ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯ್ತೆ ಮಾರಾಯ್ತಿ, ಬೆಂಗ್ಳೂರಲ್ಲಿ ಸೈಟ್ ಕೊಂಡೇ ಬರ್ತೀನಿ!

By * ಗೋಪಿನಾಥ ರಾವ್, ದುಬೈ
|
Google Oneindia Kannada News

Gopinath Rao Dubai
ಹುಟ್ಟಿದ್ದೇ ಬೆಂಗಳೂರಿನಲ್ಲೊಂದು ಸೈಟು ಮಾಡುವುದಕ್ಕೆ ಎಂದು ದೃಢವಾಗಿ ನಂಬಿಕೊಂಡವರ ಪೈಕಿ ನನ್ನಾಕೆ ಕೂಡ ಒಬ್ಬಳು. ಇರುವುದು ದೂರದ ದುಬೈಯಲ್ಲಾದರೂ "ಕಟುಕನ ಕಣ್ಣು ಕುರಿ ಮ್ಯಾಗೆ" ಅನ್ನೋ ಥರಾ ಅವಳ ಗುರಿ ನೆಟ್ಟಿತ್ತು. ಅವಳ ಈ ಗುರಿಸಾಕಣೆಗೆ ಹೊರಗಿಂದ ಹುಲ್ಲುಹಾಕುವವರಿಗೂ ಕಡಿಮೆಯೇನಿರಲಿಲ್ಲ... ನಮ್ಮವರು ಯಾರಾದರೂ ವಾರಕ್ಕೊಂದೆರಡು ಬೆಂಗಳೂರಿನ ರಿಯಲ್ ಎಸ್ಟೇಟ್ ವಾರ್ತೆ ಕೊಟ್ಟೇ ಕೊಡುತ್ತಿದ್ದರು. ಸದಾ ಕಾದಂಬರಿಯೊಂದನ್ನು ಬರೆಯಬೇಕೆಂದು ಮಹದಾಸೆ ಹೊತ್ತು ಅದರಲ್ಲೇ ಮಗ್ನನಾಗಿರುತ್ತಿದ್ದ ನನ್ನೆದುರು ಆವತ್ತು ಒಂದು ಕಾದಂಬರಿಯೇ ಪ್ರತ್ಯಕ್ಷವಾಗುತ್ತಿತ್ತು.

"ಇಂಥವರು ಸೈಟು ತೆಗೆದುಕೊಂಡರಂತೆ" ಎನ್ನುವ ಶೀರ್ಷಿಕೆ ಹೊತ್ತ ಮುಖಪುಟ, ಇಂತಿಷ್ಟು ಲಕ್ಷಕ್ಕೆ ಅನ್ನುವ ಮಾಹಿತಿ ಪುಟ, ಹೇಗೆ ಹುಡುಕಿದರು, ಯಾವ ರೀತಿಯಲ್ಲಿ ಹಣ ಹೊಂದಿಸಿದರು ಎನ್ನುವ ಸುದೀರ್ಘ ಮುನ್ನುಡಿ. ಆ ಮೇಲಿನ ನಾಲ್ಕು ಮಾತುಗಳು ನನ್ನ ದಿವ್ಯಜಡತ್ವಕ್ಕೆ "ಅರ್ಪಣೆ". ಮತ್ತೆ ಶುರು ಒಂದಾದಮೇಲೊಂದರಂತೆ ವಿವಿಧ ಅಧ್ಯಾಯಗಳಲ್ಲಿ ಸೈಟು ಖರೀದಿ ಮಾಡಿದವರ ಸಂತೃಪ್ತಿಯ ಯಶೋಗಾಥೆಗಳು, ಹುಡುಕುತ್ತಿದ್ದರೂ ಸೈಟು ಸಿಗದವರ ವ್ಯಥೆಗಳು ಮತ್ತು ಸೈಟು ಕೊಂಡು ಇಮ್ಮಡಿ ಲಾಭದಲ್ಲಿ ಮಾರಿ ಶ್ರೀಮಂತರಾದವರ ಮಾದರಿ ಕಥೆಗಳು.... ಹೀಗೆ ಸಾಗುತ್ತಲೇ ಇರುತ್ತಿತ್ತು. ಎಲ್ಲ ಮುಗಿದಮೇಲೆ ನಮ್ಮ ಹಣೆಯಲ್ಲಿ ಸೈಟು ಬರೆದೇ ಇಲ್ಲವೇನೋ ಎನ್ನುವ ದೊಡ್ಡ ಅಕ್ಷರಗಳ ಬೆನ್ನುಡಿ!

