• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೌತಿ ಚಿತ್ರಗಳು

By Staff
|

ರೇಖಾ ಹೆಗಡೆ ಬಾಳೇಸರ, ಮಸ್ಸಾಚ್ಯುಸೆಟ್ಸ್‌

'ಮತ್ತೇನು ವಿಶೇಷ ಊರ ಕಡೆಗೆ?"

ರವಿವಾರದ ಕಾಮನ್‌ ದೂರವಾಣಿ ಕಾರ್ಯಕ್ರಮದಲ್ಲಿ ಅಷ್ಟೇ ಕಾಮನ್‌ ಆದ ಪ್ರಶ್ನೆ. ಈ ವಾರವೂ ತವರಿಗೆ, ಪತಿಯೂರಿಗೆ, ನಾಲ್ಕೈದು ನೆಂಟರ ಮನೆಗೆ ಕರೆ ಮಾಡಿದಾಗ ಕೇಳಿದೆ.

ಎಲ್ಲರಿಂದ ಏಕೋಭಾವದ ಉತ್ತರ: 'ಚೌತಿ ಹಬ್ಬ ಬಂತಲ್ಲ, ಅದರ ತಯಾರಿನೇ ಒಂದು ವಿಶೇಷ".

'ಚೌತಿ ಹಬ್ಬದ ತಯಾರಿ"- ಕಿವಿಯ ಬಾಗಿಲಿಂದ ತೂರಿ ಸೀದಾ ಮೆದುಳಿನ ಮನೆಗೇ ಧಾಂಗುಡಿ ಇಟ್ಟ ಈ ಶಬ್ದಗಳು ಮೂಲೆ ಸೇರಿದ್ದ ನೆನಪೆಂಬ ಹಳೆ ಟ್ರಂಕನ್ನು ಹಿಡಿದೆಳೆದು, ಮೇಲೆ ಮಲಗಿದ್ದ ಮಣದಷ್ಟು ಧೂಳು ಝಾಡಿಸಿ ಎತ್ತಿ, ಪರದೇಶವಾಸ ಬಲವಂತದಿಂದ ಒತ್ತಿ ಹಿಡಿದು ಜಡಿದಿದ್ದ ಪರದೇಶಿತನದ ಬೀಗವನ್ನು ಮುರಿದೊಗೆದವು. ಆ ಮಾಯಾಪೆಟ್ಟಿಗೆಯನ್ನು ತೆರೆಯುತ್ತಿದ್ದಂತೆಯೇ ಕಾಲ, ದೇಶಗಳ ದಿಗ್ಬಂಧನಕ್ಕೆ ಸಿಲುಕಿ ಮುದುರಿ ಮಲಗಿದ್ದ ಸರಣಿ ಸ್ಮೃತಿಗಳಲ್ಲಿ ಏಕಾಏಕಿ ಜೀವಸಂಚಾರ. ಮಲೆನಾಡಿನ ನಮ್ಮೂರಿನಲ್ಲಿ ಹಬ್ಬದ ಹಿನ್ನೆಲೆಯಲ್ಲಿ ನಡೆವ ಒಂದಿಷ್ಟು ಚಟುವಟಿಕೆಗಳ 'ಮೆಮೊರಿ"ಗಳು ಮೈ ಮುರಿದು ಮೇಲಕ್ಕೆದ್ದು, ಮೂರು ಆಯಾಮ ತಾಳುತ್ತ ಮನವನ್ನು ಆಕ್ರಮಿಸಿ, ಕಣ್ಣೆದುರು ಕುಣಿಯತೊಡಗಿದವು.

