Get Updates
Get notified of breaking news, exclusive insights, and must-see stories!

ಮೈಸೂರು ದಸರಾ: ಮನೆ, ಮನೆಗಳಲ್ಲಿ ಬೊಂಬೆಗಳ ದರ್ಬಾರ್!

ಮೈಸೂರು ದಸರಾಕ್ಕೆ ಜನ ನಿಧಾನವಾಗಿ ಸಿದ್ಧತೆಗಳನ್ನು ಆರಂಭಿಸುತ್ತಿದ್ದಾರೆ. ಗೌರಿಗಣೇಶ ಹಬ್ಬ ಕಳೆದ ಬಳಿಕ ದಸರಾ ಕಳೆ ಮೈಸೂರನ್ನು ಆವರಿಸಲಿದೆ. ಅತ್ತ ಜಿಲ್ಲಾಡಳಿತ ದಸರಾಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ, ಇತ್ತ ನಗರದ ಬಹುತೇಕ ಮನೆಗಳಲ್ಲಿ ಬೊಂಬೆ ಕೂರಿಸುವ ಸಲುವಾಗಿ ತಯಾರಿಗಳು ಶುರುವಾಗಲಿವೆ.

ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳು ಸಕ್ರಿಯವಾಗಿರುವುದರಿಂದ ತಮ್ಮ ಮನೆಯಲ್ಲಿ ವಿಶಿಷ್ಟ ಮತ್ತು ವಿಭಿನ್ನವಾಗಿ ಬೊಂಬೆಗಳನ್ನು ಕೂರಿಸಬೇಕು ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಖುಷಿಪಡಬೇಕೆಂಬ ಬಯಕೆಗಳು ಹೆಚ್ಚಿನವರದ್ದಾಗಿದೆ. ಹೀಗಾಗಿ ಮನೆಯ ಶೋಕೇಸ್ ಸೇರಿದಂತೆ ಮೂಲೆ ಸೇರಿದ್ದ ಬೊಂಬೆಗಳು ನಿಧಾನವಾಗಿ ಹೊರಬರುತ್ತವೆ. ಇನ್ನು ಕೆಲವರು ಹೊಸ ಬೊಂಬೆಗಳನ್ನು ಹುಡುಕಿ ಖರೀದಿಸುತ್ತಿದ್ದಾರೆ. ಪ್ರತಿವರ್ಷವೂ ಮನೆಗಳಲ್ಲಿ ಹೊಸ ಬೊಂಬೆಗಳು ಜಾಗಪಡೆಯುತ್ತಾ ಸಾಗುತ್ತಿವೆ.

ಮನೆಯ ಹೆಣ್ಣುಮಕ್ಕಳಿಗೆ ಬೊಂಬೆ ಕೂರಿಸುವ ಸಂಭ್ರಮ ಸಡಗರ. ದಸರಾ ಸಮಯದಲ್ಲಿ ಬೊಂಬೆಗಳಿಂದಲೇ ಅಲಂಕಾರಗೊಂಡ ಮನೆಗಳನ್ನು ನೋಡುವುದೇ ಮಜಾ ಎನಿಸುತ್ತದೆ. ಆದರೆ ಅವುಗಳನ್ನು ಶಾಸ್ತ್ರೋಕ್ತವಾಗಿ ಕ್ರಮಬದ್ಧವಾಗಿ, ಸುಂದರವಾಗಿ ಜೋಡಿಸುವಲ್ಲಿ ಪ್ರತಿ ಮನೆಗಳ ಹೆಂಗಳೆಯರ ಶ್ರಮವಂತೂ ಇದ್ದೇ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬೊಂಬೆಗಳ ದರ್ಬಾರ್ ಹೈಟೆಕ್ ಸ್ಪರ್ಶ ಪಡೆದುಕೊಂಡಿರುವುದರಿಂದ ನೋಡಲು ಎರಡು ಕಣ್ಣುಗಳೇ ಸಾಲದಂತಾಗಿದೆ.

