• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಸನಾತನ ಸಂಸ್ಕೃತಿ ಹಾಳು ಮಾಡುತ್ತಿರುವವರು ಯಾರು?

By ವಿಷ್ಣುದಾಸ ನಾಗೇಂದ್ರಾಚಾರ್ಯ, ಮೈಸೂರು
|

ಗಣಪತಿಯ ಹಬ್ಬ ಬಂದಿದೆ. ಬೀದಿ ಬೀದಿಗಳಲ್ಲಿ ಕಲರುಕಲರಿನ ಗಣಪತಿಯ, ಅಸಹ್ಯ ಪದಾರ್ಥಗಳಿಂದ ಮಾಡಿದ, ವಿಕಾರದ ಬೊಂಬೆಗಳು ಬಂದು ಕುಳಿತಿವೆ. ನೋಡಿನೋಡಿ ಮನಸ್ಸು ರೋಸಿ ಹೋಗುತ್ತಿದೆ.

ನಮ್ಮ ಪ್ರಾಚೀನ ಋಷಿಮುನಿಗಳು ನಮ್ಮ ಮೇಲೆ ಅದೆಷ್ಟು ಕಾರುಣ್ಯವನ್ನು ತೋರಿದ್ದಾರೆ, ನಮ್ಮ ಕಣ್ಣಿಗೆ ಕಾಣದ ಭಗವಂತನನ್ನು, ದೇವತೆಗಳನ್ನು ತಮ್ಮ ನಿತಾಂತ ತಪಸ್ಸಿನಿಂದ ಸಾಕ್ಷಾತ್ಕರಿಸಿಕೊಂಡು ಅವರು ಹೇಗಿದ್ದಾರೆ ಎನ್ನುವುದನ್ನು ಕಂಡು ನಮಗಾಗಿ ಬರೆದಿಟ್ಟು ಹೋಗಿದ್ದಾರೆ.

ಆದರೆ ನಾವು, ನಮ್ಮ ಪ್ರಾಚೀನರಿಗೆ ಬೆಲೆಯನ್ನೇ ನೀಡುವದಿಲ್ಲ. ಆ ಋಷಿಮುನಿಗಳ ತಪಸ್ಸಿನ ಫಲವನ್ನು ಎಡಗಾಲಿನಿಂದ ಒದ್ದು, ಅವರ ಕಾರುಣ್ಯವನ್ನು ತಿರಸ್ಕರಿಸಿ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದೇವೆ.

ಗಣಪತಿಯ ಕೈಯಲ್ಲಿ ಬ್ಯಾಟನ್ನು ಕೊಟ್ಟು ಸಚಿನ್ ತೆಂಡೂಲ್ಕರನ ಹಾಗೆ ಮುಖ ಮಾಡಿ, ಗಣೇಶನ ಕೈಯಲ್ಲಿ ಬಾಹುಬಲಿಯಂತೆ ಶಿವಲಿಂಗವನ್ನು ಎತ್ತಿಸಿ, ಗಣಪತಿಯನ್ನು ಸ್ಕೂಟರಿನ ಮೇಲೆ ಕೂಡಿಸಿ, ಗಣಪತಿಗೆ ಗಾಗಲ್ಸ್ ಹಾಕಿ, ಗಡ್ಡ ಬಿಡಿಸಿ ಏನಿದು ಅಸಹ್ಯ ವಿಕಾರಗಳು? ದೇವರ ಪೂಜೆಯಲ್ಲಿಯೂ ಕ್ರಿಕೆಟ್ಟು ಬೇಕಾ, ಸಿನಿಮಾ ಬೇಕಾ? ಅವುಗಳಿಂದ ನಮ್ಮ ಜನಾಂಗದ ಮನಸ್ಸೇ ಹಾಳಾಗಿ ಹೋಗಿದೆ, ಅದನ್ನು ಸರಿಪಡಿಸಲಿಕ್ಕಾಗಿ, ದೇವರ ಪೂಜೆ, ಆರಾಧನೆಗಳು. ಪ್ರಶಾಂತವಾಗಿ ನಡೆಯಬೇಕಾದ ಪೂಜೆಯಲ್ಲಿ ಇಂತಹ ಮನಸ್ಸನ್ನು ಹಾಳು ಮಾಡುವ ವಿಕಾರಗಳು ಬೇಕಾ?