ಹಬ್ಬದ ದಿನ ಏನೆಲ್ಲ, ಎಷ್ಟೆಲ್ಲ ಕಾನ್ಸಂಟ್ರೇಟೆಡ್‌ ಮೋಜು ಮನ ತುಂಬುವುದೋ ಅಷ್ಟೇ ಮಸ್ತಿ ಅದಕ್ಕೆ ಮುನ್ನ ನಡೆವ ತರಹೇವಾರಿ ತಯಾರಿಗಳ ನಡುವೆ ಕಂತುಗಳಲ್ಲಿ, ಬಿಡಿ ಬಿಡಿಯಾಗಿ ಬಳಿ ಸಾರುತ್ತದೆ. ಚೌತಿ ಹಬ್ಬಕ್ಕೆ ಎರಡು ವಾರ ಇರುವಾಗಲೇ ಹೆಂಗಸರ ಪಾಲಿನ ತಯಾರಿ ಶುರು. ಕೆಜಿಗಟ್ಟಲೆ ಭತ್ತ ಹುರಿದು, ಹೊದ್ಲು (ಅರಳು) ತಯಾರಿಸಿ, ನೆಲ್ಲು ಆರಿಸಿ.... ನುಚ್ಚು ಹೊದ್ಲನ್ನು ಕುಟ್ಟಿ ಪುಡಿಗರೆದು ತಂಬಿಟ್ಟು ರೆಡಿ ಇಟ್ಟುಕೊಂಡು- ನಾಳೆ ಕರ್ಜಿಕಾಯಿ ಮಾಡಲು ಬೇಕಲ್ಲ- ಅಂತೂ ಹೊದ್ಲಿನ ರಾಮಾಯಣ ಮುಗಿಸಿ ಡಬ್ಬಿ ತುಂಬಿ ನಾಗೊಂದಿಗೆಯ ಮೇಲಿಡುವಷ್ಟು ಹೊತ್ತಿಗೆ ಎಣ್ಣೆ ಬಂಡಿಯ ರಂಗಪ್ರವೇಶಕ್ಕೆ ವೇದಿಕೆ ಸಜ್ಜು. ಆ ಕಾಯಕವೋ ವ್ಯಾಪ್ತಿಯಲ್ಲಿ ಮಹಾಭಾರತ.

ಚೌತಿ ನಂತರ ಬರುವ ಅತಿಥಿಗಳ ಸತ್ಕಾರಕ್ಕೆಂದು ಮುಂಚಿತವಾಗಿ ಚಕ್ಕುಲಿ, ಕರ್ಜಿಕಾಯಿ, ಅತ್ರಾಸ (ಅತಿರಸ) ಮಾಡುವ ಭರಾಟೆ. ಹೀಗಾಗಿ ಎಲ್ಲ ಮನೆಗಳಲ್ಲಿ ಪ್ರತಿದಿನ ಮಧ್ಯಾಹ್ನ ಊಟ ಮುಗಿಯುತ್ತಿದ್ದಂತೆ ಅಡುಗೆ ಮನೆಯಿಂದ ಹೊರಹೊಮ್ಮುವ ಕಾದ ಕೊಬ್ಬರಿ ಎಣ್ಣೆಯ ಘಮಲು.... ಬೆಲ್ಲ, ಕಾಯಿಸುಳಿ (ತುರಿ), ಯಾಲಕ್ಕಿ ಮಿಶ್ರಣದ ಸುವಾಸನೆ ನಾಸಿಕಕ್ಕೆ ನುಗ್ಗಿ ನೆತ್ತಿಗೇರಿ ಒಂಥರಾ ಸಿಹಿಸಿಹಿ ಅಮಲು.....

