• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಕಿನ ಹಬ್ಬ ದೀಪಾವಳಿಯ ಮಹತ್ವ

By Staff
|
ಆಶ್ವಯುಜ ಕೃಷ್ಣ ಚತುರ್ದಶಿಯಿಂದ ಕಾರ್ತಿಕ ಶುಕ್ಲ ಪಾಡ್ಯಮಿವರೆಗೆ ಸಾಲಂಕೃತವಾಗಿ ಬೆಳಗುವ ದೀಪಗಳ ಸಾಲು. ಆಬಾಲ ವೃದ್ಧರಿಗೂ ಮುದನೀಡುವ ದೀಪಾವಳಿ ಹಿಂದೂ ಹಬ್ಬಗಳಲ್ಲೆಲ್ಲಾ ಅತ್ಯಂತ ಜನಪ್ರಿಯ. ಎಲ್ಲರೂ ಆಚರಿಸುವ ದೊಡ್ಡಹಬ್ಬ. ಭವಿಷ್ಯೋತ್ತರ ಪುರಾಣ ಕಾಲದಲ್ಲಿ ಈ ಹಬ್ಬ ಪ್ರಸಿದ್ಧವಾಗಿತ್ತು.

* ಆರ್.ಸೀತಾರಾಮಯ್ಯ, ಜೋತಿಷ್ಕರು, ಶಿವಮೊಗ್ಗ

ದೀಪಾವಳಿ ಮೂರುದಿನಗಳ ಹಬ್ಬವಾದರೂ, ದ್ವಿತಿಯತಿಥಿಯೂ ಸೇರಿದಂತೆ ಅದರ ಅವಧಿ ನಾಲ್ಕು ದಿನ ಆಗುತ್ತದೆ. ಇದೇ ಅಕ್ಟೋಬರ್ 17 ಶನಿವಾರದಂದು ಹಬ್ಬದ ಪ್ರಾರಂಭ. ನರಕ ಚತುರ್ದಶಿ ಎನಿಸಿರುವ ಆಶ್ವಯುಜ ಕೃಷ್ಣಚತುರ್ದಶಿ ಈ ಹಬ್ಬದ ಮೊದಲನೆಯದಿನ. ಸ್ವಾತಿ ನಕ್ಷತ್ರವಿದ್ದರೆ ಶುಭ, ಮೂಲತಃ ಮೃತ್ಯು ದೇವತೆಯೂ, ನರಕಾಧಿಪತಿಯೂ ಆದ ಯಮನನ್ನು ಪೂಜಿಸಿ, ನರಕದ ಶಿಕ್ಷೆಯಿಂದ ಪಾರುಮಾಡು ಎಂದು ಬೇಡುವ ದಿನವಾಗಿತ್ತು. ಆನಂತರ ಅದು ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದ್ದರಿಂದ ವಿಜಯೋತ್ಸವದ ದಿನವಾಯಿತು. ಆ ದಿನ ಸೂರ್ಯೋದಯಕ್ಕೆ ಮುನ್ನ ಅಭ್ಯಂಜನ ಸ್ನಾನಮಾಡಿ ವ್ರತಿಯು ತನ್ನ ಪಾಪಗಳ ನಾಶಕ್ಕಾಗಿ ಪ್ರಾರ್ಥಿಸಿ ಯಮದೇವನಿಗೆ ತರ್ಪಣವನ್ನರ್ಪಿಸಿ, ನಕರಾಸುರನಿಗೆ ಒಂದು ದೀಪವನ್ನು ಹಚ್ಚಬೇಕು. ಸಂಜೆ ಮನೆಯ ಎಲ್ಲಾ ಭಾಗಗಳಿಗೂ ಬೆಳಕಾಗುವಂತೆ ಸಾಲು ದೀಪಗಳಿಂದ ಅಲಂಕರಿಸಬೇಕು.

ಮಾರನೆ ದಿನ (ಭಾನುವಾರ ಅ. 18) ಅಮಾವಾಸ್ಯೆಯನ್ನು ವರ್ಷದ ಅತ್ಯಂತ ಕತ್ತಲೆಯ ದಿನವೆಂದು ಪರಿಗಣಿಸಲಾಗಿದೆ. ಅಭ್ಯಂಜನ, ಪಿತೃಗಳಿಗೆ ತರ್ಪಣ. ಅನ್ನಸಂತರ್ಪಣೆ, ಹಗಲು ಉಪವಾಸ ಇವು ಮುಖ್ಯ ಕಾರ್ಯಗಳು. ಹಿಂದಿನ ರಾತ್ರಿಯಂತೆಯೇ ಈ ದಿನದ ರಾತ್ರಿಯಲ್ಲೂ ದೀಪಾಲಂಕರಣ ಮಾಡಬೇಕು. ವಿಶೇಷವಾಗಿ ಲಕ್ಷ್ಮೀ ಪೂಜೆ ಮಾಡುವ ದಿನ ಇದು. ವರ್ತಕರಿಗೆ ಪವಿತ್ರವಾದ ದಿನ. ತಮ್ಮ ಲೆಕ್ಕ - ಪುಸ್ತಕಗಳನ್ನು ಪೂಜಿಸಿ, ಹೊಸ ಲೆಕ್ಕಗಳನ್ನು ಪ್ರಾರಂಭಿಸುವರು. ಲಕ್ಷ್ಮೀ ಪೂಜೆ ಮಾಡಲು ಪ್ರದೋಷಕಾಲ ಅತ್ಯಂತ ಶುಭ, ಅಂದರೆ ಸೂರ್ಯಾಸ್ತವಾಗಿ 1 ಗಂಟೆ 36 ನಿಮಿಷಗಳವರೆಗೂ ಅಮಾವಾಸ್ಯೆ ಮುಂದುವರಿದಿರಬೇಕು. ಈ ವೇಳೆ ಲಕ್ಷ್ಮೀ ಪೂಜೆಗೆ ಅತ್ಯಂತ ಶುಭ.

ಮರುದಿನ ಬಲಿಪಾಡ್ಯಮಿ (ಸೋಮವಾರ ಅ. 19) ಎಂದು ಕರೆಯಲ್ಪಡುವ ಕಾರ್ತಿಕ ಶುಕ್ಲ ಪಾಡ್ಯಮಿ ಹಿಂದೂ ಪಂಚಾಂಗಗಳಲ್ಲಿ ಅತ್ಯಂತ ಪವಿತ್ರವೆನಿಸಿರುವ ಮೂರೂವರೆ ಮುಹೂರ್ತಗಳಲ್ಲಿ ಅರ್ಧದಿವಸದ ಮುಹೂರ್ತ. ಪ್ರಬಲನಾದ ಅಸುರಚಕ್ರವರ್ತಿ ಬಲಿಯನ್ನು, ವಿಷ್ಣು, ವಾಮನಾವತಾರವನ್ನೆತ್ತಿ ಪಾತಾಳಕ್ಕೆ ತುಳಿದದ್ದು ಈದಿನದ ಕಥೆ. ತ್ರೇತಾಯುಗದಲ್ಲಿ ಶ್ರೀರಾಮನ ಪಟ್ಟಾಭಿಷೇಕವಾಗಿದ್ದು ಇದೇ ದಿನ. ದ್ವಾಪರಾಯುಗದಲ್ಲಿ ಪಾಂಡವರು ಅಜ್ಞಾತವಾಸ ಮುಗಿಸಿ, ಕೌರವರ ಕಣ್ಣಿಗೆ ಕಾಣಿಸಿಕೊಂಡಿದ್ದು ಈ ದಿನವೇ.

