ಕುಂಡೆ ಕುಂಡೆ ಕುಂಡೆ, ಆಹಾ ಕೆಟ್ಟ ಕುಂಡೆ, ಆಹಾ ಒಳ್ಳೆ ಕುಂಡೆ!

By: ಬಿಎಂ ಲವಕುಮಾರ್, ಮಡಿಕೇರಿ
Subscribe to Oneindia Kannada

ಕುಂಡೆ.. ಕುಂಡೇ.. ಕುಂಡೆ ನೋಡು.. ಆಹಾ ಒಳ್ಳೆ ಕುಂಡೆ.. ಆಹಾ ಕೆಟ್ಟ ಕುಂಡೆ.. ಕುಂಡೆಗೆ ಲಕ್ಸ್ ಸೋಪು..

ಇಷ್ಟೇ ಅಲ್ಲ ಇನ್ನೇನೋ ಬಾಯಿಗೆ ಬಂದಂತೆ ಅಶ್ಲೀಲವಾಗಿ ಬೈಯುತ್ತಾ, ಭಿಕ್ಷೆ ಬೇಡುತ್ತಾ, ಕಂಠಮಟ್ಟ ಕುಡಿಯುತ್ತಾ, ಎರಡು ದಿನಗಳ ಕಾಲ ಮಜಾ ಉಡಾಯಿಸಿದ ಬುಡಕಟ್ಟು ಮಂದಿ ಭಾನುವಾರ ಸಂಜೆ ದೇವರ ಸನ್ನಿಧಿಗೆ ತೆರಳಿ ತಾವು ಬೈಯ್ದಿದಕ್ಕೆ ತಪ್ಪಾಯಿತೆಂದು ದೇವರಲ್ಲಿ ಕ್ಷಮೆ ಕೇಳಿದರು.

ಇದೇನಪ್ಪಾ ದೇವರಿಗೆ ಬೈಯ್ದು ಕ್ಷಮೆ ಕೇಳುವುದು ಎಂದು ಕೊಂಡಿರಾ? ಇದೊಂದು ಹಬ್ಬ ಎಂದರೆ ಅಚ್ಚರಿಯಾಗಬಹುದಲ್ಲವೆ? ಇದು ವಿಚಿತ್ರವಾದರೂ ವಿಶಿಷ್ಟ ಹಬ್ಬ. ಇದನ್ನು ಕೊಡಗಿನಲ್ಲಿ ಬುಡಕಟ್ಟು ಮಂದಿ ಆಚರಿಸುತ್ತಾರೆ. ಈ ಹಬ್ಬದ ಕೇಂದ್ರ ಬಿಂದು ಗೋಣಿಕೊಪ್ಪ ಬಳಿಯ ದೇವರಪುರ.

Kunde festival of Coorg : Kunde habba of Karnataka

ಕೊಡಗು ಮಾತ್ರವಲ್ಲದೆ ಮೈಸೂರು ಕಡೆಯಿಂದ ವಿಚಿತ್ರ ವೇಷಭೂಷಣ ತೊಟ್ಟು ದೇವರಪುರದತ್ತ ಆಗಮಿಸುವ ಬುಡಕಟ್ಟು ಜನಾಂಗದ ಮಂದಿ, ಬರುವಾಗಲೇ ದಾರಿಯುದ್ದಕ್ಕೂ ಸಿಕ್ಕ ಸಿಕ್ಕವರಿಗೆ ಅಶ್ಲೀಲವಾಗಿ ಬೈಯ್ಯುತ್ತಾ ಹಣ ವಸೂಲಿ ಮಾಡುತ್ತಾ ಬರುತ್ತಾರೆ.

ಹಾಗೆಬರುವ ವೇಷಧಾರಿಗಳು ದೇವರಪುರದ ಅಯ್ಯಪ್ಪ ದೇವಾಲಯದ ಮೈದಾನಕ್ಕೆ ಬರುತ್ತಾರೆ. ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಈ ಹಬ್ಬದಲ್ಲಿ ಅಶ್ಲೀಲ ಪದಗಳನ್ನು ನುಡಿಯುತ್ತಾ... ಕುಂಡೇ...ಕುಂಡೇ... ಎನ್ನುತ್ತಾ ಮಹಿಳೆಯರ (ಒಳಉಡುಪು ಸೇರಿದಂತೆ) ಉಡುಪುಗಳನ್ನು ವಿಚಿತ್ರವಾಗಿ ಧರಿಸಿ, ಕೈಯ್ಯಲ್ಲಿ ಸೋರೆಕಾಯಿ ಬುರುಡೆ, ದೊಣ್ಣೆಗಳನ್ನು ಹಿಡಿದು ಮನೆಮನೆಗೆ ತೆರಳಿ ಭಿಕ್ಷೆ ಬೇಡುತ್ತಾರೆ. [ಕುಂಡೆ ಹಬ್ಬ ಹೆಸರು ಹೇಗೆ ಬಂತು?]