ಬಾಲ್ಯದ ದಿನಗಳಲ್ಲಿ ಚಕ್ಕುಲಿ ಕಂಬಳದ ದಿನವಂತೂ ಜಿಹ್ವಾ ಚಾಪಲ್ಯದ ಪರಾಕಾಷ್ಠೆಯ ಪ್ರದರ್ಶನ. ಸುಮ್ಸುಮ್ನೆ ಅಡುಗೆಮನೆಯಲ್ಲಿ ಅತ್ತಿತ್ತ ಸುಳಿಯುತ್ತ, ನಾಲ್ಕು ಕೋಡುಬಳೆ ಸುತ್ತಿಕೊಡುವ ನಾಟಕವಾಡಿ ಐದನ್ನು ಒಳಗಿಳಿಸುತ್ತ, 'ಇದು ಗಟ್ಟಿ ಆಜ ನೋಡ್ತಿ, ಅದಕ್ಕೆ ಉಪ್ಪು ಸಾಕ ನೋಡ್ತಿ" ಎನ್ನುವ ನೆಪ ಹೂಡಿ ಒಂದೊಂದೇ ಚಕ್ಕುಲಿಯ ರುಚಿ ನೋಡುತ್ತ, ಕಣ್ಕಟ್ಟು ಮಾಡುತ್ತ, ಕೋಣೆಯಿಡಿ ಆವರಿಸಿಕೊಳ್ಳುವ ಬೆಂಕಿಯ ಬೇಗೆಗೆ ಬೆವರುತ್ತ, ಬೈಸಿಕೊಳ್ಳುತ್ತ.... ಆ ದಿನದ ಮಟ್ಟಿಗೆ ಮನೆಯ 'ಬಾಲಗ್ರಹ"ಗಳಿಗೆಲ್ಲ ಅಡುಗೆಮನೆಯೇ ಸೂರ್ಯ, ಅದರ ಸುತ್ತಲೇ ಅವರ ಸೌರಪಥ ಸಂಚಲನ. ಹಬ್ಬಕ್ಕೆ ಮೊದಲು ಹಿರಿಯರಿಂದ 'ಹಚ್‌, ಹುಚ್‌" ಎನ್ನಿಸಿಕೊಳ್ಳುತ್ತ ತಿನ್ನುವ ಹತ್ತು ಚಕ್ಕುಲಿಗಿರುವ ರುಚಿ, ತೃಪ್ತಿಯ ಕೋಷಂಟ್‌ ಹಬ್ಬ ಮತ್ತು ನಂತರದಲ್ಲಿ ಹರಿದು ಬರುವ ಚಕ್ಕುಲಿಯ ಹೊಳೆಗೆ ಖಂಡಿತ ಇಲ್ಲ.

ಹಿರಿಯರನ್ನು ಕಾಡಿ, ಬೇಡಿ ತರಿಸಿಕೊಂಡ ಪಟಾಕಿ, ಬಾಣಬಿರುಸುಗಳನ್ನೆಲ್ಲ ಒಂದು ವಾರ ಮೊದಲಿನಿಂದಲೇ ಬಿಸಿಲಿನಲ್ಲಿ, ಅದಿಲ್ಲವಾದರೆ ಹೊಡತಲಿನ (ಅಗ್ಗಿಸ್ಟಿಕೆ) ಬೆಂಕಿ ಕಾವಿನಲ್ಲಿ ಒಣಗಿಸಿ ಸಿಡಿತಕ್ಕೆ ಸಿದ್ಧವಿಟ್ಟುಕೊಳ್ಳುವ ತರಾತುರಿ ಮಕ್ಕಳದ್ದು. ಈ ಜವಾಬ್ದಾರಿಯನ್ನು ತಮಗೆ ತಾವೇ ವಹಿಸಿಕೊಂಡು, ಮೇಲಿಟ್ಟ ಪಟಾಕಿ ತುಂಬಿದ ಬುಟ್ಟಿಯನ್ನು ಜಾಗರೂಕತೆಯಿಂದ ಇಳಿಸಿ, ಒಂದೊಂದಾಗಿ ಪಟಾಕಿ ಸರ, ನೆಲಚಕ್ರ, ಕುಡಿಕೆ, ವಾಲೆಪಟಾಕಿ, ಸುರುಸುರುಬತ್ತಿಗಳನ್ನೆಲ್ಲ ಹೊರತೆಗೆದು ಮೊರದಲ್ಲಿ ಹರಗಿ, ಒಣಗಿಸುವುದರಲ್ಲೇ ದಿವ್ಯ ಆನಂದ. ಒಣಗಿದ ಪಟಾಕಿಗಳನ್ನು ಹುಷಾರಾಗಿ ಎತ್ತಿ, ನೇವರಿಸಿ ಮತ್ತೆ ಬುಟ್ಟಿ ತುಂಬುತ್ತಿದ್ದರೆ ಆ ನೆಲಚಕ್ರ, ಕುಡಿಕೆಗಳಿಂದ ಹೊರಹೊಮ್ಮುವ ಸಾವಿರ ನಕ್ಷತ್ರಗಳ ಮುಂಗಡ ನರ್ತನ ಇವರ ಮೊಗದಲ್ಲಿ. ಒಂದು ವಾರದಿಂದ ನಿಧಾನಕ್ಕೆ ತುಂಬಿಕೊಳ್ಳುತ್ತ ಬರುವ ತವಕದ ಗುಳ್ಳೆ ಗೌರಿತದಿಗೆಯೆನ್ನುವಷ್ಟರ ಹೊತ್ತಿಗೆ ಅಂಕೆ ಮೀರಿ ಊದಿ ಕೊನೆಗೊಮ್ಮೆ ಢಮಾರೆಂದು ಒಡೆಯುತ್ತದೆ. ಅದೇ ಸಮಯಕ್ಕೆ ಮೊದಲ ಪಟಾಕಿ ಸರವೂ ಢಂಢಂ, ಢಮಾರ್‌ ಎನ್ನುತ್ತಿದ್ದರೆ, ಚಿಳ್ಳೆಪಿಳ್ಳೆಗಳ ಚಿಲಿಪಿಲಿ ಉಲಿಗೆ ಕೇಪಿನ ಸರದ 'ಪಟ್‌, ಪಟ್‌" ಹಿಮ್ಮೇಳ.