ಹಿಂದಿನ ಕಾಲದಿಂದಲೂ ಸಂಪ್ರದಾಯವಾಗಿ ಬಂದ ಬೊಂಬೆ ಕೂರಿಸುವ ಹಬ್ಬ ಇವತ್ತು ದಸರಾದ ಮೆರುಗಾಗಿ ಗಮನಸೆಳೆಯುತ್ತಿವೆ. ನವರಾತ್ರಿಯ ಸಮಯದಲ್ಲಿ ಅತ್ತ ಅರಮನೆಯಲ್ಲಿ ರಾಜರ ಖಾಸಗಿ ದರ್ಭಾರ್ ನಡೆಯುತ್ತಿದ್ದರೆ, ಇತ್ತ ಮನೆಗಳಲ್ಲಿ ಬೊಂಬೆಗಳ ದರ್ಬಾರ್ ಕೂಡ ಜೋರಾಗಿಯೇ ನಡೆಯುತ್ತದೆ. ವಿದ್ಯುದ್ದೀಪದ ಬೆಳಕಿನಲ್ಲಿ ವಿವಿಧ ಬಗೆಯ ಬಣ್ಣಬಣ್ಣದ ಬೊಂಬೆಗಳನ್ನು ಕೂರಿಸಿ ಮಹಿಳೆಯರು ಆರತಿ ಬೆಳಗುತ್ತಾರೆ. ಈ ಬೊಂಬೆಗಳು ಮನೆಗೂ ಮನಸ್ಸಿಗೂ ಮುದ ನೀಡುವುದರೊಂದಿಗೆ ದಸರಾ ಹಬ್ಬಕ್ಕೂ ಕಳೆಕಟ್ಟುತ್ತವೆ.

 ರಾಜಒಡೆಯರಿಂದ ಪ್ರೋತ್ಸಾಹ

ರಾಜಒಡೆಯರಿಂದ ಪ್ರೋತ್ಸಾಹ

ದಸರೆಯ ಸಂದರ್ಭ ಮನೆಮನೆಗಳಲ್ಲಿ ಬೊಂಬೆ ಕೂರಿಸಿ ಪೂಜಿಸುವ ಸಂಪ್ರದಾಯ ಬೇರೆಡೆ ಇದ್ದರೂ ಕೂಡ ಮೈಸೂರಿನಲ್ಲಿ ಮಾತ್ರ ಬೊಂಬೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಮೈಸೂರು ಮಹಾರಾಜರು ನೀಡಿರುವುದನ್ನು ನಾವು ಕಾಣಬಹುದು. ಇವತ್ತು ಮೈಸೂರಿನಲ್ಲಿ ಬೊಂಬೆಗಳ ಹಬ್ಬ ಖ್ಯಾತಿಯಾಗಿರುವುದಕ್ಕೆ ಕಲಾಪೋಷಕರಾಗಿದ್ದ ರಾಜ ಒಡೆಯರು ಕಾರಣಕರ್ತರಾಗಿದ್ದಾರೆ.

ಮೈಸೂರನ್ನಾಳಿದ ರಾಜಒಡೆಯರು ತಮ್ಮ ಆರಾಧನೆಯಲ್ಲಿ ಗೊಂಬೆಗೂ ಒಂದು ಮಹತ್ವದ ಸ್ಥಾನ ನೀಡಿ ನವರಾತ್ರಿಯಲ್ಲಿ ದಸರಾ ಮೆರವಣಿಗೆಯಂತೆಯೇ ಬೊಂಬೆಗೂ ವಿಶೇಷ ಸ್ಥಾನ ಕಲ್ಪಿಸಿದರು. ನವರಾತ್ರಿಯ ಒಂಬತ್ತು ದಿನವೂ ಅರಮನೆಯಲ್ಲಿ ವಿವಿಧ ಬೊಂಬೆಗಳನ್ನು ಸಾಲಾಂಕೃತವಾಗಿ ಜೋಡಿಸಿ, ಪೂಜಿಸಿ ಪ್ರದರ್ಶಿಸುವುದು ರಾಜಒಡೆಯರ ಆಡಳಿತಾವಧಿಯಲ್ಲಿ ಆರಂಭವಾಯಿತು.

