Get Updates
Get notified of breaking news, exclusive insights, and must-see stories!

ಜೀವನದ ಅರಿವು ಮೂಡಿಸುವ ಪ್ರತಿಯೊಬ್ಬನೂ ಶಿಕ್ಷಕನೇ

Salutations to the teacher on teachers dayಬಸ್ಸಿನಲ್ಲಿ ಪಕ್ಕ ಕುಳಿತಿದ್ದ ವ್ಯಕ್ತಿಯೋರ್ವ ಸಿಂಗಪುರದ ದಿ ನ್ಯೂ ಪೇಪರ್ ಓದುತ್ತಿದ್ದ. ಕಣ್ ಸೆಳೆದದ್ದು ಅಬ್ದುಲ್ ಕಲಾಂ ಫೋಟೋ, ಲೆಸನ್ ಫ್ರಂ ಎ ಲೀಡರ್ ಎಂಬ ಫಲಕ, ಪೇಜ್ 11. ನನಗೋ ಅದನು ಓದಬೇಕಿತ್ತು. ಹೇಗಪ್ಪಾ ಕೇಳೋದು ಎಂದು ಯೋಚಿಸುತ್ತಾ ಇದ್ದೆ. ನಾನು ಇಳಿವ ಸ್ಟಾಪ್ ಹತ್ತಿರ ಬರುತ್ತಿತ್ತು, ಛೇ, ಕೇಳೊದು ಸರಿಯಲ್ಲ ಎಂದು ಇಳಿಯಲು ಎದ್ದೆ. ಅಷ್ಟರಲ್ಲಿ ಆತ ಓದಿ ಪೇಪರ್ ಮಡಚಿಟ್ಟ. ಇದೇ ಛಾನ್ಸ್ ಎಂದು ತಕ್ಷಣ ಗಡಬಡಿಸಿ "ನಿಮಗೆ ಅಭ್ಯಂತರ ಇಲ್ಲದಿದ್ದರೆ, ಪೇಜ್ 11 ಕೊಡೋಕ್ಕೆ ಆಗುತ್ತಾ ಎಂದು ಕೇಳಿದೆ. ವಿಚಿತ್ರ ಪ್ರಾಣಿಯಂತೆ ನನ್ನ ನೋಡಿ, ಬೇರೇನೂ ಮಾತನಾಡದೆ ಆ ಪೇಜ್ ಹರಿದು ಕೊಟ್ಟು. ಥ್ಯಾಂಕ್ಸ್ ಎಂದಾಗ "ಓಕೇ" ಎಂದು ಬಿಮ್ಮನೆ ಮುಖ ತಿರುವಿದ. ಏನ್ ಮಾಡ್ಲಿ, ಕೇಳಿದ್ ತಪ್ಪು ಅಂತ ನಂಗೂ ಗೊತ್ತು.

ಕಲಾಂ ಅವರು ಸಿಂಗಪುರದ ಜಿಐಎಸ್ಎಸ್ ಶಾಲೆಗೆ ಭೇಟಿ ನೀಡಿದ ವರದಿ ಆ ಪೇಪರಿನಲ್ಲಿ ಪ್ರಕಟವಾಗಿತ್ತು. ಕಲಾಂ ಅವರು ಶಾಲೆಯ ಮಕ್ಕಳನ್ನು ಉದ್ದೇಶಿಸಿ Learning gives creativity, creativity leads to thinking, Thinking provides knowledge, Knowledge makes you great. ನಾನು 10 ವರುಷದವನಿದ್ದಾಗ ಪಾಠದಲ್ಲಿ ಶಿಕ್ಷಕರು ಪಕ್ಷಿಗಳು ರೆಕ್ಕೆ ಬಿಚ್ಚಿ ಹಾರುವ ಚಿತ್ರ ತೋರಿಸಿ, ಏರೋಪ್ಲೇನ್ ಕಂಡು ಹಿಡಿದ ಬಗ್ಗೆ, ಅದರ ಚಾಲನೆ ಬಗ್ಗೆ ವಿವರಣೆ ನೀಡಿದರು. ಅದು ನನಗೆ ಅರ್ಥವಾಗಲಿಲ್ಲ ಎಂದೆ. ಮಾರನೆಯ ದಿನ ನನ್ನ ಕ್ಲಾಸಿನ ಹುಡುಗರನ್ನು ಸಮುದ್ರ ತೀರಕ್ಕೆ ಕರೆದೊಯ್ದು "ಹಾರುತ್ತಿದ್ದ ಹಕ್ಕಿಗಳ" ತೋರಿಸಿ ಏರೋಪ್ಲೇನ್ ಹೇಗೆ ಹಾರುತ್ತದೆ ಎಂದು ವಿವರಣೆ ನೀಡಿದರು. ಆ ದಿನ ನನ್ನ ಜೀವನದಲ್ಲಿ ದೊಡ್ಡ ತಿರುವು. ಶಿಕ್ಷಕರ ಬಳಿ ಪ್ರಶ್ನೋತ್ತರ ಪಡೆಯುವ ಧೈರ್ಯ ನೀಡಿತು. ನನ್ನ ಜೀವನವ ರೂಪಿಸುವ ಮಾರ್ಗವಾಯಿತು ಏರೋನಾಟಿಕಲ್ ಎಂಜಿನಿಯರಿಂಗ್, ನಂತರ ರಾಕೆಟ್ ಎಂಜಿನಿಯರ್ ಆದೆ ಎಂದು ಕಲಾಂ ಅವರು ಶಾಲಾ ಮಕ್ಕಳಿಗೆ "ಗುರು"ಗಳ ಕುರಿತು ಹೇಳಿದ ವರದಿಯಿದು. ಇದರ ನಿಮಿತ್ತಂ ನಾನು ಪೇಪರ್ ಕೇಳಿದ್ದು.

