• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಜವಾದ ಗುರು ಆದಿಶಂಕರರ ಸ್ಮರಣೆ

By * ಎಚ್. ಆನಂದರಾಮ ಶಾಸ್ತ್ರೀ
|

ಇಂದು ಭಗವತ್ಪಾದ ಆದಿಶಂಕರಚಾರ್ಯರ ಜಯಂತಿ. ಭಾರತೀಯ ತತ್ವಜ್ಞಾನಿ, ಅದ್ವೈತ ಸಿದ್ಧಾಂತದ ಪ್ರವರ್ತಕ ಶಂಕರರು ಪ್ರತಿಪಾದಿಸಿದ ಕೆಲವು ಜೀವನತತ್ತ್ವಗಳನ್ನು ಮೆಲಕು ಹಾಕುವುದರ ಮೂಲಕ ಆದಿಶಂಕರರನ್ನು ಇಂಟರ್ ನೆಟ್ಟಿನಲ್ಲಿ ಭಜಿಸಲು ಯತ್ನಿಸೋಣ.

ಉಪಭೋಗ-ಆಯುಷ್ಯ

ಜಾಗತೀಕರಣದ ನೆರವಿನಿಂದ ನಮ್ಮ ಉಪಭೋಗ ಸಂಸ್ಕೃತಿಯು ವರ್ಧಿಸುತ್ತಿದೆಯಷ್ಟೆ. ಅದೇವೇಳೆ, ನಮ್ಮ ಆಯುಷ್ಯ ಕ್ಷಯಿಸುತ್ತಲೇ ಇದೆ. ಉಪಭೋಗಗಳ ಅನುಭವಕ್ಕಾಗಿಯೇ ನಮ್ಮ ಸಂಪೂರ್ಣ ಜೀವನವನ್ನು ವ್ಯಯಿಸಿಬಿಡುತ್ತೇವಲ್ಲಾ, ಜೀವನದ ಅರ್ಥ, ಉದ್ದೇಶ ಇಷ್ಟೇಯೇ?

"ದಿನಮಪಿ ರಜನೀ ಸಾಯಂ ಪ್ರಾತಃ

ಶಿಶಿರವಸಂತೌ ಪುನರಾಯಾತಃ

ಕಾಲಃ ಕ್ರೀಡತಿ ಗಚ್ಛತ್ಯಾಯುಃ

ತದಪಿ ನ ಮುಂಚತ್ಯಾಶಾವಾಯುಃ"

("ಚರ್ಪಟ ಪಂಜರಿಕಾ")

"ಹಗಲು-ರಾತ್ರಿ, ಸಂಜೆ-ಬೆಳಗು, ಚಳಿಗಾಲ-ವಸಂತಕಾಲ ಇವೆಲ್ಲ ಪುನಃಪುನಃ ಬರುತ್ತ ಹೋಗುತ್ತ ಇರುತ್ತವೆ. ಇದು ಕಾಲನ ಆಟ. ಪರಿಣಾಮ, ನಮ್ಮ ಆಯುಷ್ಯದ ಕ್ಷಯ. ಆದರೆ, ಆಯುಷ್ಯ ಕುಂದುತ್ತಿದ್ದರೂ ಆಶೆ ಮಾತ್ರ ಬೆಳೆಯುತ್ತಲೇ ಇರುತ್ತದಲ್ಲ!"

ಈ ಆಶೆಯ ಬೆಂಬತ್ತಿ, ಉಪಭೋಗವನ್ನೇ ಆನಂದವೆಂದು ಭ್ರಮಿಸಿ, ಜೀವನವನ್ನು ಅರಿಯಲಾರದವರಾಗಿ, ಕೊನೆಗೊಮ್ಮೆ ಭ್ರಮನಿರಸನ ಹೊಂದಿ, ಅಷ್ಟರಲ್ಲಿ ಕಾಲ ಮಿಂಚಿಹೋಗಿರುವುದರಿಂದಾಗಿ ಬಾಳನ್ನು ವ್ಯರ್ಥಮಾಡಿಕೊಳ್ಳುತ್ತೇವಲ್ಲಾ, ಅದರ ಬದಲು, ವೇದಾಂತವೆಂದು ನಾವು ಉಪೇಕ್ಷಿಸುವ ಜೀವನತತ್ತ್ವವನ್ನೊಂದಿಷ್ಟು ಅರಿಯಲು ಯತ್ನಿಸಬಾರದೇಕೆ?