ಗೌರಿ ತದಿಗೆಯ ದಿನ ಫಲವಳಿಗೆ ಕಟ್ಟುವುದೊಂದು ದೊಡ್ಡ ಕಾರ್ಯಕ್ರಮ. ಹಿರಿಯರೊಬ್ಬರು ಅತ್ತ ಗಣೇಶನ ಮೂರ್ತಿ ತರಲು ಹೊರಡುತ್ತಿದ್ದಂತೆ ಇತ್ತ ಮನೆಯ ಪಡ್ಡೆ ಪೋರ/ರಿಯರಿಗೆಲ್ಲ ಏಕ್‌ದಂ ಹಬ್ಬದ ಸೀರಿಯೆಸ್‌ನೆಸ್‌ ಆವರಿಸಿಕೊಳ್ಳುತ್ತದೆ. ಅಲ್ಲೇ ಒಂದಿಬ್ಬರು ಫಲವಳಿಗೆಗೆ ಕಟ್ಟಲು ಅಗತ್ಯ ಬೇಕಾದ ಕಲ್ಲುಕರಿಕೆ, ಗೌರಿ ಹೂ ತರಲು ಬೆಟ್ಟಕ್ಕೆ ಹೊರಟರೆ, ಮಾವಿನ ತೋರಣ ಕಟ್ಟುವ ಕೆಲಸ ಉಳಿದವರಿಗೆ. ದೂರದ ಎರಡು ಕಂಭಗಳನ್ನು ಸೇರುವಂತೆ ಬಿಗಿದು ಕಟ್ಟಿದ ಬಾಳೆನಾರಿಗೆ ಮಾವಿನ ಎಲೆಗಳನ್ನು ಒಂದೊಂದಾಗಿ ಸಿಕ್ಕಿಸುವ ಕೆಲಸ ಭಾರಿ ಕಾಲವ್ಯಯದ್ದಾದರೂ, ತರಲೆ-ತಂಟೆ, ಕುಶಾಲು-ಕಿಲ ಕಿಲಗಳ ನಡುವೆ ಜಾರಿದ ಕ್ಷಣಗಳು ಲೆಕ್ಕಕ್ಕೆ ಸಿಗುವುದು ಕಡಿಮೆ.