'ಗುರು' ಎಂಬ ಪದದಲ್ಲಿ ಗು' ಎಂದರೆ ನೆರಳು ರು' ಎಂದರೆ ಚದುರಿಸುವುದು. ಯಾರು ಅಜ್ಞಾನ ಅಂಧಕಾರವನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿರುತ್ತಾರೋ ಅವರೇ ನಿಜವಾದ ಗುರು. ಗುರು-ಶಿಷ್ಯರದು ಅವಿನಾಭಾವ ಸಂಬಂಧ. ಮೂರ್ನಾಲ್ಕು ವರುಷಗಳ ಮಗು ಶಾಲೆಯಲಿ ಗುರು ಹೇಳಿದ ಸಕಲವನ್ನೂ ನಂಬುತ್ತದೆ. ಅಲ್ಲಿಂದ ನಮ್ಮ "ಮೆಚ್ಚಿನ ಟೀಚರ್, ರೋಲ್ ಮಾಡಲ್" ಆತ/ಆಕೆ ಅರಿಯದ ವಿಷಯವೇ ಇಲ್ಲ ಎಂಬ ಭಾವನೆ ಹುಟ್ಟುತ್ತದೆ. ಆ ಮೊದಲ ಹಂತದ ಶಿಕ್ಷಣ ಆ ಮಗುವನ್ನು ನಮ್ಮ ಸಮಾಜದ ಒಳ್ಳೆಯ ಹಾಗೂ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಆ ಶಿಕ್ಷಕ ಹೊರುತ್ತಾನೆ. ಕೈ ಹಿಡಿದು ನಡೆಸೆನ್ನನು ಎಂದು ಅಂದು ಕೈ ಹಿಡಿದ ಗುರುವಿನ ಪಾತ್ರ ಜೀವನದ ಪ್ರತಿ ಹಂತದಲ್ಲೂ ಹೆಜ್ಜೆ ಹೆಜ್ಜೆಗೂ ಬಂದು ಮುಖ ತೋರಿಸುತ್ತದೆ.

ಭಾರತದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಗೌರವಾರ್ಥವಾಗಿ ಅವರ ಜನ್ಮದಿನ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಸಿಂಗಪುರದಲ್ಲಿ ಸೆಪ್ಟೆಂಬರ್ 1, ಚೀನಾದಲ್ಲಿ ಆಗಸ್ಟ್ 27, ಥೈಲೆಂಡಿನಲ್ಲಿ ಜನವರಿ 16, ಇರಾನಿನಲ್ಲಿ ಮೇ 2, ತುರ್ಕಿಯಲ್ಲಿ ನವೆಂಬರ್ 24, ಮಲೇಷಿಯಾದಲ್ಲಿ ಮೇ 16 ಹಾಗೂ ಯುನೆಸ್ಕೋ ವತಿಯಿಂದ "ವರ್ಲ್ಡ್ ಟೀಚರ್ಸ್ ಡೇ" ಅಕ್ಟೋಬರ್ 5ರಂದು ಆಚರಿಸಲ್ಪಡುತ್ತದೆ.