ಪರಿಸ್ಥಿತಿ ಹೀಗಿದ್ದಾಗ ಒಮ್ಮೆ ಕೋಪಗೊಂಡು "ಈ ಬಾರಿ ರಜೆಯಲ್ಲಿ ಹೋದಾಗ ಒಂದು ಮನೆ ಅಥವಾ ಕನಿಷ್ಠ ಒಂದು ಸೈಟು ಖರೀದಿಸಿಯೇ ಬರುತ್ತೇನೆ, ಆಯಿತಲ್ಲ, ಇನ್ನಾದರೂ ಕಿರಿಕಿರಿ ನಿಲ್ಲಿಸು" ಅಂದಿದ್ದೆ ರೋಷಾವೇಶದಲ್ಲಿ. ನನ್ನ ಕೋಪಕ್ಕೆ ಒಂದಿಷ್ಟೂ ಸೊಪ್ಪು ಹಾಕದೆ ಸಂತೋಷದಿಂದ "ಇದಕ್ಕೇ ಕಾಲ ಕೂಡಿ ಬರುವುದು ಅಂತಾರೆ" ಅನ್ನುತ್ತಾ ಹಿಗ್ಗಿದ್ದಳಾಕೆ. ಮುಂದೆ ರಜೆಯ ಮಾತು ಬಂದಾಗಲೆಲ್ಲಾ ನನ್ನಲ್ಲಿ ಮನೆ ಕೊಳ್ಳಲು ಹಣ ಎಲ್ಲಿಂದ ಎಂದು ತಾನೇ ತರ್ಕಿಸಿ, ನನ್ನ ಪ್ರತಿಜ್ಞೆಯನ್ನು ಬರೇ ಸೈಟಿಗೆ ಸ್ಕೇಲ್ ಡೌನ್ ಮಾಡಿ, ಆಗಾಗ ಜ್ಞಾಪಿಸುತ್ತಲೇ ಇದ್ದಳು. "ದಸರಾಕ್ಕೆ ಊರಿಗೆ ಹೋಗಲು ಟಿಕೆಟ್ ಮಾಡಿದ್ರಾ?" ಅಂತ ಕೇಳಿದ ಗೆಳತಿಯರಿಗೆ "ಹೌದು, ಈ ಬಾರಿ ಬೆಂಗಳೂರಿನಲ್ಲಿ ಜಾಸ್ತಿ ದಿನ ಇರುವ ಪ್ಲಾನು. ದೀಪಾವಳಿ ಕೂಡ ಊರಲ್ಲೇ ಆದರೂ ಆಗಬಹುದು. ಇವರದು ಒಂದು ಸೈಟು ತೆಗೆದುಕೊಳ್ಳೋ ಆಲೋಚನೆಯಿದೆ" ಎಂಬ ಆಕೆಯ ಉದ್ಘೋಷಣೆಯನ್ನೂ ಕೇಳಿಸಿಕೊಂಡಿದ್ದೆ. ಸೈಟು ಸಿಗದೆ ಅಮ್ಮಾವ್ರು ಬೆಂಗಳೂರಿನಿಂದ ಕದಲುವುದಿಲ್ಲ ಎನ್ನುವುದಂತೂ ನನಗೆ ದಿಟವಾಗಿತ್ತು.

ವಿಮಾನದಿಂದ ಬೆಂಗಳೂರು ಅರ್ದರ್ಧ ಕಾಣಿಸುತ್ತಲೇ "ಇಲ್ಲೆಲ್ಲ ರೇಟು ಕಡಿಮೆಯಿರಬಹುದು, ಇನ್ನೂ ಡೆವಲಪ್ ಆಗಿಲ್ಲ ನೋಡಿ, ಏಳೆಂಟು ವರ್ಷದ ಮೇಲೆ ವಾಪಸ್ ಬರುವಾಗ ಡೆವಲಪ್ ಆಗಬಹುದು... ಸಿಟಿಯಲ್ಲಿ ಜಾಸ್ತಿ ರೇಟಿದ್ದು ನಿಮ್ಮ ಬಜೆಟಿನ ಒಳಗೆ ಕಷ್ಟ ಅನ್ನಿಸಿದರೆ ಸಿಟಿಯ ಹೊರಗೆ ಇಲ್ಲೆಲ್ಲಾದ್ರೂ ಪರವಾಗಿಲ್ಲ. ಸೈಟು ಒಳ್ಳೆಯದಿದ್ದರೆ ತೆಗೆದುಕೊಳ್ಳಿ" ಅಂತ ಆಕೆ ಅಪ್ಪಣೆ ಕೊಡಿಸುವುದಕ್ಕೂ ವಿಮಾನ ದೇವನಹಳ್ಳಿಯಲ್ಲಿಳಿಯುವುದಕ್ಕೂ ಸರಿಹೋಗಿತ್ತು. "ಬೆಂಗಳೂರಿನಲ್ಲೊಂದು ಸಣ್ಣ ಸೈಟು ಕೊಳ್ಳುವುದಕ್ಕೂ ಅಸಮರ್ಥ ಅಂತ ದೇವನಹಳ್ಳಿ ತೋರಿಸುತ್ತಿದ್ದಾಳೆ ಈಕೆ" ಅಂದುಕೊಂಡೆ ನಾನು.

ನಾವು ಸೈಟು ಖರೀದಿಯ ಇರಾದೆಯಲ್ಲಿದ್ದೇವೆ ಎನ್ನುವುದನ್ನು ನಮ್ಮ ಬಂಧುಮಿತ್ರರಿಗೆ ಹೇಳಿ ನಮ್ಮ ಸೈಟು ಶೋಧ ಅಭಿಯಾನಕ್ಕೆ ಒಂದು ಶುಭಾರಂಭ ಮಾಡೋಣ ಅಂತ ಫೋನೆತ್ತಿಕೊಂಡ ನನಗೆ ಆಶ್ಚರ್ಯ. ಈ ಕಾರಣಕ್ಕೇ ನಾವು ಸಿದ್ಧವಾಗಿ ಬರುತ್ತಿದ್ದೇವೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು - ನಿನ್ನೆ ಟೀವಿಯಲ್ಲಿ ಬ್ರೇಕಿಂಗ್ ನ್ಯೂಸ್ ಹಾಕಿ ತೋರಿಸಿದ್ದಾರೋ ಹೇಗೆ!

English summary
Buying sites in Bangalore is dream of everyone. But, prevailing rates and demand for it never makes the dream come true, even for an NRI. A humor by Gopinath Rao, Dubai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X