ಒಮ್ಮೊಮ್ಮೆ ಒಂದೇ ನಾರಿಗೆ ಅತ್ತ ತುದಿಯಿಂದ ಒಬ್ಬರು, ಇತ್ತಲಿಂದ ಒಬ್ಬರು ಎಲೆ ಸಿಕ್ಕಿಸುತ್ತ ಹತ್ತಿರ ಬಂದು, ಇನ್ನೇನು ತೋರಣ ಪೂರ್ಣವಾಯಿತೆನ್ನುವಷ್ಟರಲ್ಲಿ ಆದ ತಪ್ಪಿನ ಅರಿವು ಮೂಡುತ್ತದೆ. ಅರ್ಧ ತೋರಣದ ಎಲೆಗಳು ಒಳಮುಖವಾಗಿದ್ದರೆ, ಇನ್ನರ್ಧ ಹೊರಮುಖವಾಗಿ. 'ನಿಂಗೆ ಮೊದ್ಲೇ ನೋಡಲಾಜಿಲ್ಯ, ನೀ ನೋಡಕಾಗಿತ್ತು..." ಎಂದು ಪರಸ್ಪರ ಆಕ್ಷೇಪಿಸುತ್ತ ನಾರನ್ನು ಮಧ್ಯದಲ್ಲಿ ಕತ್ತರಿಸಿ ಉಲ್ಟಾ ಇಟ್ಟು ಜೋಡಿಸುವ ಎಕ್ಸ್ಟ್ರಾ ಕೆಲಸ. ಇಷ್ಟಾದ ಮೇಲೆ ದೇವರ ಎದುರು ಒಂದಂಕಣದಷ್ಟು ಜಾಗದಲ್ಲಿ ಸುತ್ತ ನಾಲ್ಕು ಬಾಳೆಕಂಭ, ಕಬ್ಬು ನೆಟ್ಟು, ತೋರಣ ಬಿಗಿದು, ಮೇಲ್ಗಟ್ಟಿಗೆ ಅಡ್ಡಡ್ಡ ಬಿದಿರು ಗಳ ಇಟ್ಟು, ಅದಕ್ಕೆ ಮನೆಯಲ್ಲಿ ಇದ್ದ ಬಿದ್ದ ಹಣ್ಣು, ತರಕಾರಿಗಳನ್ನೆಲ್ಲ ಸ್ಯಾಂಪಲ್‌ಗೆ ಒಂದರಂತೆ ಕಟ್ಟಿ, ಕಲ್ಲುಕರಿಕೆ, ಗೌರಿ ಹೂಬಳ್ಳಿಗಳನ್ನು ಇಳಿಬಿಟ್ಟು ಅಲಂಕಾರ. ಆಮೇಲೆ ಗಣಪತಿ ಕೂರಿಸಲು ಮಂಟಪ ಕಟ್ಟುವ ಕೆಲಸ. ಗಟ್ಟಿ ನಿಂತರೆ ಎರಡು ಮೂರು ತಾಸಿನಲ್ಲಿ ಮುಗಿವ ಕೆಲಸ ತಲೆಗೊಂದರಂತೆ ಬರುವ ಸಲಹೆಗಳನ್ನು ಸಾಕಾರಗೊಳಿಸಲು ಹೋಗುತ್ತ, ಕುಶಾಲು-ಕಿತಾಪತಿ, ಒಂಚೂರು ಚಾ-ಆಸ್ರಿಗೆ ಎಂದೆಲ್ಲ ಬಂಧು-ಬಳಗಗಳನ್ನು ಜೊತೆಗೂಡಿಸಿಕೊಳ್ಳುತ್ತ ಒಂದಿಡೀ ಒಪ್ಪತ್ತು ಆವರಿಸಿಕೊಳ್ಳುವುದೇ ಹೆಚ್ಚು.

ಚತುರ್ಥಿ ಹಾಗೂ ಇಲಿಪಂಚಮಿಯ ದಿನ ಮಂಗಳಾರತಿಗೆ ಮುನ್ನ ಆರತಿ ತಟ್ಟೆಗಳನ್ನು ಸಜ್ಜುಗೊಳಿಸುವ ಕೆಲಸ ಹುಡುಗಿಯರದ್ದು. ಹೂವು, ಹಣ್ಣು, ಬೀಜ ಬಗಟೆ, ಹತ್ತಿ, ಹುಲ್ಲು, ಕೊನೆಗೆ ತರಕಾರಿ ಸಿಪ್ಪೆ, ಎಲೆಯ ದಂಟು ಸಹ ತಂದು ಆಕರ್ಷಕ ವಿನ್ಯಾಸಗಳನ್ನು ರೂಪಿಸಲು ಪರಸ್ಪರ ಪೈಪೋಟಿ. ಈ ಕೆಲಸ ಅವರವರ ಪ್ರತಿಭೆಯ ಅಭಿವ್ಯಕ್ತಿ ಮಾಧ್ಯಮವಾದ್ದರಿಂದ ಅಕ್ಕ-ತಂಗಿಯರಲ್ಲಿ ಜೋರು 'ನಾಮುಂದು, ತಾಮುಂದು." ಕೊನೆಯಲ್ಲಿ ತಟ್ಟೆಗಳಿಗೆ ಎಣ್ಣೆಯಲ್ಲದ್ದಿದ ಬತ್ತಿ ಇಡುವ ಸಮಯದಲ್ಲಿ ಮಾತ್ರ 'ನೀ ಮುಂದೆ, ನಾ ಹಿಂದೆ- ಎಣ್ಣೆ ಜಿಡ್ಡಿನ ಉಸಾಬರಿ ಏನಿದ್ದರೂ ನಿಂದೇ".