ನಾನು ಓದಿದ್ದು ಶೇಷಾದ್ರಿಪುರಂ ಕಾಲೇಜು. ಅಕೌಂಟ್ಸ್, ಫ್ಯಾಕ್ಟರಿ ಅಡ್ಮಿನಿಸ್ಟ್ರೇಷನ್ ಕ್ಲಾಸಿಗೆ ಸದಾ ಚಕ್ಕರ್, ಕಾರಿಡಾರ್‍ನಲ್ಲಿ ಹುಡುಗರೊಂದಿಗೆ ಟಾಕರ್. ಸತ್ಯನಾರಾಯಣ ಹೇಳುತ್ತಿದ್ದ "ಅಶ್ವತ್ಥಾಮನ್", ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಕನ್ನಡ ಕ್ಲಾಸಿಗೆ, ರಾಧಾಕೃಷ್ಣನ್ ಅವರ ಇಂಗ್ಲೀಷ್ ಕ್ಲಾಸಿಗೆ ತಪ್ಪದೆ ಹಾಜರ್. ಆ ಪಾಠ ಇಷ್ಟ ಜೊತೆಗೆ ಮುಲಾಜಿಲ್ಲದೆ ಗಂಡು ಹುಡುಗರೆದುರು ಮಂಗಳಾರತಿ ಆಗುತ್ತಲ್ಲಾ ಎಂಬ ಕಷ್ಟ. ಇನ್ನು 60 ದಿನಗಳು ಅಟೆಂಡನ್ಸ್ ಪರ್‌ಪಸ್ ಎಲ್ಲ ಕ್ಲಾಸಿಗೂ ಜರೂರಿ ಹಾಜರಿ, ಸಂಜೆ ಪ್ರಿನ್ಸಿಪಾಲ್ ಸೋಮಯಾಜಿಲು ನಡೆಸುತ್ತಿದ್ದ "ಫ್ರೀ-ಸ್ಪೆಷಲ್" ಕ್ಲಾಸಿಗೆ "ಯುದ್ಧಕಾಲೇ ಶಸ್ತ್ರಾಭ್ಯಾಸ" ಕ್ಕಾಗಿ ತಯಾರಿ.

