• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೌರಿ ಹಾಡು

By Staff
|

ಗೌರಿ ಹಬ್ಬ ಬಂತೆಂದರೆ ನಮಗೆ ಎಲ್ಲಿಲ್ಲದ ಸಡಗರ, ಸಂಭ್ರಮ. ಮಿಕ್ಕ ಹಬ್ಬಗಳಿಗಿಂತ ಇದಕ್ಕೆ ಹೆಚ್ಚು ಖುಷಿ ನಮ್ಮಲ್ಲಿ ಆಗುತ್ತಿತ್ತು . ಗೌರಿ ಹಬ್ಬವನ್ನು ಎದುರು ನೋಡುತ್ತಾ ಬರ ಮಾಡಿಕೊಳ್ಳಲು ಕಾತುರರಾಗಿರುತ್ತಿದ್ದೆವು. ಗೌರಿ ಹಬ್ಬದಲ್ಲಿ ಕೆಲಸ ಸ್ವಲ್ಪ ಜಾಸ್ತಿ . ಬಾಗಿನ ಮರದ ಜೊತೆ, ಗೆಜ್ಜೆವಸ್ತ್ರ , ಮಂಟಪಕ್ಕೆ ಅಲಂಕಾರ ಮಾಡಲು ಬಣ್ಣದ ಕಾಗದಗಳನ್ನು ಕತ್ತರಿಸಿ ಅದರಲ್ಲಿ ಅದಕ್ಕೆ ತರಾವರಿಯ ರೂಪಗಳನ್ನು ಮಾಡುವುದು. ಇದೆಲ್ಲಾ ನಮ್ಮ ಪಾಲಿಗೆ ಇರುತ್ತಿತ್ತು . ಮುಖ್ಯವಾಗಿ, ನಾಗರ ಜಡೆಬಿಲ್ಲು ಕುಚ್ಚು ಇಟ್ಟುಕೊಂಡು ಜಡೆ ಹೆಣೆಸಿಕೊಳ್ಳುವುದು.

'ಅಲಂಕರಣಾರ್ಥ ವಸ್ತ್ರಯುಗ್ಮಮ್‌ ಸಮರ್ಪಯಾಮಿ" ಎಂಬಂತೆ ಹತ್ತಿಯಿಂದ ವಿವಿಧಾಕಾರಗಳ ಗೆಜ್ಜೆವಸ್ತ್ರವನ್ನು ನಾವೆಲ್ಲರೂ ಹೆಣ್ಣುಮಕ್ಕಳು ಸೇರಿ ಮಾಡಲು ಶುರು ಮಾಡಿಕೊಳ್ಳುತ್ತಿದ್ದೆವು. ಎಳೆಗಳ ತೆಗೆದು, ದಿಂಡುಹಾಕಿ, ಬಿಲ್ವಪತ್ರೆ, ವಸ್ತ್ರದಲ್ಲಿ ರೋಜಾ ಹೂವಿನ ಹಾರ, ದಳಗಳಿಂದ ಸಂಪಿಗೆ ಹಾರ ಮಾಡಿ ಅದಕ್ಕೊಪ್ಪುವ ಬಣ್ಣಗಳಿಂದ ಮತ್ತು ಸುನೇರಿ ಪೇಪರ್‌ಗಳಿಂದ ಅಲಂಕರಿಸಿ ರೆಡಿ ಮಾಡುತ್ತಿದ್ದೆವು. ಇದಕ್ಕೆಲ್ಲ ನಮ್ಮ ಹಿರಿಯರ ನಿರ್ದೇಶನ ಇರುತ್ತಿತ್ತು . 'ತುಪ್ಪ ಅನ್ನಕ್ಕೆ ಬರವಾದರೂ, ತಪ್ಲೆ ನೀರಿಗೆ ಬರವೇ" ಎಂದು ನಮ್ಮ ಹಿರೀಕರು ಹೇಳುತ್ತಿದ್ದರು. ಅದರಂತೆ ಹಬ್ಬದ ಹಿಂದಿನ ದಿನ ಮನೆ ಅಂಗಳದಲ್ಲಿ , ಮನೆ ಮುಂದೆ ಬಾಗಿಲಿನಲ್ಲಿ ಎಲ್ಲಾ ಚೆನ್ನಾಗಿ ಸಾರಿಸಿ, ದೊಡ್ಡ ದೊಡ್ಡದಾಗಿ , ರಂಗೋಲಿ ಹಾಕಿ, ಕೆಮ್ಮಣ್ಣ ಹಚ್ಚಿ , ಸಂಭ್ರಮ ಪಡುತ್ತಿದ್ದೆವು. ಅವರವರ ಬುದ್ಧಿ ಚತುರತೆಯಿಂದ ರಂಗೋಲಿಗಳನ್ನು ಬಿಡಿಸುತ್ತಿದ್ದೆವು. ನಮ್ಮಲ್ಲಿರುವ ಕಲೆಯನ್ನು ತೋರಿಸಿಕೊಳ್ಳುವುದಕ್ಕೆ ಇದೊಂದು ಅವಕಾಶವಾಗುತ್ತಿತ್ತು . ಅಕ್ಕಪಕ್ಕದ ಮನೆ ಎದಿರು ಬದಿರು ಮನೆ ಮಂದಿಯೆಲ್ಲಾ ಒಟ್ಟಿಗೆ ಸೇರುವ ಸಂದರ್ಭ ಉಂಟಾಗುತ್ತಿತ್ತು . ಎಲ್ಲ ಒಂದೇ ಮನೆಯವರಂತೆ ಇದ್ದುಕೊಂಡು, ಕೂಡಿ ಕೆಲಸ ಕಾರ್ಯ ಮಾಡಿಕೊಳ್ಳುತ್ತಿದ್ದೆವು. ಎಲ್ಲಾ ಒಟ್ಟಿಗಿರುವುದೆ ನಮಗೆ ಕೆಲಸ ಕಾರ್ಯ ಮಾಡಲು ಸ್ಫೂರ್ತಿ ನೀಡುತ್ತಿತ್ತು .

ಇನ್ನು ಪೂಜೆ ಮಾಡುವ ಸಂಭ್ರಮ ಅಂತೂ ವರ್ಣಿಸಲಸದಳ. ಗೌರಿಯನ್ನು ಕೂರಿಸುತ್ತಿದ್ದುದು ನಮ್ಮ ಊರಿನ ಭಟ್ಟರ ಮನೆಯಲ್ಲಿ . ಎಲ್ಲಾ ಮುತ್ತೆೈದೆಯರು, ಹೆಣ್ಣು ಮಕ್ಕಳು ಅಲ್ಲೇ ಪೂಜೆ ಮಾಡುವ ಪದ್ಧತಿ ನಡೆದುಬಂದಿತ್ತು . ತೂಗುಯ್ಯಾಲೆಯಲ್ಲಿ , ಪೂಜಾ ಸಲಕರಣೆಗಳನ್ನು ಅಣಿ ಮಾಡಿಕೊಂಡು ವಾಲಗದ ಸಮೇತ, ಮಂಗಳ ದ್ರವ್ಯಗಳೊಡನೆ, ಮುತ್ತೆೈದೆಯರ ಹಾಡುಗಳ ಹಿಮ್ಮೇಳದಲ್ಲಿ ಹೊಳೆಯ ದಂಡೆಗೆ ಹೋಗಿ, ಅಲ್ಲಿ ಮರಳಿನ ಮೇಲೆ ಅರಿಶಿನ ಗೌರಿಯನ್ನ ಮಾಡಿ, ಅದಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಮಾಡಿ, ಅದನ್ನು ತೊಟ್ಟಿಲಲ್ಲಿ ಇಟ್ಟು , ಗಂಗೆಯನ್ನು ತುಂಬಿಕೊಂಡು ಬಂದು (ವಾಲಗದ ವಾದ್ಯದಲ್ಲಿ ) ಎಲ್ಲರ ಮನೆಯ ಮುಂದೆ, ಧೂಪ ದೀಪದಾರತಿಗಳನ್ನು ಬೆಳಗಿಸಿ ಭಟ್ಟರು ಗೌರಿಯನ್ನು ಅದರ ಸ್ಥಾನದಲ್ಲಿ ಮಂಟಪದಲ್ಲಿ ಕುಳ್ಳಿರಿಸಿ, ಸರ್ವರಿಗೂ ಪೂಜೆಗೆ ಅಣಿ ಮಾಡುತ್ತಿದ್ದರು. ಈ ಒಂದು ಸುಂದರ ಸನ್ನಿವೇಶವನ್ನು ಇಂದು ಸ್ಮರಿಸಿಕೊಳ್ಳಬೇಕಷ್ಟೆ . ಮುಂದೆ ಎಲ್ಲಾ ಮುತ್ತೆೈದೆಯರೂ, ಹೆಣ್ಣು ಮಕ್ಕಳು ಪೂಜೆ ಮಾಡಿ, ಬಾಗಿನಗಳನ್ನು ಕೊಟ್ಟು , ಮನೆಗೆ ಬಂದು ಊಟ ಉಪಚಾರಗಳನ್ನು ಮಾಡಿಕೊಳ್ಳುತ್ತಿದ್ದರು. ಮಾರನೆ ದಿನ ಎಲ್ಲರೂ ಒಟ್ಟಿಗೆ ಸೇರಿ ಹಾಡು, ಕೋಲಾಟ, ನೃತ್ಯ ಎಲ್ಲ ಮಾಡಿ ಉತ್ಸುಕತೆಯಿಂದ ನಲಿಯುತ್ತಿದ್ದರು. ಮುಖ್ಯವಾದದ್ದು . ಮಡಿಲು ತುಂಬಿದ ನಂತರ ಹೇಳುತ್ತಿದ್ದುದು-

ಹರನು ಪಾರ್ವತಾ ದೇವಿ, ಪರಮ ಸಂತೋಷದಲಿ ಸರಸವಾಡುತ ತನ್ನ ಪುರುಷರೊಡನೆ

ವರ ಭಾದ್ರಪದ ಶುದ್ಧ ತದಿಗೆ ನಾಳೆ ದಿವಸ

ಅರಸರೇ ತೌರುಮನೆಗ್ಹೋಗಿ ಬರುವೆ

ಇಲ್ಲಿಂದ ಹೋದರೆ ಅಲ್ಲಿ ನಿನಗ್ಯಾರುಂಟು ಚೆಲ್ವ ಕಂಗಳ ನೀರೆ ನೀ ತಿಳಿದು ಪೇಳೆ

ಎಲ್ಲರ್ಯಾತಕೆ ಸ್ವಾಮಿ, ಮೂರು ದಿನವಿದ್ದು ನಿಮ್ಮೆಲ್ಲರಾ ಸೇವೆಗೊದಗಿ ಬರುವೆ

ಮೂರು ದಿನ, ಐದು ದಿನ ಮೀರಿದರೆ ಏಳು ದಿನ ದಾರಿ ನೋಡುತಲಿರುವೆ ನಾರಿ ಕೇಳು

ಬಾರದಿದ್ದರೆ ನೀನು ಮೀರಿದೊಳೆನಿಸಿದೆ (ನಾರಿ ಕೇಳು)

ನೀರೆ ನೀ ತಿಳಿದು ಪೇಳೆಂದ

ನಾ ನಿಜ ಮೂರ್ತಿಯ ಕರಿಮುಖನ ಒಡಗೊಂಡು

ಕರೆವುದಕೆ ಬರುತೇನೆ ತಿರುಗಿ ಉಪಚಾರಗಳುಂಟೆ ಎನಗೆ

ತಿರಿದುಂಬಿರೆ ಮೂರು ಲೋಕವೆಲ್ಲವ ಸ್ವಾಮಿ

ಕರಿಯ ಚರ್ಮದ ಹೊದಿಕೆ ಭಸ್ಮಾಂಗವು

ಮಡದಿಯ ಮಾತಿಗೆ ಮೃಡ ತಾನು ನಸು ನಕ್ಕು ಪೊಡವಿಯಾಳಗೆಲ್ಲ , ನಿನ್ನವರ ಪೆಸರ ಪೇಳೆ

ಬಡತನವ ಬಿಟ್ಟು ಬಹಳ, ಭಾಗ್ಯವಾ ತೊಟ್ಟ ಸಡಗರದಿಂದ ಲೋಲಾಡೆ ಬಾರೆ

ಹಳ್ಳದಲಿ, ಮಡಿಯುಟ್ಟು , ಒಳ್ಳೆ ಮಡಿಯನೆ ಉಟ್ಟು ಮೆಲ್ಲನೆ ಶಿವ ಪೂಜೆಗಣಿ ಮಾಡುತಾ

ಕಳ್ಳತನದಲಿ ಬಂದು ಶಿವನಿಗೆಂಡತಿಯಾದ ಗುಳ್ಳೇದಾ ಗೌರಿಗಾರತಿ ಎತ್ತಿರೆ

ನಾಗಭೂಷಣ ತಾನು ನಗುತ ಗೌರಿಯ ಕಂಡು ಹೋಗಿ ಬಂದ್ಯಾ ನಿಮ್ಮ ತವರು ಮನೆಗೆ

ಈಗ ಏನಿತ್ತರೂ, ಇನ್ನೇನೀವರೂ ಬೇಗದಲಿ ಹೇಳೆಂದಾನರಿಯೂ

ಅಂದ ಮಾತಿಗೆ ದೇವಿ ಒಂದು ಮಾತಾಡಿದಳು, ಬಂಧು ಬಳಗದವರೆಲ್ಲ ಸುಖದಲಿಹರು

ತಂದೆ ಗಿರಿರಾಯ ಬಹಳ ಬಡವನೂ ಮುದುಕ ಇಂದೇನು ಕೊಡುವರ್ಹೀಗೆಂದಳು

ಅಲ್ಪಸ್ವಲ್ಪದಿ ಮಾತ್ರ ಕೊಪ್ಪರಿಗೆ ಹಣವಿತ್ತರು, ಇಪ್ಪತ್ತು ಆನೆ ಕುದುರೆಗಳನ್ನಿತ್ತರು

ಬಪ್ಪದಲಿ ಬಳಸೆಂದು ಹೊನ್ನ ಕಳಶವನೇ ಇತ್ತರು ನಮ್ಮೂರ ಬಡವರಿನ್ನೇನೀವರು

ಐದು ಪಟ್ಟಿ ಸೀರೆ ಐದು ಬಣ್ಣದ ಸೀರೆ ಮೇಲೆ ಐದು ಶಾಲು ಮತ್ತೆೈದು ಸಕಲಾತಿ

ಐದು ರತ್ನದಾ ಕಂಬಳಿ, ಪಟ್ಟೆ ಮಂಚವನೇ ಇತ್ತರು ನಮ್ಮೂರ ಬಡವರಿನ್ನೇನೀವರು

ಕರೆವ ಪಶು ಹದಿನಾರು, ಕಾಲಾಳುಗಳು ನೂರು ಜನ

ಕರೆವ ಎಮ್ಮೆ ಎಂಟು, ಅದರ ಕರುಗಳೆಂಟು , ಕರೆದು ಕಾಸಿ ಕೊಡುವುದಕೆ

ದಾಸಿಯನೆ ಇತ್ತರು, ನಮ್ಮೂರ ಬಡವರಿನ್ನೇನೀವರು

ನೂರು ಸೇರು ಸಣ್ಣಕ್ಕಿ, ನೂರು ಏಳು ಬೆಲ್ಲ , ನೂರು ಸೇರು ಅಡಿಕೆ

ನೂರು ಕಾಯಿತ್ತರು, ಹಣ್ಣು ವೀಳೆದೆಲೆಯನ್ನೆಲ್ಲವನು ಇತ್ತರು

ನಮ್ಮೂರ ಬಡವರಿನ್ನೇನೀವರು

ಇಷ್ಟೆಲ್ಲ ನಿನಗಿತ್ತರೂ, ಒಂದಿಷ್ಟಾದರೂ ಎನಗಿಲ್ಲವೇ?

ಇಷ್ಟು ಎನಗಿತ್ತರು, ಎನ್ನ ನಿಮಗಿತ್ತರು ಕೇಳೆಂದಳಾಗ ಪಾರ್ವತಿಯು

ಮಂಗಳಂ ಜಯ ಮಂಗಳಂ

ಮಂಗಳಂ ಶುಭ ಮಂಗಳಂ

ಹೀಗೆ ಒಕ್ಕೊರಲಿನಿಂದ ಈ ಹಾಡನ್ನು ಹಾಡಿ ಗೌರಿಗೆ ಮಡಿಲು ತುಂಬಿ, ಆರತಿ ಬೆಳಗಿ, ಸಂಭ್ರಮಪಡುತ್ತಿದ್ದೆವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X