ಈ ಎರಡು ದಿನ ಭಟ್ಟರ ಸಮ್ಮುಖದಲ್ಲಿ ದೇವರಿಗೆ ಪೂಜೆ, ಮಂಗಳಾರತಿ ನಡೆಯಬೇಕು. ಹೀಗಾಗಿ ಅವತ್ತು ಅವರಿಗೆ ಭಾರಿ ಬೇಡಿಕೆ. ಒಂದೊಂದು ದಿನ ಎಂಟು ಹತ್ತು ಮನೆಗಳ ಪೂಜೆಗೆ ಒಪ್ಪಿಕೊಳ್ಳುವ ಭಟ್ಟರು 'ನಿಮ್ಮನಿಗೆ ಇಂತಿಷ್ಟು ಹೊತ್ತಿಗೆ ಬರ್ತಿ" ಎಂದು ಮೊದಲೇ ನಿಗದಿ ಮಾಡಿ ಬಿಡುತ್ತಾರೆ. ಬೆಳಿಗ್ಗೆ ಏಳು-ಏಳೂವರೆಗೆ ದಿನದ ಮೊದಲ ಪೂಜೆ ಆರಂಭವಾದರೆ ಕೊನೆಯ ಪೂಜೆ ಮುಗಿವ ಹೊತ್ತಿಗೆ ಸಂಜೆ ಐದು-ಐದೂವರೆಯಾಗುವುದೂ ಉಂಟು. ಗಡಿಯಾರದ ಮುಳ್ಳು ಒಂದೊಂದು ಸುತ್ತು ಜಾಸ್ತಿ ಸುತ್ತಿದಂತೆಯೂ ಭಟ್ಟರ ಬರುವು ನೋಡುತ್ತ ಕುಂತ ಹೆಂಗಸರ ಸಹನೆಯ ಸುರುಳಿ ಒಂದೊಂದೇ ಸುತ್ತು ಬಿಚ್ಚಿಕೊಳ್ಳುತ್ತ ಹೋಗುತ್ತದೆ.

'ಈ ಭಟ್ಟರು ಯಾವಾಗ್ಲೂ ನಿಧಾನ. ಪುಸ್ತಕ ನೋಡ್ತಾ ಸಾವಕಾಶ ಮಂತ್ರ ಹೇಳಲೆ ಕುಂತ್ರೆ ಹೊತ್ತು ಹೋಗಿದ್ದೇ ಗೊತ್ತಾಗ್ತಿಲ್ಲೆ..." ಅತ್ತೆಯ ಅಸಹನೆಯನ್ನು ಅನುಮೋದಿಸುವ ಸೊಸೆ, 'ಮುಂದಿನ ಸಲ ಯಾರಾರೂ ಹೊಸ ಭಟ್ಟರನ್ನು ಕರೆಯವು" ಎಂದು ಷರಾ ಬರೆಯುತ್ತಾಳೆ. ಮಡಿ-ಹುಡಿ, ಇಪ್ಪತ್ತೊಂದು ಬಗೆಯ ಕಜ್ಜಾಯ ತಯಾರಿ, ಆರತಿ, ಅಲಂಕಾರ, ರಂಗೋಲಿ ರಗಳೆ ಎಂದೆಲ್ಲಾ ಹಚ್ಚಿಕೊಂಡು, ಬೆಳಗು ಮೂಡುವ ಮೊದಲೇ ಬೆನ್ನು ಬಗ್ಗಿಸಿ ದುಡಿದು ಬಸಿದ ಬೆವರು, ಹೊಟ್ಟೆ ಹಿಸಿಯುತ್ತಿರುವ ಹಸಿವು ಇಬ್ಬರ ಅಭಿಪ್ರಾಯಗಳನ್ನೂ ಬಿಗಿದು ಬೆಸೆಯುತ್ತದೆ.