ಒಮ್ಮೆ ಸೋಮಯಾಜಿಲು ಅವರ ಕ್ಲಾಸು ಒಂದು ಸಭಾಂಗಣದಲ್ಲಿ ಏರ್ಪಾಡಾಗಿತ್ತು. ಆ ಸಭಾಂಗಣದಲಿ ಕುರ್ಚಿ-ಮೇಜುಗಳು ಇರಲಿಲ್ಲ. ನೆಲದ ಮೇಲೆ ಕುಳಿತು ಪಾಠ ಕೇಳಬೇಕಿತ್ತು. ಎಲ್ಲರೂ ಚಪ್ಪಲಿ ಬಿಚ್ಚಿ ಒಳ ನಡೆದೆವು. ಸೋಮಯಾಜಿಲು ಬೋರ್ಡಿನ ಮೇಲೆ ನಮಗೆ ನಾಲ್ಕು ಲೆಕ್ಕಗಳನ್ನು ಬರೆದು, ಮಾಡಲು ಹೇಳಿ ಹೊರ ನಡೆದರು. ಅವರು ಹೊರ ನಡೆದಂತೆ ಗುಸು ಮಾತು, ಕಿಲ ಕಿಲ ನಗೆ ಶುರು. ಶ್, ಎಲ್ ಹೋದ್ರು ಪ್ರಿನ್ಚಿ, ಪ್ರಶ್ನೆಗೆ ಅತ್ತಿತ್ತ ಕಣ್ಣೋಟ ಹರಿದು ಮೆಲ್ಲಗೆ ಬಾಗಿಲತ್ತ ಹರಿಯಿತು. ಇದ್ದಕ್ಕಿದ್ದಂತೆ ಅಯ್ಯೋ, ಅಲ್ನೋಡೇ ಅಲ್ಲಿ ಎಂಬ ನನ್ನ ಎತ್ತರದ ಸ್ವರಕ್ಕೆ ಎಲ್ಲರನ್ನೂ ಬಾಗಿಲಿನತ್ತ ನೋಡುವಂತೆ ಮಾಡಿತು. "ಅಲ್ಲೊಂದು, ಇಲ್ಲೊಂದು, ಎತ್ತೆಂದರತ್ತ ಬಿದ್ದಿದ್ದ ಚಪ್ಪಲಿಗಳನ್ನು ನೆಲದ ಮೇಲೆ ಸಾಲಾಗಿ ಒಂದೆಡೆ ಓರಣವಾಗಿ ಇಡುತ್ತಿದ್ದರು ಸೋಮಯಾಜಿಲು. ನೂರು ವಿದ್ಯಾರ್ಥಿಗಳಿದ್ದ ಕ್ಲಾಸಿನಲ್ಲಿ ಸ್ಮಶಾನ ಮೌನ. ಛಟ್ಟನೆ, ಕ್ಷಮ್ಸಿ ಸರ್, ಎನ್ನುತ್ತಾ ಎಲ್ಲರೂ ಎದ್ದು ಚಪ್ಪಲಿ ರಾಶಿಯನು ಕ್ಷಣ ಮಾತ್ರದಲ್ಲಿ ಗೂಡಿನಲ್ಲಿ ಆದಷ್ಟು, ಒಂದು ಮೂಲೆಯ ನೆಲದ ಮೇಲೆ ಜೋಡಿಸಿದೆವು. ಹಿಂದೆ ಸರಿದು ನಮ್ಮನ್ನು ಗಮನಿಸುತ್ತಿದ್ದ ಸೋಮಯಾಜಿಲು ಒಮ್ಮೆಲೆ ಎಲ್ಲರತ್ತ ನೋಟ ಬೀರಿ "ಗುಡ್" ಎಂದು ಒಳನಡೆದರು. ಎಲ್ಲರ ತಲೆ ತಗ್ಗಿತ್ತು. "ಇವತ್ತು ಪಾಠ ಬೋರು ಸರ್, ಬೇಡ ಸರ್" ಎಂದು ನಮ್ಮನ್ನು ಅಣಕಿಸಿ, ಇಂದು ನನ್ನ ಪಾಠ ಸಾರ್ಥಕವಾಯಿತು ಎಂದರು. ಅಂದು ಅವರಿಂದ ಕಲಿತದ್ದು "ಮರೆಯಲಾಗದ ಜೀವನದ ಪಾಠ".

ಪ್ರಾಚೀನ ಕಾಲದಲ್ಲಿ ವಿದ್ಯಾಕಾಂಕ್ಷಿಗಳಾಗಿ ಬಂದವರನ್ನು ಅನೇಕ ಪರೀಕ್ಷೆಗಳಿಗೊಡ್ದಿ "ಅರ್ಹತೆ" ಗಳಿಸಿದಲ್ಲಿ, ವಿದ್ಯಾರ್ಥಿಯ ಆಯ್ಕೆಯ ಸ್ವಾತಂತ್ರ್ಯ ಗುರುವಿಗೆ ಮಾತ್ರವಿತ್ತು. ಶಿಷ್ಯತ್ವ ಸಂಪಾದಿಸಲು ವಿದ್ಯಾರ್ಥಿಗಳಿಗೆ ಒಡ್ದಿದ ಪರೀಕ್ಷೆಗಳು, ತೇರ್ಗಡೆಗೊಂಡು ಗುರುಕುಲ ಮುಗಿದು, ಗುರು ಕೇಳಿದ ಗುರುದಕ್ಷಿಣೆ ನೀಡಲು ತಮ್ಮ ಒಂದು ಅಂಗವನ್ನು, ಗುರುವಿಗಾಗಿ ಯುದ್ಧ, ಗುರುವಿಗಾಗಿ ತಪಃ, ಪ್ರಾಣ ನೀಡಿದ ವಿದ್ಯಾರ್ಥಿ ನಿಷ್ಠೆಯ ಕಥೆಗಳೂ ಬಹಳಷ್ಟಿವೆ. ಸರ್ವಪಲ್ಲಿ ರಾಧಾಕೃಷ್ಣನ್ರವರು ಸ್ವತಂತ್ರ ಭಾರತದ 2ನೆಯ ರಾಷ್ಟ್ರಪತಿಗಳಾಗಿದ್ದರು. ಒಬ್ಬ ಹೆಸರಾಂತ ಶಿಕ್ಷಣ ತಜ್ಣರಾಗಿದ್ದರು. ಡಾ.ರಾಧಾಕೃಷ್ಣನ್ ಅವರು ಮೈಸೂರಿನಿಂದ ದಿಲ್ಲಿಗೆ ಹೊರಟ ದಿನ ಅವರ ವಿದ್ಯಾರ್ಥಿಗಳು ಅವರು ಏರಿದ್ದ ಸಾರೋಟಿನ ಕುದುರೆಗಳನ್ನು ಬಿಚ್ಚಿ ತಾವೇ ರೈಲ್ವೆ ನಿಲ್ದಾಣದವರೆಗೆ ಅದನ್ನು ಎಳೆದುಕೊಂಡು ಹೋದರಂತೆ.