Kunde festival of Coorg : Kunde habba of Karnataka

ಹಣ ನೀಡಿದರೆ ಒಳ್ಳೆ ಕುಂಡೆ ಎನ್ನುವ ವೇಷಧಾರಿಗಳು ಹಣ ನೀಡದವರ ಮಾನ, ಮರ್ಯಾದೆಯನ್ನೆಲ್ಲ ಹರಾಜು ಹಾಕಿಬಿಡುತ್ತಾರೆ. ಹೀಗೆ ಎಲ್ಲೆಡೆಯಿಂದ ಆಗಮಿಸುವ ವೇಷಧಾರಿಗಳು ಸಂಜೆ ವೇಳೆಗೆ ದೇವರಪುರದ ಅಯ್ಯಪ್ಪ ದೇವಾಲಯದಲ್ಲಿ ನೆರೆದು ಸಾಂಪ್ರದಾಯಿಕ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ.

ಇದೇ ಸಂದರ್ಭದಲ್ಲಿ, ದೇವರಪುರ ಹೆಬ್ಬಾಲೆಯ ಸಣ್ಣುವಂಡ ಕುಟುಂಬದ ಮುಖ್ಯಸ್ಥರ ಮುಂದಾಳತ್ವದಲ್ಲಿ ದೇವಾಲಯ ಸಮೀಪದ ಅಂಬಲದಿಂದ ಭದ್ರಕಾಳಿ ಉತ್ಸವ ಮೂರ್ತಿಯನ್ನು ಮರದ ಕುದುರೆಯ ಮೂಲಕ ಅಯ್ಯಪ್ಪ ದೇವಾಲಯಕ್ಕೆ ತಂದು ಪೂಜಾ ಕೈಂಕರ್ಯವನ್ನು ನೆರವೇರಿಸಲಾಗುತ್ತದೆ. ನಂತರ ಹರಕೆಹೊತ್ತ ಮಂದಿ ಈ ಕೀಲು ಕುದುರೆ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ.

Kunde festival of Coorg : Kunde habba of Karnataka

ಕುಂಡೆ ಹಬ್ಬದ ಸಂದರ್ಭ ಅಯ್ಯಪ್ಪ ದೇಗುಲದಲ್ಲಿ ಪಟ್ಟಣಿ, ಭಂಡಾರ ಹಾಕುವುದು, ಕಳಿಕಟ್ಟು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಕುಂಡೆ ಹಬ್ಬದ ಸಂದರ್ಭ ನಡೆಯುವ ಪೂಜಾ ಕಾರ್ಯಗಳಲ್ಲಿ ಇತರರು ಭಾಗವಹಿಸುತ್ತಾರೆಯಾದರೂ ಹಬ್ಬದ ಆಚರಣೆಯ ಬಹುಪಾಲು ಬುಡಕಟ್ಟು ಮಂದಿಗೆ ಮೀಸಲಾಗಿರುತ್ತದೆ.

ವೇಷಧಾರಿಗಳ ಪೈಕಿ ಹೆಚ್ಚಿನವರು ವಸೂಲಿಯಾದ ಹಣದಲ್ಲಿ ಕಂಠಪೂರ್ತಿ ಕುಡಿದು ತೂರಾಡುತ್ತಾ ದೇವಾಲಯವನ್ನು ತಲುಪುವ ಮುನ್ನವೇ ರಸ್ತೆ ಬದಿಯಲ್ಲೋ, ಚರಂಡಿಯಲ್ಲೋ ಬಿದ್ದು ಹೆಂಡದ ನಶೆಯಿಳಿದ ಬಳಿಕ ಸಂಜೆ ಭದ್ರಕಾಳಿ ದೇವಾಲಯದತ್ತ ತೆರಳಿ, ದೇವರಿಗೆ ಹಾಗೂ ಜನರಿಗೆ ಬೈದುದಕ್ಕೆ ತಪ್ಪಾಯಿತೆಂದೂ, ತಪ್ಪನ್ನು ಮನ್ನಿಸುವಂತೆಯೂ ಭದ್ರಕಾಳಿಯೊಂದಿಗೆ ಬೇಡಿಕೊಳ್ಳುತ್ತಾರೆ. ಅಲ್ಲಿಗೆ ಹಬ್ಬವೂ ಮುಗಿದು ಹೋಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Festivals of Karnataka : Kunde habba or Kunde festival was celebrated in Coorg with fervour on Sunday. Tribals from Madikeri and surrounding districts curse God and apologize later for cursing him. The tribals drink liquor and curse the people who do not donate money.
Please Wait while comments are loading...