Are we spoiling Hindu culture in the name of Ganesha festival

ಇನ್ನು ಗಣಪತಿಯ ಪೂಜೆಯಲ್ಲಿ ಹಾಕುವ ತಾರಕ ಸ್ವರದ ಸಿನಿಮಾ ಹಾಡುಗಳು. ಛೀ! ಮುಸಲ್ಮಾನರ ಮಸೀದಿಗಳಲ್ಲಿ ಎಂದಾದರೂ ಬಾಲಿವುಡ್ಡಿನ ಹಾಡುಗಳನ್ನು ಹಾಕಿದ್ದು ನೀವು ಕೇಳಿದ್ದೀರಾ? ದಿವಸಕ್ಕೆ ಐದು ಬಾರಿ ತಾರಕಸ್ವರದಲ್ಲಿ ಇಡಿಯ ಊರಿಗೆ ಅವರ ಅಸ್ತಿತ್ವವನ್ನು ಸಾರಿ ಹೇಳುತ್ತಾರೆ, ಆದರೆ ನಮ್ಮವರು ಗಣಪತಿಯ ಹಬ್ಬದಲ್ಲಿ ಆರ್ಕೆಸ್ಚ್ರಾಗಳು, ಸಿನಿಮಾಗಳ ಅಸಹ್ಯ ಸಾಹಿತ್ಯದ ಹಾಡುಗಳು. ಹಿಂದೂಧರ್ಮಕ್ಕೆ ಮಸಿ ಬಳಿಯುತ್ತಿರುವವರು ಯಾರು? ನಮ್ಮವರೇ ಅಲ್ಲವೇನು?

ಯಾಕೆ, ಗಣಪತಿಯ ಹಬ್ಬದಲ್ಲಿ ಸುಶ್ರಾವ್ಯ ಸಂಗೀತದ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಾಧ್ಯವಿಲ್ಲವಾ? ಸಂಗೀತಪ್ರಿಯನಾದ ಗಣಪತಿಯನ್ನು ಸಂಗೀತದಿಂದ ಅರ್ಚನೆಯನ್ನು ಮಾಡಲು ಸಾಧ್ಯವಿಲ್ಲವಾ? [ಸಜ್ಜನರು ಆಚರಿಸಬೇಕಾದ ಸತ್ಕರ್ಮ]

ಇನ್ನು ಮನೆಮನೆಯಲ್ಲಿ ನಡೆಯುವ ವಿಕಾರಗಳು. ನಮಗೆ ಗಣಪತಿಯ ಪೂಜೆಗಿಂತ ಅಡಂಬರಕ್ಕೇ ಹೆಚ್ಚಿನ ಬೆಲೆ. ಗಣಪತಿಗೆ ಮಾಡುವ ಮೊಟ್ಟಮೊದಲ ಅಪಚಾರ ಕೆಮಿಕಲ್ ಮೆತ್ತಿರುವ ಕಲರುಕಲರಿನ ಗಣಪತಿಯನ್ನು ತರುವದು. ಈಗಂತೂ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಗಣಪತಿಗಳು. ಆ ಬಳಿಕ ಮನೆಯಲ್ಲಿ ವಿಕೃತಗೊಂಡ ಆಚಾರಗಳಿಂದ ಅವನ ಪೂಜೆ. ಊರಿನ ಎಂಜಲೆಲ್ಲ ಸೇರಿದ ಹೂಗಳಿಂದ ಗರಿಕೆಗಳಿಂದ ಅವನ ಪೂಜೆ. ದೇವರು ನಮ್ಮ ಮೇಲೆ ಹೇಗೆ ತಾನೆ ಒಲಿಯಲು ಸಾಧ್ಯ?

ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ -

ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್ I
ಅಸದಿತ್ಯುಚ್ಯತೇ ಪಾರ್ಥ ನಚ ತತ್ ಪ್ರೇತ್ಯ ನೋ ಇಹ II

ಅರ್ಜುನ, ದೇವರಲ್ಲಿ, ದೇವರ ವಾಕ್ಯಗಳಾದ ವೇದಗಳಲ್ಲಿ, ಋಷಿಮುನಿಗಳ ಆದೇಶಗಳಲ್ಲಿ ಶ್ರದ್ಧೆಯಿಲ್ಲದೇ ಮಾಡಿದ ಹೋಮ, ಕೊಟ್ಟ ದಾನ, ಆಚರಿಸಿದ ತಪಸ್ಸು, ಮಾಡುವ ಯಾವದೇ ಕರ್ಮ ಸತ್ಕರ್ಮ ಎಂದು ಕರೆಸಿಕೊಳ್ಳುವದಿಲ್ಲ. ಬದಲಾಗಿ, ಅಸತ್ ಇತ್ಯುಚ್ಯತೇ, ಅಸತ್ಕರ್ಮ ಎಂದು ಕರೆಸಿಕೊಳ್ಳುತ್ತದೆ. ಆದರಿಂದ ಈ ಲೋಕದಲ್ಲಿಯೂ ಸತ್ಫಲ ಉಂಟಾಗುವುದಿಲ್ಲ. ಆ ಲೋಕದಲ್ಲಿಯೂ ಸತ್ಫಲ ಉಂಟಾಗುವದಿಲ್ಲ. ಕೇವಲ ದುಷ್ಫಲವೇ.[[ಟ್ವಿಟ್ಟರ್ ನಲ್ಲಿ ಪಾರ್ಲೆ ಜಿ ಬಿಸ್ಕತ್ತು ಗಣೇಶ ಟ್ರೆಂಡಿಂಗ್]]

ಹೀಗೆ ವಿಕೃತಿಯಿಂದ ಮಾಡುವ ಪೂಜೆ ಆರಾಧನೆಗಳನ್ನು ನಮ್ಮನ್ನು ಅನರ್ಥಕ್ಕೀಡು ಮಾಡುತ್ತವೆ. ಕನಿಷ್ಠ ಇಷ್ಟು ಎಚ್ಚರವಾದರೂ ನಮಗೆ ಗಣಪತಿಯ ಪೂಜೆ ಮಾಡುವದಕ್ಕಿಂತ ಮುಂಚೆ ಇರಬೇಕು. ನಮ್ಮ ಪ್ರಾಚೀನ ಋಷಿಮುನಿಗಳು ಗಣಪತಿಯ ನಿಖರ ಸ್ವರೂಪವನ್ನು ತಿಳಿಸಿದ್ದಾರೆ. ಪರಿಶುದ್ಧವಾದ ಕ್ರಮದಲ್ಲಿ ಅವನನ್ನು ಆರಾಧಿಸಿದರೆ ಮಾತ್ರ ಅವನು ನಮಗೆ ಒಲಿಯುತ್ತಾನೆ.

ಗಣಪತಿಯ ಪೂಜೆಯಿಂದ ನಮ್ಮ ಮನೆಯ, ಕೆಲಸದ, ದಾಂಪತ್ಯದ, ಹಣದ ಅಡಚಣೆಗಳು ದೂರವಾಗುತ್ತವೆ. ಗಣಪತಿಯ ಪೂಜೆಯಿಂದ ನಮ್ಮ ಎಲ್ಲ ಕಾರ್ಯಗಳಲ್ಲಿ ಸಿದ್ಧಿ ದೊರಕುತ್ತದೆ. ಗಣಪತಿಯ ಪೂಜೆ ಉತ್ತಮ ದಾಂಪತ್ಯವನ್ನು, ಸದ್ಗುಣಿಗಳಾದ ಮಕ್ಕಳನ್ನೂ ಕರುಣಿಸುತ್ತವೆ. ಗಣಪತಿಯ ಪೂಜೆ ನಮಗೆ ಯಶಸ್ಸು, ಕೀರ್ತಿ, ಸಂಪತ್ತು, ಸದ್ಗುಣಗಳನ್ನು ಕರುಣಿಸಿ ನಮ್ಮನ್ನು ಎಲ್ಲ ವಿಧದಿಂದಲೂ ಎತ್ತರಕ್ಕೆ ಕರೆದೊಯ್ಯುತ್ತದೆ.