1973ರಲ್ಲಿ ನಮ್ಮ ತಂದೆ ನಮ್ಮನ್ನು ಹಂಪಿ ತೋರಿಸಲು ಕರೆದೊಯ್ದಿದ್ದರು. ಹೊಸಪೇಟೆ ತನಕ ರೈಲು ಪಯಣ. ಅಲ್ಲಿ ಸ್ಟೇಷನ್ನಿನಲ್ಲಿ ಇಳಿದು ನಡೆಯುತ್ತಿದ್ದೆವು. ದೂರದಲ್ಲಿ ನಿಂತು ಮಾತನಾಡುತ್ತಿದ್ದ ಟಿಕೆಟ್ ಕಲೆಕ್ಟರ್ ಹಾಗೂ ಗಾರ್ಡ್ ನಮ್ಮನ್ನು ಕಂಡೊಡನೆ ಓದಿ ಬಂದರು. ಅಣ್ಣನ ಕೈ ಹಿಡಿದಿದ್ದ ನಾನು ಇನ್ನೂ ಹತ್ತಿರ ಸರಿದೆ. ನನ್ನ ತಂದೆಯವರು ನಿಂತರು. ಹತ್ತಿರ ಬಂದ ಅವರೀರ್ವರೂ ನನ್ನ ತಂದೆಯ ಕಾಲಿಗೆ ಎರಗಿ, ಕೈಮುಗಿದು "ಸರ್, ನಿಮ್ಮ ಸ್ಟೂಡೆಂಟ್ಸ್ ನಾವು. ಈಗ ರೈಲ್ವೆ ನೌಕರಿಯಲ್ಲಿ ಇದ್ದೇವೆ. ಅಂದು ನಿಮ್ಮ ಮನೆಯಲ್ಲಿ ತಿಂದ ವಾರಾನ್ನ, ಹೇಳಿಕೊಟ್ಟ ಪಾಠ ಇಂದು ನಮಗೆ ಊಟ-ಬಟ್ಟೆಗೆ ಕೊರತೆ ಇಲ್ಲದಂತೆ ಮಾಡಿದೆ. ಇದೇ ರೈಲಿನಲ್ಲಿ ಡ್ಯೂಟಿ, ನಿಮ್ಮನ್ನು ನೋಡಿ ಬಹಳ ಸಂತೋಷವಾಯಿತು ಸರ್, ಹೊರಡಬೇಕು ಎಂದರು ವಿನೀತಭಾವದಿಂದ. ಆ ದಿನಗಳಲ್ಲಿ ಸರಕಾರಿ ನೌಕರಿಗೆ ಬೆಲೆ ಇತ್ತು. ಅವರೀರ್ವರ ಬೆನ್ನು ತಟ್ಟಿದ ನನ್ನ ತಂದೆಯವರ ಮೊಗದಲಿ ಸಾರ್ಥಕ್ಯಭಾವವಿತ್ತು. ಅಂದು ನಾನು ಚಿಕ್ಕವಳಿದ್ದೆ ಆ ಗುರು-ಶಿಷ್ಯ ಸಂಬಂಧದ ಆ ಜೀವನದ ಪಾಠದ ಅರಿವಿರಲಿಲ್ಲ. ಇಂದಿಗೂ ಆ ದೃಶ್ಯ ನೆನೆದಾಗ ಕಣ್ಮುಂದೆ ನಿಲ್ಲುತ್ತದೆ. ನನ್ನ ತಂದೆಯವರು ಮೈಸೂರಿನ ಶಾರದಾವಿಲಾಸ್ ಹೈಸ್ಕೂಲಿನ ಹೆಡ್‌ಮಾಸ್ಟರ್ ಆಗಿದ್ದರು.