 ತೊಟ್ಟಿಮನೆಯಲ್ಲಿ ಗತಕಾಲದ ಕಲಾತ್ಮಕತೆ ಸಾರುವ ಬೊಂಬೆಗಳು

ತೊಟ್ಟಿಮನೆಯಲ್ಲಿ ಗತಕಾಲದ ಕಲಾತ್ಮಕತೆ ಸಾರುವ ಬೊಂಬೆಗಳು

ಇದಕ್ಕಾಗಿಯೇ ಅವರು ಅರಮನೆಯಲ್ಲಿ ದರ್ಬಾರ್ ಹಾಲ್, ಚಿತ್ರಶಾಲೆ, ವಿವಾಹ ಮಂಟಪ, ಭೋಜನ ಶಾಲೆ, ಶಸ್ತ್ರಗಾರವಿರುವಂತೆ ಬೊಂಬೆಗಳ ಪ್ರದರ್ಶನಕ್ಕೂ ಒಂದು ಪ್ರತ್ಯೇಕ ಸ್ಥಳವನ್ನು ಮೀಸಲಿರಿಸಿದರು. ಅದುವೇ ಇವತ್ತು ನಾವು ನೋಡುವ 'ತೊಟ್ಟಿಮನೆ'ಯಾಗಿದೆ. ಈ ತೊಟ್ಟಿಮನೆಯಲ್ಲಿ ಗತಕಾಲದ ಕಲಾತ್ಮಕತೆಯನ್ನು ಸಾರುವ ದಂತ, ಶ್ರೀಗಂಧದ ಮರ ಸೇರಿದಂತೆ ಬೆಲೆಬಾಳುವ ಮರಗಳಿಂದ ಕೆತ್ತಿದ ಅಪೂರ್ವ ಬೊಂಬೆಗಳನ್ನು ಕಾಣಬಹುದು.

ಕಲಾಪೋಷಕರಾಗಿದ್ದ ರಾಜಒಡೆಯರು ಕಲಾತ್ಮಕ ಬೊಂಬೆಗಳ ಕೆತ್ತನೆಯನ್ನೇ ತಮ್ಮ ಬದುಕಾಗಿಸಿಕೊಂಡ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಬದುಕಲು ಅವಕಾಶ ಮಾಡಿಕೊಟ್ಟರು. ಇವರ ಪ್ರೋತ್ಸಾಹದಿಂದ ಹಲವು ಕಲಾಕಾರರು ಬೆಳಕಿಗೆ ಬಂದರು ಎಂಬುವುದರಲ್ಲಿ ಎರಡು ಮಾತಿಲ್ಲ.

 ಬೊಂಬೆಗಳಲ್ಲಿ ರಾಜ-ರಾಣಿಯರಿಗೆ ಮೊದಲ ಪ್ರಾಶಸ್ತ್ಯ

ಬೊಂಬೆಗಳಲ್ಲಿ ರಾಜ-ರಾಣಿಯರಿಗೆ ಮೊದಲ ಪ್ರಾಶಸ್ತ್ಯ

ಅವತ್ತಿನಿಂದ ಇವತ್ತಿನವರೆಗೂ ದಸರಾ ಅರ್ಥಾತ್ ನವರಾತ್ರಿ ಸಂದರ್ಭ ಬೊಂಬೆ ಕೂರಿಸುವ ಸಂಪ್ರದಾಯ ವರ್ಷದಿಂದ ವರ್ಷಕ್ಕೆ ಹೊಸತನ ಪಡೆಯುತ್ತಲೇ ಸಾಗುತ್ತಿದೆ. ಮನೆಯ ಹೆಣ್ಮಕ್ಕಳಿಗೆ ಮನೆಯಲ್ಲಿ ಬೊಂಬೆ ಕೂರಿಸುವುದೇ ಸಡಗರ ಸಂಭ್ರಮವಾಗಿ ದಸರಾಕ್ಕೆ ಮೆರಗು ನೀಡುತ್ತಿದೆ. ಇನ್ನು ಈ ಬೊಂಬೆಗಳಲ್ಲಿಯೂ ರಾಜ-ರಾಣಿಯರಿಗೆ ಮೊದಲ ಪ್ರಾಶಸ್ತ್ಯ ನೀಡುವ ಮೂಲಕ ಮೈಸೂರು ರಾಜಒಡೆಯರಿಗೊಂದು ಗೌರವ ಸಲ್ಲಿಸಲಾಗುತ್ತದೆ. ಹೀಗಾಗಿಯೇ ಬೊಂಬೆಗಳ ಸಾಲಿನಲ್ಲಿ ರಾಜರಾಣಿ ಬೊಂಬೆ ಮೇಲ್ಪಂಕ್ತಿಯಲ್ಲಿ ಸ್ಥಾನ ಪಡೆದಿರುತ್ತವೆ.

ಈ ಬೊಂಬೆಗಳನ್ನು ಪಟ್ಟದ ಬೊಂಬೆಗಳೆಂದು ಕರೆಯಲಾಗುತ್ತದೆ. ಉಳಿದಂತೆ ಅಂಬಾರಿ ಹೊತ್ತ ಆನೆ, ಪದಾತಿದಳ, ಕುದುರೆ, ಒಂಟೆಗಳ ಸಾಲು, ಮೈಸೂರು ಅರಮನೆ ಸೇರಿದಂತೆ ಹಲವು ಬೊಂಬೆಗಳು ಮನೆಯಲ್ಲಿ ಕೂರಿಸಲ್ಪಟ್ಟ ಬೊಂಬೆಗಳಲ್ಲಿ ಸ್ಥಾನ ಪಡೆಯುತ್ತವೆ.

 ಮೈಸೂರು ದಸರಾ ಸಾಂಸ್ಕೃತಿಕ ಸಮಿತಿಯಿಂದ ಪ್ರೋತ್ಸಾಹ

ಮೈಸೂರು ದಸರಾ ಸಾಂಸ್ಕೃತಿಕ ಸಮಿತಿಯಿಂದ ಪ್ರೋತ್ಸಾಹ

ಇನ್ನು ಬೊಂಬೆ ಕೂರಿಸುವ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿರುವ ಮೈಸೂರಿಗರನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಮೈಸೂರು ದಸರಾ ಸಾಂಸ್ಕೃತಿಕ ಸಮಿತಿ ದಸರಾ ಬೊಂಬೆ ಪ್ರದರ್ಶನವನ್ನು ದಸರಾ ಸಂದರ್ಭ ಏರ್ಪಡಿಸಿ ಉತ್ತಮ ಪ್ರದರ್ಶನಕ್ಕೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಾ ಬಂದಿದೆ. ದಸರಾ ಆಚರಣೆಯ ಬಗ್ಗೆ ನೋಡುವುದಾದರೆ ಒಂಬತ್ತು ದಿನಗಳ ಕಾಲವೂ ವಿವಿಧ ಆಚರಣೆಗಳು ನಡೆಯುತ್ತವೆ. ಆ ಪೈಕಿ ಮನೆಮನೆಗಳಲ್ಲಿ ಬೊಂಬೆಗಳನ್ನು ಕೂರಿಸುವುದು ಕೂಡ ಒಂದಾಗಿದೆ.

ಇನ್ನು ಬೊಂಬೆಗಳ ಪ್ರತಿಷ್ಠಾಪನೆ ಯಾವಾಗ ನಡೆಯುತ್ತದೆ ಎಂಬುದನ್ನು ನೋಡುವುದಾದರೆ, ಭಾದ್ರಪದ ಕಳೆದು ಆಶ್ವೀಜ ಮಾಸದ ಶುಕ್ಲಪಕ್ಷದ ಪ್ರಥಮ ದಿವಸ ನವರಾತ್ರಿ ಆರಂಭವಾಗುತ್ತದೆ. ಈ ಸಂದರ್ಭವೇ ಮನೆಮನೆಗಳಲ್ಲಿ ವಿವಿಧ ಬಣ್ಣದ ವಿವಿಧ ನಮೂನೆಯ ಗೊಂಬೆಗಳನ್ನಿರಿಸಲಾಗುತ್ತದೆ. ಅಲ್ಲದೆ ಅವುಗಳನ್ನು ಅಲಂಕರಿಸಿ ಮುತ್ತೈದೆಯರು ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಇದು ಪಾಡ್ಯದಿಂದ ಆರಂಭವಾಗಿ ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಠಮಿ, ನವಮಿ ತನಕ ಒಂಬತ್ತು ದಿನಗಳ ಕಾಲ ನಡೆಯುತ್ತದೆ.

 ಸಂಭ್ರಮದ ಬೊಂಬೆಗಳ ಹಬ್ಬ

ಸಂಭ್ರಮದ ಬೊಂಬೆಗಳ ಹಬ್ಬ

ಹಿಂದಿನ ಕಾಲದಲ್ಲಿ ಮಕ್ಕಳಿಗೆ ಈಗಿನ ಕಾಲದಂತೆ ಮನೋರಂಜನೆಗೆ ಯಾವುದೇ ಆಧುನಿಕ ಆಟಿಕೆಗಳಿರಲಿಲ್ಲ. ಹಾಗಾಗಿ ಮಕ್ಕಳು ಬಾಲ್ಯದಿಂದಲೇ ಗೊಂಬೆಗಳೊಂದಿಗೆ ಆಡುತ್ತಾ ಬೆಳೆಯುತ್ತಿದ್ದರು. ಅಲ್ಲದೆ, ಬಾಲ್ಯವಿವಾಹವೂ ನಡೆಯುತ್ತಿದ್ದ ಕಾಲವಾದುದರಿಂದ ಹೆತ್ತವರು ಮಗಳನ್ನು ಮದುವೆ ಮಾಡಿಕೊಡುವಾಗ ಆಟವಾಡುತ್ತಿದ್ದ ಗೊಂಬೆಗಳನ್ನು ಸಹ ಜೊತೆಯಲ್ಲಿಯೇ ನೀಡುತ್ತಿದ್ದರಲ್ಲದೆ, ವರ್ಷಕ್ಕೊಮ್ಮೆ ಈ ಗೊಂಬೆಗಳನ್ನು ಒಂದೆಡೆ ಪ್ರತಿಷ್ಠಾಪಿಸಿ ಅದಕ್ಕೆ ಆರತಿ ಬೆಳಗಿ ಪೂಜಿಸುವ ಸಂಪ್ರದಾಯ ಬಂದಿರಬಹುದು ಎಂದು ಹೇಳಲಾಗುತ್ತಿದೆ.

ಅದು ಏನೇ ಇರಲಿ ಹಿಂದಿನ ಕಾಲದಿಂದಲೂ ಸಂಪ್ರದಾಯವಾಗಿ ನಡೆದು ಬಂದಿರುವ ಬೊಂಬೆ ಕೂರಿಸುವ ಸಂಪ್ರದಾಯ ಇವತ್ತು ಹೊಸತನದೊಂದಿಗೆ ಮಿಳಿತಗೊಂಡು ಸಂಭ್ರಮ, ಸಡಗರ ಮೇಳೈಸುವ ಹಬ್ಬವಾಗಿದೆ. ದಸರಾ ಎನ್ನುವುದೇ ಒಂದು ಸಂಭ್ರಮವಾಗಿರುವುದರಿಂದ ಆ ಸಂಭ್ರಮ ಮನೆಗಳಿಂದ ಬೊಂಬೆಗಳ ದರ್ಬಾರ್‌ನೊಂದಿಗೆ ಆರಂಭವಾಗುತ್ತಿರುವುದು ವಿಶೇಷವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+