ಈ ದಿನ ನೀಡಿದ ದಾನ ಅಕ್ಷಯ ಫಲಪ್ರದ ಎನಿಸಿದೆ. ಈ ದಿನವೇ ಪಾರ್ವತಿಯು, ಶಿವನೊಂದಿಗೆ ಪಗಡೆಯಾಟವಾಡಿ, ಶಿವನಿಗೆ ಸೋಲಿಸಿದ ದಿನವಾಗಿದೆ. ಬಲಿಪಾಡ್ಯಮಿ ದಿವ ಹಸು, ಎತ್ತುಗಳ ಪೂಜೆ, ಗೋವರ್ಧನ ಬೆಟ್ಟದ ಪೂಜೆ, ಕುಟುಂಬದ ಗಂಡಸರಿಗೆ, ಹೆಂಗಸರು ಮಾರ್ಗ ಪಾಲೀಕಂಕಣ ಕಟ್ಟಿ ಆರತಿಮಾಡುವುದು ಈ ದಿವಸದ ಮುಖ್ಯಕಾರ್ಯಗಳು. ಈ ದಿವಸ ವಿಕ್ರಮ ಸಂವತ್ಸರದ ಶಕ 2066 ರ ಪ್ರಾರಂಭದಿನ. ವಿಕ್ರಮ ಶಕೆಗೂ, ಕ್ರಿಸ್ತಶಕಕ್ಕೂ 57 ವರ್ಷಗಳ ವತ್ಯಾಸವಿದೆ. ಶಾಲಿವಾಹನಶಕೆಗೆ 135 ವರ್ಷಗಳ ವ್ಯತ್ಯಾಸವಿರುತ್ತದೆ.

ಈ ದಿವಸ ವ್ಯಾಪಾರ, ಉದ್ಯೋಗ, ಅಭ್ಯಾಸ, ಗೃಹ ಪ್ರವೇಶ, ಶುಭ ಕಾರ್ಯಗಳನ್ನು ಮಾಡಬಹುದು. ನಂತರದ ಹಬ್ಬ ಕಾರ್ತಿಕ ಶುಕ್ಲದ್ವಿತೀಯ ಅಥವಾ ಭಾತೃದ್ವಿತೀಯ, ಯಮದ್ವಿತೀಯ. ಪುರಾಣ ಕಥೆಯ ಪ್ರಕಾರ ಮೃತ್ಯುವಿನ ಹಾಗೂ ನರಕದ ದೇವತೆ ಯಮ ಮತ್ತು ಯಮುನಾದೇವಿ ಇಬ್ಬರೂ ಸೋದರ-ಸೋದರಿಯರು. ಈ ದಿವಸದಂದು ಯಮುನಾದೇವಿ ಸೋದರ ಯಮನನ್ನು ತನ್ನ ಮನೆಗೆ ಕರೆದು ಹಬ್ಬದೂಟ ಉಣಿಸಿ, ಸತ್ಕರಿಸಿದ್ದರಿಂದ, ಸೋದರ-ಸೋದರಿಯವರ ಪುನರ್ಮಿಲನಕ್ಕೆ ಶ್ರೇಷ್ಠವಾದ ದಿನವೆನಿಸಿದೆ. ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸುತ್ತಾರೆ. ಆದ್ದರಿಂದ ಕಾರ್ತಿಕ ಶುಕ್ಲ ದ್ವಿತೀಯತಿಥಿಗೆ ಯಮದ್ವಿತೀಯವೆಂದು ಕರೆಯುತ್ತಾರೆ. ಇದೂ ದೀಪಾವಳಿ ಹಬ್ಬಕ್ಕೆ ಸೇರಿ ಒಟ್ಟು ನಾಲ್ಕು ದಿವಸ ಹಬ್ಬವನ್ನು ಆಚರಿಸುತ್ತಾರೆ.

ಲೇಖಕರ ವಿಳಾಸ : ಆರ್. ಸೀತಾರಾಮಯ್ಯ,ಜೋತೀಷ್ಕರು,"ಕಮಲ", 5 ನೇ ತಿರುವು, ಬಸವನಗುಡಿ, ಶಿವಮೊಗ್ಗ 577 201: ಮೊಬೈಲ್ 94490 48340. ದೂರವಾಣಿ: 08182-227344

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more