ಶಾಲೆಯಲ್ಲಿ ಪಾಠ ಕಲಿಸಿದವರು ಮಾತ್ರವೇ ಶಿಕ್ಷಕರಲ್ಲ. ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ನಮಗೆ ಜೀವನ ಪಾಠ ಕಲಿಸುವ ಗುರು ಎದುರಾಗುತ್ತಾರೆ. ಇವರು ಜೀವನದ ಅರಿವು ಮೂಡಿಸುವ ಮಾರ್ಗದರ್ಶಕರು. ಗುರು ಎಂದರೆ ಪೂಜ್ಯ, ಶಿಕ್ಷಕ-ಶಿಕ್ಷಣ ನೀಡುವವ, ಉಪಾಧ್ಯಾಯ-ಉಪದೇಶಕ, ಅಧ್ಯಾಪಕ-ಅಧ್ಯಯನ ಮಾಡಿಸುವವ ಎಂದರ್ಥ. ಪಾಠ ಹೇಳಿಕೊಟ್ಟವ ಮಾತ್ರ ಗುರುವಲ್ಲ. ಸನ್ನಡತೆ, ಸನ್ಮಾರ್ಗ ತೋರುವವ ಕೂಡ ಗುರು. ಇವರೆಲ್ಲರೂ ಗುರು ರೂಪೇಣ ವಂದಿತಂ. ಎಲ್ಲ ಮನುಜನೂ ವಿದ್ಯಾರ್ಥಿಯೇ? ಎಲ್ಲವನೂ ಬಲ್ಲವರು ಯಾರೂ ಇಲ್ಲ. ಕೆಲವಂ ಬಲ್ಲಿದವರಿಂದ ಕಲ್ತು ಎಂಬುದನ್ನು ಮೊದಲು ಪಾಲಿಸಬೇಕು.

ವಿದ್ಯೆಯೊಂದು ಯಾರೂ ನಮ್ಮಿಂದ ಅಪಹರಿಸಲಾಗದ ಸಂಪತ್ತು. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರುವಾದರೂ ನಂತರ ನಮ್ಮನ್ನು ರೂಪಿಸುವವರು ಹಲವರು. ಪ್ರತಿಯೋರ್ವ ಗುರುವು "ಒಳ್ಳೇ ಮನುಜರಾಗಿ ಬಾಳಿ, ಓದಿ ಮುಂದೆ ಬನ್ನಿ" ಎಂದು ನೂರು ಸಲವಾದರೂ ನುಡಿದಿರುತ್ತಾರೆ. ನಮಗೆ ಗುರಿ ಮುಟ್ಟಲು ದಾರಿ ತೋರಿದ, ನಿಸ್ವಾರ್ಥ ಮನೋಭಾವದಿಂದ ದಾರಿದೀಪವಾದ ಎಲ್ಲ ಗುರುವನ್ನು ನೆನೆಯೋಣ. ನಮನ ಸಲ್ಲಿಸೋಣ.