ಶಿವೋಹಂ

"ನ ಭೂಮಿರ್ನ ತೋಯಂ, ನತೇಜೋ ನ ವಾಯುರ್

ನ ಖಂ ನೇಂದ್ರಿಯಂ ವಾ, ನ ತೇಷಾಂ ಸಮೂಹಃ

ಅನೈಕಾಂತಿಕತ್ವಾತ್ ಸುಷುಪ್ತೈಕ ಸಿದ್ಧಃ

ತದೇಕೋವಶಿಷ್ಟಃ ಶಿವಃ ಕೇವಲೋಹಂ"

("ದಶಶ್ಲೋಕೀ")

"ನಾನು ಭೂಮಿಯಲ್ಲ, ನೀರಲ್ಲ, ತೇಜಸ್ಸಲ್ಲ, ವಾಯುವಲ್ಲ, ಆಕಾಶವಲ್ಲ, ಇಂದ್ರಿಯವೂ ಅಲ್ಲ. ಇವೆಲ್ಲವುಗಳ ಸಮೂಹವೂ ನಾನಲ್ಲ. ಏಕೆಂದರೆ, ಇವುಗಳಿಗೆ ಏಕೀಭಾವ ಸ್ಥಿರವಾಗಿಲ್ಲ. ಆದ್ದರಿಂದ, ಗಾಢನಿದ್ರಾವಸ್ಥೆಯಲ್ಲಿ ಪ್ರತ್ಯೇಕವಾಗಿ ಇವುಗಳಿಂದಾಚೆ ಎದ್ದು ಉಳಿಯುವ ಶಿವ(ದೈವ)ತತ್ತ್ವವೇ ನಾನು."

ಇಂಥದೊಂದು ಅರಿವನ್ನು ಬೆಳೆಸಿಕೊಂಡಾಗ ನಾವು ಹೊಂದುವ ಆನಂದ ಅದುವೇ ನಿಜವಾದ ಜೀವನಾನಂದ. ಅಂಥ ಆನಂದವು ನಮಗೆ ಉಪಭೋಗವಸ್ತುಗಳಿಂದ ದೊರಕಲು ಸಾಧ್ಯವೆ? ಜೀವನದ ಈ ಆನಂದಘಟ್ಟವನ್ನು ತಲುಪಿದ ಆದಿಶಂಕರರು ಹಿಮಾಲಯದಲ್ಲಿ ಲೀನವಾಗುವ ಮುನ್ನಾ ರಾತ್ರಿ ಈ ರೀತಿ ಹೇಳಿಕೊಳ್ಳುತ್ತಿದ್ದರು:

"ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ

ನಚಶ್ರೋತ್ರಜಿಹ್ವೇನ ಚ ಘ್ರಾಣ ನೇತ್ರೇ

ನಚ ವ್ಯೋಮ ಭೂಮಿರ್ನತೇಜೋನವಾಯುಃ

ಚಿದಾನಂದರೂಪಃ ಶಿವೋಹಂ ಶಿವೋಹಂ"

("ನಿರ್ವಾಣ ಷಟ್ಕ")

"ಅಂತಃಕರಣಗಳಾದ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವು ನಾನಲ್ಲ. ಜ್ಞಾನೇಂದ್ರಿಯಗಳಾದ ಕಿವಿ, ನಾಲಗೆ, ಮೂಗು, ಕಣ್ಣು, ಚರ್ಮ ಇವು ನಾನಲ್ಲ. ಪಂಚಭೂತಗಳಾದ ಆಕಾಶ, ಭೂಮಿ, ತೇಜಸ್ಸು, ವಾಯು, ಜಲ ಇವು ನಾನಲ್ಲ. ಚಿದಾನಂದರೂಪನಾದ ಶಿವನೇ ನಾನು, ಶಿವನೇ ನಾನು, ಶಿವನೇ ನಾನು."

ಇಂಥ ಜೀವನದೃಷ್ಟಿಯನ್ನು ರೂಢಿಸಿಕೊಂಡರೆ ನಮಗೆ ಈ ಜೀವಿತದಲ್ಲಿ ಮೋಹಜನ್ಯ ಕಳವಳವೆಂಬುದಿಲ್ಲ. "ದುಃಖೇಷು ಅನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ" ಎಂಬ ಭಗವದ್ಗೀತೆಯ ನುಡಿಯಂತೆ ನಾವು ದುಃಖದ ಸಂದರ್ಭಗಳಲ್ಲಿ ಉದ್ವೇಗಕ್ಕೊಳಗಾಗದಿರಲು ಮತ್ತು ಸುಖದ ಸನ್ನಿವೇಶಗಳಲ್ಲಿ ನಿಷ್ಪೃಹರಾಗಿ ಮುನ್ನಡೆಯಲು ಸಾಧ್ಯ. ಇದಕ್ಕಿಂತ ಸೌಭಾಗ್ಯ ನಮಗೆ ಈ ಜೀವನದಲ್ಲಿ ಇನ್ನೊಂದುಂಟೆ?

ಈ ನಿಟ್ಟಿನಲ್ಲಿ ಪ್ರಯತ್ನಶೀಲರಾಗುವ ಸಂಕಲ್ಪವನ್ನು ಶಂಕರ ಜಯಂತಿಯ ಈ ದಿನ ನಾವು ಮಾಡೋಣವಲ್ಲವೆ? ಭಜಗೋವಿಂದಂ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more