ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಬೇಕು.
ಮಂತ್ರ ಪಠಣ: ಈ ದಿನದಂದು 'ಓಂ ಕೂರ್ಮಾಯ ನಮಃ' ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಪಠಿಸುವುದರಿಂದ ಶುಭ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ.
ನಿರ್ಮಾಣ ಕಾರ್ಯಗಳಿಗೆ ಶುಭ ದಿನ.
ಜ್ಯೋತಿಷ್ಯದಲ್ಲಿ, ಕೂರ್ಮ ಜಯಂತಿಯನ್ನು ಯಾವುದೇ ಹೊಸ ನಿರ್ಮಾಣ ಯೋಜನೆಗೆ ಶುಭ ದಿನ ಎಂದು ಹೇಳಲಾಗುತ್ತದೆ. ಅಂದರೆ ಮನೆಗೆ ಭೂಮಿ ಪೂಜೆ ಮಾಡುವುದಾದರೆ ಈ ದಿನ ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಭೂಮಿಯು ಆಮೆಯ ಬೆನ್ನಿನ ಮೇಲೆಯೇ ನಿಂತಿದೆ ಎನ್ನುವುದು ನಂಬಿಕೆ. ಆದ್ದರಿಂದ ಈ ದಿನದಂದು ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿದರೆ ಯಾವುದೇ ಆಡೆತಡೆ ಇರದೆ ನಿರ್ಮಾಣ ಕಾರ್ಯ ಪುರ್ಣವಾಗುವುದಲ್ಲದೆ, ಆ ಮನೆಯಲ್ಲಿ ಸುಖ ಶಾಂತಿ ಕೂಡಾ ನೆಲೆಯಾಗುವುದಂತೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications