ಮತ್ತಷ್ಟು ಕಳೆಗಟ್ಟಿದ ದಸರಾ... ಜಂಬೂಸವಾರಿಗೆ ಕಾತರ...

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಅಕ್ಟೋಬರ್ 11 : ಕಳೆದ ಹತ್ತು ದಿನಗಳಿಂದ ನಗರದಾದ್ಯಂತ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ನಗರವನ್ನು ಆವರಿಸಿದ್ದ ಮೈಸೂರು ದಸರಾ ಉತ್ಸವಕ್ಕೆ ವಿಜಯದಶಮಿಯ ಸಂದರ್ಭದಲ್ಲಿ ಮತ್ತಷ್ಟು ಕಳೆ ಬಂದಿದೆ. ಮಂಗಳವಾರ ನಡೆಯಲಿರುವ ವಿಶ್ವಪ್ರಸಿದ್ಧ ಜಂಬೂ ಸವಾರಿ ಮತ್ತು ಪಂಜಿನ ಕವಾಯತಿನೊಂದಿಗೆ ದಸರಾಕ್ಕೆ ತೆರೆ ಬೀಳಲಿದೆ.

ಭಾನುವಾರಕ್ಕೆ ಆಹಾರಮೇಳ, ಫಲಪುಷ್ಪ ಪ್ರದರ್ಶನ, ಅರಮನೆಯ ಖಾಸಗಿ ದರ್ಬಾರ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವದಸರಾ ಕಾರ್ಯಕ್ರಮಗಳು ಅಂತ್ಯಗೊಂಡಿದ್ದರೆ, ಸೋಮವಾರ ಆಯುಧಾ ಪೂಜಾ ಸಂಭ್ರಮದೊಂದಿಗೆ ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ಚಿಕ್ಕ ಗಡಿಯಾರ, ಪುರಭವನ ಮೊದಲಾದ ವೇದಿಕೆಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ತೆರೆಬಿದ್ದಿದೆ. ಇದೀಗ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ.

ಪಾಸ್‌ಗಾಗಿ ಪರದಾಟ : ಜಂಬೂಸವಾರಿ ವೀಕ್ಷಿಸುವ ಸಲುವಾಗಿ ಅರಮನೆ ಸೇರಿದಂತೆ ಇತರೆಡೆಗಳಲ್ಲಿ ಅಳವಡಿಸಿರುವ ಆಸನಕ್ಕೆ ಪಾಸುಗಳ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಹಿಂದೆ ಆಕಾಂಕ್ಷಿಗಳು ಅಲೆಯುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ. [In Pics : ಅರಮನೆಯಲ್ಲಿ ಆಯುಧ ಪೂಜೆ ವೀಕ್ಷಿಸಿದ ತ್ರಿಷಿಕಾ]

ಕೆಲವು ಕಾಂಗ್ರೆಸ್ ಮುಖಂಡರು ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ಪಾಸುಕೊಡುವಂತೆ ಕೇಳಿ ಬೆಚ್ಚಿ ಬೀಳಿಸಿದ ಘಟನೆಯೂ ನಡೆದಿದೆ. ಪಾಸ್‌ಗಾಗಿ ಅಲೆದಾಡುತ್ತಿರುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ದುಂಬಾಲು ಬೀಳುತ್ತಿರುವುದು ಕಂಡು ಬರುತ್ತಿದೆ.

ಈ ಬಾರಿ ಉಪಸಮಿತಿ ಮಾಡದ ಕಾರಣದಿಂದ ಜನಪ್ರತಿನಿಧಿಗಳಿಗೆ ಕೂಡ ಪಾಸ್ ವಿತರಣೆಯ ಅವಕಾಶ ಸಿಗಲಿಲ್ಲ. ಹೀಗಾಗಿ ಪಾಸ್‌ಗಾಗಿ ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. [ಮೈಸೂರು ಅರಮನೆ ಆಯುಧ ಪೂಜೆಯ ವೈಖರಿ, ನಲಿದಾಡಿದ ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ]

ಹರಿದು ಬಂದ ಪ್ರವಾಸಿಗರು

ಹರಿದು ಬಂದ ಪ್ರವಾಸಿಗರು

ಕಾವೇರಿ ಕಾರ್ಮೋಡದ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿಲ್ಲವೇನೋ ಎಂದು ನಂಬಲಾಗಿತ್ತಾದರೂ, ಶನಿವಾರದಿಂದಲೇ ಮೈಸೂರಿನತ್ತ ಪ್ರವಾಸಿಗರು ಬರತೊಡಗಿದ್ದು, ನಗರದ ಎಲ್ಲ ಹೋಟೆಲ್, ಲಾಡ್ಜ್‌ಗಳು ಭರ್ತಿಯಾಗಿವೆ.

ಕೆಆರ್‌ಎಸ್‌ನತ್ತ ಪ್ರವಾಸಿಗರ ದಂಡು

ಕೆಆರ್‌ಎಸ್‌ನತ್ತ ಪ್ರವಾಸಿಗರ ದಂಡು

ಹೆಚ್ಚಿನ ಪ್ರವಾಸಿಗರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಕಾವೇರಿ ಗಲಾಟೆಯಿಂದ ಮುಚ್ಚಿದ್ದ ಕೆಆರ್‌ಎಸ್ ಬೃಂದಾವನಕ್ಕೆ ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿದ್ದು, ಪ್ರವಾಸಿಗರ ದಂಡು ಪ್ರವಾಹೋಪಾದಿಯಲ್ಲಿ ಹರಿದುಬರುತ್ತಿದೆ.