ಈ ಸಹನೆ-ಅಸಹನೆಗಳ ನಡುವಿನ ಹಗ್ಗದಾಟ, ಹಸಿವಿನ ಸಂಕಟ ಗಂಡಸರನ್ನು, ಮಕ್ಕಳನ್ನು ಕಾಡುವುದು ಕಡಿಮೆ. ಮಳೆಗಾಲ ಆರಂಭವಾದಾಗಿನಿಂದ ಮದ್ದು ಹೊಡೆಸುವುದು, ಸೊಪ್ಪು ಹೊದೆಸುವುದು, ಹೊಸ ಗಿಡ ನೆಡುವುದು ಎನ್ನುತ್ತ ತೋಟದ ಕೆಲಸಗಳಲ್ಲಿ ಮುಳುಗಿಹೋಗಿದ್ದ ಗಂಡಸರಿಗೆ ಹಬ್ಬವೆಂದರೆ ವಿರಾಮದ, ಮೋಜಿನ ಅವಧಿ.

ಅಕ್ಕಪಕ್ಕದವರೊಂದಿಗೆ ಮಾತು, ಮಸ್ತಿ.... ಹೊರ ಊರುಗಳಲ್ಲಿ ಓದು-ಉದ್ಯೋಗಗಳಲ್ಲಿ ನಿರತರಾಗಿದ್ದು ಹಬ್ಬಕ್ಕೆಂದು ಬಂದ ಮನೆ ಜನರೊಂದಿಗೆ ಹಳೆಸಂಗತಿಗಳ ಪುನರುಕ್ತಿ... ನಡು ನಡುವೆ ದೇವರ ಮನೆಗೆ, ಅಡುಗೆ ಮನೆಗೆ ಬಂದು ತಯಾರಿ ಎಲ್ಲಿಗೆ ಬಂತೆಂಬ ಮೇಲ್ವಿಚಾರಣೆ.... ಮಕ್ಕಳೊಂದಿಗೆ ಪಟಾಕಿ ಸುಡುವ ಸಂಭ್ರಮ.... ಊಟ ತಡವಾದರೂ ಚಿಂತೆಯಿಲ್ಲ- ಮುಸುರೆ ಎನ್ನುವ ಕಾರಣಕ್ಕೆ ದೋಸೆ ನಿಷಿದ್ಧವಾದರೂ, ಅವಲಕ್ಕಿ, ಬಾಳೆಹಣ್ಣು, ಮಜ್ಜಿಗೆ, ಮೊದಲೇ ಮಾಡಿಟ್ಟ ಚಕ್ಕುಲಿ, ಕರ್ಚಿಕಾಯಿ ತಿನ್ನುವುದಕ್ಕೆ ಮಡಿಯ ಅಡ್ಡಿ ಇಲ್ಲ. ಮಕ್ಕಳಂತೂ ಸೈ, ಅವರ ಪಾಲಿಗೆ ಗಣೇಶ ಎಂಬ ತಿಂಡಿಪೋತ ದೇವರ ಆ ವಿಶೇಷ ಗುಣವನ್ನು ಯಥಾವತ್ತಾಗಿ ಅನುಕರಿಸುವುದೇ ಚೌತಿ ಹಬ್ಬದ ಅರ್ಥವತ್ತಾದ ಆಚರಣೆ. ಯಾವ ನಿರ್ದಿಷ್ಟ ಅಡ್ಡಿ ಇರದಿದ್ದರೂ ಅನಗತ್ಯ ಉಪವಾಸಕ್ಕೆ ತಮ್ಮನ್ನು ಒಡ್ಡಿಕೊಳ್ಳುವ ಮಹಿಳೆಯರಿಗೆ ಮಜ್ಜಿಗೆಯ ಸಾಂತ್ವನ.

ಒಂದೊಂದು ವರ್ಷ ಬೆಳಿಗ್ಗೆ ಏಳು ಗಂಟೆಗೇ ಪೂಜೆಗೆ ಬಂದು ಬಿಡುವ ಭಟ್ಟರು ಹಬ್ಬದ ಖುಷಿಯನ್ನು ಹೈಜಾಕ್‌ ಮಾಡುವುದೂ ಉಂಟು. ಆಗ ಹಬ್ಬದಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದರೆ ಬೇಗ ಎದ್ದು ಸ್ನಾನ ಮುಗಿಸಿ ತಯಾರಾಗಬೇಕು. ನಿಧಾನವಾಗಿ ಎದ್ದರಾಯ್ತೆಂದು ಹೊದ್ದು ಮಲಗಿದರೆ ಮಂಗಳಾರತಿಯ ಢಣ, ಢಣ ಜಾಗಟೆ ದನಿ ಬಡಿದೆಬ್ಬಿಸುತ್ತದೆ. ಎದ್ದು, ಮುಖ ತೊಳೆದು ಬರುವಷ್ಟರಲ್ಲಿ ಪೂಜೆಯ ಸಡಗರ ಅಡಗಿರುತ್ತದೆ. ಮಂಗಳಾರತಿ ತಪ್ಪಿಸಿಕೊಂಡ ತಪ್ಪಿಗೆ 'ಪೂಜೆ ಹೊತ್ತಿಗೆ ಎದ್ದು ಬರದೇ ಮಲಗಿದ್ಯ, ಸೋಮಾರಿ" ಎಂದು ಅಮ್ಮನದೋ, ಅಜ್ಜಿಯದೋ ಮಹಾ ಮಂಗಳಾರತಿ. 'ಛೇ, ಈ ವರ್ಷ ಹಬ್ಬ ಆದ ಹಾಗೇ ಅನಿಸಿದ್ದಿಲ್ಲೆ" ಎಂದು ಪೇಚಾಡಿಕೊಳ್ಳುತ್ತ ಲೊಚ್‌ಗುಟ್ಟರೆ ಎಲ್ಲೆಡೆಯಿಂದ, ಎಲ್ಲರ ಕಡೆಯಿಂದ ಅದರ ಮಾರ್ದನಿ.

'ಛೇ, ಈ ವರ್ಷ ಹಬ್ಬ ಆದ ಹಾಗೇ ಅನಿಸ್ತಿಲ್ಲೆ"- ದೂರದೂರಿನಲ್ಲಿ ಕುಳಿತು ಮುಂಚಿತವಾಗಿ ಲೊಚ್‌ಗುಡುತ್ತೇನೆ ನಾನು. ಪೆನ್ನು ಎತ್ತಿಕೊಂಡ ಕೈ ಖಾಲಿ ಹಾಳೆಯ ಮೇಲೆ ಸುರುಳಿ ಸುರುಳಿಯಾಕಾರದಲ್ಲಿ ಓಡುತ್ತದೆ. ನೋಡುತ್ತ ಕುಳಿತ ಮಗನ ಕಂಗಳಲ್ಲಿ ಪ್ರಶ್ನೆ. 'ಇದು ಚಕ್ಕುಲಿ ಮಗಾ" ಎನ್ನುತ್ತೇನೆ. ಅವನಿಗೆ ಅರ್ಥವಾಗುತ್ತಿಲ್ಲ. 'ಹಬ್ಬದ ದಿನ ಖಂಡಿತ ಚಕ್ಕುಲಿ ಮಾಡವು, ಮಗನಿಗೆ ಚಕ್ಕುಲಿಯೆಂದರೇನೆಂದು ಪರಿಚಯಿಸವು"- ನಿರ್ಧರಿಸಿದೊಡನೆ ಮನಸ್ಸು ಹಗುರವಾಗಿ ಹುರುಪು ಮೂಡುತ್ತದೆ. ಯಾಕೋ ಆ ಹಾಡು ನೆನಪಾಗುತ್ತದೆ. ಹಿಂದೊಂದು ಹಬ್ಬದಲ್ಲಿ ಅಜ್ಜಿ ಹಾಡಲು ಒತ್ತಾಯಿಸಿದ್ದಾಗ, 'ಯಂಗೆ ಹಾಡೆಲ್ಲ ಯಾವ್ದೂ ಬತ್ತಿಲ್ಲೆ, ಬೇಕಾದ್ರೆ ನಿನ್ನ ಜೊತೆ ಸೋ ಹೇಳ್ತಿ" ಎಂದು ಬೆಡಗು ತೋರಿದ್ದ ಬಾಯಿ ತಂತಾನೆ ಗುಣುಗುಣುಸಿತ್ತದೆ- 'ಮೋದದಿ ನಾ ನೈವೇದಿಸುವೆ, ಮೋದಕಾದಿ ಭಕ್ಷ್ಯವ....."

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X