ಆ ಸತ್ಫಲಗಳು ನಮಗೆ ದೊರೆಯಬೇಕಾದರೆ ಪರಿಶುದ್ಧ ಕ್ರಮದಲ್ಲಿಯೇ ಗಣಪತಿಯನ್ನು ಪೂಜೆ ಮಾಡಬೇಕು. ಪ್ರತೀವರ್ಷದ ಗಣಪತಿಯ ಪೂಜೆಯಂದು ಈ ನಿಯಮಗಳನ್ನು ಪಾಲಿಸಿ. ವಿಕೃತ ಆಕಾರಗಳ ಗಣಪತಿಯನ್ನು ತರಲೇಬೇಡಿ. ಅದರಿಂದಾಗುವಷ್ಟು ಅನರ್ಥ ಮತ್ತ್ಯಾವುದರಿಂದಲೂ ಆಗುವದಿಲ್ಲ. ನಮ್ಮ ಜೀವನವನ್ನೇ ವಿಕೃತಗೊಳಿಸಿಬಿಡುತ್ತದೆ ಆ ದುಷ್ಕರ್ಮ.

ಕಲರು ಹಚ್ಚಿದ ಗಣಪತಿಯನ್ನು ಸರ್ವಥಾ ತರಬೇಡಿ. ಶುದ್ಧ ಮಣ್ಣಿನಿಂದ ಮಾಡಿದ ಗಣಪತಿಯನ್ನು ತೆಗೆದುಕೊಂಡು ಬನ್ನಿ. ಕೊಂಡ ಹೂಗಳಿಂದ, ಕೊಂಡ ಗರಿಕೆಗಳಿಂದ ಗಣಪತಿಯನ್ನು ಪೂಜಿಸಬೇಡಿ. ಮನೆಯಲ್ಲಿ ಬೆಳೆದ ಹೂಗಳಿದ್ದರೆ, ಪೂಜಿಸಿ ಇಲ್ಲದಿದ್ದರೆ ಹೂಗಳ ಹೆಸರನ್ನು ಹೇಳಿ ಮನಸ್ಸಿನಿಂದ ಅರ್ಪಿಸಿ, ಗಣಪತಿ ಒಲಿಯುತ್ತಾನೆ.

ಗಣಪತಿಯ ಪೂಜೆಗಾಗಿ ಪ್ರಯತ್ನ ಪಟ್ಟು ಶುದ್ಧ ಗರಿಕೆಗಳನ್ನು ನೀವೇ ತನ್ನಿ. ಮನೆಯ ಕೆಲಸದವರಿಗೆ ಹೇಳಿ ದುರಹಂಕಾರದಿಂದ ತರಿಸುವದು ಬೇಡ. ಭಕ್ತಿಯಿಂದ ನೀವೇ ಹೋಗಿ ತನ್ನಿ. ಒಂದು ಪಾಟಿನಲ್ಲಿ ಗರಿಕೆಯನ್ನೂ ಬೆಳೆಸದಷ್ಟು ದೌರ್ಭಾಗ್ಯ ಯಾರಿಗೂ ಬಾರದಿರಲಿ.

ಗಣಪತಿಯನ್ನು ಕೂಡಿಸಲಿಕ್ಕಾಗಿ, ಹುಡುಗರು ಬಂದರೆ, ವಿಕೃತ ಗಣಪತಿಯನ್ನು ಕೂಡಿಸಬಾರದು, ಕೂಡಿಸಿದರೆ ಬಂದು ಬೈಯುತ್ತೇವೆ ಎಂದು ಹೇಳಿ. ಅವರಿಗೂ ತಿಳಿವಳಿಕೆಯನ್ನು ನೀಡಿ.

