ಮೈಸೂರು ದಸರಾದಲ್ಲಿ ಅಲಮೇಲಮ್ಮನಿಗೇಕೆ ಪೂಜೆ?

By: ಬಿ.ಎಂ.ಲವಕುಮಾರ್
Subscribe to Oneindia Kannada

ಮೈಸೂರು ದಸರಾದಲ್ಲಿ ಅಲಮೇಲಮ್ಮನಿಗೂ ಪೂಜೆ ನಡೆಯುತ್ತದೆ ಎಂದರೆ ಅಚ್ಚರಿಯಾಗಬಹುದಲ್ಲವೆ? ಆದರೆ ಇದು ನಿಜ. ದಸರಾ ಮಹೋತ್ಸವದಲ್ಲಿ ನಡೆಯುವ ಹಲವು ವಿಧಿವಿಧಾನಗಳ ಪೈಕಿ ಇದು ಒಂದಾಗಿದೆ. ಮೈಸೂರು ದಸರಾ ಎನ್ನುವುದು ಸಾಂಸ್ಕೃತಿಕ ಸಂಗಮ. ಅಷ್ಟೇ ಅಲ್ಲ. ಇಲ್ಲಿ ಧಾರ್ಮಿಕ ವಿಧಿ-ವಿಧಾನ, ಪರಂಪರೆ ಎಲ್ಲವೂ ಮಿಳಿತಗೊಂಡಿದೆ ಎಂಬುದಕ್ಕೆ ಅಲಮೇಲಮ್ಮನ ಪೂಜೆ ಸಾಕ್ಷಿಯಾಗಿದೆ.

ದಸರಾ ಸಂದರ್ಭ ಅರಮನೆಯ ದರ್ಬಾರ್ ಹಾಲ್ ನಲ್ಲಿ ಖಾಸಗಿ ದರ್ಬಾರ್, ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆಯುಧ ಪೂಜೆಯ ದಿನ ಆಯುಧಗಳಿಗೆ ಪೂಜೆ, ಪಟ್ಟದ ಕುದುರೆ, ಆನೆ, ಹಸುಗಳಿಗೂ ಪೂಜೆ ಮಾಡಲಾಗುತ್ತದೆ. ಮೈಸೂರಿನ ಯದುವೀರ ಒಡೆಯರು ವಿಜಯದಶಮಿಯಂದು ಶಮೀವೃಕ್ಷ(ಬನ್ನಿಮರ) ಪೂಜಿಸುವುದರೊಂದಿಗೆ ಪಾಡ್ಯದಂದು ಕಟ್ಟಿಸಿಕೊಂಡಿದ್ದ ಕಂಕಣವನ್ನು ಬಿಚ್ಚಿ ತಮ್ಮ ಖಾಸಗಿ ದರ್ಬಾರನ್ನು ಮುಗಿಸುತ್ತಾರೆ.[ಫಲಪುಷ್ಪ ಪ್ರದರ್ಶನದಲ್ಲಿ ತೆರೆದಿದೆ ಇಂಡಿಯನ್ ಗೇಟ್ ವೇ..]

Mysuru dasara

ಈ ಎಲ್ಲದರ ನಡುವೆ ಅರಮನೆಯಲ್ಲಿ ಅಲಮೇಲಮ್ಮನಿಗೆ ಪೂಜೆ ನಡೆಯುತ್ತದೆ. ಮೈಸೂರು ಭಾಗದಲ್ಲಿ ಅಲಮೇಲಮ್ಮನ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇದೆ. ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಅಲಮೇಲಮ್ಮನ ಬಗ್ಗೆ ದೊಡ್ಡದಾದ ಕಥೆಯೂ ಇದೆ. ಇಷ್ಟಕ್ಕೂ ಅಲಮೇಲಮ್ಮನಿಗೆ ಏಕೆ ಪೂಜೆ ನಡೆಯುತ್ತದೆ ಎಂಬುದನ್ನು ನೋಡುವುದಾದರೆ ಅದು ಈ ಕಥೆಯೊಂದಿಗೆ ತಳಕು ಹಾಕಿಕೊಳ್ಳುತ್ತದೆ.

ವಿಜಯನಗರದ ಅರಸರ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣ ಪ್ರದೇಶವನ್ನು ಆಳುತ್ತಿದ್ದ ರಾಜ ಶ್ರೀರಂಗರಾಯನ ಪತ್ನಿಯೇ ಅಲಮೇಲಮ್ಮ. ಮೈಸೂರಿನ ರಾಜಒಡೆಯರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ ನಂತರ ಅಲ್ಲಿದ್ದ ಶ್ರೀರಂಗರಾಯ ತಲಕಾಡಿಗೆ ಓಡಿಹೋಗಿ ಅಲ್ಲಿಯೇ ಪತ್ನಿಯೊಡನೆ ವಾಸಿಸುತ್ತಿರುತ್ತಾನೆ.[ಮೈಸೂರು ದಸರಾ ಖಾಸಗಿ ದರ್ಬಾರ್ ಅಂದರೆ...]

Saraswathi pooje

ಕೆಲ ದಿನಗಳ ನಂತರ ಶ್ರೀರಂಗರಾಯ ಮರಣ ಹೊಂದುತ್ತಾನೆ. ಆ ಸಮಯದಲ್ಲಿ ನವರಾತ್ರಿ ಉತ್ಸವಕ್ಕೆ ಶ್ರೀರಂಗನಾಥ ಸ್ವಾಮಿಯನ್ನು ಅಲಂಕರಿಸಲು ತಲಕಾಡಿನಲ್ಲಿದ್ದ ಅಲಮೇಲಮ್ಮನಿಗೆ ಅವಳಲಿದ್ದ ಒಡವೆಗಳನ್ನು ತಂದು ತಮಗೊಪ್ಪಿಸುವಂತೆ ರಾಜಾಜ್ಞೆ ಮಾಡಲಾಗುತ್ತದೆ. ಆದರೆ ಅಲಮೇಲಮ್ಮ ರಾಜಾಜ್ಞೆಯನ್ನು ತಿರಸ್ಕರಿಸುತ್ತಾಳೆ.

ಆಗ ಆಕೆಯಿಂದ ಬಲವಂತವಾಗಿ ಒಡವೆಗಳನ್ನು ಕಿತ್ತುಕೊಂಡು ಬರುವಂತೆ ರಾಜಒಡೆಯರು ಅಪ್ಪಣೆ ಮಾಡುತ್ತಾರೆ. ಆಗ ರಾಜಧಾನಿ ಶ್ರೀರಂಗಪಟ್ಟಣದಿಂದ ರಾಜಭಟರು ಅಲಮೇಲಮ್ಮ ವಾಸವಿದ್ದ ತಲಕಾಡಿನತ್ತ ಹೊರಡುತ್ತಾರೆ. ರಾಜಭಟರು ತಲಕಾಡಿನತ್ತ ಬರುತ್ತಿರುವ ವಿಷಯ ತಿಳಿದ ಅಲಮೇಲಮ್ಮ ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಲಕಾಡಿನಿಂದ ಮಾಲಂಗಿಯತ್ತ ಓಡಿಹೋಗುತ್ತಾಳೆ.[ಮೈಸೂರು ದಸರಾ ವಿಶೇಷ: ಒಂದು ಅರಮನೆ.. ನೋಟ ಹಲವು..]

ಆದರೆ, ರಾಜಭಟರು ಅವಳ ಬೆನ್ನಟ್ಟುತ್ತಾರೆ. ಆಗ ಅವಳಿಗೆ ಅವರಿಂದ ತಪ್ಪಿಸಿಕೊಂಡು ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಬೇರೆ ದಾರಿ ಕಾಣದ ಆಕೆ ಕೋಪದಿಂದ "ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ'' ಎಂದು ಶಾಪ ನೀಡಿ, ತನ್ನಲಿದ್ದ ಒಡವೆ ಗಂಟನ್ನು ಉಡಿಯಲ್ಲಿ ಕಟ್ಟಿಕೊಂಡು ಮಾಲಂಗಿ ಸಮೀಪದ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ.

ಅಲಮೇಲಮ್ಮನ ಶಾಪದ ಪ್ರಭಾವ ಎನ್ನುವಂತೆ ಅಂದಿನಿಂದ ಇಂದಿನ ತನಕವೂ ತಲಕಾಡು ಮರಳು ತುಂಬಿದ ಪ್ರದೇಶವಾಗಿದೆ. ಹಾಗೆಯೇ ಇದರ ಸಮೀಪದ ಮಾಲಂಗಿ ಕೂಡ ಮಡುವಾಗಿ ಭಯಂಕರ ಪ್ರಪಾತವಾಗಿದೆ. ಅಷ್ಟೇ ಅಲ್ಲ, ಆ ಕಾಲದಿಂದಲೂ ಮೈಸೂರು ಅರಸರಿಗೆ ಮಕ್ಕಳಾಗದೆ ಅವರು ದತ್ತು ಪಡೆದವರಿಗೆ ಮಾತ್ರ ಸಂತಾನ ಪ್ರಾಪ್ತವಾಗಿದೆ.[ಅಂಬಾರಿ ಹೊರಲು ಸೈ ಎನಿಸಿಕೊಂಡ ಅರ್ಜುನ!]

Dasara pooje

ಹೀಗಾಗಿಯೇ ಅಲಮೇಲಮ್ಮನ ಶಾಪ ನಿವಾರಣೆಗಾಗಿ ರಾಜ ಒಡೆಯರು ಅಲಮೇಲಮ್ಮನ ಚಿನ್ನದ ವಿಗ್ರಹವೊಂದನ್ನು ಮಾಡಿಸಿ, ಅವರ ಕಾಲದಿಂದಲೇ ನವರಾತ್ರಿ ಹಬ್ಬದಲ್ಲಿ ಅದಕ್ಕೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಜಾರಿಗೆ ತಂದರು, ಅಲ್ಲಿಂದ ಇಲ್ಲಿವರೆಗೂ ನಿರಂತರವಾಗಿ ಪೂಜೆ ನಡೆದುಕೊಂಡು ಬಂದಿದೆ.

ಈ ಹಿಂದೆ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನವರಾತ್ರಿಯಲ್ಲಿ ಅಲಮೇಲಮ್ಮನನ್ನು ವಿಶೇಷ ಪೂಜೆ ನಡೆಸುತ್ತಿದ್ದರಾದರೂ ಈ ವರ್ಷ ಅದನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನಡೆಸಿಕೊಂಡು ಹೋಗಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru dasara celebration includes lot of religious followings. Alamelamma worship is also part of dasara. Here complete details behind the worship of Alamelamma
Please Wait while comments are loading...