ಇಂದಿನ ಮಕ್ಕಳಿಗೆ ಟೀಚರ್‍ಸ್ ಡೇ, ಫಾದರ್‍ಸ್ ಡೇ, ಮದರ್‍ಸ್ ಡೇ ಎಲ್ಲ ಡೇಗಳಿಗೂ ಒಂದು ಹೂವು, ಒಂದು ಗ್ರೀಟಿಂಗ್ ಕಾರ್ಡ್ ಒಂದು ಪ್ರೆಸೆಂಟ್. ಹ್ಯಾಪಿ....ಡೇ ಎಂದು ಕೈ ಕುಲುಕುವಿಕೆ. ಇವ್ರು ತುಂಬು ಮನದಿಂದ ಹೇಳ್ತಾರೋ ಅಥ್ವಾ ಕಾಟಾಚಾರಕ್ಕೆ ಹೇಳ್ಬೇಕು ಅಂತ ಹೇಳ್ತಾರೋ ಅನಿಸೋದಂತೂ ನಿಜ. ಈ ಶಿಷ್ಟಾಚಾರ, ಕಾಟಾಚಾರ..ಯಾವ ಆಚಾರಗಳೂ ಅಪ್ಲೈ ಆಗದೆ ಇರೋದು ವ್ಯಾಲಂಟೈನ್ಸ್ ಡೇ ಮಾತ್ರ.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ......ಗುರು ಬ್ರಹ್ಮ, ಗುರು ವಿಷ್ಣು.....ಕಾಲ ಬದಲಾಗಿದೆ. ಡಾ.ರಾಧಾಕೃಷ್ಣನ್, ನೊಬೆಲ್ ಪುರಸ್ಕೃತ ಡಾ.ಎಸ್. ಚಂದ್ರಶೇಖರ್, ಡಾ.ರಾಜಾರಾಮಣ್ಣ, ಎಚ್. ನರಸಿಂಹಯ್ಯ ಹಾಗೂ ಇನ್ನೂ ಎಲೆ ಮರೆಕಾಯಿಯಾಗಿ ಶಿಕ್ಷಕ ಸ್ಥಾನಕ್ಕೆ ಗೌರವ, ಮಹತ್ತು ತಂದುಕೊಟ್ಟ ಅನೇಕರು ಈಗ "ಎಕ್ಸ್, ಮಾಜಿ, ಲೇಟ್" ಆಗಿದ್ದಾರೆ. ಇಂದು ಕಾಲ ಬದಲಾಗಿದೆ. ಮುಕ್ತಿ ಸ್ಥಾನ ತೋರುವ ಗುರುವೂ ಇಲ್ಲ, ಮುಕ್ತಿಗಾಗಿ ಗುಲಾಮನಾಗುವ ಶಿಷ್ಯನೂ ಇಲ್ಲ. ಶಿಷ್ಯ ಶಿಷ್ಯನಾಗಿಲ್ಲ-ಶಿಕ್ಷಕ ಶಿಕ್ಷಕನಾಗಿ ಉಳಿದಿಲ್ಲ. ಶಿಕ್ಷಣ ಒಂದು ವ್ಯಾಪಾರವಾಗಿದೆ. ರಾಜಕಾರಣ, ಜಾತಿ, ಲಂಚ, ಲಂಪಟತೆಗಳ ಕಬಂಧ ಬಾಹುಗಳು ಶಿಕ್ಷಣ ಕ್ಷೇತ್ರವನ್ನೂ ಕಬಳಿಸಿದೆ. ಮಕ್ಕಳನ್ನು ತಪ್ಪು ಮಾರ್ಗಕ್ಕೆ, ದುರಾಚಾರಕ್ಕೆ, ತನ್ನ ವೈಯಕ್ತಿಕ ಸೋಲು, ಸವಾಲುಗಳನ್ನು ಮಕ್ಕಳ ಮೇಲೆ ತೋರ್ಪಡಿಸುವ ಶಿಕ್ಷಕರೂ ಇದ್ದಾರೆ. ಹೀಗಿರುವಲ್ಲಿ ಶಿಕ್ಷಕ ದಿನಾಚರಣೆ ಮಹತ್ವ ಮಕ್ಕಳಲ್ಲಿ ಮೂಡುವುದಾದರೂ ಹೇಗೆ? ಮಾನವೀಯ ಮೌಲ್ಯಗಳ ಅರಿವು ನಮಗಿದೆಯೇ, ಬೌದ್ಧಿಕವಾಗಿ ನಾವು ಹೇಗೆ ಬೆಳೆಯುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಪ್ರತಿಯೋರ್ವನೂ ತನ್ನಲ್ಲೇ ಕೇಳಿಕೊಳ್ಳಬೇಕಾದ ಕಾಲವಿದು. ಒಟ್ಟಿನ್ಲಲಿ ಕಾಲ ಯಾವುದಾದರೂ ನಿಜವಾದ ಶಿಕ್ಷಕ, ನಿಜವಾದ ವಿದ್ಯಾರ್ಥಿ, ಇವರಿಬ್ಬರ ಸಂಬಂಧದ ಬಗೆ ಒಂದೇ. ಅದರಲ್ಲಿಯೇ ಅಡಗಿದೆ ಶಿಕ್ಷಣದ ಯಶಸ್ಸು.

ಪಾಠ ಕಲಿಸಿದ ಶಿಕ್ಷಕರ ನೆನಕೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+