ಅರಮನೆಯಲ್ಲಿ ಆಸನ ವ್ಯವಸ್ಥೆ

ಅರಮನೆಯಲ್ಲಿ ಆಸನ ವ್ಯವಸ್ಥೆ

ಜಂಬೂಸವಾರಿಯನ್ನು ವೀಕ್ಷಿಸಲು ಅನುಕೂಲವಾಗುವಂತೆ ಅರಮನೆ ಆವರಣದಲ್ಲಿ ಸುಮಾರು 23 ಸಾವಿರ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಚಿನ್ನದ ಅಂಬಾರಿಯನ್ನು ಆನೆ ಅರ್ಜುನ 5ನೇ ಬಾರಿ ಹೊರಲಿದ್ದು, ಜಂಬೂಸವಾರಿಯ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಲಿದ್ದಾನೆ.

ಸಿದ್ದರಾಮಯ್ಯನವರಿಂದ ನಂದಿ ಪೂಜೆ

ಸಿದ್ದರಾಮಯ್ಯನವರಿಂದ ನಂದಿ ಪೂಜೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಧ್ಯಾಹ್ನ 2.16ಕ್ಕೆ ಮಕರ ಲಗ್ನದಲ್ಲಿ ನಂದಿ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಂಜೆ 4.40ಕ್ಕೆ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ಸಾಗಲಿದೆ.

ಬಂಜೂಸವಾರಿಯಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ

ಬಂಜೂಸವಾರಿಯಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ

ಜಂಬೂಸವಾರಿಯಲ್ಲಿ ವಿವಿಧ ಜಿಲ್ಲೆ ಹಾಗೂ ಇಲಾಖೆಗಳ ಸುಮಾರು 42 ಸ್ತಬ್ಧ ಚಿತ್ರಗಳು ಮತ್ತು 51 ಕಲಾ ತಂಡಗಳು, ನಿಶಾನೆಗಾಡಿ, ಪೊಲೀಸ್ ವಾದ್ಯವೃಂದ, ಅಗ್ನಿಶಾಮಕ ದಳ, ಅಶ್ವರೋಹಿದಳವೂ ಸಾಗಲಿವೆ. ಇನ್ನು ಮೈಸೂರು ಮೇಯರ್ ಬೈರಪ್ಪ ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಯೀಮ್ ಸುಲ್ತಾನ್ ಅವರು ಕುದುರೆ ಏರಿ ಸಾಗಲಿದ್ದಾರೆ.

ಸವಾರಿಗೆ ಬಿಗಿ ಬಂದೋಬಸ್ತ್

ಸವಾರಿಗೆ ಬಿಗಿ ಬಂದೋಬಸ್ತ್

ದಸರಾ ಜಂಬೂಸವಾರಿಯನ್ನು ಯಶಸ್ವಿಯಾಗಿ ನಡೆಸುವ ಸಲುವಾಗಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗುವ ಮಾರ್ಗದುದ್ದಕ್ಕೂ 1300, ಅರಮನೆ ಆವರಣದಲ್ಲಿ 1200, ಸಂಜೆ ನಡೆಯುವ ಪಂಜಿನ ಕವಾಯತು ಭದ್ರತೆಗೆ 1100 ಪೊಲೀಸರನ್ನು ನಿಯೋಜಿಸಲಾಗಿದೆ.

ಭದ್ರತೆಗೆ 6,800 ಸಿಬ್ಬಂದಿಗಳ ನಿಯೋಜನೆ

ಭದ್ರತೆಗೆ 6,800 ಸಿಬ್ಬಂದಿಗಳ ನಿಯೋಜನೆ

ಭದ್ರತೆಗೆ ಐವರು ಎಸ್ಪಿ, 20 ಎಸಿಪಿ, 30 ಇನ್ಸ್‌ಪೆಕ್ಟರ್, 70 ಎಸ್‌ಐ, 1075 ಹೋಂಗಾರ್ಡ್, ಜಂಬೂಸವಾರಿ ಮಾರ್ಗದಲ್ಲಿ ಇಬ್ಬರು ಎಸ್ಪಿ, 6 ಎಸಿಪಿ ಮೂವರು ಇನ್ಸ್‌ಪೆಕ್ಟರ್, 150 ಸಬ್‌ಇನ್ಸ್‌ಪೆಕ್ಟರ್, 450 ಪೊಲೀಸ್ ಸಿಬ್ಬಂದಿ, 100 ಮಹಿಳಾ ಸಿಬ್ಬಂದಿ, 400 ಹೋಂಗಾರ್ಡ್ಸ್‌ಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆ ಸುಮಾರು 6,800ಕ್ಕೂ ಹೆಚ್ಚು ಮಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ ಸುಮಾರು 44 ಸಿಸಿಟಿವಿ ಕ್ಯಾಮರಾಗಳನ್ನು ಆಯಕಟ್ಟಿನಲ್ಲಿ ಅಳವಡಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As Navaratri and Mysuru Dasara festival coming to an end all the eyes are on world famous Jamboo Savari on 11th October, 2016. Elephant Arjuna will carry 750 kg golden howdah with mother Chamundeshwari from Mysuru palace to Banni Mantap. Tight security has been arranged by police.
Please Wait while comments are loading...