ಗಣಪತಿಯನ್ನು ಕೂಡಿಸಿದಾಗ, ಕಿವಿಗೆ ಇಂಪಾಗುವಷ್ಟು ಧ್ವನಿಯಲ್ಲಿ ದೇವರ ಕೀರ್ತನೆಗಳನ್ನು ಮಾತ್ರ ಹಾಕಬೇಕು, ಸಿನಿಮಾ ಹಾಡುಗಳನ್ನು ಹಾಕಬಾರದು, ಕರ್ಕಶವಾಗಿ ಹಾರಬಾರದು ಎಂದು ತಾಕೀತು ಮಾಡಿ. ಮುಸಲ್ಮಾನರು ಹಾಕುತ್ತಾರೆ, ನಾವೂ ಜೋರಾಗಿ ಹಾಕುತ್ತೇವೆ ಎಂದು ಧ್ವನಿಯಲ್ಲಿ ಸ್ಪರ್ಧೆಗಿಳಿಯುವದು ಬೇಡ. ಇನ್ನೊಬ್ಬರಿಂದ ನಾವು ಒಳ್ಳೆಯದನ್ನು ಕಲಿಯಬೇಕೇ ಹೊರತು, ಕೆಟ್ಟದ್ದನ್ನಲ್ಲ.

ಮಣ್ಣಿನಿಂದ ಮಾಡಿದ ಗಣಪತಿಯನ್ನೇ ಪೂಜಿಸಿ. Plastic ನಿಂದ, Gypsum (Plaster of Paris)ನಿಂದ ಅಥವಾ ಬೇರೆ ಯಾವುದೇ ಕೆಮಿಕಲ್ಲಿನಿಂದ ಮಾಡಿದ ಗಣಪತಿಯನ್ನು ತರಬೇಡಿ.

ಕಲರು ಹಚ್ಚಿದ ಗಣಪತಿಯನ್ನು ತರಬೇಡಿ. ಶುದ್ಧ ಜೇಡಿ ಮಣ್ಣಿನ ರೂಪವಿರಲಿ. ಮನೆಗೆ ತಂದು ಸಂಜೆ ಗಂಡ ಹೆಂಡತಿ ಮಕ್ಕಳು ಕುಳಿತು ಸಿಂಧೂರ, ಕುಂಕುಮಗಳಿಗೆ ಸ್ವಲ್ಪ ತುಪ್ಪ ಮತ್ತು ನೀರು ಸೇರಿಸಿ ಮಣ್ಣಿನ ಗಣಪತಿಯನ್ನು ಕೆಂಪು ಬಣ್ಣದ ಗಣಪತಿನ್ನಾಗಿ ಮಾಡಿ. ಕಾಡಿಗೆಯಲ್ಲಿ ಕಣ್ಣನ್ನು ಬರೆಯಿರಿ. ನಿಮ್ಮನಿಮ್ಮ ಮನೆಯ ಸಂಪ್ರದಾಯದಂತೆ ಗೋಪೀಚಂದನ ಅಕ್ಷತೆಗಳನ್ನೋ, ವಿಭೂತಿಯ ನಾಮಗಳನ್ನೋ ಹಚ್ಚಿ ಸಿಂಧೂರದ ತಿಲಕವನ್ನಿಡಿ.

ಗಣಪತಿಯ ಪೂಜೆಯನ್ನು ಶುದ್ಧವಾದ ರೀತಿಯಲ್ಲಿ ಮಾಡಿ. ಅವನು ಕಾರುಣ್ಯದಿಂದ ಅನುಗ್ರಹಿಸುತ್ತಾನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
We are spoiling our rich Hindu culture in the name of various festivals. Ganesha festival is best example that showcases we have respect for our culture. Vishnudasa Nagendracharya says, Ganesha idol should not be defigured while worshipping in public.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more